ಬಿಜೆಪಿಗೂ ಬಿಸಿತುಪ್ಪವಾದ ರಮೇಶ್ ಜಾರಕಿಹೊಳಿ; ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ನೀಡದಿದ್ದರೆ ರಾಜೀನಾಮೆಗೆ ಸಿದ್ಧ ಎಂದ ಬೆಳಗಾವಿ ಸಾಹುಕಾರ್

ಸಚಿವ ಸ್ಥಾನ ವಂಚಿತರಾದ ಮಹೇಶ್ ಕುಮಟಳ್ಳಿ ಅವರನ್ನು ಎಂಎಸ್​ಐಎಲ್​ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತ್ತಾದರೂ ಕುಮಟಳ್ಳಿ ಈ ಸ್ಥಾನವನ್ನು ತಿರಸ್ಕರಿಸಿದ್ದರು. ಇದೀಗ ಅವರ ಪರವಾಗಿ ನಿಂತಿರುವ ರಮೇಶ್ ಜಾರಕಿಹೊಳಿ ಅವರು ಕುಮಟಳ್ಳಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ಕುಮಟಳ್ಳಿ ಅವರಿಗೆ ಸ್ಥಾನಮಾನ ಸಿಗದಿದ್ದರೆ ರಾಜೀನಾಮೆ ನೀಡಲು ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.

ಮಹೇಶ್ ಕುಮಟಳ್ಳಿ ಮತ್ತು ರಮೇಶ್ ಜಾರಕಿಹೊಳಿ.

ಮಹೇಶ್ ಕುಮಟಳ್ಳಿ ಮತ್ತು ರಮೇಶ್ ಜಾರಕಿಹೊಳಿ.

 • Share this:
  ಬೆಂಗಳೂರು: ಬಂಡಾಯ ಏಳುವ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ರಮೇಶ್ ಜಾರಕಿಹೊಳಿ ಈಗ ಬಿಜೆಪಿ ಸರ್ಕಾರಕ್ಕೂ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ. 

  ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿದ್ದಾರೆ. ಅವರಿಗೆ ಅನ್ಯಾಯ ಆಗಲು ನಾನು ಬಿಡುವುದಿಲ್ಲ. ಅವರಿಗೆ ಸಚಿವ ಸ್ಥಾನ ಸಿಗದಿದ್ದರೆ ನಾನು ಸಚಿವ ಹಾಗೂ ಶಾಸಕ ಸ್ಥಾನ ತೊರೆಯಲು ಸಿದ್ಧ ಎಂದು ಶನಿವಾರ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ.

  ಕಳೆದ ಡಿಸೆಂಬರ್​ನಲ್ಲಿ ನಡೆದ 15 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 13 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದರು. ಅವರಲ್ಲಿ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಕೂಡ ಬಿಜೆಪಿಯಿಂದ ಟಿಕೆಟ್ ಪಡೆದು ಗೆಲುವು ದಾಖಲಿಸಿದ್ದರು. ಬಳಿಕ ಸಚಿವ ಸಂಪುಟ ವಿಸ್ತರಣೆ ವೇಳೆ 10 ಮಂದಿ ಶಾಸಕರನ್ನಷ್ಟೇ ಸಿಎಂ ಬಿಎಸ್​ವೈ ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಆದರೆ, ಮಹೇಶ್ ಕುಮಟಳ್ಳಿ ಅವರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ.

  ಉತ್ತರ ಕರ್ನಾಟಕ ಭಾಗಕ್ಕೆ ಹಾಗೂ ಲಿಂಗಾಯತ ಸಮುದಾಯಕ್ಕೆ ಈಗಾಗಲೇ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿದ್ಯ ನೀಡಲಾಗಿದೆ. ಈಗಾಗಲೇ ಬೆಳಗಾವಿಗೆ ಜಿಲ್ಲೆಗೆ ಮೂರು ಸಚಿವ ಸ್ಥಾನ ನೀಡಲಾಗಿದೆ. (ರಮೇಶ್ ಜಾರಕಿಹೊಳಿ, ಲಕ್ಷ್ಮಣ ಸವದಿ, ಶ್ರೀಮಂತ ಪಾಟೀಲ್) ಅದೇ ಜಿಲ್ಲೆಯ ಅಥಣಿ ಕ್ಷೇತ್ರದ ಶಾಸಕರಾಗಿರುವ ಮಹೇಶ್ ಕುಮಟಳ್ಳಿಗೂ ಸಚಿವ ಸ್ಥಾನ ನೀಡಿದರೆ ಒಂದು ಜಿಲ್ಲೆಯ ನಾಲ್ವರು ಸಚಿವರಾಗುತ್ತಾರೆ. ಇದರಿಂದ ಪ್ರಾದೇಶಿಕ ಅಸಮಾನತೆ ತಲೆದೋರುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅಲ್ಲದೇ, ಬೆಳಗಾವಿಯ ಹುಕ್ಕೇರಿ ಕ್ಷೇತ್ರದ ಶಾಸಕರಾಗಿರುವ ಉಮೇಶ್ ಕತ್ತಿ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವೇಳೆ ಸಿಎಂ ಬಿಎಸ್​ವೈ ಕೂಡ ಮುಂದಿನ ದಿನಗಳಲ್ಲಿ ಉಮೇಶ್ ಕತ್ತಿ ಅವರನ್ನು ಸಚಿವರನ್ನಾಗಿ ಮಾಡಿಯೇ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡಲಾಗಿಲ್ಲ.

  ಇದನ್ನು ಓದಿ: ಜಲಸಂಪನ್ಮೂಲ ಖಾತೆ ನಿಭಾಯಿಸಿ ತೋರಿಸುತ್ತೇನೆ : ಸಚಿವ ರಮೇಶ್ ಜಾರಕಿಹೊಳಿ

  ಸಚಿವ ಸ್ಥಾನ ವಂಚಿತರಾದ ಮಹೇಶ್ ಕುಮಟಳ್ಳಿ ಅವರನ್ನು ಎಂಎಸ್​ಐಎಲ್​ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತ್ತಾದರೂ ಕುಮಟಳ್ಳಿ ಈ ಸ್ಥಾನವನ್ನು ತಿರಸ್ಕರಿಸಿದ್ದರು. ಇದೀಗ ಅವರ ಪರವಾಗಿ ನಿಂತಿರುವ ರಮೇಶ್ ಜಾರಕಿಹೊಳಿ ಅವರು ಕುಮಟಳ್ಳಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ಕುಮಟಳ್ಳಿ ಅವರಿಗೆ ಸ್ಥಾನಮಾನ ಸಿಗದಿದ್ದರೆ ರಾಜೀನಾಮೆ ನೀಡಲು ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.
  First published: