ಕೊಟ್ಟ ಖಾತೆ ಸರಿಯಾಗಿ ನಿಭಾಯಿಸೋದು ಬಿಟ್ಟು ಕ್ಯಾತೆ ತೆಗೆಯಬಾರದು; ಅತೃಪ್ತರ ವಿರುದ್ಧ ಉಮೇಶ್ ಕತ್ತಿ ಕಿಡಿ

ಕೊಟ್ಟ ಖಾತೆಯನ್ನು ಸರಿಯಾಗಿ ನಿಭಾಯಿಸಿ ಉತ್ತಮವಾಗಿ ಕೆಲಸ ಮಾಡಿ ತೋರಿಸಬೇಕು. ಅದನ್ನು ಬಿಟ್ಟು ಖಾತೆಗಾಗಿ ಕ್ಯಾತೆ ತೆಗೆದು ಕೂರೋದು ಸರಿಯಲ್ಲ ಎಂದು ಹೇಳುವ ಮೂಲಕ ಖಾತೆಗಾಗಿ ಕ್ಯಾತೆ ತೆಗೆದವರಿಗೆ ಉಮೇಶ್ ಕತ್ತಿ ಟಾಂಗ್ ನೀಡಿದ್ದಾರೆ. 

ಉಮೇಶ್ ಕತ್ತಿ

ಉಮೇಶ್ ಕತ್ತಿ

  • Share this:
ಕಲಬುರ್ಗಿ (ಜ. 26): ಕೊಟ್ಟ ಖಾತೆಯಲ್ಲಿ ಸರಿಯಾಗಿ ಕೆಲಸ ಮಾಡೋದನ್ನು ಬಿಟ್ಟು ಬೇರೆ ಖಾತೆಗಾಗಿ ಕ್ಯಾತೆ ತೆಗೆದುಕೊಂಡು ಕೂಡೋದು ಸರಿಯಲ್ಲ ಎಂದು ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ಕಿಡಿ ಕಾರಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಖಾತೆ ಹಂಚಿಕೆ ವಿಷಯಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕೆಲವು ಸಚಿವರಿಗೆ ಟಾಂಗ್ ನೀಡಿದ್ದಾರೆ. ಕೊಟ್ಟ ಖಾತೆಯನ್ನು ಸರಿಯಾಗಿ ನಿಭಾಯಿಸಿ ಉತ್ತಮವಾಗಿ ಕೆಲಸ ಮಾಡಿ ತೋರಿಸಬೇಕು. ಅದನ್ನು ಬಿಟ್ಟು ಖಾತೆಗಾಗಿ ಕ್ಯಾತೆ ತೆಗೆದು ಕೂರೋದು ಸರಿಯಲ್ಲ ಎಂದಿದ್ದಾರೆ. 

ನಾನೊಬ್ಬ ಜವಾಬ್ದಾರಿಯುತ ಮಂತ್ರಿಯಾಗಿ ಹೇಳುತ್ತಿದ್ದೇನೆ. ಮುಖ್ಯಮಂತ್ರಿಗಳು ಸದ್ಯ ನನಗೆ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಖಾತೆ ನೀಡಿದ್ದಾರೆ. ಅದರಲ್ಲಿ ನನಗೆ ತೃಪ್ತಿಯಿದ್ದು, ಉತ್ತಮವಾಗಿ ಕೆಲಸ ನಿರ್ವಹಿಸಿ ತೋರಿಸುತ್ತೇನೆ. ಈ ಖಾತೆಯನ್ನು ತೆಗೆದು ಬೇರೆ ಖಾತೆ ಕೊಟ್ಟರೂ ಬೇಜಾರು ಮಾಡಿಕೊಳ್ಳುವುದಿಲ್ಲ. ಅಂಕಿ – ಸಂಖ್ಯೆ ಇಲಾಖೆ ಅಥವಾ ವಯಸ್ಕರ ಶಿಕ್ಷಣ ಇಲಾಖೆ ಕೊಟ್ಟರೂ ಕೆಲಸ ಮಾಡುತ್ತೇನೆ. ಕೆಲಸ ಮಾಡಿ ತೋರಿಸಬೇಕೇ ಹೊರತು ಖಾತೆಗಾಗಿ ಕ್ಯಾತೆ ತೆಗಿಯೋದು ಸರಿಯಲ್ಲ ಎಂದು ಹೇಳುವ ಮೂಲಕ ಖಾತೆಗಾಗಿ ಕ್ಯಾತೆ ತೆಗೆದವರಿಗೆ ಉಮೇಶ್ ಕತ್ತಿ ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ: ರೈತರ ಪ್ರತಿಭಟನೆಯನ್ನು ಹತ್ತಿಕ್ಕಿದರೆ ತಕ್ಕ ಬೆಲೆ ತೆರಬೇಕಾದೀತು; ಸರ್ಕಾರಕ್ಕೆ ಸಿದ್ದರಾಮಯ್ಯ ಎಚ್ಚರಿಕೆ

ಕರ್ನಾಟಕವನ್ನು ಇಬ್ಬಾಗ ಮಾಡುವ ಯೋಚನೆ ನನ್ನಲ್ಲಿಲ್ಲ. ರಾಜ್ಯ ಅಖಂಡವಾಗಿರಬೇಕು ಅನ್ನೋದು ನನ್ನ ಅನಿಸಿಕೆ. ಆದರೆ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆದಾಗ ನಾನು ಸುಮ್ಮನೆ ಕೂರುವುದಿಲ್ಲ. ನಮ್ಮ ಹಕ್ಕನ್ನು ನಾವು ಪ್ರತಿಪಾದಿಸಬೇಕಾಗುತ್ತದೆ. ನಾನು ಯಾವುದೇ ಪಕ್ಷದಲ್ಲಿರಲಿ ಉತ್ತರ ಕರ್ನಾಟಕದ ಅಭಿವೃದ್ದಿಗೆ ದುಡಿಯುತ್ತೇನೆ. ಆಲಮಟ್ಟಿ ಗೇಟ್ ಗಳನ್ನು ಎತ್ತರಿಸಬೇಕಿದೆ. ಉತ್ತರ ಕರ್ನಾಟಕ್ಕೆ ನಿಗದಿಯಾಗಿರೋ 950 ಟಿಎಂಸಿ ನೀರನ್ನು ಬಳಸಿಕೊಳ್ಳಬೇಕಿದೆ. ಆದರೆ ಸಿದ್ಧರಾಮಯ್ಯ ಐದು ವರ್ಷ, ನಂತರ ಕುಮಾರಸ್ವಾಮಿ ಒಂದು ವರ್ಷ ಇದ್ದರೂ ಉಪಯೋಗವಾಗಲಿಲ್ಲ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಆದ್ಯತೆಯನ್ನು ನೀಡಿಲ್ಲ. ಯಡಿಯೂರಪ್ಪ ಅವರು ಸಿಎಂ ಆದ ನಂತರ ಕೋವಿಡ್ ಕಾರಣದಿಂದಾಗಿ ಈ ಕೆಲಸ ಮಾಡಲಾಗುತ್ತಿಲ್ಲ. ಮುಂದೆ ಯಡಿಯೂರಪ್ಪ ಅವರೂ ಆಲಮಟ್ಟಿ ಗೇಟ್ ಗಳನ್ನು ಎತ್ತರಿಸ್ತಾರೆ ಅನ್ನೋ ವಿಶ್ವಾಸವಿದೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

ಬಳ್ಳಾರಿಯನ್ನು ಆಂಧ್ರಪ್ರದೇಶಕ್ಕೆ ಸೇರಿಸಬೇಕೆಂಬ ಶಾಸಕ ಸೋಮಶೇಖರ ರೆಡ್ಡಿ ಹೇಳಿಕೆ ವಿಚಾರಕ್ಕೆ  ಪ್ರತಿಕ್ರಿಯಿಸಿದ ಉಮೇಶ್ ಕತ್ತಿ, ರಾಜ್ಯ ಅಖಂಡವಾಗಿರಬೇಕೆಂಬುದು ನನ್ನ ಭಾವನೆ. ವಿಜಯನಗರ ಪ್ರತ್ಯೇಕ ಜಿಲ್ಲೆಯಾದರೆ ತೊಂದರೆ ಏನಿದೆ? ನಮ್ಮ ಬೆಳಗಾವಿ ಜಿಲ್ಲೆಯೂ ಮೂರು ಜಿಲ್ಲೆಗಳಾಗಿ ಇಬ್ಭಾಗವಾಗಬೇಕಿದೆ. ಆದರೆ, ಸ್ಥಳೀಯವಾಗಿ ಪ್ರತಿಕೂಲ ಪರಿಸ್ಥಿತಿ ಇರುವುದರಿಂದ ಮಾಡಲು ಆಗಿಲ್ಲ. ಮುಂದೆ ಬೆಳಗಾವಿಯನ್ನೂ ಇಬ್ಭಾಗಿಸಬಹುದು. ಆದರೆ, ಬೇರೆ ರಾಜ್ಯಕ್ಕೆ ಹೋಗುವ ವಿಚಾರ ಮಾಡಬಾರದು ಎಂದು ಕತ್ತಿ ಅಭಿಪ್ರಾಯಪಟ್ಟಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಅವರು, ನೂತನ ಕಾಯ್ದೆ ತಿದ್ದುಪಡಿಗಳ ಫಲ ಏನಾಗಲಿದೆ ಅನ್ನೋದನ್ನು ಕಾದು ನೋಡಬೇಕು. 70 ವರ್ಷಗಳ ಕಾಲವಿದ್ದ ಎಂಪಿಎಸಿ ಕಾಯ್ದೆ ಸರಿಯಿಲ್ಲ. ಅದರಿಂದ ರೈತರಿಗೆ ಲಾಭ ಆಗಿಲ್ಲ ಅನ್ನೋ ಕಾರಣಕ್ಕೆ ತಿದ್ದುಪಡಿ ಮಾಡಲಾಗಿದೆ. ಕೃಷಿ ಕಾನೂನು ಬಗ್ಗೆ ರೈತರು ಒಂದೆರಡು ವರ್ಷವಾದ್ರೂ ಕಾಯಬೇಕು. ಆಗ ತೊಂದರೆ ಕಂಡುಬಂದರೆ ಅದನ್ನು ಸರಿ ಮಾಡೋಣ. ಅದನ್ನು ಬಿಟ್ಟು ಸುಖಾ ಸುಮ್ಮನೆ ಹೋರಾಟ ಮಾಡೋದು ಸೂಕ್ತವಲ್ಲ. ತಿದುಪಡಿ ವಾಪಸ್ ಪಡೆಯುವಂತೆ ಹೇಳೋಕೋ ನ್ಯಾಯಾಲಯಾಕ್ಕೂ ಅವಕಾಶವಿಲ್ಲ. ಪಾರ್ಲಿಮೆಂಟ್ ನಲ್ಲಿ ಪಾಸ್ ಆಗಿರೋದ್ರಿಂದ ಯಾರೂ ಏನೂ ಮಾಡೋಕೆ ಆಗಲ್ಲ. ಏನೇ ಹೋರಾಟ ಮಾಡಿದ್ರೂ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯೋಕೆ ಆಗಲ್ಲ ಎಂದು ಉಮೇಶ್ ಕತ್ತಿ ಸ್ಪಷ್ಟಪಡಿಸಿದ್ದಾರೆ.

(ವರದಿ - ಶಿವರಾಮ ಅಸುಂಡಿ)
Published by:Sushma Chakre
First published: