news18-kannada Updated:January 18, 2021, 10:43 AM IST
ಸಿ.ಪಿ. ಯೋಗೇಶ್ವರ್
ಬೆಳಗಾವಿ (ಜ. 18): ಸಿ.ಪಿ ಯೋಗೇಶ್ವರ್ ಸಚಿವರಾಗಿ ಪ್ರಮಾಣ ವಚನ ಸ್ವಿಕರಿಸಿದಾಗಿನಿಂದಲೂ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಜೋರಾಗಿಯೇ ಕೇಳಿ ಬರುತ್ತಿದೆ. ಹಲವು ಶಾಸಕರು ಸೋತವರಿಗೆ ಮಂತ್ರಿ ಮಾಡಿದ್ದಾರೆ ಎಂದು ಕಿಡಿ ಕಾರಿದರೆ ಇನ್ನು ಕೆಲವು ಶಾಸಕರು ಬಹಿರಂಗವಾಗಿಯೇ ಯೋಗೇಶ್ವರ್ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬಿಜೆಪಿ ಪಕ್ಷಕ್ಕೆ ಇವರ ಕೊಡುಗೆ ಏನು? ಎಂದು ಅವರು ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ದೆಹಲಿ ಹೈಕಮಾಂಡ್ ಮಟ್ಟದಲ್ಲಿ ದೂರು ನೀಡಲು ಮುಂದಾಗಿದ್ದಾರೆ. ಇಂತಹ ರೆಬೆಲ್ ಶಾಸಕರಿಗೆ ನೂತನ ಸಚಿವ ಸಿ.ಪಿ ಯೋಗೇಶ್ವರ್ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಚನೆಯಲ್ಲಿ ನನ್ನ ಪಾತ್ರ ಏನೆಂಬುದನ್ನು ತಿಳಿಸಿಕೊಡುವ ಕೆಲಸವನ್ನು ವರಿಷ್ಠರು ಮಾಡುತ್ತಾರೆ. ಸಾಲ ಮಾಡಿ ಸರ್ಕಾರ ರಚನೆ ವಿಚಾರ ನನ್ನ ವೈಯಕ್ತಿಕ ವಿಚಾರವಾಗಿದ್ದು, ಸಚಿವ ರಮೇಶ ಜಾರಕಿಹೊಳಿ ಯಾವ ಅರ್ಥದಲ್ಲಿ ನನ್ನ ಬಗ್ಗೆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಪಕ್ಷ ನನ್ನ ಅಳಿಲು ಸೇವೆಗೆ ಅವಕಾಶ ಕೊಟ್ಟಿದೆ. ಇನ್ನು ಶಾಸಕರ ಭಿನ್ನಮತಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಹಿತಿಯ ಕೊರತೆಯಿಂದ ಹಾಗೂ ಸಂಪೂರ್ಣ ವಿಚಾರ ಗೊತ್ತಿಲ್ಲದೆ ಇರುವುದರಿಂದ ನನ್ನ ಬಗ್ಗೆ ಕೆಲವರು ಹೇಳಿಕೆ ನೀಡುತ್ತಿದ್ದಾರೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕದ ಮತದಾರ ಯಾರಿಗೂ ಕೂಡ ಸ್ಪಷ್ಟ ಬಹುಮತ ನೀಡಿಲ್ಲ. ಆದರೆ, ಅತೀ ಹೆಚ್ಚು ಸೀಟುಗಳನ್ನು ಗೆದ್ದುಕೊಂಡಿರುವ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಆಹ್ವಾನ ಕೊಟ್ಟಾಗ ಮೂರು ದಿನಗಳಲ್ಲಿ ನಡೆದ ವಿಶ್ವಾಸ ಮತಯಾಚನೆ ಮಾಡುವಲ್ಲಿ ವಿಫಲವಾಗಿದ್ದು, ಆಗ ಸರ್ಕಾರ ರಚನೆ ಮಾಡಲು ವಿಫಲವಾಗಿದ್ದೆವು. ಇದಾದ ನಂತರ ಕಾಂಗ್ರೆಸ್ -ಜೆಡಿಎಸ್ ಸೇರಿಕೊಂಡು ಮೈತ್ರಿ ಸರ್ಕಾರ ರಚನೆ ಮಾಡಿದ್ದವು. ಆದರೆ, ರಾಜ್ಯದ ಜನರು ಸಮ್ಮಿಶ್ರ ಸರ್ಕಾರದ ಆಡಳಿತಕ್ಕೆ ಭ್ರಮನಿರಸನರಾಗಿದ್ದರು ಎಂದು ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಇದನ್ನೂ ಓದಿ: Bangalore Crime: ನೆಲಮಂಗಲ; ಅತ್ಯಾಚಾರಕ್ಕೆ ಯತ್ನಿಸಿದವನಿಗೆ ಮಚ್ಚಿನಿಂದ ಹೊಡೆದ ಮಹಿಳೆ
ಆ ಸಂದರ್ಭದಲ್ಲಿ ಕೆಲವೊಂದಿಷ್ಟು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಮೈತ್ರಿ ಸರ್ಕಾರದ ಆಡಳಿತಕ್ಕೆ ಮನನೊಂದು ಆ ಸರ್ಕಾರದಿಂದ ಹೊರಬಂದರು. ರಾಜ್ಯದಲ್ಲಿ ಸುಭದ್ರ ಸರ್ಕಾರ ನೀಡುವ ಉದ್ದೇಶದಿಂದ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ರಾಜ್ಯದಲ್ಲೂ ಬಿಜೆಪಿ ಸರ್ಕಾರ ತರಲು 15ರಿಂದ 20 ಶಾಸಕರು ಬಿಜೆಪಿಗೆ ಬಂದರು. ಈ ಎಲ್ಲ ಪ್ರಕ್ರಿಯೆ ಕೆಲವೊಂದು ಶಾಸಕರಿಗೆ ಗೊತ್ತಿಲ್ಲ. ಹೀಗಾಗಿ, ಆ ಬಗ್ಗೆ ತಿಳಿ ಹೇಳುವ ಕೆಲಸವನ್ನು ಬಿಜೆಪಿ ಪಕ್ಷದ ಹಿರಿಯರು ಮನದಟ್ಟು ಮಾಡಿಕೊಡಬೇಕಿತ್ತು. ಇದೀಗ ಅಸಮಾಧಾನಿತರಾದ ಶಾಸಕರನ್ನು ಕರೆದು ಬಿಜೆಪಿ ನಾಯಕರು ಮಾತನಾಡುತ್ತಾರೆ. ಅವರಿಗೆ ತಿಳಿದ ವಿಷಯಗಳ ಇತಿಮಿತಿಗಳ ಬಗ್ಗೆ ಮಾತ್ರ ಅವರೂ ಮಾತನಾಡುತ್ತಿದ್ದಾರೆ. ಆದರೆ, ಎಲ್ಲ ಶಾಸಕರಿಗೂ ಎಲ್ಲ ವಿಚಾರಗಳೂ ತಿಳಿದಿಲ್ಲ. ಅದನ್ನು ಅವರು ತಿಳಿದುಕೊಳಬೇಕಾಗಿತ್ತು ಎಂದು ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಂದ ಶಾಸಕರು ನಮಗೆ ಬೆಂಬಲ ನೀಡಿದ್ದರಿಂದ ಬಿಜೆಪಿ ಸರ್ಕಾರ ರಚನೆ ಆಗಿದೆ. ಕೆಲ ಶಾಸಕರು ಅನುಭವದ ಕೊರತೆಯಿಂದ ಆ ರೀತಿ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಅವರನ್ನು ಕರೆದು ಪಕ್ಷದ ವರಿಷ್ಠರು ಮಾತಾಡ್ತಾರೆ. ಹೀಗಾಗಿ ನಾನು ಆ ಬಗ್ಗೆ ಪ್ರತಿಕ್ರಿಯೆ ನೀಡೋದಿಲ್ಲ ಎಂದರು.
ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಸಿಡಿ ತೋರಿಸಿ ಮಂತ್ರಿ ಆಗಿದ್ದಾರೆ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಪಿ. ಯೋಗೇಶ್ವರ್, ಹೆಚ್ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ನನ್ನ ಬಗ್ಗೆ ಮಾತಾಡುತ್ತಾರೆ. ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಶಾಸಕರು ಅಸಮಾಧಾನವಾದಾಗ ನನ್ನ ಬಗ್ಗೆ ಪ್ರತಿಕ್ರಿಯೆ ನೀಡಿರಬಹುದು. ಆ ಬಗ್ಗೆ ನಾನು ಉತ್ತರಿಸುವುದಿಲ್ಲ. ನನ್ನ ಬಳಿ ಯಾವುದೇ ಸಿ.ಡಿ ಇಲ್ಲ. ಇದು ಅಪ್ರಸ್ತುತ ವಿಚಾರ. ಏನೇ ಅಸಮಾಧಾನ ಇದ್ದರೂ ಪಕ್ಷದ ವೇದಿಕೆಯಲ್ಲಿಯೇ ವರಿಷ್ಠರು ಚರ್ಚೆ ನಡೆಸ್ತಾರೆ ಎಂದರು.
Published by:
Sushma Chakre
First published:
January 18, 2021, 10:43 AM IST