HOME » NEWS » State » KARNATAKA MONSOON 2020 HEAVY RAINFALL ACROSS KARNATAKA CONTINUOUSLY LG

Karnataka Rain Updates: ಮಲೆನಾಡು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದುವರೆದ ಮಳೆ; ಮುಳುಗುವ ಹಂತದಲ್ಲಿ ಹೆಬ್ಬಾಳೆ ಸೇತುವೆ

ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ, ಕೊಪ್ಪ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕುದುರೆಮುಖ, ಕಳಸ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿಯಲ್ಲಿ ಮಳೆರಾಯ ಆರ್ಭಟಿಸುತ್ತಿದ್ದಾನೆ. ರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

news18-kannada
Updated:July 17, 2020, 4:47 PM IST
Karnataka Rain Updates: ಮಲೆನಾಡು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದುವರೆದ ಮಳೆ; ಮುಳುಗುವ ಹಂತದಲ್ಲಿ ಹೆಬ್ಬಾಳೆ ಸೇತುವೆ
ಚಿಕ್ಕಮಗಳೂರು ಭಾಗದಲ್ಲಿ ಉಕ್ಕಿ ಹರಿಯುತ್ತಿರುವ ನದಿ
  • Share this:
ಬೆಂಗಳೂರು(ಜು.17):ರಾಜ್ಯದೆಲ್ಲೆಡೆ ಮುಂಗಾರು ಮಳೆ ಬಿರುಸುಗೊಂಡಿದ್ದು, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿದೆ. ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಭಾಗಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಎಲ್ಲೆಡೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ, ನದಿಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿ ಪ್ರವಾಹ ಭೀತಿಯೂ ಉಂಟಾಗಿದೆ.

ಮುಳುಗುವ ಹಂತದಲ್ಲಿ ಹೆಬ್ಬಾಳೆ ಸೇತುವೆ

ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಭಾರೀ ಮಳೆಯಿಂದಾಗಿ ಬಾಳೆಹೊನ್ನೂರಿನ ಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಹೀಗಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದಲ್ಲಿರುವ ಹೆಬ್ಬಾಳೆ ಸೇತುವೆ ಮುಳುಗುವ ಸಾಧ್ಯತೆ ಇದೆ. ಭದ್ರಾ ನದಿಯ ಒಳಹರಿವು ಹೆಚ್ಚಳದಿಂದಾಗಿ ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಹೆಬ್ಬಾಳೆ ಸೇತುವೆ ಮುಳುಗಡೆಯಾಗಲಿದೆ. ಕುದುರೆಮುಖ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು, ಹೆಬ್ಬಾಳೆ ಸೇತುವೆ ಮುಳುಗಡೆಗೆ ಎರಡು ಅಡಿ ಬಾಕಿ ಇದೆ. ಕಳೆದ ವರ್ಷ ಹೆಬ್ಬಾಳೆ ಸೇತುವೆ 30ಕ್ಕೂ ಹೆಚ್ಚು ಬಾರಿ ಮುಳುಗಡೆಯಾಗಿತ್ತು. ಈ ವರ್ಷದಲ್ಲಿ ಮೊದಲ ಬಾರಿಗೆ ಮುಳುಗಡೆಯಾಗುವ ಸಾಧ್ಯತೆಯಿದೆ.

ಇನ್ನು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ, ಕೊಪ್ಪ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕುದುರೆಮುಖ, ಕಳಸ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿಯಲ್ಲಿ ಮಳೆರಾಯ ಆರ್ಭಟಿಸುತ್ತಿದ್ದಾನೆ. ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದಾಗಿ ಮಲೆನಾಡಿನ ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಧಾರಾಕಾರ ಮಳೆಯಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.

Bengaluru Weather: ಬೆಂಗಳೂರಲ್ಲಿ ಇಂದು ಮಧ್ಯಾಹ್ನ, ಸಂಜೆ ಭಾರೀ ಮಳೆ; ವೀಕೆಂಡ್​ನಲ್ಲೂ ವರುಣನ ಆರ್ಭಟ

ಇನ್ನು,  ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಅದೇ ರೀತಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ತುಮಕೂರು, ಕೋಲಾರ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಭಾಗದಲ್ಲಿ ಇಂದು ಮೋಡ ಕವಿದ ವಾತಾವರಣ ಇದ್ದು, ಸಾಧಾರಣ ಮಳೆಯಾಗುತ್ತಿದೆ.

ಮೈದುಂಬಿ ಹರಿಯುತ್ತಿರುವ ಕುಮಾರಧಾರಾ ನದಿಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಕುಮಾರಧಾರಾ ನದಿ ಮೈದುಂಬಿ ಹರಿಯುತ್ತಿದೆ. ಈ ನದಿ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯನ್ನು ಸಂಧಿಸುತ್ತದೆ. ಇದು ಮುಂದೆ ಪಶ್ಚಿಮಾಭಿಮುಖವಾಗಿ ಹರಿದು ಮಂಗಳೂರಿನ ಸಮೀಪ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಕರ್ನಾಟಕದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನವು ಕುಮಾರಧಾರಾ ನದಿಯ ಸಮೀಪದಲ್ಲಿದೆ.

ಮಲೆನಾಡು ಭಾಗದಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ರಾಜ್ಯದ ನದಿಗಳು ಉಕ್ಕಿ ಹರಿಯುತ್ತಿವೆ. ಹೀಗಾಗಿ, ನದಿ ಅಂಚಿನ ಗ್ರಾಮಗಳು ಕಂಗಾಲಾಗಿವೆ. ಅಘನಾಶಿನಿ, ಗಂಗಾವಳಿ, ನೇತ್ರಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಸದ್ಯ, ನದಿ ಅಪಾಯದ ಮಟ್ಟ ತಲುಪಿಲ್ಲ. ಆದರೆ, ಮಳೆ ಹೆಚ್ಚಾದರೆ, ಕೆಲ ಗ್ರಾಮಗಳು ಮುಳುಗುವ ಭೀತಿ ಎದುರಾಗಿದೆ.

ಕೊಡಗಿನಲ್ಲಿ ಭಾರೀ ಮಳೆ

ಇನ್ನು, ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಏಕೈಕ ಜಲಾಶಯ ಹಾರಂಗಿ ಬಹುತೇಕ ಭರ್ತಿಯಾಗಿದೆ. ಹಾರಂಗಿ ಜಲಾಶಯ 8.5 ಟಿಎಂಸಿ ಸಾಮರ್ಥಯವನ್ನು ಹೊಂದಿದೆ. ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಜಲಾಶಯಕ್ಕೆ 6.5 ಟಿಎಂಸಿ ನೀರು ಸಂಗ್ರಹವಾಗಿದೆ. ಭಾರೀ ಮಳೆ ಬೀಳುತ್ತಿರುವುದರಿಂದ ಜಲಾಶಯಕ್ಕೆ 4864 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಭರ್ತಿಗೆ ಇನ್ನು ಎರಡು ಟಿಎಂಸಿ ನೀರು ಅಗತ್ಯವಿರುವಾಗಲೇ ಜಲಾಶಯದಿಂದ 5 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹಾರಿಸಲಾಗುತ್ತಿದೆ.
Published by: Latha CG
First published: July 17, 2020, 4:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories