ಯಾದಗಿರಿ: ಜಿಲ್ಲೆಯ ಕೊಡೇಕಲ್ ಗ್ರಾಮದಲ್ಲಿ (Yadagiri) ನಡೆದ ಒಟ್ಟು 5,104 ಕೋಟಿ ರೂಪಾಯಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ನರೇಂದ್ರರ ಮೋದಿ (PM Narendra Modi), ಕರ್ನಾಟಕದ ಎಲ್ಲಾ ಸಹೋದರ ಹಾಗೂ ಸಹೋದರಿಯರಿಗೆ ನನ್ನ ವಂದನೆಗಳು ಎಂದು ಕನ್ನಡದಲ್ಲೇ ಮಾತು ಆರಂಭಿಸಿದರು. ನಿಮ್ಮ ಪ್ರೀತಿ ಆರ್ಶೀವಾದವೇ ನಮಗೆ ಶಕ್ತಿ. ನನ್ನ ಕಣ್ಣು ಹಾಯಿಸಿದಷ್ಟು ದೂರ ಜನವೋ ಜನ ಎಂದು ಹರ್ಷ ವ್ಯಕ್ತಪಡಿಸಿದರು. ಇದೇ ವೇಳೆ ಕಾಂಗ್ರೆಸ್ ಪಕ್ಷದ ಹೆಸರನ್ನು ಪ್ರಸ್ತಾಪ ಮಾಡದೆ, ಉತ್ತರ ಕರ್ನಾಟಕ ಅಭಿವೃದ್ಧಿಗೆ ಹಿಂದಿನ ಸರ್ಕಾರಗಳೇ ಕಾರಣ ಎಂದು ಕಿಡಿಕಾರಿದರು.
ಯಾದಗಿರಿಗೆ ಪ್ರತ್ಯೇಕ ಇತಿಹಾಸವಿದೆ. ಸುರಪುರ ವೆಂಕಟಪ್ಪ ನಾಯಕ ಅವರನ್ನು ಸ್ಮರಿಸಿದ ಮೋದಿ ಅವರು, ತಮ್ಮ ಆಡಳಿತದಿಂದ ಸುರಪುರವನ್ನು ದೇಶವ್ಯಾಪಿಗೊಳಿಸಿದ್ದರು. ಇಂದು ನೀರಾವರಿ ಯೋಜನೆ, ರಾಷ್ಟ್ರೀಯ ಹೆದ್ದಾರಿ ಯೋಜನೆ ಉದ್ಘಾಟನೆ ಮಾಡಲಾಗಿದೆ. ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ಕಲಬುರಗಿ, ವಿಜಯಪುರ, ಯಾದಗಿರಿ ರೈತರಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಸೂರತ್-ಚೆನ್ನೈ ಗ್ರೀನ್ ವೇ ಅನುಕೂಲವಾಗಲಿದೆ. ಗ್ರೀನ್ ವೇ ನಿರ್ಮಾಣದಿಂದ ಉದ್ಯೋಗ ಸಿಗಲಿದೆ. ಇದಕ್ಕೆ ಸಿಎಂ ಬೊಮ್ಮಾಯಿ ಹಾಗೂ ಅವರ ತಂಡಕ್ಕೆ ಶ್ಲಾಘನೆ ನೀಡುತ್ತೇನೆ.
ಉತ್ತರ ಕರ್ನಾಟಕ ಹಿಂದುಳಿಯಲು ಯಾರು ಕಾರಣ?
ಉತ್ತರ ಕರ್ನಾಟಕ ಭಾಗ ಅಭಿವೃದ್ಧಿ ಮಾಡಲಾಗುತ್ತಿದೆ. ದೇಶದ ಪ್ರತಿಯೊಬ್ಬರ ಅಮೃತ ಕಾಲದ ಘಳಿಗೆ ಇದಾಗಿದೆ. ಈ ಯೋಜನೆಯಿಂದ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳ ಜನರಿಗೆ ನೆರವಾಗಲಿದೆ. ಜನರಿಗೆ ಹೆಚ್ಚಿನ ಉದ್ಯೋಗ ಸಿಗಲಿದೆ. ಬಹುಗ್ರಾಮ ಕುಡಿಯುವ ನೀರನ ಯೋಜನೆಯಿಂದ ಗ್ರಾಮಗಳಲ್ಲಿನ ನೀರಿನ ಸಮಸ್ಯೆ ದೂರವಾಗುತ್ತದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಿರಂತರವಾಗಿ, ಶರವೇಗದಲ್ಲಿ ಸಾಗುತ್ತಿದೆ. ಇಂದು ನೀರು, ರಸ್ತೆ ಸೇರಿದಂತೆ ಮಹತ್ವದ ಯೋಜನೆಗಳಿಗೆ ಚಾಲನೆ ನೀಡಿದ್ದೇವೆ.
ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ
ಅಮೃತಮಹೋತ್ಸವ ಕಾಲದಲ್ಲಿ ನಾವು ಅಭಿವೃದ್ಧಿಯ ಕರೆ ಗಮನ ಹರಿಸಬೇಕು. ಮುಂದಿನ 25 ವರ್ಷಗಳ ಅವಧಿಯನ್ನು ಕಲ್ಪನೆಯಲ್ಲಿ ಇಟ್ಟುಕೊಂಡು ಮುನ್ನಡೆಯುತ್ತಿದ್ದೇವೆ. ಯಾವುದೇ ಜಿಲ್ಲೆ ಹಿಂದುಳಿದಿದೆ ಎಂದರೆ ಇದರಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಹಿಂದಿನ ಸರ್ಕಾರಗಳ ಕೆಟ್ಟ ಆಡಳಿತದಿಂದ ನಾವು ಹಿಂದುಳಿದಿದ್ದೇವೆ. ಈ ಹಿಂದಿನ ಸರಕಾರ ಯಾದಗಿರಿ ಜಿಲ್ಲೆಯನ್ನು ಹಿಂದುಳಿದ ಜಿಲ್ಲೆ ಎಂದು ಘೋಷಣೆ ಮಾಡಿತ್ತು. ಹಲವು ಕೆಟ್ಟ ಅನುಭವವನ್ನು ಎದುರಿಸಿದ್ದೇವೆ. ಅವರು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಒತ್ತು ನೀಡಿದ್ದರು. ಇದರಂತೆ ಯೋಜನೆಗಳನ್ನು ನೀಡಿ ವೋಟ್ ಬ್ಯಾಂಕ್ ರಕ್ಷಣೆ ಮಾಡಿಕೊಂಡಿದ್ದರು. ಆದರೆ ನಮ್ಮ ಸರ್ಕಾರ ಪ್ರಾಮುಖ್ಯತೆ ವೋಟ್ ಬ್ಯಾಂಕ್ ಅಲ್ಲ, ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ.
ಮುಂದಿನ ಚುನಾವಣೆಯಲ್ಲಿ ನಮಗೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಿ. ನಿಮ್ಮಿಂದ ನನಗೆ ಕಳೆದ ಬಾರಿಯೂ ಅಧಿಕಾರ ಸಿಕ್ಕಿದೆ. ಜಿಲ್ಲೆಯಲ್ಲಿ ಅಭಿವೃದ್ಧಿಯ ಆಕಾಂಕ್ಷೆ ಹೊಂದಿದ್ದೇವೆ. ಹಿಂದಿನ ಸರ್ಕಾರಗಳು ಯೋಜನೆಗಳನ್ನು ಘೋಷಣೆ ಮಾಡಿ ಸುಮ್ಮನಾಗಿದ್ದವು. ಆದರೆ ನಮ್ಮ ಸರ್ಕಾರ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತಿದ್ದೇವೆ. ದೇಶದ ನೂರಾರು ರಾಜ್ಯಗಳಲ್ಲಿ ಉತ್ತಮ ಆಡಳಿತವನ್ನು ಕೊಟ್ಟಿದ್ದೇವೆ. ಅಪೌಷ್ಟಿಕತೆ ನಿವಾರಣೆ ಸೇರಿ ಹಲವು ಯೋಜನೆ ಜಾರಿಗೆ ತರಲಾಗಿದ್ದು ಯಾದಗಿರಿ ಜಿಲ್ಲೆಯು ಸುಧಾರಣೆ ಕಂಡಿದೆ. ಮಹತ್ವಾಕಾಂಕ್ಷೆಯ ಜಿಲ್ಲೆಯಲ್ಲಿ 10 ಸ್ಥಾನ ಪಡೆದಿದೆ, ಯಾದಗಿರಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಇದಕ್ಕೆ ನಾನು ಇಲ್ಲಿನ ನಾಯಕರು ಹಾಗೂ ಜಿಲ್ಲಾಡಳಿತಕ್ಕೆ ಮೆಚ್ಚುಗೆ ಸೂಚಿಸುತ್ತೇನೆ.
ಮಾನ್ಯ ಪ್ರಧಾನಿ ಶ್ರೀ @narendramodi ಅವರ ಅಮೃತ ಹಸ್ತದಿಂದ ಕಲ್ಯಾಣ ಕರ್ನಾಟಕದ ತಾಂಡಾ ನಿವಾಸಿಗಳಿಗೆ ವಿತರಣೆಯಾಗಲಿದೆ ದಾಖಲೆ ಪ್ರಮಾಣದ ಹಕ್ಕುಪತ್ರಗಳು. pic.twitter.com/rHJPQaCKBo
— Basavaraj S Bommai (@BSBommai) January 19, 2023
ಯಾದಗಿರಿ ಕಲ್ಯಾಣ ಯೋಜನೆ
ಯಾದಗಿರಿಯ ಕೊಡೇಕಲ್ ಬಳಿ 1,050 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಸ್ಕಾಡಾ ಯೋಜನೆ ಇದು. ಬಸವಸಾಗರ ಜಲಾಶಯಕ್ಕೆ 365 ಹೈಟೆಕ್ ನಿರ್ಮಿಸಲಾಗಿದೆ. ಬಟನ್ ಮೂಲಕ ನೀರು ಹರಿಸುವ ದೇಶದ ಪ್ರಥಮ ಯೋಜನೆ ಇದಾಗಿದ್ದು, 3 ಲಕ್ಷ ರೈತರ 4.5 ಲಕ್ಷ ಹೆಕ್ಟೇರ್ ಜಲಾನಯನ ಪ್ರದೇಶಕ್ಕೆ ನೀರಾವರಿ ಒದಗಿಸಬಹುದು. ಕಲಬುರಗಿ, ಯಾದಗಿರಿ, ವಿಜಯಪುರದ 560 ಗ್ರಾಮಗಳಿಗೆ ಇದರ ಲಾಭ ಸಿಗಲಿದೆ.
2,054 ಕೋಟಿ ರೂಪಾಯಿ ವೆಚ್ಚದ ಜಲಜೀವನ್ ಮಿಷನ್ಗೆ ಅಡಿಗಲ್ಲು
ಸ್ಕಾಡಾ ಯೋಜನೆ ಬಳಿಕ 2,054 ಕೋಟಿ ರೂಪಾಯಿ ವೆಚ್ಚದ ಜಲಜೀವನ್ ಮಿಷನ್ಗೆ ಅಡಿಗಲ್ಲು ಹಾಕಿದ್ದಾರೆ. ಜಲಧಾರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದಾಗಿದ್ದು, ಹುಣಸಗಿ, ಸುರಪುರ, ಶಹಾಪುರ, ವಡಗೇರಾ, ಯಾದಗಿರಿ, ಗುರುಮಠಕಲ್ ತಾಲೂಕಿನ ಒಟ್ಟು 710 ಗ್ರಾಮಗಳಿಗೆ ಹಾಗೂ ಕಕ್ಕೇರಾ, ಕೆಂಭಾವಿ ಮತ್ತು ಹುಣಸಗಿ ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಆಗಲಿದೆ. ಈಗಾಗಲೇ 117 ದಶಲಕ್ಷ ಲೀಟರ್ ನೀರು ಸಂಸ್ಕರಣೆ ಘಟಕ ನಿರ್ಮಾಣ ಆಗಿದ್ದು, ಮೋದಿ ನೀರು ಪೂರೈಕೆ ಯೋಜನೆ ಕಾಮಗಾರಿಗೆ ಅಡಿಗಲ್ಲು ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ