CP Yogeshwar: ಸಚಿವ ಸಿ.ಪಿ‌.ಯೋಗೇಶ್ವರ್​​ರಿಂದ ಮೂಲ ಬಿಜೆಪಿಗರು ದೂರಾದೂರ; ಬೆಂಬಲ ನೀಡದ ಶಾಸಕರು, ಸಚಿವರು

ಸಚಿವ ಸಿ.ಪಿ.ಯೋಗೇಶ್ವರ್ ಬಹಿರಂಗವಾಗಿ ಸಿಎಂ ಯಡಿಯೂರಪ್ಪ ವಿರುದ್ದ ಮಾತನಾಡ್ತಿರುವ ಹಿನ್ನೆಲೆ ಬಿಜೆಪಿ ಪಕ್ಷದ ಮೂಲ ಬಳಗ ಯೋಗೇಶ್ವರ್ ರಿಂದ ಅಂತರ ಕಾಯ್ದುಕೊಂಡಿದೆ.

ಸಚಿವ ಸಿ.ಪಿ.ಯೋಗೇಶ್ವರ್​​

ಸಚಿವ ಸಿ.ಪಿ.ಯೋಗೇಶ್ವರ್​​

  • Share this:
ಚನ್ನಪಟ್ಟಣ(ಜೂ.03): ರಾಜ್ಯ ಬಿಜೆಪಿ ಸರ್ಕಾರದಲ್ಲಿ ಹಲವು ದಿನಗಳಿಂದ ಗೊಂದಲಗಳು ಮನೆ ಮಾಡಿದೆ. ಸಿಎಂ ಯಡಿಯೂರಪ್ಪ ವಿರುದ್ಧ ತಮ್ಮದೇ ಪಕ್ಷದ ಪ್ರವಾಸೋದ್ಯಮ ಸಚಿವ ಸಿ.ಪಿ‌.ಯೋಗೇಶ್ವರ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ರಾಜ್ಯ ಬಿಜೆಪಿ ಪಕ್ಷ ಮುಜುಗರಕ್ಕೆ ಒಳಗಾಗಿದೆ. ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಮಾತನಾಡೋದು ಸರ್ವೇ ಸಾಮಾನ್ಯ. ಆದರೆ ಸರ್ಕಾರದಲ್ಲಿ ಸಚಿವರಾಗಿರುವ ಯೋಗೇಶ್ವರ್ ರವರೇ ಸರ್ಕಾರ ಹಾಗೂ ಸಿಎಂ ವಿರುದ್ಧ ಬಹಿರಂಗವಾಗಿ ಮಾಧ್ಯಮಗಳಿಗೆ ಹೇಳಿಕೆ ಕೊಡ್ತಿರೋದು ನಿಜಕ್ಕೂ ಬಿಜೆಪಿ ಪಕ್ಷಕ್ಕೆ ಇದೊಂದು ದೊಡ್ಡ ಡ್ಯಾಮೇಜ್ ಎಂದೇ ಹೇಳಬಹುದು.

ಇನ್ನು ಬಿಜೆಪಿ ಪಕ್ಷದಲ್ಲಿ ಈಗಲೂ ಸಹ 3,4,5 ಬಾರಿ ಗೆದ್ದಿರುವ ಹತ್ತಾರು ಶಾಸಕರಿಗೆ ಇವತ್ತಿಗೂ ಸಹ ಸಚಿವ ಸ್ಥಾನ ಸಿಕ್ಕಿಲ್ಲ. ಆದರೆ ಕಳೆದ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಚನ್ನಪಟ್ಟಣದಲ್ಲಿ ಹೀನಾಯವಾಗಿ ಸೋತಿದ್ದ ಯೋಗೇಶ್ವರ್ ಗೆ ವಿಧಾನಪರಿಷತ್ ಸದಸ್ಯನ ಸ್ಥಾನದ ಜೊತೆಗೆ ಕ್ಯಾಬಿನೆಟ್ ರ್ಯಾಂಕ್ ಸಚಿವ ಸ್ಥಾನವನ್ನು ಸಹ ಸಿಎಂ ಯಡಿಯೂರಪ್ಪ ನೀಡಿದ್ದಾರೆ.‌ ಆದರೂ ಸಹ ಯೋಗೇಶ್ವರ್ ಪದೇ ಪದೇ ಸಿಎಂ ವಿರುದ್ಧ, ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಹೇಳಿಕೆ ಕೊಡ್ತಿದ್ದು ಇದು ಬಿಜೆಪಿ ಪಕ್ಷಕ್ಕೆ ದೊಡ್ಡ ಅವಮಾನವಾಗ್ತಿದೆ. ಇನ್ನು ಸೋತ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಿದ್ದೆ ಸರಿಯಾದ ಕ್ರಮ ಅಲ್ಲ ಎಂದು ಬಿಜೆಪಿಯ ಹಿರಿಯ ನಾಯಕರು, ಶಾಸಕರು ಆಂತರಿಕವಾಗಿ ಅಭಿಪ್ರಾಯವ್ಯಕ್ತಪಡಿಸುತ್ತಿದ್ದಾರೆ.

ಮೂಲ ಬಿಜೆಪಿಗರು ಯೋಗೇಶ್ವರ್ ರಿಂದ ದೂರಾದೂರ

ಇನ್ನು ಸಚಿವ ಸಿ.ಪಿ.ಯೋಗೇಶ್ವರ್ ಬಹಿರಂಗವಾಗಿ ಸಿಎಂ ಯಡಿಯೂರಪ್ಪ ವಿರುದ್ದ ಮಾತನಾಡ್ತಿರುವ ಹಿನ್ನೆಲೆ ಬಿಜೆಪಿ ಪಕ್ಷದ ಮೂಲ ಬಳಗ ಯೋಗೇಶ್ವರ್ ರಿಂದ ಅಂತರಕಾಯ್ದುಕೊಂಡಿದೆ. ಸಿಎಂ ಯಡಿಯೂರಪ್ಪ ಬಿಜೆಪಿ ಪಕ್ಷದಲ್ಲಿ ಪ್ರಶ್ನಾತೀತ ನಾಯಕ ಅನ್ನೋದ್ರಲ್ಲಿ ಯಾವ ಅನುಮಾನವೂ ಇಲ್ಲ. ಇವತ್ತಿಗೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದೆ ಅಂದ್ರೆ ಅದಕ್ಕೆ ಮೂಲ ಕಾರಣ ಬಿ.ಎಸ್.ಯಡಿಯೂರಪ್ಪ ನವರ ವರ್ಚಸ್ಸು. ಈಗಲೂ ಸಹ ಯಡಿಯೂರಪ್ಪ ರನ್ನ ಸಿಎಂ ಪಟ್ಟದಿಂದ ಕೆಳಗಿಳಿಸುವ ಪ್ರಯತ್ನ ನಡೆದರೆ ಯಾವುದೇ ಮುಲಾಜಿಲ್ಲದೇ ಮತ್ತೆ ಬಿಜೆಪಿ ಪಕ್ಷ ತಳಕಚ್ಚುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಹಾಗಾಗಿ ಇವತ್ತಿಗೂ ಸಹ ರಾಜ್ಯ ಹಾಗೂ ಕೇಂದ್ರದ ನಾಯಕರು ಯಡಿಯೂರಪ್ಪನವರ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ.

ಇದನ್ನೂ ಓದಿ:Explainer: ಕೊರೋನಾ ಪೀಡಿತ ಕುಟುಂಬಗಳಿಗೆ EPFO ಯೋಜನೆಯಡಿ ಲಭ್ಯವಿರುವ ಪ್ರಯೋಜನಗಳು ಹೀಗಿವೆ..!

ಯೋಗೇಶ್ವರ್ ಬೆಂಬಲಕ್ಕೆ ನಿಲ್ಲದ ಪಕ್ಷದ ಶಾಸಕರು, ಸಚಿವರು

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಸಹ ಯೋಗೇಶ್ವರ್ ಒಂದಿಲ್ಲೊಂದು ಕಾರಣಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತಲೇ ಬಂದಿದ್ದಾರೆ. ಜೊತೆಗೆ ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ಬರಲು ನಾನೇ ಕಾರಣ ಎಂದು ಬಿಂಬಿಸಿಕೊಳ್ಳುತ್ತ ಬಂದಿದ್ದಾರೆ. ಆದರೆ ಇದೇ ಯೋಗೇಶ್ವರ್ ಗೆ ಬಿಜೆಪಿ ಪಕ್ಷದ ಯಾವೊಬ್ಬ ಶಾಸಕ, ಸಚಿವರು ಸಹ ಬೆಂಬಲ ಕೊಡುತ್ತಿಲ್ಲ. ಬದಲಾಗಿ ಯೋಗೇಶ್ವರ್ ನಡೆಗೆ ಉತ್ತರಿಸಿರುವ ಹಲವು ಶಾಸಕರು, ಸಚಿವರು ಈ ಬೆಳವಣಿಗೆಗಳು ಸರಿಯಿಲ್ಲ ಎಂದು ಯಡಿಯೂರಪ್ಪಗೆ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ - ಜೆಡಿಎಸ್ ನಿಂದ ಬಿಜೆಪಿ ಗೆ ವಲಸೆ ಬಂದ ಯಾವೊಬ್ಬ ಶಾಸಕರು ಸಹ ಯೋಗೇಶ್ವರ್ ಗೆ ಬೆಂಬಲ ಸೂಚಿಸಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ ಮೊದಲಿನಿಂದಲೂ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ನಿಂತಿದ್ದು, ಈಗ ಯೋಗೇಶ್ವರ್ ಗೆ ಜೈ ಎನ್ನುತ್ತಿದ್ದಾರೆ. ಆದರೆ ಯತ್ನಾಳ್ ಬಗ್ಗೆಯೂ ಸಹ ಪಕ್ಷದಲ್ಲಿ ಯಾವುದೇ ಸಕಾರಾತ್ಮಕ ಚಿಂತನೆಯಿಲ್ಲ ಎಂಬುದು ವಾಸ್ತವ ಸತ್ಯ.

ಇದನ್ನೂ ಓದಿ:Karnataka Lockdown Extension: ಕರ್ನಾಟಕದಲ್ಲಿ ಜೂನ್​ 14ರವರೆಗೆ ಲಾಕ್​ಡೌನ್ ವಿಸ್ತರಣೆ; ಸಂಜೆ ಘೋಷಿಸಲಿರುವ ಸಿಎಂ

ಪಕ್ಷ ಸಂಘಟನೆಯಲ್ಲೂ ಚುರುಕಾಗದ ಸಚಿವ ಸಿ.ಪಿ.ಯೋಗೇಶ್ವರ್

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ಬಳಿಕ ಸರಿಸುಮಾರು 1 ವರ್ಷಕ್ಕೂ ಹೆಚ್ಚು ಕಾಲ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡ್ತೇನೆಂದು ಬಿಜೆಪಿ ಹೈಕಮಾಂಡ್ ನಲ್ಲಿ ವರದಿ ನೀಡಿದ್ದ ಯೋಗೇಶ್ವರ್ ಅದರಲ್ಲಿಯೂ ಹಿಂದೆ ಉಳಿದರು. ನಂತರ ವಿಧಾನಪರಿಷತ್ ಸದಸ್ಯರಾದ ಬಳಿಕ ಒಂದೆರಡು ಬಾರಿ ಬಂದು ಕಾರ್ಯಕರ್ತರನ್ನ ಭೇಟಿ ಮಾಡಿದ ಯೋಗೇಶ್ವರ್ ಈಗ ಸಚಿವರಾದ ಬಳಿಕವಷ್ಟೇ ಕ್ಷೇತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಆದರೆ ಈಗ ಸ್ವಂತ ಪಕ್ಷದ ವಿರುದ್ಧವೇ ತಿರುಗಿಬಿದ್ದಿರುವುದು ಬಿಜೆಪಿ ಪಕ್ಷದ ಮೂಲ ಬಳಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ಜೊತೆಗೆ ಚನ್ನಪಟ್ಟಣ ನಗರಸಭೆ ಚುನಾವಣೆ ಹಾಗೂ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಯೋಗೇಶ್ವರ್ ಗೆ ಭಾರೀ ಮುಖಭಂಗವಾಗಿದೆ. ಸ್ವಂತ ಊರು ಚಕ್ಕೆರೆ ಗ್ರಾಮಪಂಚಾಯತ್ ಜೆಡಿಎಸ್ ಪಾಲಾಗಿದೆ. ನಗರಸಭೆ ಚುನಾವಣೆಯಲ್ಲಿಯೂ ಸಹ ಬಿಜೆಪಿ ಪಕ್ಷ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ ಎಂಬುದು ವಾಸ್ತವ ಸತ್ಯ.

ಜೊತೆಗೆ ಇತ್ತೀಚೆಗೆ ಯೋಗೇಶ್ವರ್ ಬೆಂಬಲಿಗರು ಸುದ್ದಿಗೋಷ್ಟಿ ಮಾಡಿರುವ ಸಂದರ್ಭದಲ್ಲಿ ತಾಲೂಕು ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷರು ಚನ್ನಪಟ್ಟಣ ಕ್ಷೇತ್ರದವರೇ ಆಗಿದ್ದರೂ ಸಹ ಯೋಗೇಶ್ವರ್ ಪರವಾಗಿ ನಡೆದ ಸುದ್ದಿಗೋಷ್ಟಿಯಲ್ಲಿ ಭಾಗಿಯಾಗದೇ ನಮ್ಮ ಬೆಂಬಲ ಸಿಎಂ ಯಡಿಯೂರಪ್ಪಗೆ ಎಂಬ ಸಂದೇಶ ಸಾರಿದ್ದಾರೆ.

  • ವರದಿ : ಎ.ಟಿ.ವೆಂಕಟೇಶ್

Published by:Latha CG
First published: