Hijab Row: ಹಿಜಾಬ್ ನಿಷೇಧಿಸಿ ಅಲ್ಪಸಂಖ್ಯಾತರ ಇಲಾಖೆಯಿಂದ ಸುತ್ತೋಲೆ.. ಯಾರಿಗೆಲ್ಲಾ ಇದು ಅನ್ವಯ?

ರಾಜ್ಯ ಅಲ್ಪಸಂಖ್ಯಾತ ಇಲಾಖೆಯಿಂದ ನಡೆಸಲಾಗುತ್ತಿರುವ ವಸತಿ ಶಾಲೆಗಳು ಮತ್ತು ಆಂಗ್ಲ ಮಾಧ್ಯಮದ ಮೌಲಾನಾ ಆಜಾ಼ದ್‌ ಶಾಲೆಗಳಲ್ಲಿ ಧಾರ್ಮಿಕ ಉಡುಪುಗಳನ್ನು ಧರಿಸುವುದನ್ನು ನಿಷೇಧಿಸಿ ರಾಜ್ಯ ಅಲ್ಪಸಂಖ್ಯಾತ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್‌ ಅವರು ಆದೇಶ ಹೊರಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ರಾಜ್ಯ ಹಾಗೂ ದೇಶದಲ್ಲಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿರುವ ಹಿಜಾಬ್‌ ವಿವಾದ (Hijab Controversy) ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸದ್ಯ ಬೂದಿ ಮುಚ್ಚಿದ ಕೆಂಡದಂತಿರುವ ಈ ವಿವಾದ ನ್ಯಾಯಾಲಯದ (Court) ಮೆಟ್ಟಿಲೇರಿರುವ ನಡುವೆಯೂ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಈ ನಡುವೆ ರಾಜ್ಯ ಅಲ್ಪಸಂಖ್ಯಾತರ ಇಲಾಖೆಯು ( State Minority Department) ಶಾಲಾ-ಕಾಲೇಜುಗಳಲ್ಲಿ (Schools and Colleges) ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಮತ್ತು ಸ್ಕಾರ್ಫ್‌ ಧರಿಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದೆ. ರಾಜ್ಯ ಅಲ್ಪಸಂಖ್ಯಾತ ಇಲಾಖೆಯಿಂದ ನಡೆಸಲಾಗುತ್ತಿರುವ ವಸತಿ ಶಾಲೆಗಳು ಮತ್ತು ಆಂಗ್ಲ ಮಾಧ್ಯಮದ ಮೌಲಾನಾ ಆಜಾ಼ದ್‌ ಶಾಲೆಗಳಲ್ಲಿ ಧಾರ್ಮಿಕ ಉಡುಪುಗಳನ್ನು ಧರಿಸುವುದನ್ನು ನಿಷೇಧಿಸಿ ರಾಜ್ಯ ಅಲ್ಪಸಂಖ್ಯಾತ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್‌ ಅವರು ಫೆ.16ರಂದು ಆದೇಶ ಹೊರಡಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಮತ್ತು ಇತರ ಧಾರ್ಮಿಕ ಉಡುಪುಗಳನ್ನ ನಿಷೇಧಿಸುವ ಕರ್ನಾಟಕ ಹೈಕೋರ್ಟ್‌ನ ಮಧ್ಯಂತರ ಆದೇಶದ ಕಾರ್ಯಕಾರಿ ಭಾಗವನ್ನು ಅಲ್ಪಸಂಖ್ಯಾತ ಇಲಾಖೆಯ ಸುತ್ತೋಲೆ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ ಎಂದು ವರದಿಯೊಂದು ತಿಳಿಸಿದೆ.

  ಇದನ್ನೂ ಓದಿ: Explainer: ಕರ್ನಾಟಕದಲ್ಲಿ ಹಿಜಾಬ್ ‘ವಿವಾದ’ ಹೇಗಾಯ್ತು? ಇಲ್ಲಿಯವರೆಗೆ ಏನೆಲ್ಲಾ ನಡೆಯಿತು..Timeline ಇಲ್ಲಿದೆ

  ಹೈಕೋರ್ಟ್​​ ಮಧ್ಯಂತರ ಆದೇಶ ಏನು ಹೇಳಿದೆ? 

  ಕರ್ನಾಟಕ ಹೈಕೋರ್ಟ್‌ ತನ್ನ ಮಧ್ಯಂತರ ಆದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸಲು ಮತ್ತು ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಮರಳಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಹಾಗೂ ಇನ್ನಿತರ ಸಂಸ್ಥೆಗಳನ್ನು ವಿನಂತಿಸಿದೆ. ಅಲ್ಲದೆ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳ ಪರಿಗಣನೆಗೆ ತಡೆಹಿಡಿಯಲಿದ್ದೇವೆ. ವಿದ್ಯಾರ್ಥಿಗಳು ಮುಂದಿನ ಆದೇಶ ಬರುವವರೆಗೂ ತಮ್ಮ ಧರ್ಮ ಅಥವಾ ನಂಬಿಕೆಯನ್ನು ಲೆಕ್ಕಿಸದೆ ಕೇಸರಿ ಶಾಲು, ಸ್ಕಾರ್ಫ್‌, ಹಿಜಾಬ್‌ ಹಾಗೂ ಧಾರ್ಮಿಕ ಧ್ವಜಗಳನ್ನು ತರಗತಿಯೊಳಗೆ ಧರಿಸುವಂತಿಲ್ಲ. ಈ ಆದೇಶವು ಕಾಲೇಜು ಶಿಕ್ಷಣ ಸಂಸ್ಥೆಗಳಿಗೆ ಸೀಮಿತವಾಗಿದ್ದು, ಸಮಿತಿಗಳು ಸಹ ವಿದ್ಯಾರ್ಥಿಗಳಿಗೆ ಡ್ರೆಸ್‌ ಕೋಡ್/ಸಮವಸ್ತ್ರವನ್ನು ಧರಿಸುವಂತೆ ಸೂಚನೆ ನೀಡಿವೆ.

  ಹಿಜಾಬ್‌ ನಿಷೇಧಿಸಿ ಸುತ್ತೋಲೆ 

  ಈ ನಡುವೆ ಅಲ್ಪಸಂಖ್ಯಾತ ಇಲಾಖೆ ವತಿಯಿಂದ ನಡೆಸಲಾಗುವ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಹಿಜಾಬ್‌ ಧರಿಸಲು ಅವಕಾಶ ನೀಡಲಾಗುತ್ತಿದೆ ಎಂಬ ಕುರಿತು ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಅಲ್ಪ ಸಂಖ್ಯಾತ ಇಲಾಖೆ ಆಯುಕ್ತರು, ಅಲ್ಪಸಂಖ್ಯಾತರ ಇಲಾಖೆಯು ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಮತ್ತು ಸ್ಕಾರ್ಫ್‌ ಧರಿಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದ್ದಾರೆ.

  ಮುಂದುವರೆದಿರುವ ಪ್ರತಿಭಟನೆಗಳು 

  ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದಲೂ ಹಿಜಾಬ್‌ ವಿವಾದ ಭುಗಿಲೆದ್ದಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಮತ್ತು ಶಿರವಸ್ತ್ರಗಳನ್ನು ಧರಿಸುವುದಕ್ಕೆ ನಿಷೇಧ ಹೇರಿದ ಬೆನ್ನಲ್ಲೇ ರಾಜ್ಯಾದ್ಯಂತ ದೊಡ್ಡಮಟ್ಟದ ಚರ್ಚೆಗೆ ಕಾರಣವಾಯಿತು. ಈ ನಡುವೆ ಹಿಜಾಬ್‌ ಮತ್ತು ಶಿರವಸ್ತ್ರ ಧರಿಸುವುದನ್ನು ನಿಷೇಧಿಸಿದ್ದನ್ನು ಖಂಡಿಸಿ ಹಲವು ಮುಸ್ಲಿಂ ಸಮುದಾಯ ಮತ್ತು ವಿದ್ಯಾರ್ಥಿಗಳು ರಾಜ್ಯಾಧ್ಯಂತ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದ್ದವು. ಅಲ್ಲದೇ ತಮ್ಮ ಮೂಲಭೂತ ಹಕ್ಕುಗಳ ಭಾಗವಾಗಿರುವ ಹಿಜಾಬ್‌ ಧರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಮುಸ್ಲಿಂ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳ ಹೊರಗೆ ಪ್ರತಿಭಟನೆ ನಡೆಸಿದರು.

  ಇದನ್ನೂ ಓದಿ: Hijab High Court Hearing: ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ: ಹೈಕೋರ್ಟ್​ನಲ್ಲಿ ಎಜಿ ವಾದ

  ಕೋರ್ಟ್‌ ಮೆಟ್ಟಿಲೇರಿದ ವಿವಾದ: ರಾಜ್ಯದಲ್ಲಿ ಶುರುವಾದ ಹಿಜಾಬ್‌ ವಿವಾದ ದಿನ ಕಳೆದಂತೆ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಯಿತು. ಉಡುಪಿಯಲ್ಲಿ ಸಣ್ಣ ಪ್ರಮಾಣದಲ್ಲಿ ಹೊತ್ತಿಕೊಂಡ ಹಿಜಾಬ್‌ ವಿವಾದ ಬೆಂಕಿ ಇಂದು ದೇಶಾದ್ಯಂತ ವ್ಯಾಪಿಸಿದೆ. ಕಳೆದ 10 ದಿನಗಳಿಂದಲೂ ನಡೆಯುತ್ತಿರುವ ಹಿಜಾಬ್‌ ವಿವಾದಕ್ಕೆ ಇಂದಿಗೂ ಶಾಶ್ವತ ಅಂತ್ಯ ಕಂಡಿಲ್ಲ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕರ್ನಾಟಕ ಹೈಕೋರ್ಟ್‌ ವಿವಾದದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ಹಲವು ದಿನಗಳಿಂದ ವಿಚಾರಣೆ ನಡೆಸುತ್ತಲೇ ಇದೆ. ಒಂದೆಡೆ ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆಯುತ್ತಿದ್ದರೆ, ಇತ್ತ ಶಾಲಾ-ಕಾಲೇಜುಗಳಲ್ಲಿ ಇಂದಿಗೂ ಹಿಜಾಬ್‌ ವಿವಾದ ಸಣ್ಣಮಟ್ಟದಲ್ಲಿ ಹೊಗೆಯಾಡುತ್ತಲೇ ಇದೆ. ಸದ್ಯ ಬೂದಿಮುಚ್ಚಿದ ಕೆಂಡದಂತಿರುವ ಈ ವಿವಾದಕ್ಕೆ ನ್ಯಾಯಾಲಯ ಶಾಶ್ವತ ಅಂತ್ಯವಾಡುತ್ತಾ..? ಎಂಬ ಪ್ರಶ್ನೆ ರಾಜ್ಯದ ಜನರನ್ನ ಕಾಡುತ್ತಿದೆ.
  Published by:Kavya V
  First published: