• Home
 • »
 • News
 • »
 • state
 • »
 • ಹುಣಸೂರು, ಬೆಂಗಳೂರು ಗ್ರಾಮಾಂತರ ಸೇರಿ ವಿವಿಧ ನಗರಸಭೆಗಳಿಗೆ ಮತದಾನ ಆರಂಭ

ಹುಣಸೂರು, ಬೆಂಗಳೂರು ಗ್ರಾಮಾಂತರ ಸೇರಿ ವಿವಿಧ ನಗರಸಭೆಗಳಿಗೆ ಮತದಾನ ಆರಂಭ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಹುಣಸೂರಿನ 31 ವಾರ್ಡ್​ಗಳಿಗೆ ಹಾಗೂ ಸಿರಗುಪ್ಪದ 31 ವಾರ್ಡ್​ಗಳಿಗೆ ಇಂದು ಚುನಾವಣೆ ನಡೆಯಲಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಭಾರೀ ಕಸರತ್ತು ನಡೆಸಿವೆ. 

 • Share this:

  ಮೈಸೂರು (ಫೆ. 9): ಮೈಸೂರಿನ ಹುಣಸೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬಳ್ಳಾರಿಯ ಸಿರಗುಪ್ಪ ನಗರಸಭೆ ಚುನಾವಣೆ ಇಂದು  ನಡೆಯಲಿದ್ದು, ಈಗಾಗಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ.


  ಹುಣಸೂರಿನ 31 ವಾರ್ಡ್​ಗಳಿಗೆ ಹಾಗೂ ಸಿರಗುಪ್ಪದ 31 ವಾರ್ಡ್​ಗಳಿಗೆ ಇಂದು ಚುನಾವಣೆ ನಡೆಯಲಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಭಾರೀ ಕಸರತ್ತು ನಡೆಸಿವೆ. ಮಾಜಿ ಶಾಸಕ ಎಚ್​. ವಿಶ್ವನಾಥ್​ ಅವರ ಪ್ರತಿಷ್ಠೆಯ ಕಣವಾಗಿರುವ ಹುಣಸೂರಿನಲ್ಲಿ 49 ಸಾವಿರಕ್ಕೂ ಅಧಿಕ ಮತದಾರರಿದ್ದಾರೆ. ಈ ಕ್ಷೇತ್ರ ಹಾಲಿ ಶಾಸಕ ಎಚ್​. ಪಿ. ಮಂಜುನಾಥ್ ಅವರ ಪ್ರತಿಷ್ಠೆಯ ಕಣವೂ ಹೌದು. ಜೆಡಿಎಸ್​ನಲ್ಲಿದ್ದ ಎಚ್​. ವಿಶ್ವನಾಥ್​ ರಾಜೀನಾಮೆ ನೀಡಿ ಬಿಜೆಪಿ ಸೇರಿದ ನಂತರ ಎಚ್​.ಪಿ. ಮಂಜುನಾಥ್ ವಿರುದ್ಧ ಈ ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಈ ಹಿನ್ನೆಲೆಯಲ್ಲಿ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ತಮ್ಮ ಸ್ವಕ್ಷೇತ್ರದಲ್ಲಿ ವರ್ಚಸ್ಸು ಉಳಿಸಿಕೊಳ್ಳುವ ಸವಾಲು ಎಚ್​. ವಿಶ್ವನಾಥ್ ಮುಂದಿದೆ.


  ದೇವರಹಳ್ಳಿ ಸೋಮಶೇಖರ್ ನೇತೃತ್ವದಲ್ಲಿ ಜೆಡಿಎಸ್ ಅಭ್ಯರ್ಥಿ ನಗರಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿದಿದ್ದಾರೆ. ಮೂವರೂ ನಾಯಕರಿಗೆ ಪ್ರತಿಷ್ಠೆಯ ಕಣವಾಗಿರುವ ಹುಣಸೂರು ನಗರಸಭೆ ಚುನಾವಣೆಯಲ್ಲಿ ಗೆಲುವು ಯಾರಿಗೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ಮೊದಲು 27 ವಾರ್ಡ್ ಹೊಂದಿದ್ದ ಹುಣಸೂರಿನಲ್ಲಿ ಪುರಸಭೆ ಇತ್ತು. 4 ವಾರ್ಡ್ ಹೆಚ್ಚಿಸುವುದರ ಜೊತೆ ಈ ಕ್ಷೇತ್ರವನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು.


  ಇದನ್ನೂ ಓದಿ: ಡಿಕೆಶಿ ಬಳಿಕ ಎಚ್​ಡಿಕೆ ವಿರುದ್ಧ ತೊಡೆ ತಟ್ಟಲು ಕಲ್ಲಡ್ಕ ಪ್ರಭಾಕರ್ ಸಜ್ಜು​; ಇಂದು ರಾಮನಗರದಲ್ಲಿ ಆರ್​ಎಸ್​ಎಸ್​ ಪಥಸಂಚಲನ


  2013ರಲ್ಲಿ ಪುರಸಭೆಗೆ ಆಯ್ಕೆಯಾಗಿದ್ದ ಸದಸ್ಯರು 2015ರಲ್ಲಿ ಪುರಸಭೆಯು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿದ ನಂತರ ಎಲ್ಲರೂ ನಗರಸಭೆ ಸದಸ್ಯರಾದರು. ಪುರಸಭಾ ಮುಖ್ಯಾಧಿಕಾರಿ ಎ.ರಮೇಶ್ ನಗರಸಭೆ ಪೌರಾಯುಕ್ತರಾಗಿ ಬಡ್ತಿಯನ್ನೂ ಪಡೆದಿದ್ದರು. ಅಲ್ಲದೆ ಗುಲ್ನಾಜ್ ಬೇಗಂ ಪ್ರಥಮ ನಗರಸಭಾ ಅಧ್ಯಕ್ಷೆಯಾಗಿ ಹಾಗೂ ಸುನೀತಾ ಜಯರಾಮೇಗೌಡ ಉಪಾಧ್ಯಕ್ಷರಾಗಿ ಮುಂದುವರಿದರು. 2019ರ ಮಾರ್ಚ್ ತಿಂಗಳಲ್ಲಿ ನಗರಸಭೆ ಆಡಳಿತಾವಧಿ ಪೂರ್ಣಗೊಂಡಿದ್ದರೂ 1 ವರ್ಷದ ನಂತರ ನಗರಸಭೆಗೆ ಚುನಾವಣೆ ನಡೆಯುತ್ತಿದೆ.


  ಬಳ್ಳಾರಿಯಲ್ಲೂ ಚುನಾವಣೆಯ ಕಾವು:


  ಬಳ್ಳಾರಿಯ ಸಿರಗುಪ್ಪ ನಗರಸಭೆ ಚುನಾವಣೆಯೂ ಇಂದು ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಒಟ್ಟು 31 ವಾರ್ಡ್ ಒಳಗೊಂಡಿರುವ ನಗರಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಪೈಪೋಟಿಯಿದೆ. ಹಾಗೇ, ಇಲ್ಲಿನ ತೆಕ್ಕಲಕೋಟೆ ಪಟ್ಟಣ ಪಂಚಾಯತ್​ನ 20 ವಾರ್ಡ್​ಗಳಲ್ಲಿ ಇಂದು ಚುನಾವಣೆ ಆರಂಭವಾಗಿದೆ.


  ಇದನ್ನೂ ಓದಿ: ಮೈಸೂರನ್ನೂ ಬಿಡದ ಕೊರೊನಾ; ಮಾಸ್ಕ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..!


  ಚಿಕ್ಕಬಳ್ಳಾಪುರ ಚುನಾವಣೆ:


  ಚಿಕ್ಕಬಳ್ಳಾಪುರದ 31 ವಾರ್ಡ್​ಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಇಲ್ಲಿ ಒಟ್ಟು 101 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 50,538 ಮತದಾರರು ಕ್ಷೇತ್ರದಲ್ಲಿ 24,573 ಪುರುಷ ಮತದಾರರು, 25,950 ಮಹಿಳಾ ಮತದಾರರು ಮತ್ತು 15 ತೃತೀಯ ಲಿಂಗಿ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. 54 ಮತಗಟ್ಟೆಗಳಲ್ಲಿ 540 ಸಿಬ್ಬಂದಿ ಚುನಾವಣಾ ಕಾರ್ಯ ನಿರ್ವಹಿಸಲಿದ್ದಾರೆ.


  ಬೆಂಗಳೂರು ಗ್ರಾಮಾಂತರ ಮತದಾನ:


  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಗರಸಭೆಯ 31 ವಾರ್ಡ್​ಗಳಿಗೆ ಚುನಾವಣೆ ಆರಂಭವಾಗಿದ್ದು, ಒಟ್ಟು 114 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 47 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. 21 ಅತಿ ಸೂಕ್ಷ್ಮ, 14 ಸೂಕ್ಷ್ಮ, 12 ಸಾಮಾನ್ಯ ಮತಗಟ್ಟೆಗಳನ್ನು ತೆರಯಲಾಗಿದೆ. 62 ಮತಯಂತ್ರಗಳು, 275 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಒಟ್ಟು 47373 ಪುರುಷರು ಮತ್ತು 23419 ಮಹಿಳೆಯರು ಹಾಗೂ 16 ಇತರೆ ಮತದಾರಿಂದ ಮತದಾನ ನಡೆಯಲಿದೆ.

  Published by:Sushma Chakre
  First published: