ಬೆಂಗಳೂರು (ಜು. 11): ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ಮಾನ್ಸೂನ್ ಬಿರುಸು ಪಡೆದುಕೊಂಡಿದೆ. ರಾಜ್ಯದ ಮಲೆನಾಡು, ಕರಾವಳಿ, ಕೊಡಗು ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಉಡುಪಿಯ ಬೈಂದೂರು, ಕುಂದಾಪುರ ಭಾಗದಲ್ಲಿ ಮಳೆಯಿಂದ ಮನೆಗಳು ಕುಸಿದು, ಎರಡು ಜೀವವನ್ನೂ ಬಲಿ ಪಡೆದಿರುವ ಘಟನೆ 2 ದಿನಗಳ ಹಿಂದೆ ನಡೆದಿತ್ತು. ಇಂದು ಮತ್ತು ನಾಳೆ ಕೂಡ ಕರಾವಳಿಯಲ್ಲಿ ಗುಡುಗು, ಮಿಂಚು, ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾಗೇ, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲೂ ಇನ್ನೆರಡು ದಿನ ಭಾರೀ ಮಳೆಯಾಗಲಿದೆ. ನಿನ್ನೆ ಕೊಲ್ಲೂರಿನಲ್ಲಿ ಅತಿಹೆಚ್ಚು 17 ಸೆಂ.ಮೀ. ಮಳೆ ದಾಖಲಾಗಿದೆ.
![Weathare Department announced Yellow Alert in Udupi, Dakshina Kannada, Uttara Kannada Due To Heavy Rain]()
ಉಡುಪಿಯಲ್ಲಿ ಸುರಿದ ಮಳೆಯಿಂದ ಜಲಾವೃತವಾಗಿರುವ ಮನೆ
ಇದನ್ನೂ ಓದಿ: ಕಳೆದ ಮಳೆಗಾಲದಲ್ಲಿ ಕೊಚ್ಚಿ ಹೋದ ಸೇತುವೆ ಇನ್ನೂ ಆಗದ ದುರಸ್ಥಿ; ನದಿ ದಾಟಲು ಕಾಫಿನಾಡಿನ ಜನರ ದುಸ್ಸಾಹಸ
ಕೊಡಗಿನಲ್ಲಿ ರೆಡ್ ಅಲರ್ಟ್:
ಕೊಡಗಿನಲ್ಲಿ ಕಳೆದ 10 ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹದ ಭೀತಿ ಎದುರಾಗಿದೆ. ತ್ರಿವೇಣಿ ಸಂಗಮ ತುಂಬಿ ನದಿಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಅನೇಕ ಮನೆಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಹಾಗೇ, ಕೊಡಗಿನ ಬಹುತೇಕ ಕಡೆ ಭೂಕುಸಿತವಾಗಿದೆ. ಕಳೆದ ವರ್ಷಗಳ ಪ್ರವಾಹದ ಆಘಾತದಿಂದ ಕೊಡಗಿನ ಜನರು ಇನ್ನೂ ಹೊರಗೆ ಬಂದಿಲ್ಲ. ಈ ಬಾರಿಯ ಮಳೆಗಾಲದಲ್ಲೂ ಅದೇ ರೀತಿಯ ಘಟನೆ ಪರಿವರ್ತನೆಯಾಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸುತ್ತಿದೆ. ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಗುಡ್ಡಗಳು ಕುಸಿಯುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಿಸಿದೆ.
![kodagu rain]()
ಭಾರೀ ಮಳೆಗೆ ಕೊಡಗಿನಲ್ಲಿ ಉಂಟಾಗಿರುವ ಭೂಕುಸಿತ.
ಉತ್ತರ ಕನ್ನಡದ ಶಿರಸಿ, ಕುಮಟಾ, ಕಾರವಾರ, ಅಂಕೋಲದಲ್ಲಿ ಉತ್ತಮ ಮಳೆಯಾಗಿದೆ. ಶಿವಮೊಗ್ಗದ ತೀರ್ಥಹಳ್ಳಿ, ಸಾಗರ, ಹೊಸನಗರದಲ್ಲೂ ಮಳೆಯ ಪ್ರಮಾಣ ಹೆಚ್ಚಾಗಿದೆ. ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಮಳೆ ಹೆಚ್ಚಾಗಿರುವುದರಿಂದ ನದಿಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳ ನೀರಿನ ಮಟ್ಟವೂ ಏರಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದ್ದು, ಇಂದು ಕೂಡ ಮೋಡ ಕವಿದ ವಾತಾವರಣವಿದೆ. ಹೀಗಾಗಿ, ಇಂದು ಕೂಡ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ