‘ಡಿಕೆಶಿ ಅಣ್ಣನವರೇ ಕ್ಷಮಿಸಿ’; ಟ್ರಬಲ್ ಶೂಟರ್ ಬಳಿ ಕ್ಷಮೆಯಾಚಿಸಿದ ಸಚಿವ ಶ್ರೀರಾಮುಲು

ನನ್ನ ಮಿತ್ರರು ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ. ನಾನು ಉಪ್ಪು ತಿಂದರೆ ನೀರು ಕುಡಿಯಲು ಸಿದ್ಧ, ಎಂದು ಶಿವಕುಮಾರ್​ ಬೇಸರ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಶ್ರೀರಾಮುಲು ಮರುಗಿದ್ದಾರೆ.

Rajesh Duggumane | news18-kannada
Updated:September 3, 2019, 1:56 PM IST
‘ಡಿಕೆಶಿ ಅಣ್ಣನವರೇ ಕ್ಷಮಿಸಿ’; ಟ್ರಬಲ್ ಶೂಟರ್ ಬಳಿ ಕ್ಷಮೆಯಾಚಿಸಿದ ಸಚಿವ ಶ್ರೀರಾಮುಲು
ಶ್ರೀರಾಮುಲು-ಡಿಕೆ ಶಿವಕುಮಾರ್​
  • Share this:
ಬೆಂಗಳೂರು (ಸೆ.3):  ಅಕ್ರಮ ಹಣ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಪಟ್ಟಿರುವ ಡಿಕೆ ಶಿವಕುಮಾರ್​ ಅವರು ಸೋಮವಾರ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದರು. ಈ ವೇಳೆ ‘ಉಪ್ಪು ತಿಂದವರು ನೀಡು ಕುಡಿಯಲೇ ಬೇಕು’ ಎನ್ನುವ ಶ್ರೀರಾಮುಲು ಮತ್ತು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿಕೆಯನ್ನು ಉಲ್ಲೇಖಿಸಿದ್ದರು. ಡಿಕೆಶಿ ಕಣ್ಣೀರಿಗೆ ಶ್ರೀರಾಮುಲು ಮನ ಕರಗಿದೆ. ಅವರು ಕಾಂಗ್ರೆಸ್​ ಟ್ರಬಲ್​ ಶೂಟರ್​ ಬಳಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ.

ಡಿಕೆಶಿ ವಿಚಾರಣೆಗೆ ಹಾಜರಾದ ಬೆನ್ನಲ್ಲೇ ಮಾತನಾಡಿದ್ದ ಶ್ರೀರಾಮುಲು, “ಡಿಕೆಶಿ ​ ರಾಜಕಾರಣಿ ಹೊರತಾಗಿ ಓರ್ವ ಉದ್ಯಮಿ. ಐಟಿ ದಾಳಿ ವೇಳೆ ಅವರು ಪೇಪರ್​ ಹರಿದು ಹಾಕಿರುವ ಘಟನೆ ಎಲ್ಲರಿಗೂ ನೆನಪಿದೆ. ಈ ಕುರಿತು ತನಿಖೆ ನಡೆಯುತ್ತಿದೆ. ತಪ್ಪಾಗಿದ್ದರೆ ಶಿಕ್ಷೆಯಾಗಲಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಕಾನೂನಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ,” ಎಂದು ಹೇಳಿದ್ದರು.

"ನನ್ನ ಮಿತ್ರರು ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ. ನಾನು ಉಪ್ಪು ತಿಂದರೆ ನೀರು ಕುಡಿಯಲು ಸಿದ್ಧ," ಎಂದು ಶಿವಕುಮಾರ್​ ಬೇಸರ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಶ್ರೀರಾಮುಲು ಮರುಗಿದ್ದಾರೆ. “ನನ್ನ ಮಾತಿನಿಂದ ನೋವಾಗಿದ್ದರೆ ಡಿಕೆಶಿ ಅಣ್ಣನವರೇ ಕ್ಷಮಿಸಿ. ಕೈ ಮುಗಿದು ಕೇಳುತ್ತೇನೆ ನನ್ನನ್ನು ಕ್ಷಮಿಸಿ. ನನ್ನ ಭಾಷೆ ರಾಜಕಾರಣಕ್ಕೆ ಸೀಮಿತವೇ ಹೊರತು ವೈಯಕ್ತಿಕ ಅಲ್ಲ. ಡಿಕೆಶಿ ಅಣ್ಣನಿಗೆ ರಾಜಕೀಯವಾಗಿ ಮಾತ್ರ ಮಾತನಾಡಿದ್ದು,” ಎಂದು ಶ್ರೀರಾಮುಲು ಹೇಳಿದ್ದಾರೆ.

ಗಳಗಳನೆ ಅತ್ತಿದ್ದ ಡಿಕೆಶಿ:

ಸೋಮವಾರ ಮಾಧ್ಯಮಗಳ ಜೊತೆ ಮಾತನಾಡುವಾಗ ಕುಟುಂಬದವರನ್ನು ನೆನೆದು ಅವರು ಗಳಗಳನೆ ಅತ್ತಿದ್ದರು.  “ನಾನು ನನ್ನ ಮಗ ಪ್ರತೀವರ್ಷ ಸ್ಯಾಂಕಿ ಕೆರೆಯಲ್ಲಿ ಗಣೇಶನನ್ನು ಬಿಡುತ್ತಿದ್ದೆವು. ತಂದೆಗೆ ಎಡೆ ಇಡೋದಕ್ಕೂ ಬಿಡದೆ ಟಾರ್ಚರ್​ ಕೊಡುತ್ತಿದ್ದಾರೆ,” ಎಂದು ಅಳುತ್ತಲೇ ಅವರು ಇಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಜೆಪಿ ನಡೆಸುತ್ತಿದೆ ಎನ್ನಲಾದ ಕುದುರೆ ವ್ಯಾಪಾರದಿಂದ ಗುಜರಾತ್​ ಕೈ ಶಾಸಕರನ್ನು ಡಿಕೆಶಿ ಬಚಾವ್​ ಮಾಡಿದ್ದರು. ಈ ಪ್ರಕರಣವೇ ಡಿಕೆಶಿಗೆ ಮುಳುವಾಗಿದೆ ಎಂದಿದ್ದರು. “ಗುಜರಾತ್​ ಶಾಸಕರನ್ನ ರಕ್ಷಣೆ ಮಾಡಿದ್ದಕ್ಕೆ ನನಗಿಷ್ಟು ಟಾರ್ಚರ್​ ನೀಡಲಾಗುತ್ತಿದೆ. ನಾನು ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ಸೂಕ್ತ ಕಾಲದಲ್ಲಿ ಉತ್ತರ ಕೊಡುತ್ತೇನೆ. ಬಿಜೆಪಿಯವರೂ ಇದೇ ಕೆಲಸ ಮಾಡಿಲ್ಲವೇ,” ಎಂದು ಅವರು ಪ್ರಶ್ನಿಸಿದ್ದರು.

ಏನಿದು ಡಿಕೆಶಿ ಪ್ರಕರಣ?:ದೆಹಲಿಯಲ್ಲಿರುವ ಡಿ.ಕೆ. ಶಿವಕುಮಾರ್​ ಅವರಿಗೆ ಸೇರಿದ ಫ್ಲಾಟ್​ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಅಕ್ರಮ ಹಣ ಪತ್ತೆಯಾಗಿತ್ತು. ಡಿಕೆಶಿ ಹಾಗೂ ಆಪ್ತರ ಮನೆಗಳಲ್ಲಿ ಐಟಿ ಅಧಿಕಾರಿಗಳು 8.59 ಕೋಟಿ ಹಣ ಜಪ್ತಿ ಮಾಡಿದ್ದರು. ಇಡಿ ಸಮನ್ಸ್ ರದ್ದು ಕೋರಿ ಸಚಿವ ಡಿಕೆಶಿ ಹಾಗೂ ಆಪ್ತರು ಅರ್ಜಿ ಸಲ್ಲಿಸಿದ್ದರು. ಆಗಸ್ಟ್ 28 ಕ್ಕೆ ಆದೇಶ ಪ್ರಕಟಿಸುವುದಾಗಿ ಹೈಕೋರ್ಟ್ ತಿಳಿಸಿತ್ತು. ಹಣದ ಮೂಲದ ಬಗ್ಗೆ ವಿವರಣೆ ನೀಡುವಂತೆ ಡಿಕೆಶಿ ಮತ್ತು ಆಪ್ತರಿಗೆ ಇಡಿ ಸಮನ್ಸ್ ನೀಡಿತ್ತು.

First published:September 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ