Thawar chand: ಸಾಹಿತ್ಯಾಸಕ್ತಿ, ವಿದ್ಯಾರ್ಥಿ ದೆಸೆಯಿಂದಲೇ ಆರ್​ಎಸ್​ಎಸ್​ ನಂಟು: ಇಲ್ಲಿದೆ ತಾವರ್​ ಚಂದ್​ ಅವರ ಕಿರು ಪರಿಚಯ

ವಿದ್ಯಾರ್ಥಿಯಾಗಿದ್ದಾಗಲೇ ಆರ್​ಎಸ್​ಎಸ್​ ನಂಟು ಬೆಸೆದುಕೊಂಡ ಇವರು ಆನಂತರ ಹಿಂತಿರುಗಿ ನೋಡಿದ್ದೆ ಇಲ್ಲ. ಮಧ್ಯ ಪ್ರದೇಶದ ಉಜ್ಜಯಿನಿಯ ನಾಗ್ಡಾ ಜಿಲ್ಲೆಯ ಆರ್​ಎಸ್​ಎಸ್​ ಶಾಖೆಯ ಕಾರ್ಯನಿರ್ವಾಹಕರಾಗಿ, ಕಾರ್ಯದರ್ಶಿಯಾಗಿ ನಂತರ ಸಂಘದ ಕಾರ್ಮಿಕ ಸಂಘಟನೆಯಾದ ಭಾರತೀಯ ಮಜ್ದೂರ್​ ಸಂಘದಲ್ಲಿ ಖಜಾಂಚಿಯಾಗಿ ಬೆಳೆದವರು ತಾವರ್​ ಚಂದ್​.

ಥಾವರ್ ಚಂದ್ ಗೆಹ್ಲೋಟ್ (ವಿಕಿ ಚಿತ್ರ)

ಥಾವರ್ ಚಂದ್ ಗೆಹ್ಲೋಟ್ (ವಿಕಿ ಚಿತ್ರ)

 • Share this:
  ಬೆಂಗಳೂರು:  ಕರ್ನಾಟಕದ ರಾಜ್ಯಪಾಲರಾಗಿ ದಾಖಲೆಯ ಅವಧಿ ಬರೆದಿದ್ದ ವಾಜೂಭಾಯಿ ವಾಲಾ ಅವರ ಸ್ಥಾನವನ್ನು ತುಂಬಿರುವ ಬಿಜೆಪಿಯ ಹಿರಿಯ ನಾಯಕ ತಾವರ್​ ಚಂದ್​ ಗೆಹ್ಲೋಟ್​ ಅವರನ್ನು ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ನೇಮಕ ಮಾಡಿರುವುದು ಅನೇಕ ಅಚ್ಚರಿಗಳಿಗೆ ಕಾರಣವಾಗಿದೆ. ಇವರು ಕರ್ನಾಟಕದ 19ನೇ ರಾಜ್ಯಪಾಲರು.

  ತವಾರ್ ಚಂದ್ ಅವರ ಹಿನ್ನೆಲೆ

  ಪ್ರಸ್ತುತ ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ತವಾರ್ ಚಂದ್ ಗೆಹ್ಲೋಟ್ ಅವರು 2014ರಿಂದಲೂ ಸಚಿವರಾಗಿ ಇದ್ದವರು.

  ವಿದ್ಯಾರ್ಥಿಯಾಗಿದ್ದಾಗಲೇ ಆರ್​ಎಸ್​ಎಸ್​ ನಂಟು ಬೆಸೆದುಕೊಂಡ ಇವರು ಆನಂತರ ಹಿಂತಿರುಗಿ ನೋಡಿದ್ದೆ ಇಲ್ಲ. ಮಧ್ಯ ಪ್ರದೇಶದ ಉಜ್ಜಯಿನಿಯ ನಾಗ್ಡಾ ಜಿಲ್ಲೆಯ ಆರ್​ಎಸ್​ಎಸ್​ ಶಾಖೆಯ ಕಾರ್ಯನಿರ್ವಾಹಕರಾಗಿ, ಕಾರ್ಯದರ್ಶಿಯಾಗಿ ನಂತರ ಸಂಘದ ಕಾರ್ಮಿಕ ಸಂಘಟನೆಯಾದ ಭಾರತೀಯ ಮಜ್ದೂರ್​ ಸಂಘದಲ್ಲಿ ಖಜಾಂಚಿಯಾಗಿ ಬೆಳೆದವರು ತಾವರ್​ ಚಂದ್​.

  ಮಧ್ಯಪ್ರದೇಶದ ಉಜ್ಜಯಿನಿ ರುಪ್ಟಾದಲ್ಲಿ 1948ರ ಮೇ 18ರಂದು ದಲಿತ ಕುಟುಂಬದಲ್ಲಿ ಜನಿಸಿದ 73 ವರ್ಷದ ಗೆಹ್ಲೋಟ್ ಅವರು ಉಜ್ಜಯಿನಿಯ ವಿಕ್ರಮ್ ವಿಶ್ವವಿದ್ಯಾಲಯದಿಂದ ಬಿಎ ಪದವಿ ಪಡೆದಿದ್ದಾರೆ. ಮೇ 1 1965 ರಂದು ಅನಿತಾ ಗೆಹ್ಲೋಟ್​ ಅವರನ್ನು ಮದುವೆಯಾದ ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಮೂವರು ಪುತ್ರರಿದ್ದಾರೆ.

  ತುರ್ತು ಪರಿಸ್ಥಿಯ ಸಂಧರ್ಭದಲ್ಲಿ ಜೈಲುವಾಸ ಅನುಭವಿಸಿದ್ದ ಇವರು ಆನಂತರ 1977 ರಲ್ಲಿ ಬಿಜೆಪಿಯ ಜನರಲ್​ ಸೆಕ್ರೆಟರಿಯಾಗಿ ಮತ್ತು ಉಪಾಧ್ಯಕ್ಷರಾಗಿ ಸೇವೆಸಲ್ಲಿಸಿದರು. 1980 ರಿಂದ 1996ರ ತನಕ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಇವರು ಅನೇಕ ಹುದ್ದೆಗಳನ್ನು ಅಲಂಕರಿಸಿದರು. ಆನಂತರ 1996ರಲ್ಲಿ ಲೋಕಸಭೆಗೆ ಆಯ್ಕೆಯಾಗಿದರು. 1998 ರಲ್ಲಿ ನಡೆದ ಸಜ್ಜಾಪುರ್​ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಆಯ್ಕೆಯಾಗಿ ಉನ್ನತ ಹುದ್ದೆಗಳ ಮೆಟ್ಟಿಲನ್ನು ಒಂದೊಂದೆ ಏರುತ್ತಾ ಹೋದರು. 2002 ರಿಂದ 2004 ರ ತನಕ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ, 2004 ರಲ್ಲಿ ಉಪಾಧ್ಯಕ್ಷ ಹಾಗೂ ಈಶಾನ್ಯ ಭಾರತದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

  2004 ರಲ್ಲಿ 4ನೇ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಇವರ ಕ್ಷೇತ್ರದಲ್ಲಿ ಹೊಸಾ ಮುಖಗಳಿಗೆ ಮಣೆ ಹಾಕಬೇಕು ಎನ್ನುವ ಉದ್ದೇಶದಿಂದ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟ ಇವರನ್ನು ಬಿಜೆಪಿ  2012 ರಲ್ಲಿ ಇವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿತು. 2014 ರಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇವರನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಮಾಡಲಾಯಿತು. ಮತ್ತೆ 2018 ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು.  ಕೇಂದ್ರದ ಎನ್‌ಡಿಎ ಸರಕಾರದಲ್ಲಿ ಅತ್ಯಂತ ದೀರ್ಘಕಾಲ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ತಾವರ್‌ ಚಂದ್‌ ಅವರಿಗೆ ಇದೆ.

  ಎನ್‌ಡಿಎ ಮೊದಲ ಅವಧಿಗೆ ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲಿಯೂ ಕೂಡ ಕ್ಯಾಬಿನೆಟ್ ಮಂತ್ರಿಯಾಗಿದ್ದರು. 1996 ರಿಂದ 2009ರ ವರೆಗೆ ಮಧ್ಯಪ್ರದೇಶದ ಶಜಾಪುರ ಮೀಸಲು ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿಯೂ ಆಯ್ಕೆಯಾಗಿದ್ದರು. ನೀತಿ ಆಯೋಗದ ವಿಶೇಷ ಆಹ್ವಾನಿತರಾಗಿಯೂ ಕಾರ್ಯನಿರ್ವಹಿಸಿದ್ದರು.

  ಮಧ್ಯಪ್ರದೇಶದ ನಾಗ್ಡಾದಲ್ಲಿ ಜನಸಿದ ತಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ 73 ವರ್ಷ.  ಪ್ರಸಕ್ತ ಕೇಂದ್ರ ಸಚಿವರಾಗಿ ಮತ್ತು ರಾಜ್ಯಸಭಾ ಸದಸ್ಯರಾಗಿರುವ ತವಾರ್‌ ಚಂದ್‌ ಗೆಹ್ಲೋಟ್‌ ಅವರು ಮಂಗಳವಾರ (ಜುಲೈ 6) ರಾಜ್ಯಸಭಾ ಸ್ಥಾನದಿಂದ ನಿವೃತ್ತಿ ಹೊಂದಲಿದ್ದಾರೆ.

  ಸಾಹಿತ್ಯದ ನಂಟು: ಮಧ್ಯಪ್ರದೇಶ ವಿಧಾನಸಭೆಯಿಂದ ಪ್ರಕಟವಾಗುತ್ತಿದ್ದ ವಿಧಾಯಿನಿ ಪಾಕ್ಷಿಕ ಪತ್ರಿಕೆಗೆ ಅತ್ಯಂತ ದೀರ್ಘಕಾಲದ ವರೆಗೆ ಲೇಖನ ಬರೆಯುತ್ತಿದ್ದರು.

  ಇದನ್ನೂ ಓದಿ: Karnataka Governor Thaawarchand Gehlot: ಥಾವರ್​ಚಂದ್ ಗಹಲೋತ್ ಕರ್ನಾಟಕದ ನೂತನ ರಾಜ್ಯಪಾಲ; ವಜುಭಾಯ್ ವಾಲ ದಾಖಲೆ ಅವಧಿ ಅಂತ್ಯ

  2020ರ ಸೆಪ್ಟೆಂಬರ್‌ನಲ್ಲಿ ವಜುಭಾಯಿ ವಾಲಾ ಅವರನ್ನು ಬದಲಿಸಿ ಬೇರೊಬ್ಬರನ್ನು ರಾಜ್ಯಪಾಲರಾಗಿ ನೇಮಿಸಲಾಗುತ್ತದೆ ಎಂಬ ಸುದ್ದಿ ಹರಿದಾಡಿತ್ತು. ಕೇಂದ್ರದ ಮಾಜಿ ಸಚಿವೆ ಉಮಾಭಾರತಿ, ಲೋಕಸಭೆಯ ಮಾಜಿ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರ ಹೆಸರು  ಕೇಳಿ ಬಂದಿತ್ತು. ಅಂತಿಮವಾಗಿ ರಾಜ್ಯಪಾಲ ಹುದ್ದೆ ಸ್ಥಾನಕ್ಕೆ ತಾವರ್‌ ಚಂದ್‌ ಗೆಹ್ಲೋಟ್‌ ನೇಮಕಗೊಂಡಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: