news18-kannada Updated:November 23, 2020, 8:05 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು (ನ.23): ದಕ್ಷಿಣ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಂಭವಿಸಲಿದ್ದು, ತಮಿಳುನಾಡು, ಆಂಧ್ರಪ್ರದೇಶ, ಶ್ರೀಲಂಕಾ ಹಾಗೂ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಂಗಾಳ ಉಪಸಾಗರ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದ ಮುಂದಿನ 24 ಗಂಟೆಯೊಳಗೆ ನಿವಾರ್ ಚಂಡ ಮಾರುತ ಅಪ್ಪಳಿಸಲಿದೆ. ಇದರ ಪರಿಣಾಮ ರಾಜ್ಯದ ಹಲವು ಭಾಗಗಳಲ್ಲಿ ಬುಧವಾರ ಅಂದರೆ, ನ.25ರಿಂದ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸೂಚನೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ. ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ಚಾಮರಾಜನಗರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಆಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಕರಾವಳಿಯಲ್ಲಿ ಈ ಮೂರು ದಿನ ಹಗುರ, ಸಾಧಾರಣೆ ಮಳೆಯಾಗಲಿದೆ ಎಂದಿದ್ದಾರೆ.
ಎರಡು ದಿನಗಳಿಗೂ ಹೆಚ್ಚು ಕಾಲ ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ವ್ಯವಸ್ಥೆ ಇರಲಿದ್ದು, ಮುಂದಿನ 24 ಗಂಟೆಯಲ್ಲಿ ಮತ್ತಷ್ಟು ಹವಾಮಾನ ವೈಪರೀತ್ಯ ಉಂಟಾಗಲಿದೆ.
'ನಿವಾರ್' ಸೈಕ್ಲೋನ್ ಆಗಮನ
ನವೆಂಬರ್ 25ರಂದು ತಮಿಳಿನಾಡಿನ ಕಾರೈಕಾಲ್ ಮತ್ತು ಮಾಮಲ್ಲಪುರಂ ನಡುವೆ ವಾಯುವ್ಯ ದಿಕ್ಕಿನಲ್ಲಿ ಈ ಚಂಡಮಾರುತ ಚಲಿಸಲಿದೆ. ಇದು ಮುಂದೆ ತಮಿಳುನಾಡು ಮತ್ತು ಪುದುಚೇರಿ ಕರಾವಳಿಗಳನ್ನು ದಾಟುವ ನಿರೀಕ್ಷೆಯಿದೆ. ಬಳಿಕ ದೇಶದ ಪೂರ್ವ ಕರಾವಳಿಯನ್ನು ತಲುಪುವ ಹಿನ್ನೆಲೆ ಆಂಧ್ರಪ್ರದೇಶ, ತಮಿಳುನಾಡು ಮತ್ತು ಈಶಾನ್ಯ ಶ್ರೀಲಂಕಾಗಳ ಮೇಲೂ ವಾಯುಭಾರ ಕುಸಿತ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಚಂಡಮಾರುತಕ್ಕೆ ಇರಾನ್ನಿಂದ ಪ್ರಸ್ತಾಪಿಸಲ್ಪಟ್ಟ 'ನಿವಾರ್' ಎಂದು ಹೆಸರಿಡಲಾಗಿದೆ.
ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್ ನಲ್ಲಿ ನವೆಂಬರ್ 25ರಂದು ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನಲೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ನವೆಂಬರ್ 24 ರಿಂದ 26ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ
ರಾಯಲಸೀಮಾ, ತೆಲಂಗಾಣ, ದಕ್ಷಿಣ ಒಳನಾಡು, ಕರ್ನಾಟಕ ಮತ್ತು ಕರಾವಳಿ ಆಂಧ್ರ ಪ್ರದೇಶದಲ್ಲಿ ಯೆಲ್ಲೋ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಹವಾಮಾನ ವೈಪರೀತ್ಯದ ಹಿನ್ನಲೆ ಬುಧವಾರದವರೆಗೂ ಮೀನುಗಾರರು ಸಮುದ್ರಕ್ಕೆ ತೆರಳಿದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Published by:
Seema R
First published:
November 23, 2020, 8:05 PM IST