ಹೆಚ್. ವಿಶ್ವನಾಥ್ ಅವರಿಗೆ ಮುಂದೆ ಒಳ್ಳೆಯದಾಗುತ್ತೆ, ಅವರಿಗೆ ನಮ್ಮ ಬೆಂಬಲವಿದೆ; ಸಚಿವ ಆರ್. ಶಂಕರ್

ಹೆಚ್. ವಿಶ್ವನಾಥ್ ನನ್ನ ರಾಜಕೀಯ ಗುರುಗಳು. ಅವರ ಮೇಲೆ ನನಗೆ ಗೌರವ ಇದೆ. ಮುಂದಿನ ದಿನಗಳಲ್ಲಿ ಅವರಿಗೂ ಒಳ್ಳೆಯದಾಗುತ್ತದೆ.  ಸಿಎಂ ಯಡಿಯೂರಪ್ಪ ಮತ್ತು ಹೆಚ್. ವಿಶ್ವನಾಥ್ ನಡುವೆ ಏನು ಒಪ್ಪಂದ ಆಗಿದೆಯೋ ನನಗೆ ಗೊತ್ತಿಲ್ಲ ಎಂದು ಸಚಿವ ಆರ್. ಶಂಕರ್ ಹೇಳಿದ್ದಾರೆ.

ಆರ್ ಶಂಕರ್

ಆರ್ ಶಂಕರ್

  • Share this:
ಬೆಂಗಳೂರು (ಜ. 25): ಹೆಚ್. ವಿಶ್ವನಾಥ್ ನನ್ನ ರಾಜಕೀಯ ನಾಯಕರು. ನಾನು ಇಷ್ಟು ಮಟ್ಟಕ್ಕೆ ಬೆಳೆದಿದ್ದರೆ ಅವರೇ ಕಾರಣ. ನನಗೆ ಅವರು ಮಾರ್ಗದರ್ಶನ, ಆಶೀರ್ವಾದ ಮಾಡಿದರು. ಪರಿಸ್ಥಿತಿಗೆ, ಸಂದರ್ಭಕ್ಕೆ ಅನುಗುಣವಾಗಿ ಹೀಗೆ ಆಗಿದೆ. ನಾವು ಅವರ ಬೆಂಬಲಕ್ಕೆ ಇದ್ದೇವೆ. ಅವರಿಗೆ ಖಂಡಿತ ಒಳ್ಳೆಯದಾಗುತ್ತದೆ. ಮುಂಬೈ ಟೀಂನಲ್ಲಿ ಮೊದಲು ಸೇರಿಕೊಂಡವನು ನಾನು ಮತ್ತು ರಮೇಶ್ ಜಾರಕಿಹೊಳಿ. ನಾವೆಲ್ಲ ಒಟ್ಟಾಗಿ ಇದ್ದೇವೆ. ಹೆಚ್. ವಿಶ್ವನಾಥ್ ಅವರಿಗೆ ಮುಂದೆ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಸಚಿವ ಆರ್​. ಶಂಕರ್ ತಿಳಿಸಿದ್ದಾರೆ.

ಹೆಚ್. ವಿಶ್ವನಾಥ್ ಏಕಾಂಗಿಯಾಗಿರುವ ವಿಚಾರವಾಗಿ ಮಾತನಾಡಿರುವ ಸಚಿವ ಆರ್. ಶಂಕರ್, ನಾನು ನನ್ನ ಬಗ್ಗೆ ಬಿಟ್ಟು ಇನ್ನು ಯಾರ ಬಗ್ಗೆಯೂ ಹಿಂದೆ ಮಾತನಾಡಿಲ್ಲ, ಮುಂದೆಯೂ ಮಾತನಾಡೋದಿಲ್ಲ, ಈಗಲೂ ಮಾತನಾಡೋದಿಲ್ಲ. ಹೆಚ್. ವಿಶ್ವನಾಥ್ ನನ್ನ ರಾಜಕೀಯ ಗುರುಗಳು. ಅವರ ಮೇಲೆ ನನಗೆ ಗೌರವ ಇದೆ. ಮುಂದಿನ ದಿನಗಳಲ್ಲಿ ಅವರಿಗೂ ಒಳ್ಳೆಯದಾಗುತ್ತದೆ.  ಸಿಎಂ ಯಡಿಯೂರಪ್ಪ ಮತ್ತು ಹೆಚ್. ವಿಶ್ವನಾಥ್ ನಡುವೆ ಏನು ಒಪ್ಪಂದ ಆಗಿದೆಯೋ ನನಗೆ ಗೊತ್ತಿಲ್ಲ. ಸರ್ಕಾರದಲ್ಲಿ ನಾವು ಒಂದು ಭಾಗ ಆಗಿದ್ದೇವೆ. ನಾವು ಯಾರಿಗೂ ಡೈವೋರ್ಸ್ ಕೊಟ್ಟಿಲ್ಲ, ಯಾರನ್ನೂ ಲವ್ ಮಾಡಿ ತಾಳಿ ಕಟ್ಟಿಸಿಕೊಂಡಿಲ್ಲ ಎಂದು ಆರ್. ಶಂಕರ್ ಹೇಳಿದ್ದಾರೆ.

ಮುಖ್ಯಮಂತ್ರಿಗಳು ಖಾತೆ ಬದಲಾವಣೆ ಮಾಡಿದಾಗ ಅಸಮಾಧಾನ ಉಂಟಾಗಿತ್ತು. ಆಗ ನಾನು ಸಿಎಂ ಬಳಿ ಹೋಗಿ ಜನರ ಮಧ್ಯೆ ಕೆಲಸ ಮಾಡುವ ಖಾತೆ ಕೊಡಿ ಅಂತ ಕೇಳಿದ್ದೆ. ಖಾತೆ ಬದಲಾವಣೆ ಮಾಡಿದ್ದು ಸರಿಯಲ್ಲ ಅಂತ ಹೇಳಿದ್ದೆ. ಸಿಎಂ ಸಮಾಧಾನದಿಂದ ಕೆಲವು ದಿನ ಮಾಡು ಎಂದು ಹೇಳಿದ್ದಾರೆ. ಈಗ ನನಗೆ ಯಾವುದೇ ಅಸಮಾಧಾನ ಇಲ್ಲ. ಕೊಟ್ಟಿರೋ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ನನ್ನ ಕ್ಷೇತ್ರವನ್ನು ಕಳೆದುಕೊಡಿದ್ದೇನೆ. ನನಗೆ ಹಾವೇರಿ ಉಸ್ತುವಾರಿ ಕೊಡಿ ಅಂತ ಸಿಎಂಗೆ ಕೇಳಿದ್ದೇನೆ. ಸಿಎಂ ಕೂಡ ಹಾವೇರಿ ಉಸ್ತುವಾರಿ ಕೊಡೋದಾಗಿ ಹೇಳಿದ್ದಾರೆ. ಗೃಹಮಂತ್ರಿಗಳ ಸಮ್ಮುಖದಲ್ಲಿ ಹಾವೇರಿ ಉಸ್ತುವಾರಿ ಕೊಡೋ ಮಾತುಕತೆ ಆಗಿದೆ ಎಂದು ಸಚಿವ ಆರ್​. ಶಂಕರ್ ತಿಳಿಸಿದ್ದಾರೆ.

ಇದನ್ನೂ ಓದಿ: ಹೊಸ ಖಾತೆಯಿಂದ ಎಂಟಿಬಿಗೆ ಸಮಾಧಾನ; ಆದರೆ ಬೆಂ. ಗ್ರಾಮಾಂತರ ಉಸ್ತುವಾರಿ ಸ್ಥಾನದ ಮೇಲೆ ಕಣ್ಣು?

ರೈತರ ಆದಾಯ ದ್ವಿಗುಣ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಕೇಂದ್ರ ಸರ್ಕಾರದ ಜೊತೆಯೂ ಸಂಪರ್ಕದಲ್ಲಿದ್ದು ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ. ರೈತರ ಆತ್ಮಹತ್ಯೆಗೆ ಕಾರಣ ಏನು ಅಂತ ತಿಳಿದು ಆ ಸಮಸ್ಯೆ ಪರಿಹಾರಕ್ಕೆ ಕೆಲಸ ಮಾಡುತ್ತೇವೆ. ಕೊರೊನಾ ಹಿನ್ನೆಲೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್​ಗಳು ತೋಟಗಾರಿಕೆ ಕಡೆ ಮುಖ ಮಾಡಿದ್ದಾರೆ. ಇದಕ್ಕೆ ಉತ್ತೇಜನ ನೀಡುವ ಕೆಲಸ ಸರ್ಕಾರ ಮಾಡುತ್ತದೆ. ಎರಡು ಇಲಾಖೆಗಳ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ನಾಳೆ ರೈತರು ಹೋರಾಟ ವಿಚಾರವಾಗಿ ಮಾತನಾಡಿರುವ ಆರ್​. ಶಂಕರ್, ರೈತರ ಸಮಸ್ಯೆ ಪರಿಹಾರಕ್ಕೆ ನಾನು ಮತ್ತು ಕೃಷಿ ಸಚಿವರು ಒಟ್ಟಾಗಿ ಕೆಲಸ ಮಾಡುತ್ತೇವೆ. ರೈತರ ಪರವಾಗಿ ಕೆಲಸ ಮಾಡೋಕೆ ನಾವು ಸಿದ್ಧವಿದ್ದೇವೆ. ನಾಳೆಯ ಹೋರಾಟವನ್ನು ರೈತರು ಕೈ ಬಿಡಬೇಕು. ಹೋರಾಟಕ್ಕೆ ನಾವು ಬೆಂಬಲ ಕೊಡುವುದಿಲ್ಲ. ಯಾರದೋ ಮಾತು ಕೇಳಿ ಪ್ರತಿಭಟನೆ ಮಾಡೋದು ಸರಿಯಲ್ಲ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ ಎಲ್ಲದರಲ್ಲೂ ಸಮಸ್ಯೆ ಹುಡುಕೋದು ಬೇಡ. ರೈತರ ಪರ ಕೆಲಸ ಮಾಡೋಕೆ ನಮ್ಮ ಇಲಾಖೆ, ಕೃಷಿ ಇಲಾಖೆ ಇದೆ ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಸಚಿವನಾಗಿ ಇಂದು ಪೂಜೆ ಸಲ್ಲಿಕೆ ಮಾಡಿ ಸಭೆ ಮಾಡಿದ್ದೇನೆ. ತೋಟಗಾರಿಕೆ ಅವಲಂಬಿತ ರೈತರ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ರೈತರು ಮತ್ತು ಸರ್ಕಾರದ ಮಧ್ಯೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಇಲಾಖೆ ಕೆಲಸ ಮಾಡುತ್ತದೆ. ಬೆಳೆಗಳ ಮಾರಾಟ, ಸಂಗ್ರಹಣೆ ಸೇರಿದಂತೆ ಎಲ್ಲ ವಿಚಾರವಾಗಿ ಸಭೆ ಮಾಡಿದ್ದೇನೆ. ರೇಷ್ಮೆ ಇಲಾಖೆ ಅಧಿಕಾರಿಗಳ ಜೊತೆಯೂ ಸಭೆ ಮಾಡಿದ್ದೇನೆ. ರೇಷ್ಮೆ ಬೆಳೆಗಾರರ ಸಂಕಷ್ಟ, ಅವರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಕೃಷಿ ದೇವೋಭವ ಆಗುವಂತೆ ನಾವು ಕೆಲಸ ಮಾಡಬೇಕು. ರೈತರ ಜೀವದ ಜೊತೆ ಚೆಲ್ಲಾಟ ಆಡದೆ ರೈತರ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಬಜೆಟನ್ನು ಸಿಎಂ ತಯಾರಿಕೆ ಮಾಡುತ್ತಿದ್ದಾರೆ. ಇಲಾಖೆಗೆ ಬೇಕಾದ ಯೋಜನೆಗೆ ಅನುದಾನ ಕೊಡುವಂತೆ ಸಿಎಂಗೆ ಮನವಿ ಮಾಡುತ್ತೇವೆ ಎಂದು ಸಚಿವ ಆರ್​. ಶಂಕರ್ ಹೇಳಿದ್ದಾರೆ.
Published by:Sushma Chakre
First published: