ಬೆಂಗಳೂರು (ಜು. 26): ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವವರಲ್ಲಿ ಯಾರಾದರೂ ಸತ್ಯ ಹರಿಶ್ಚಂದ್ರ ಇದ್ದಾರಾ? ಎಲ್ಲರ ಅವಧಿಯಲ್ಲೂ ಭ್ರಷ್ಟಾಚಾರ, ಹಗರಣಗಳು ಆಗಿವೆ. ಸಮಯ ಬಂದಾಗ ಅದಕ್ಕೆ ದಾಖಲೆಯನ್ನೂ ನೀಡುತ್ತೇನೆ ಎಂದು ಕಾಂಗ್ರೆಸ್ ನಾಯಕರಿಗೆ ನೂತನವಾಗಿ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿರುವ ಎಂಟಿಬಿ ನಾಗರಾಜ್ ಚಾಟಿ ಬೀಸಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಹಿಂದೆ ಯಾರು ಯಾರು ಏನೇನು ಮಾಡಿದ್ದಾರೆ ಅಂತ ನನಗೆ ಗೊತ್ತಿದೆ. ಹಿಂದಿನ ಮುಖ್ಯಮಂತ್ರಿಗಳ ಸಂದರ್ಭದಲ್ಲಿ ಏನೇನು ಹಗರಣ ಆಗಿದೆ ಅಂತ ಜನರಿಗೆ ಗೊತ್ತಿದೆ. ಯಾರೂ ಸತ್ಯಹರಿಶ್ಚಂದ್ರರಿಲ್ಲ, ಯಾರೂ ಸತ್ಯವಂತ ಧರ್ಮರಾಯರು ಇಲ್ಲ. ನಳ ಮಹಾರಾಜನಂತಹ ಸತ್ಯವಂತರು ಯಾರೂ ಇಲ್ಲ. ಎಲ್ಲಾ ಮುಖ್ಯಮಂತ್ರಿಗಳ ಅವಧಿಯಲ್ಲೂ ಭ್ರಷ್ಟಾಚಾರ, ಹಗರಣಗಳು ಆಗಿವೆ. ಇದರ ಬಗ್ಗೆ ದಾಖಲೆಗಳು ಕೂಡ ಇವೆ. ಅದನ್ನು ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ. ಯಾರು ಯಾರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೋ ಅವರಿಗೆ ಈ ಮಾತು ಹೇಳುತ್ತಿದ್ದೇನೆ. ಪ್ರತಿನಿತ್ಯ ಭ್ರಷ್ಟಾಚಾರದ ಬಗ್ಗೆ ಹೇಳುತ್ತಿದ್ದಾರೆ. ಹೇಳಿದ್ದನ್ನೇ ಹೇಳೋದನ್ನು ಎಷ್ಟು ದಿನ ಅಂತ ಕೇಳೋದು? ಇವರಲ್ಲಿ ಯಾರಾದರೂ ಸತ್ಯ ಹರಿಶ್ಚಂದ್ರರಿದ್ದರೆ ಅದನ್ನು ನಾನು ಒಪ್ಪಿಕೊಳ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಎಂಟಿಬಿ ನಾಗರಾಜ್ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ ಸಿಎಂ ಆಗಿ 1 ವರ್ಷ; ಸವಾಲುಗಳೇನು? ಸಾಧನೆ, ವೈಫಲ್ಯಗಳೇನು? ಇಲ್ಲಿದೆ ಪಟ್ಟಿ
ಸಿಎಂ ಯಡಿಯೂರಪ್ಪ ನನಗೆ ಪರಿಷತ್ ಸ್ಥಾನ ಕೊಟ್ಟಿದ್ದಾರೆ. ಮುಂದೆ ಮಂತ್ರಿ ಸ್ಥಾನದ ಬಗ್ಗೆ ಸಿಎಂ, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ದನಿದ್ದೇನೆ. ಸದ್ಯ ಪರಿಷತ್ ಸ್ಥಾನ ಸಿಕ್ಕಿರುವುದರಿಂದ ನಾನು ತೃಪ್ತಿ ಯಾಗಿದ್ದೇನೆ ಎಂದು ಸಿಎಂ ನಿವಾಸ ಕಾವೇರಿ ಮುಂಭಾಗದಲ್ಲಿ ಪರಿಷತ್ ಸದಸ್ಯ ಎಂ.ಟಿ.ಬಿ. ನಾಗರಾಜ್ ಹೇಳಿದ್ದಾರೆ.
ನಾನು 1978ರಿಂದಲೂ ಕಾಂಗ್ರೆಸ್ನಲ್ಲಿ ಇದ್ದವನು. ಸಿದ್ದರಾಮಯ್ಯ ನಮ್ಮ ಪಕ್ಷಕ್ಕೆ ಬಂದವರು. ನನಗೆ ಟಿಕೆಟ್ ಕೊಟ್ಟವರು ಎಸ್.ಎಂ.ಕೃಷ್ಣ . ಕಾಂಗ್ರೆಸ್ನಲ್ಲಿದ್ದಾಗ ಸಿದ್ದರಾಮಯ್ಯ ನಾಯಕತ್ವದಲ್ಲಿ ಇದ್ದರು. ಆದ್ದರಿಂದ ಅವರ ನಾಯಕತ್ವದಲ್ಲಿ ಕೆಲಸ ಮಾಡಿದ್ದೆವು. ನಾನು ಈಗ ಬಿಜೆಪಿಗೆ ಬಂದಿದ್ದೇನೆ, ಬಿಜೆಪಿಗೆ ನಿಷ್ಠನಾಗಿರುತ್ತೇನೆ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ