ಉತ್ತರ ಕರ್ನಾಟಕದಲ್ಲಿ ಪ್ರವಾಹ; ಹಿಂದಿನಂತೆ ಪರಿಹಾರ ಕ್ರಮಕ್ಕೆ ಸಿಎಂ ಸೂಚನೆ

ರಾಜ್ಯದಲ್ಲಿ ಮತ್ತೆ ಪ್ರವಾಹ ಮುಂದುವರಿದಿದ್ದು, ಈ ಹಿಂದಿನಂತೆ ನೆರೆ ಪರಿಹಾರ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು. ಅಗತ್ಯವಿರುವ ಕಡೆಗಳಲ್ಲಿ ಶೆಡ್ ನಿರ್ಮಿಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು.

Seema.R | news18-kannada
Updated:October 24, 2019, 8:49 AM IST
  • Share this:
ಬೆಂಗಳೂರು (ಅ.23):  ರಾಜ್ಯದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಪ್ರವಾಹಕ್ಕೆ ಉತ್ತರ ಕರ್ನಾಟಕದ ಜನರು ಮತ್ತೆ ತತ್ತರಿಸಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ಕಳೆದ ಮೂರು ತಿಂಗಳಿನಿಂದ ಸತತ ಪ್ರವಾಹಕ್ಕೆ ತುತ್ತಾಗುತ್ತಿರುವ ಅವರು ಹೈರಾಣಾಗಿದ್ದಾರೆ. 

ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಬಿಸಿಲನಗರಿಯಾದ ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿಯೂ ನಿರಂತರ ಮಳೆಯಾಗುತ್ತಿದ್ದು, ಹಳ್ಳಕೊಳ್ಳ, ನದಿಗಳು ಉಕ್ಕಿ ಹರಿದಿವೆ. ಸತತ ಮಳೆಗೆ ಅನೇಕ ಮನೆಗಳು ನೆಲಕ್ಕೆ ಉರುಳುತ್ತಿದ್ದು, ಜಮೀನುಗಳು ಜಲಾವೃತವಾಗಿವೆ. ರಸ್ತೆಗಳು ನದಿಗಳಾಗಿದ್ದು ಜನ ಜೀವನ ಸಂಕಷ್ಟಕ್ಕೆ ಒಳಗಾಗಿದೆ

ಬೆಳಗಾವಿ, ಚಿಕ್ಕೋಡಿ, ಗದಗ, ವಿಜಯಪುರ, ಬಾಗಲಕೋಟೆ ಗಳಲ್ಲಿ ಮಳೆ ಜೊತೆ ನದಿಗಳು ಉಕ್ಕಿ ಹರಿಯುತ್ತಿದ್ದು, ಅನೇಕ ಗ್ರಾಮಗಳು ಪ್ರವಾಹ ಭೀತಿಗೆ ಒಳಗಾಗಿವೆ. ಇಲ್ಲಿನ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ಪ್ರವಾಹ ಹೆಚ್ಚಾಗಿದ್ದು, ತ್ರಿವೇಣಿ ಸಂಗಮ, ಕೂಡಲಸಂಗಮ ಪ್ರವಾಹ ಭೀತಿ ಎದುರಾಗಿದೆ. ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ರಾಯಚೂರಿನ ಆತ್ಕೂರ್​ ಬಳಿ  ಮಕ್ಕಳು ನದಿ ದಾಟಿ ಶಾಲೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾರಾಯಣಪುರ ಡ್ಯಾಂನಿಂದ ಭೀಮ ನದಿಗೆ 1.20 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಪರಿಣಾಮ ಯಾದಗಿರಿಯ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಮಳೆಯಿಂದಾಗಿ 13 ಮಂದಿ ಮೃತಪಟ್ಟಿದ್ದು 206 ಮನೆಗಳು ಬಿದ್ದು ಹೋಗಿವೆ. 9,832 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಇನ್ನು 7,220 ಸಂತ್ರಸ್ತರ ರಕ್ಷಣೆ ಮಾಡಿ ಸಂತ್ರಸ್ತರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ,

ಮೈಸೂರಲ್ಲೂ ಇಂದು ಸುರಿದ ಭಾರೀ ಮಳೆಗೆ ಚಾಮುಂಡಿ ಬೆಟ್ಟದ ತಡೆಗೋಡೆ ಕುಸಿದಿದೆ. ಚಾಮರಾಜನಗರದಲ್ಲೂ ಮಳೆಯಾಗುತ್ತಿದ್ದು. ಮಲೆಮಹದೇಶ್ವರ ಬೆಟ್ಟದಲ್ಲಿ ರಸ್ತೆ ಕುಸಿದಿದೆ.

ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳಲ್ಲಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗೋ ಮುನ್ಸೂಚನೆ ಇದೆ. ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ..

ತುಂಗಭದ್ರಾ ಡ್ಯಾಂನಿಂದ ಅಪಾರ ನೀರು ಬಿಡುಗಡೆ ಮಾಡಲಾಗುತ್ತಿದ್ದು, ನದಿಪಾತ್ರದ ಜನರು ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. ಬಾದಾಮಿಯಲ್ಲಿ ಮಲಪ್ರಭಾ ನದಿ ಪಾತ್ರದಲ್ಲಿ ಪ್ರವಾಹ ವಾತಾವರಣ ನಿರ್ಮಾಣವಾಗಿದ್ದು, ಖ್ಯಾಡದಲ್ಲಿ 80ಕ್ಕೂ ಹೆಚ್ಚು ಮನೆ ಜಲಾವೃತಗೊಂಡಿದೆ. ಜೊತೆಗೆ  ಗೋವನಕೊಪ್ಪ, ಕಾತರಕಿ, ಹೆಬ್ಬಳ್ಳಿ, ಸುಳ್ಳ, ಕಿತ್ತಲಿ ಗ್ರಾಮಗಳಲ್ಲಿ ನೀರುನುಗ್ಗಿ ಪ್ರವಾಹ ಉಂಟಗಿದ್ದು, ಪ್ರವಾಹ ಸಂತ್ರಸ್ತರ ಸಮಸ್ಯೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಆಲಿಸಿದರು.ಹಾವೇರಿ ಜಿಲ್ಲೆಯಲ್ಲಿ ಮಳೆಯಿಂದಾಗಿ ರಸ್ತೆ 200 ಮೀಟರ್​​​ನಷ್ಟು ಬಿರುಕು ಬಿಟ್ಟಿದ್ದು, ಹುನಗುಂದ - ಮುಗಳಿಕಟ್ಟಿ ಸಂಪರ್ಕ ಕಡಿತವಾಗಿದೆ.

ಇದನ್ನು ಓದಿ: ಅಪರೂಪದ ಮಗ ಡಿಕೆ ಕುಮಾರ್; ಅಪ್ಪನ ಹಳೆ ಸ್ಕೂಟರ್​ನಲ್ಲಿ ಅಮ್ಮನ ಜೊತೆ 48 ಸಾವಿರ ಕಿಮೀ ದೇಶ ವಿದೇಶ ಸಂಚಾರ

ಐತಿಹಾಸಿಕ ಐಹೊಳೆಗೂ ಪ್ರವಾಹದ ಬಿಸಿ ತಟ್ಟಿದ್ದು, ಇಲ್ಲಿ ಗುರ್ಜಾಪುರ ಬ್ರಿಡ್ಜ್​ ಕಂ ಬ್ಯಾರೇಜ್​​ ಮುಳುಗುವ ಸಾಧ್ಯತೆ ಇದೆ. ಇದರಿಂದ ಗುಂಡ್ಲೂರು, ಸಂಗಮ ದೇವಸ್ಥಾನ ಸಂಪರ್ಕ ಕಡಿತವಾಗಲಿದೆ. ಬಸವಸಾಗರ ಡ್ಯಾಂನಿಂದ ಮತ್ತಷ್ಟು ನೀರು ಬಿಡುಗಡೆ ಮಾಡಿದ್ದು ಕೊಳ್ಳೂರು ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಯಾದಗಿರಿ-ರಾಯಚೂರು ಜಿಲ್ಲೆ ಸಂಪರ್ಕ ಕಡಿತಗೊಂಡಿದೆ

ನಡುಗಡ್ಡೆಯಲ್ಲಿಯೇ ಇದ್ದ ಬರೋಬ್ಬರಿ ಆರುನೂರು ಕುರಿಗಳನ್ನು ಮೂರು ಬೋಟ್ ಗಳ ಮೂಲಕ ಬೆಳಗ್ಗೆಯಿಂದ ಸಂಜೆಯವರೆಗೆ ರಕ್ಷಣೆ ಮಾಡಿ ದಡಕ್ಕೆ ತರಲಾಯಿತು. ಕುರಿಗಳ ಸ್ಥಳಾಂತರ ಮಾಡುವುದು ರಕ್ಷಣಾ ತಂಡಕ್ಕೆ ಸವಾಲಿನ‌‌ ವಿಷಯವಾಗಿತ್ತು. ದೊಡ್ಡ ಸ್ಟೀಮರ್ ಬೋಟಿನಲ್ಲಿ 25 ಕುರಿಗಳು, ಸಣ್ಣ ಎರಡು ಬೋಟಿನಲ್ಲಿ ತಲಾ‌ 10 ಕುರಿಗಳನ್ನು ತರಲು ವ್ಯವಸ್ಥೆಯಿತ್ತು. ಇದೇ ರೀತಿ ಬೆಳಗ್ಗೆಯಿಂದ ಬೋಟು ಕುರಿಗಾಹಿಗಳ ಸಹಾಯದಿಂದ ಸುರಕ್ಷಿತವಾಗಿ ಕುರಿಗಳನ್ನು ತರಲಾಯಿತು. ಬೋಟ್ ಮೂಲಕ ನಡುಗಡ್ಡೆಗೆ ತೆರಳಿ, ರಕ್ಷಣಾತಂಡ ಕಾರ್ಯಕ್ಕೆ ನ್ಯೂಸ್ 18 ತಂಡ ಸಹಕಾರ ನೀಡಿತು.

ಡಿಸಿಎಂ ಕಾರಜೋಳ ಸಭೆ

ಬಾಗಲಕೋಟೆಯಲ್ಲಿ ಪ್ರವಾಹ ಕುರಿತು ಡಿಸಿಎಂ  ಗೋವಿಂದ ಕಾರಜೋಳ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದಲ್ಲಿ ಸಭೆ‌‌ ನಡೆಸಲಾಯಿತು. ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್, ಜಿ.ಪಂ ಅಧ್ಯಕ್ಷೆ ಬಾಯಕ್ಕ, ಡಿಸಿ ಡಾ.ರಾಜೆಂದ್ರ ಭಾಗಿಯಾಗಿದ್ದು, ಪ್ರವಾಹ ಪರಿಹಾರ ಕುರಿತು ಚರ್ಚೆ ನಡೆಸಲಾಯಿತು.

ಹಿಂದಿನಂತೆ ನೆರೆ ಪರಿಹಾರ

 

ರಾಜ್ಯದಲ್ಲಿ ಮತ್ತೆ ಪ್ರವಾಹ ಮುಂದುವರಿದಿದ್ದು, ಈ ಹಿಂದಿನಂತೆ ನೆರೆ ಪರಿಹಾರ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು. ಅಗತ್ಯವಿರುವ ಕಡೆಗಳಲ್ಲಿ ಶೆಡ್ ನಿರ್ಮಿಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು.

First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ