ಬೆಂಗಳೂರು (ಜು.17): ತಿಂಗಳ ಆರಂಭದಿಂದ ಮಲೆನಾಡು, ಕರಾವಳಿ ಭಾಗದಲ್ಲಿ ಉತ್ತಮ ಮಳೆ ಆಗುತ್ತಿದೆ. ಪರಿಣಾಮ ಹಳ್ಳ, ಕೊಳ್ಳ, ನದಿಗಳು ಉಕ್ಕಿ ಹರಿದಿವೆ. ಉತ್ತಮ ಮಳೆ ಆಗುತ್ತಿರುವುದು ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಆದರೆ, ನದಿ ತಟದ ಭಾಗದ ಜನರಿಗೆ ಮಳೆ ಶಾಪವಾಗಿ ಪರಿಣಮಿಸಿದ್ದು, ಮನೆ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು ಭಾಗದಲ್ಲಿ ಉತ್ತಮ ಮಳೆ ಆಗುತ್ತಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ತುಮಕೂರು, ಕೋಲಾರ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಭಾಗದಲ್ಲಿ ಇಂದು ಮೋಡ ಕವಿದ ವಾತಾವರಣ ಇದ್ದು, ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ.
ಗುಲ್ಬರ್ಗದಲ್ಲಿ ಚಿಮ್ಮನಚೋಡ ಗ್ರಾಮದಲ್ಲಿ ಸಂಗಮೇಶ್ವರ ದೇವಾಲಯ ಇದೆ. ಗುರುವಾರ ಈ ಭಾಗದಲ್ಲಿ ಪ್ರವಾಹ ಉಂಟಾಗಿದ್ದು, ದೇವಾಲಯದಲ್ಲಿದ್ದ ಐವರನ್ನು ರಕ್ಷಣೆ ಮಾಡಲಾಗಿದೆ. ಸಂಗಮೇಶ್ವರ ದೇವಾಲಯದ ಬಳಿ ನಾಗರಾಳ ಜಲಾಶಯ ಇದೆ. ಇಲ್ಲಿ ಭಾರೀ ಪ್ರಮಾಣದ ನೀರು ಬಿಡಲಾಗಿತ್ತು. ಈ ವೇಳೆ ದೇವಾಲು ಮುಳುಗಿತ್ತು. ನಂತ ನೀರು ಬಿಡುವುದನ್ನು ನಿಲ್ಲಿಸಿ, ದೇವಾಲಯದಲ್ಲಿ ಇರುವವರನ್ನು ರಕ್ಷಣೆ ಮಾಡಲಾಗಿದೆ.
ವಿಜಯಪುರದಲ್ಲಿ ಕಳೆದ ಎರಡು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದೆ. ಹೀಗಾಗಿ ಈ ಭಾಗದಲ್ಲಿ ಕೃಷಿ ಚಟುವಟಕೆಗಳು ಭರದಿಂದ ಸಾಗಿವೆ.
ಉಕ್ಕಿ ಹರಿದ ನದಿಗಳು:
ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರಾಜ್ಯದ ನದಿಗಳು ಉಕ್ಕಿ ಹರಿಯುತ್ತಿವೆ. ಹೀಗಾಗಿ, ನದಿ ಅಂಚಿನ ಗ್ರಾಮಗಳು ಕಂಗಾಲಾಗಿವೆ. ಅಘನಾಶಿನಿ, ಗಂಗಾವಳಿ, ನೇತ್ರಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಸದ್ಯ, ನದಿ ಅಪಾಯದ ಮಟ್ಟ ತಲುಪಿಲ್ಲ. ಆದರೆ, ಮಳೆ ಹೆಚ್ಚಾದರೆ, ಕೆಲ ಗ್ರಾಮಗಳು ಮುಳುಗುವ ಭೀತಿ ಎದುರಾಗಿದೆ.
ಮಹಾರಾಷ್ಟ್ರ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಆಗುತ್ತಿದೆ. ಮುಂದಿನ ಒಂದು ವಾರಗಳ ಕಾಲ ಇದೇ ರೀತಿಯ ಮಳೆ ಮುಂದುವರಿಯಲಿದೆ ಎನ್ನಲಾಗಿದೆ. ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಪುಣೆ, ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ರಾಜ್ಯದ ನದಿಗಳು ಉಕ್ಕಿ ಹರಿಯುತ್ತಿವೆ. ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ನದಿ ಅಂಚಿನ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ