Karnataka No.1: ಮೋದಿ ಹುಟ್ಟುಹಬ್ಬಕ್ಕೆ ವ್ಯಾಕ್ಸಿನೇಶನ್ ದಾಖಲೆ; ರೇಸ್​ನಲ್ಲಿ ಗೆದ್ದ ಕರ್ನಾಟಕ

Highest Vaccinations- ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಇಂದು ಗುರಿ ಇಟ್ಟುಕೊಂಡಿರುವಂತೆ ದೇಶಾದ್ಯಂತ 2 ಕೋಟಿಗೂ ಅಧಿಕ ಲಸಿಕೆಗಳನ್ನ ಹಾಕಲಾಗಿದೆ. ಒಂದೇ ದಿನದಲ್ಲಿ 26 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್ ಹಾಕಿರುವ ಕರ್ನಾಟಕ ಮುಂಚೂಣಿಯಲ್ಲಿದೆ.

ನರೇಂದ್ರ ಮೋದಿ

ನರೇಂದ್ರ ಮೋದಿ

  • Share this:
ಬೆಂಗಳೂರು, ಸೆ. 17: ಪ್ರಧಾನಿ ಮೋದಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಾದ್ಯಂತ ಮಹಾ ಲಸಿಕೆ‌ ಅಭಿಯಾನ ನಡೆಸಿತ್ತು. ಈ ನಿಟ್ಟಿನಲ್ಲಿ ಕರ್ನಾಟಕ ಕೂಡ 31,75,000 ಲಸಿಕೆ‌ ಹಂಚುವ ಗುರಿ‌ ಹೊಂದಿತ್ತು. ಇದೀಗ ದೇಶದ ಇತರೆ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿರುವ ಕರ್ನಾಟಕ ‌ಇಡೀ ದೇಶದಲ್ಲಿ ದಿನವೊಂದಕ್ಕೆ ಅತಿ ಹೆಚ್ಚು ಲಸಿಕೆ ಹಂಚಿಕೆ ಮಾಡಿದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ‌9 ಗಂಟೆಯ ಅಂಕಿ ಅಂಶ ಪ್ರಕಾರ ಕರ್ನಾಟಕ ‌ಒಟ್ಟು 26.62 ಲಕ್ಷ‌ ಡೋಸ್ ಲಸಿಕೆ ಹಂಚಿಕೆ ಮಾಡಿ ಮುಂಚೂಣಿಯಲ್ಲಿದ್ದ ಉತ್ತರ ಪ್ರದೇಶ ಹಾಗೂ ಬಿಹಾರವನ್ನು‌ ಹಿಂದಿಕ್ಕಿದೆ.

ಲಸಿಕೆ ಹಂಚಿಕೆಯಲ್ಲಿ ದೇಶದಲ್ಲೇ ಕರ್ನಾಟಕ ದಾಖಲೆ: ಇತರೆ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿ ಐತಿಹಾಸಿಕ ರೀತಿಯಲ್ಲಿ ಲಸಿಕೆ ಹಂಚಿಕೆ ಮಾಡಿದೆ ಕರ್ನಾಟಕ. ಲಸಿಕೆ ಮಹಾ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದ ಉತ್ತರ ಪ್ರದೇಶ, ಬಿಹಾರವನ್ನು ಕರ್ನಾಟಕ ಹಿಂದಿಕ್ಕಿದೆ. ಒಂದೇ ದಿನದಲ್ಲಿ 26.62 ಲಕ್ಷ ಡೋಸ್ ಲಸಿಕೆ ಹಂಚಿಕೆ ಮಾಡಲಾಗಿದೆ. ಉತ್ತರ ಪ್ರದೇಶ ಹಾಗೂ ಬಿಹಾರ ಸರಿಯಾಗಿ 24.86 ಲಕ್ಷ ಡೋಸ್ ಲಸಿಕೆ‌ ಹಂಚಿಕೆ ಮಾಡಿದೆ. ಇನ್ನು ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಲಸಿಕೆ ಹಂಚಿಕೆ ಮಾಡಲಾಗಿದೆ.‌ ಬೆಂಗಳೂರಿನಲ್ಲಿ 4 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ಹಂಚಲಾಗಿದೆ.‌ ಬೆಂಗಳೂರು ಹೊರತಾಗಿ ಬೆಳಗಾವಿ 2.39 ಡೋಸ್, ದಕ್ಷಿಣ ಕನ್ನಡ ಹಾಗೂ ಬಳ್ಳಾರಿ 1.33 ಡೋಸ್, ತುಮಕೂರು 1.24 ಡೋಸ್, ಮಂಡ್ಯ 1.15 ಡೋಸ್ ಹಂಚಿಕೆ ಮಾಡಿದೆ. ಶಿವಮೊಗ್ಗ, ಧಾರವಾಡ, ರಾಮನಗರ, ಹಾಸನ, ದಾವಣಗೆರೆ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗಳಲ್ಲಿ ಶೆ. 100 ರಷ್ಟು ಲಸಿಕೆ‌ ನೀಡಿ‌ ಗುರಿ ಮುಟ್ಟುವಲ್ಲಿ‌ ಯಶ ಕಂಡಿದೆ. ಈ ಮೂಲಕ ಸೆಪ್ಟೆಂಬರ್ ನಿಂದ ಈವರೆಗೆ 87 ಲಕ್ಷ‌ ಡೋಸ್ ಲಸಿಕೆ ಹಂಚಿದ ಹೆಗ್ಗಳಿಕೆ ಕರ್ನಾಟಕದ್ದು.

ಒಟ್ಟಾರೆ ರಾಜ್ಯದಲ್ಲಿ 5 ಕೋಟಿಗೂ ಅಧಿಕ ಡೋಸ್ ಲಸಿಕೆ ಹಂಚಿಕೆ:

ಈ‌ ಲಸಿಕೆ ಮಹಾ ಅಭಿಯಾನದ ಮೂಲಕ ರಾಜ್ಯ ಸರ್ಕಾರದ ಮಹತ್ವದ ಮೈಲಿಗಲ್ಲು‌ ಸಾಧಿಸಿದೆ. ರಾಜ್ಯದಲ್ಲಿ 5.12 ಕೋಟಿ‌ ಡೋಸ್ ಲಸಿಕೆಯನ್ನು ಹಂಚಿಕೆ ಮಾಡಿದೆ. ಈ ಮೂಲಕ‌ ಅತಿ ಹೆಚ್ಚು ಲಸಿಕೆ ಹಂಚಿಕೆ ಮಾಡಿರುವ ಪಟ್ಟಿಯಲ್ಲಿ ಕರ್ನಾಟಕ ಅಲ್ಪ ಮಟ್ಟಿನ ಜಿಗಿತ ಸಾಧಿಸಿದೆ. ಇದೇ ಮಾದರಿಯಲ್ಲಿ ಲಸಿಕೆ ಹಂಚಿಕೆಯಾದರೆ ಡಿಸೆಂಬರ್ ಅಂತ್ಯೊದಳಗೆ ಇಡೀ ಕರ್ನಾಟಕದ ಜನತೆ ಲಸಿಕೆ‌ ಹಾಕಿಸಿಕೊಂಡು ಕೊರೋನಾ ಮೂರನೇ ಅಲೆಯ ಹೊಡೆತದಿಂದ ಪಾರಾಗಲಿದೆ.

ಇದನ್ನೂ ಓದಿ: ಹಿಂದೂ, ಮುಸ್ಲಿಂ ಖೈದಿಗಳನ್ನ ಒಂದೇ ಸೆಲ್​ಗೆ ಹಾಕಿ, ಅಲ್ಲೇ ಬಡಿದಾಡಿ ಸಾಯಲಿ: ಯುಟಿ ಖಾದರ್

ಒಂದೇ ದಿನಕ್ಕೆ ಇಡೀ ದೇಶದಲ್ಲಿ 2.25 ಕೋಟಿ‌ ಡೋಸ್ ವ್ಯಾಕ್ಸಿನೇಷನ್‌:

ಅತ್ತ ಸಮರೋಪಾದಿಯಲ್ಲಿ ಎಲ್ಲಾ ರಾಜ್ಯಗಳು ಲಸಿಕೆ ಅಭಿಯಾನದ ನಡೆಸಿರುವ ಹಿನ್ನೆಲೆಯಲ್ಲಿ ಒಂದೇ ದಿನಕ್ಕೆ ದೇಶದಲ್ಲಿ 2.25 ಕೋಟಿ ಡೋಸ್ ಲಸಿಕೆ‌ ಹಂಚಿಕೆ ಮಾಡಲಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟಾರೆ 79 ಕೋಟಿಗೂ ಅಧಿಕ ಡೋಸ್ ನೀಡಲಾಗಿದೆ. ಒಟ್ಟಾರೆ ಬಿಜೆಪಿ ಪ್ರಧಾನಿ ಮೋದಿ ಹುಟ್ಟಿದ ದಿನದಂದು ಭರ್ಜರಿ ಲಸಿಕೆ‌ ಹಂಚಿಕೆಮಾಡಿ ಬೃಹತ್ ಲಸಿಕಾ ಅಭಿಯಾನವನ್ನು‌ ಯಶಸ್ವಿಯಾಗಿ ನಡೆಸಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ಕರ್ನಾಟಕ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.)

ವರದಿ: ಆಶಿಕ್ ಮುಲ್ಕಿ
Published by:Vijayasarthy SN
First published: