Karnataka Politics Crisis: ಶಾಸಕರ ಸಭೆಯಲ್ಲಿ ಸಿಎಂ ಇರುವುದು ಬೇಡ: ಅರುಣ್ ಸಿಂಗ್​​ಗೆ ವಿರೋಧಿ ಗುಂಪಿನ ಒತ್ತಡ

ಅವರನ್ನು ಕೂರಿಸಿಕೊಂಡು ಅವರ ವಿರುದ್ಧವೇ ದೂರು ನೀಡಲು ಸಾಧ್ಯವಿಲ್ಲ. ಮುಕ್ತವಾಗಿ ಚರ್ಚೆ ಆಗಬೇಕಾದರೆ ಸಭೆಯಿಂದ ಸಿಎಂ ಯಡಿಯೂರಪ್ಪ ಅವರನ್ನು ಹೊರಗಿಡಿ ಎಂದು ಬಂಡಾಯ ಶಾಸಕರು ಅರುಣ್ ಸಿಂಗ್ ಗೆ ಸಂದೇಶ ರವಾನಿಸಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ನ್ಯೂಸ್18ಗೆ ಮಾಹಿತಿ ಸಿಕ್ಕಿದೆ.

ಸಿಎಂ ಬಿ.ಎಸ್.​ಯಡಿಯೂರಪ್ಪ.

ಸಿಎಂ ಬಿ.ಎಸ್.​ಯಡಿಯೂರಪ್ಪ.

  • Share this:
ನವದೆಹಲಿ(ಜೂ. 16): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುತ್ತ ಸೃಷ್ಟಿಯಾಗಿರುವ ಬಿಕ್ಕಟ್ಟು ಬಗೆಹರಿಸಲು ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಹೊಸ ಹೊಸ ರೀತಿಯ ಸಮಸ್ಯೆಗಳು ಎದುರಾಗುತ್ತಲೇ ಇವೆ. ಇನ್ನೇನು ಬೆಂಗಳೂರಿನ ವಿಮಾನ ಹತ್ತಬೇಕು ಎನ್ನುವ ವೇಳೆಯಲ್ಲೂ ದೂರುಗಳನ್ನು ಹೊತ್ತ ದೂರವಾಣಿ ಕರೆಗಳು ಬರುವುದು ಮಾತ್ರ ತಪ್ಪಿಲ್ಲ. ಬಂಡಾಯ ಶಾಸಕರು ಹೊಸ ವರಸೆ ಶುರು ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಉಪಸ್ಥಿತಿಯಲ್ಲಿ ಶಾಸಕರ ಸಭೆ ನಡೆಯುವುದು ಬೇಡ ಎಂದು ಒತ್ತಡ ಹೇಳುತ್ತಿದ್ದಾರೆ ಎನ್ನಲಾಗಿದೆ.

ಅರುಣ್ ಸಿಂಗ್ ಅವರ ರಾಜ್ಯ ಪ್ರವಾಸ ಭೇಟಿ ನಿಗದಿ ಆದಾಗಿನಿಂದಲೂ ಬಿಜೆಪಿ ಶಾಸಕರ ಒಂದು ಬಣ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು, ಎಲ್ಲಾ ಶಾಸಕರ ಜೊತೆ ಸುದೀರ್ಘವಾಗಿ ಚರ್ಚೆ ಮಾಡಬೇಕು ಎಂಬ ಒತ್ತಾಯವನ್ನು ಮಾಡುತ್ತಲೇ ಇದ್ದಾರೆ. ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪಾಳೆಯದಿಂದ ಕೊರೋನಾ ಕಾರಣಕ್ಕೆ ಶಾಸಕಾಂಗ ಪಕ್ಷದ ಸಭೆ ನಡೆಸುವುದು ಬೇಡ ಎಂಬ ಒತ್ತಡ ಕೂಡ ಬರುತ್ತಿದೆ. ಯಡಿಯೂರಪ್ಪ ಪರ ಮತ್ತು ವಿರೋಧಿ ಗುಂಪುಗಳು ಹೇರುತ್ತಿರುವ ಒತ್ತಡದಿಂದ ಇಕ್ಕಟ್ಟಿಗೆ ಸಿಲುಕಿರುವ ಹೈಕಮಾಂಡ್ ಪ್ರತಿನಿಧಿ ಶಾಸಕರ ಸಭೆ ಕರೆಯಲು ನಿರ್ಧರಿಸಿದ್ದರು.

ಇದನ್ನೂ ಓದಿ:Karnataka Rain Updates: ಕಾಫಿನಾಡಲ್ಲಿ ಧಾರಾಕಾರ ಮಳೆ, ಧರೆಗುರುಳಿದ ಮರ; ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಆದರೀಗ ಶಾಸಕರ ಸಭೆಯ ವಿಷಯದಲ್ಲೂ ಹೊಸ ತಗಾದೆ ಆರಂಭವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಉಪಸ್ಥಿತಿಯಲ್ಲಿ ಶಾಸಕರ ಸಭೆ ನಡೆಯುವುದು ಬೇಡ. ಸಿಎಂ ಭಾಗವಹಿಸಲೇಬೇಕು ಎನ್ನುವುದಾದರೆ ಶಾಸಕಾಂಗ ಪಕ್ಷದ ಸಭೆ ಕರೆಯಲಿ. ಸಭೆಯಲ್ಲಿ ಸಿಎಂ ಇದ್ದರೆ ಮುಕ್ತ ಮಾತುಕತೆ ಸಾಧ್ಯವಿಲ್ಲ. ಯಡಿಯೂರಪ್ಪ ಎದುರು ಎಲ್ಲಾ ವಿಷಯಗಳ‌ ಚರ್ಚೆ ಸಾಧ್ಯವಿಲ್ಲ. ಅವರನ್ನು ಕೂರಿಸಿಕೊಂಡು ಅವರ ವಿರುದ್ಧವೇ ದೂರು ನೀಡಲು ಸಾಧ್ಯವಿಲ್ಲ. ಮುಕ್ತವಾಗಿ ಚರ್ಚೆ ಆಗಬೇಕಾದರೆ ಸಭೆಯಿಂದ ಸಿಎಂ ಯಡಿಯೂರಪ್ಪ ಅವರನ್ನು ಹೊರಗಿಡಿ ಎಂದು ಬಂಡಾಯ ಶಾಸಕರು ಅರುಣ್ ಸಿಂಗ್ ಗೆ ಸಂದೇಶ ರವಾನಿಸಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ನ್ಯೂಸ್18ಗೆ ಮಾಹಿತಿ ಸಿಕ್ಕಿದೆ.

ಇದಲ್ಲದೆ ಸಿಎಂ ಪಾಳೆಯದಿಂದ‌ ಕಡೆ ಗಳಿಗೆಯಲ್ಲಿ ಮಾಡಲಾಗುತ್ತಿರುವ ಕಾರ್ಯತಂತ್ರಕ್ಕೆ ಬಂಡಾಯ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಎಂ ಪಾಳೆಯ ಮಾಡುತ್ತಿರುವ ಸಹಿ ಸಂಗ್ರಹದ ಬಗ್ಗೆ ಅರುಣ್ ಸಿಂಗ್ ಗೆ ದೂರು ನೀಡಿದ್ದಾರೆ. ಹೈಕಮಾಂಡ್ ಹೇಳಿದರೂ ಸಿಎಂ ಪಾಳೆಯದಿಂದ ಸಹಿ ಸಂಗ್ರಹ ಆಗುತ್ತಿದೆ‌. ಯಡಿಯೂರಪ್ಪ ಹೇಳಿದ ಮೇಲೂ ಸಹಿ ಸಂಗ್ರಹ ನಡೆಯುತ್ತಿದೆ. ಸಹಿ ಸಂಗ್ರಹದ ಬಗ್ಗೆ ಗೊತ್ತಿದ್ದೂ ಯಡಿಯೂರಪ್ಪ ಸುಮ್ಮನಿದ್ದಾರೆ.

ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ..!

ಹೈಕಮಾಂಡ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರ ಮಾತು ಕಡೆಗಣನೆಗೆ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಿಎಂ ಪಾಳೆಯದಿಂದ ಸಹಿ ಸಂಗ್ರಹ ಮುಂದುವರೆದರೆ ನಾಳೆ ನಾವೂ ಕೂಡ ಸಹಿ ಸಂಗ್ರಹ ಮಾಡಬೇಕಾಗುತ್ತದೆ ಎಂದು ಅರುಣ್ ಸಿಂಗ್ ಅವರಿಗೇ ಎಚ್ಚರಿಕೆ ನೀಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

​​ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Latha CG
First published: