ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸಂಜೆ ಸಚಿವ ಸಂಪುಟ ಸಭೆ; ಇಂದೇ ಸಂಜೆ ಖಾತೆ ಹಂಚಿಕೆ

ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ರಾಜ್ಯದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಅಲ್ಲಿನ ಸಮಸ್ಯೆಗಳ ಪರಿಶೀಲನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಸಚಿವರಿಂದ ಪ್ರವಾಹಪೀಡಿತ ಸ್ಥಳಗಳ ವರದಿ ಪಡೆಯುವ ಸಾಧ್ಯತೆಯಿದೆ.

Sushma Chakre | news18-kannada
Updated:August 26, 2019, 9:25 AM IST
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸಂಜೆ ಸಚಿವ ಸಂಪುಟ ಸಭೆ; ಇಂದೇ ಸಂಜೆ ಖಾತೆ ಹಂಚಿಕೆ
ಮುಖ್ಯಮಂತ್ರಿ ಯಡಿಯೂರಪ್ಪ
  • Share this:
ಬೆಂಗಳೂರು (ಜೂ. 26): ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸಂಜೆ 4 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ವಿಧಾನಸೌಧದ ಸಚಿವ ಸಂಪುಟ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಖಾತೆ ಹಂಚಿಕೆ ಬಗ್ಗೆಯೂ ಇಂದೇ ನಿರ್ಧಾರವಾಗುವ ಸಾಧ್ಯತೆಯಿದೆ.

ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ರಾಜ್ಯದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಅಲ್ಲಿನ ಸಮಸ್ಯೆಗಳ ಪರಿಶೀಲನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಸಚಿವರಿಂದ ಪ್ರವಾಹಪೀಡಿತ ಸ್ಥಳಗಳ ವರದಿ ಪಡೆಯುವ ಸಾಧ್ಯತೆಯಿದೆ. ಸಚಿವರು ಪ್ರವಾಸ ಮಾಡಿರುವ ಜಿಲ್ಲೆಗಳ ಬಗ್ಗೆ ಜಿಲ್ಲಾವಾರು ಮಾಹಿತಿ ಪಡೆಯುವ ಸಾಧ್ಯತೆಯಿದೆ. ನೆರೆಪೀಡಿತ ಜಿಲ್ಲೆಗಳ ಅಭಿವೃದ್ಧಿ ಕುರಿತೂ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಬರ ಪರಿಹಾರಕ್ಕೆ 1029 ಕೋಟಿ ಘೋಷಣೆಯಲ್ಲಿ 350 ಕೋಟಿ ರೂ. ಬಿಡುಗಡೆಯಾಗಿದೆ. ಅದೇರೀತಿ ಪ್ರವಾಹ ಪರಿಹಾರಕ್ಕೆ ರೈತರಿಗೆ ಇನ್​ಪುಟ್ ಸಬ್ಸಿಡಿ ರೂಪದಲ್ಲಿ ಎಕರೆಗೆ 3,500 ರೂ.ನಂತೆ ಪರಿಹಾರ ಘೋಷಿಸುವ ಬಗ್ಗೆ ಈ ಮೊದಲೇ ಸಿಎಂ ಸುಳಿವು ನೀಡಿದ್ದರು. ಆ ಬಗ್ಗೆ ಇಂದು ಸಚಿವರ ಜೊತೆ ಚರ್ಚೆಯಾಗಲಿದೆ. ಅಲ್ಲದೆ, ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಸಿಎಂ ಯಡಿಯೂರಪ್ಪ, ಸೋಮವಾರ ಖಾತೆ ಹಂಚಿಕೆ ಬಗ್ಗೆ ಬಹಿರಂಗಪಡಿಸಲಾಗುವುದು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ಹೊಸ ಸಚಿವರಿಗೆ ಖಾತೆಗಳ ಹಂಚಿಕೆಯೂ ಆಗುವ ಸಾಧ್ಯತೆಯಿದೆ.

ಎಷ್ಟು ಮಂದಿಗೆ ಡಿಸಿಎಂ ಹುದ್ದೆ ಎಂಬುದು ಸೋಮವಾರ ಗೊತ್ತಾಗಲಿದೆ; ಸಿಎಂ ಬಿ.ಎಸ್​​ ಯಡಿಯೂರಪ್ಪ

ಸಚಿವ ಸಂಪುಟ ವಿಸ್ತರಣೆಯಾಗಿ 6 ದಿನಗಳು ಕಳೆದಿವೆ. ಬಿಜೆಪಿಯ 16 ಮತ್ತು ಓರ್ವ ಪಕ್ಷೇತರ ಶಾಸಕ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಶನಿವಾರವೇ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲು ಸಮಯ ನಿಗದಿ ಮಾಡಲಾಗಿತ್ತು. ಆದರೆ, ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ನಿಧನರಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ದೆಹಲಿಗೆ ಅಂತಿಮ ದರ್ಶನಕ್ಕೆ ತೆರಳಿದ್ದರು. ಈ ಕಾರಣದಿಂದ ಖಾತೆ ಹಂಚಿಕೆಯನ್ನು ಮುಂದೂಡಲಾಗಿತ್ತು. ಈಗಾಗಲೇ ಸಚಿವರ ಖಾತೆ ಹಂಚಿಕೆ ಪಟ್ಟಿ ಸಿದ್ಧವಾಗಿದೆ. ಈ ಬಗ್ಗೆ ಹೈಕಮಾಂಡ್​ ಜೊತೆ ಚರ್ಚಿಸಿ ಹೆಸರುಗಳನ್ನು ಅಂತಿಮಗೊಳಿಸಿರುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದರು.

ಕೃಷ್ಣಾ ನದಿಯ ಪ್ರವಾಹದಿಂದ ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಚಿಕ್ಕೋಡಿಯಲ್ಲಿ ಜನರು ಸಂಕಷ್ಟಕ್ಕೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರದ ಪ್ರವಾಹ ಅಧ್ಯಯನ ತಂಡ ನಿನ್ನೆ ಬೆಳಗಾವಿಗೆ ಭೇಟಿ ನೀಡಿತ್ತು. ಗೃಹ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ್ ನೇತೃತ್ವದಲ್ಲಿ 7 ಅಧಿಕಾರಿಗಳ ತಂಡ ಬೆಳಗಾವಿಯ ನೆರೆಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿತ್ತು.

(ವರದಿ: ರಮೇಶ್ ಹಿರೇಜಂಬೂರು)ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ

First published:August 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading