• Home
  • »
  • News
  • »
  • state
  • »
  • ಕರ್ನಾಟಕ ವಿಧಾನ ಪರಿಷತ್​ ಚುನಾವಣೆ: ಇಂದು ನಡೆಯಬೇಕಿದ್ದ ಮತ ಎಣಿಕೆ ನ. 10ಕ್ಕೆ ಮುಂದೂಡಿಕೆ

ಕರ್ನಾಟಕ ವಿಧಾನ ಪರಿಷತ್​ ಚುನಾವಣೆ: ಇಂದು ನಡೆಯಬೇಕಿದ್ದ ಮತ ಎಣಿಕೆ ನ. 10ಕ್ಕೆ ಮುಂದೂಡಿಕೆ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಕರ್ನಾಟಕದ ನಾಲ್ಕು ಎಂಎಲ್ಸಿ ಸ್ಥಾನಗಳಾದ ಆಗ್ನೇಯ ಪದವೀಧರ, ಪಶ್ಚಿಮ ಪದವೀಧರ, ಈಶಾನ್ಯ ಶಿಕ್ಷಕರು, ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಗೆ ಅ. 28ರಂದು ಮತದಾನವಾಗಿತ್ತು. ನಾಳೆ ಉಪಚುನಾವಣೆ ಇರುವುದರಿಂದ ಇಂದು ನಡೆಯಬೇಕಿದ್ದ ಮತ ಎಣಿಕೆಯನ್ನು ನ. 10ಕ್ಕೆ ಮುಂದೂಡಲಾಗಿದೆ.

  • Share this:

    ಬೆಂಗಳೂರು(ನ. 02): ಇಂದು ನಡೆಯಬೇಕಿದ್ದ ಕರ್ನಾಟಕ ರಾಜ್ಯ ವಿಧಾನಪರಿಷತ್​ನ ನಾಲ್ಕು ಸ್ಥಾನಗಳಿಗೆ ಚುನಾವಣೆಯ ಮತ ಎಣಿಕೆ ಮುಂದೂಡಲಾಗಿದೆ. ಬಿಹಾರ ವಿಧಾನಸಭೆ ಚುನಾವಣೆ ಹಾಗೂ ಉಪಚುನಾವಣೆಗಳ ಫಲಿತಾಂಶ ಪ್ರಕಟವಾಗುವ ನ. 10ಕ್ಕೆಯೇ ಪರಿಷತ್ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಎರಡು ಪದವೀಧರ ಕ್ಷೇತ್ರಗಳು ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಅಕ್ಟೋಬರ್ 28ರಂದು ಮತದಾನವಾಗಿತ್ತು. ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರ, ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರ, ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ಹಾಗು ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಗೆ ಅಕ್ಟೋಬರ್ 28ರಂದು ಚುನಾವಣೆ ನಡೆದಿತ್ತು. ಒಟ್ಟು 40 ಅಭ್ಯರ್ಥಿಗಳ ಭವಿಷ್ಯ ನ. 10ರಂದು ಅನಾವರಣಗೊಳ್ಳಲಿದೆ.


    ನವೆಂಬರ್ 3ರಂದು ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆಗಳಿಗೆ ಮತದಾನ ಇರುವ ಹಿನ್ನೆಲೆಯಲ್ಲಿ ಪರಿಷತ್ ಸ್ಥಾನಗಳ ಚುನಾವಣಾ ಫಲಿತಾಂಶ ಮುಂದೂಡಬೇಕೆಂದು ಕೆಪಿಸಿಸಿ ಮನವಿ ಮಾಡಿತ್ತು. ಫಲಿತಾಂಶ ಪ್ರಕಟಿಸಿದರೆ ಉಪಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಮುಂದೂಡಬೇಕೆಂಬುದು ಕಾಂಗ್ರೆಸ್ ಕೇಳಿಕೊಂಡಿತ್ತು. ಇದನ್ನು ಪರಿಗಣಿಸಿ ಚುನಾವಣಾ ಆಯೋಗವು ಪರಿಷತ್ ಚುನಾವಣೆಗಳ ಮತ ಎಣಿಕೆಯನ್ನು ನ. 10ಕ್ಕೆ ಮುಂದೂಡಲು ನಿರ್ಧರಿಸಿದೆ.


    ಅಕ್ಟೋಬರ್ 28ರಂದು ನಡೆದ ಮತದಾನದಲ್ಲಿ ಉತ್ತಮ ಪ್ರಮಾಣದಲ್ಲಿ ವೋಟಿಂಗ್ ನಡೆದಿತ್ತು. ಈ ನಾಲ್ಕು ಕ್ಷೇತ್ರಗಳು ರಾಜ್ಯದ 15 ಜಿಲ್ಲೆಗಳ ವ್ಯಾಪ್ತಿಯಲ್ಲಿದ್ದು, ಸುಮಾರು ಎರಡು ಲಕ್ಷದ ಸಮೀಪದ ಸಂಖ್ಯೆಯಲ್ಲಿ ಮತದಾರರು ಅ. 28ರಂದು ಮತ ಚಲಾಯಿಸಿದ್ದರು. ಹಾಲಿ ಶಾಸಕರಾದ ಆರ್ ಚೌಡ ರೆಡ್ಡಿ ತೂಪಳ್ಳಿ, ಎಸ್ ವಿ ಸಂಕನೂರು, ಶರಣ್ಣಪ್ಪ ಮಟ್ಟೂರ ಮತ್ತು ಪುಟ್ಟಣ್ಣ ಅವರು ಮರುಸ್ಪರ್ಧೆ ಮಾಡಿದ್ದಾರೆ. ಅವರ ಜೊತೆ ಕಾಂಗ್ರೆಸ್​ನ ರಮೇಶ್ ಬಾಬು, ಆರ್ ಎಂ ಕುಬೇರಪ್ಪ, ಎ ಪಿ ರಂಗನಾಥ್, ಶಶಿಲ್ ನಮೋಶಿ ಮೊದಲಾದವರು ಸ್ಪರ್ಧೆಗಳಿದಿದ್ದಾರೆ.


    ಇದನ್ನೂ ಓದಿ: Sira Bypolls: ಶಿರಾ ಉಪಚುನಾವಣೆಗೆ ಅಂತಿಮ ಕಸರತ್ತು; ಇಳಿ ವಯಸ್ಸಿನಲ್ಲೂ ಮಧುಗಿರಿಯಲ್ಲೇ ಬೀಡು ಬಿಟ್ಟ ಹೆಚ್​ಡಿ ದೇವೇಗೌಡ


    ಈ ಚುನಾವಣೆಯ ಫಲಿತಾಂಶದಿಂದ ರಾಜ್ಯ ರಾಜಕಾರಣದಲ್ಲಿ ಗಣನೀಯ ಏರುಪೇರು ಆಗುವ ಸಂಭವ ಇಲ್ಲ. ಆದರೆ, ಬಿಜೆಪಿಗೆ ಪರಿಷತ್​ನಲ್ಲಿ ಬಲ ವೃದ್ಧಿಸಿಕೊಳ್ಳಲು ಸುವರ್ಣಾವಕಾಶ ಇದಾಗಿದೆ. 75 ಸದಸ್ಯರ ವಿಧಾನಪರಿಷತ್​ನಲ್ಲಿ ಆಡಳಿತಾರೂಢ ಬಿಜೆಪಿ 27 ಸದಸ್ಯರನ್ನ ಹೊಂದಿದೆ. ಕಾಂಗ್ರೆಸ್ 29 ಮತ್ತು ಜೆಡಿಎಸ್ 14 ಸದಸ್ಯರನ್ನ ಹೊಂದಿವೆ. ಇದು ಬಿಜೆಪಿಗೆ ಪರಿಷತ್​ನಲ್ಲಿ ಹಿನ್ನಡೆಯಾಗುತ್ತಿದೆ. ಈ ನಾಲ್ಕು ಸ್ಥಾನದಿಂದ ಗಮನಾರ್ಹ ಬದಲಾವಣೆ ಆಗುವುದಿಲ್ಲವಾದರೂ ಬಿಜೆಪಿಗೆ ಬಲ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ನಾಲ್ಕೂ ಸ್ಥಾನಗಳನ್ನ ಗೆದ್ದರೆ ಬಿಜೆಪಿಯ ಬಲ 31ಕ್ಕೆ ಏರುತ್ತದೆ. ಮಸೂದೆಗಳ ಅಂಗೀಕಾರಕ್ಕೆ ಇದು ಬಿಜೆಪಿಗೆ ಉಪಯೋಗಕ್ಕೆ ಬರಬಹುದು.

    Published by:Vijayasarthy SN
    First published: