• Home
  • »
  • News
  • »
  • state
  • »
  • ಲಾಕ್‌ಡೌನ್​ನಿಂದ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಸಿಲುಕಿದ ಫ್ರಾನ್ಸ್​ ಪ್ರವಾಸಿಗ ಈಗ ಅಪ್ಪಟ ಕನ್ನಡಿಗ!

ಲಾಕ್‌ಡೌನ್​ನಿಂದ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಸಿಲುಕಿದ ಫ್ರಾನ್ಸ್​ ಪ್ರವಾಸಿಗ ಈಗ ಅಪ್ಪಟ ಕನ್ನಡಿಗ!

ಫ್ರಾನ್ಸ್​​ ಪ್ರವಾಸಿಗ ಬ್ಯಾಪ್ಟಿಸ್ಟ್​ಗೆ ಕನ್ನಡ ಕಲಿಸುತ್ತಿರುವ ಸಚಿನ್ ಭಿಡೆ

ಫ್ರಾನ್ಸ್​​ ಪ್ರವಾಸಿಗ ಬ್ಯಾಪ್ಟಿಸ್ಟ್​ಗೆ ಕನ್ನಡ ಕಲಿಸುತ್ತಿರುವ ಸಚಿನ್ ಭಿಡೆ

Mangalore Lockdown: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಸಚಿನ್ ಮುಂಡಾಜೆ ಎಂಬುವವರಿಂದ ಕನ್ನಡ ಮಾತನಾಡಲು ಕಲಿತಿರುವ ಫ್ರಾನ್ಸ್​ನ ಪ್ರವಾಸಿಗ ಬ್ಯಾಪ್ಟಿಸ್ಟ್​ ಕನ್ನಡ ಬರವಣಿಗೆಯನ್ನೂ ಕಲಿಯುತ್ತಿದ್ದಾರೆ.

  • Share this:

ಬೆಳ್ತಂಗಡಿ (ಜು. ): ಕರ್ನಾಟಕದಲ್ಲೇ ಹುಟ್ಟಿ, ಬೆಳೆದವರಲ್ಲೇ ಅನೇಕರಿಗೆ ಕನ್ನಡವನ್ನು ಸರಿಯಾಗಿ ಮಾತನಾಡಲು ಬರುವುದಿಲ್ಲ. ಆದರೆ, ಫ್ರಾನ್ಸ್​ ದೇಶದಿಂದ ದಕ್ಷಿಣ ಕನ್ನಡಕ್ಕೆ ಬಂದಿರುವ ಪ್ರವಾಸಿಗರೊಬ್ಬರು ಅಚ್ಚ ಕನ್ನಡದಲ್ಲಿ ಮಾತನಾಡುವುದನ್ನು ಕಲಿತಿದ್ದಾರೆ. ಅವರು ಮಾತನಾಡುವ ಕನ್ನಡವನ್ನು ಕೇಳಿದರೆ ಸ್ಥಳೀಯರೇ ಹುಬ್ಬೇರಿಸುತ್ತಾರೆ. 

ಸದಾ ಟಸ್ ಪುಸ್ ಎಂದು ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆ ಹೊರಡುತ್ತಿದ್ದ ಬಾಯಲ್ಲೀಗ ಅಚ್ಚ ಕನ್ನಡದ ಪದಗಳು ಹೊರಹೊಮ್ಮುತ್ತಿದೆ. ಹೌದು, ಇದು ದಕ್ಷಿಣಕನ್ನಡ ಜಿಲ್ಲೆಯ ಪ್ರಕೃತಿಯ ಸೊಬಗು ಸವಿಯಲು ಬಂದ ಫ್ರಾನ್ಸ್​ ಪ್ರಜೆಯ ಕನ್ನಡದ ಕರಾಮತ್ತು.
ಚಾರ್ಮಾಡಿ ಘಾಟಿ, ದಿಡುಪೆಯ ಜಲಪಾತಗಳು, ಪ್ರಕೃತಿಯ ಸೌಂದರ್ಯ ಸವಿಯಲು 2017 ರಿಂದ ಪ್ರತಿ ವರ್ಷವೂ ದಕ್ಷಿಣಕನ್ನಡ ಜಿಲ್ಲೆಗೆ  ಬರುತ್ತಿರುವ ಫ್ರಾನ್ಸ್‌ನ ಯುವಕ ಈ ಬಾರಿ ಲಾಕ್‌ಡೌನ್‌ನ ಲಾಭ ಪಡೆದು ಕನ್ನಡ ಕಲಿತಿದ್ದಾರೆ.

ಬ್ಯಾಪ್ಟಿಸ್ಟ್ ಮ್ಯಾರಿಯೋಟ್ ಎಂಬ ಹೆಸರಿನ ಈತ ಒಂದು ವರ್ಷದ ಪ್ರವಾಸಿ ವೀಸಾದಲ್ಲಿ ಈ ಬಾರಿ ಭಾರತಕ್ಕೆ ಬಂದಿದ್ದ. ಬ್ಯಾಪ್ಟಿಸ್ಟ್  ವೀಸಾ ಅವಧಿ ಮಾರ್ಚ್ ಕೊನೆಯವರೆಗೆ ಇದ್ದ ಕಾರಣ  ಮಾರ್ಚ್ 25ರ ಬಳಿಕ ತನ್ನ ದೇಶಕ್ಕೆ ಮರಳಲು ತಯಾರಿ ನಡೆಸಿದ್ದ. ಆದರೆ, ಈ ನಡುವೆ ದೇಶದಾದ್ಯಂತ ಕೊರೋನಾ ಲಾಕ್​ಡೌನ್ ಘೋಷಣೆ ಹಾಗೂ ಅಂತಾರಾಷ್ಟ್ರೀಯ ವಿಮಾನಗಳು ರದ್ದಾದ ಕಾರಣ ಈತ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಎನ್ನುವ ಗ್ರಾಮದಲ್ಲೇ ಉಳಿಯುವಂತಾಯಿತು. ಲಾಕ್‌ಡೌನ್ ಸಮಯದಲ್ಲಿ ಯಾವುದೇ ತಿರುಗಾಟ ನಡೆಸಲು ನಿರ್ಬಂಧವಿದ್ದ ಕಾರಣ ಕನ್ನಡ ಕಲಿಯುವ ಆಸಕ್ತಿ ಬ್ಯಾಪ್ಟಿಸ್ಟ್ ನಲ್ಲಿ ಉಂಟಾಯಿತು.

ಇದನ್ನೂ ಓದಿ: ಬೆಂಗಳೂರಿನ ಆರೋಗ್ಯಾಧಿಕಾರಿಗಳ ಎಡವಟ್ಟು; ಕಾನ್ಸ್​ಟೇಬಲ್ ಮನೆಮಂದಿಗೆಲ್ಲ ಕೊರೋನಾ ಭೀತಿ

ಬ್ಯಾಪ್ಟಿಸ್ಟ್ ಅವರಿಗೆ ಈ ಮೊದಲೇ ಮುಂಡಾಜೆಯವರೇ ಆದ ಅಜಿತ್ ಭಿಡೆ ಎನ್ನುವ ವ್ಯಕ್ತಿಯ ಪರಿಚಯ  ಇದ್ದ ಕಾರಣ ಅವರಿಂದ ಒಂದಿಷ್ಟು ಹಿಂದಿ ಕಲಿತದ್ದು ಬಿಟ್ಟರೆ ಭಾರತದ ಯಾವುದೇ ಭಾಷೆಗಳ ಅರಿವೂ ಇರಲಿಲ್ಲ. ಆದರೆ, ಅಜಿತ್ ಭಿಡೆ ಅಕಾಲಿಕವಾಗಿ ಸಾವನ್ನಪ್ಪಿದ ಕಾರಣ ಕನ್ನಡ ಕಲಿಯಲು ಹೊಸ ಗುರುವನ್ನು ಹುಡುಕುತ್ತಿದ್ದ ಸಮಯದಲ್ಲಿ ಮುಂಡಾಜೆಯ ಹವ್ಯಾಸಿ ಚಾರಣಿಗ ಸಚಿನ್ ಮುಂಡಾಜೆ ಅವರ ಗೆಳೆತನವಾಯಿತು. ತನ್ನ ಕನ್ನಡ ಕಲಿಕೆಯ ಇಚ್ಛೆಯನ್ನು ಸಚಿನ್ ಬಳಿ ತಿಳಿಸಿದ ತಕ್ಷಣ ಒಪ್ಪಿಗೆಯೂ ಸಿಕ್ಕಿತ್ತು.  ವಾರಕ್ಕೆ 5 ದಿನ ಸಂಜೆ 5 ರಿಂದ 8 ರವರೆಗೆ  ಕನ್ನಡ ಮಾತಾಡುವ ಬಗ್ಗೆ ಬೋಧನೆ ಆರಂಭಗೊಂಡಿತ್ತು‌.

ಮಾರ್ಚ್ ಕೊನೆಯಿಂದ ಜೂನ್ ಕೊನೆಯತನಕದ ಪಾಠದಿಂದ ಬ್ಯಾಪ್ಟಿಸ್ಟ್ ಈಗ ಸರಾಗವಾಗಿ ಕನ್ನಡ ಮಾತನಾಡಲು ಕಲಿತಿದ್ದಾರೆ. ಈಗ ಯಾರೂ ಸಿಕ್ಕರೂ ಅವರೇ ಕರೆದು ಕನ್ನಡದಲ್ಲಿ ಮಾತನಾಡುತ್ತಾರೆ. ಜತೆಗೆ ಅಕ್ಷರಾಭ್ಯಾಸವೂ ನಡೆದಿದ್ದು, ಕನ್ನಡ ಓದುವಷ್ಟು ಜಾಣರಾಗಿದ್ದಾರೆ. ಸದ್ಯ ಈಗ ಕನ್ನಡ ವ್ಯಾಕರಣ ಪಾಠ ನಡೆಯುತ್ತಿದೆ. ತನ್ನ ದೇಶಕ್ಕೆ ಹೋಗಲು ವಿಮಾನ ಆರಂಭವಾಗುವವರೆಗೆ ಕನ್ನಡ ಕಲಿಕೆ ನಿರಂತರವಾಗಿ ನಡೆಯಲಿದೆ.

ವಿದೇಶಿ ಪ್ರಜೆಯೊಬ್ಬನ ಕನ್ನಡ ಕಲಿಕೆಯ ಉತ್ಸಾಹ ನಿಜಕ್ಕೂ ಸಂತೋಷ ಉಂಟುಮಾಡಿದೆ, ಈಗ ಉತ್ತಮವಾಗಿ ಕನ್ನಡ ಮಾತಾಡುವ ಬ್ಯಾಪ್ಟಿಸ್ಟ್‌ಗೆ ವ್ಯಾಕರಣ ಪಾಠ ನಡೆಯುತ್ತಿದೆ. ಮುಂದೆ ತುಳು ಭಾಷೆಯನ್ನೂ ಕಲಿಸಲಿದ್ದೇನೆ ಎನ್ನುತ್ತಾರೆ ಸಚಿನ್ ಭಿಡೆ. ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಕೂತು ವಿಧ-ವಿಧದ ಖಾದ್ಯ ಮಾಡಿ ತಿಂದವರೇ ಹೆಚ್ಚು. ಈ ನಡುವೆ ಬ್ಯಾಪ್ಟಿಸ್ಟ್ ಸಿಕ್ಕಿದ ಸಮಯವನ್ನು ವ್ಯರ್ಥ ಮಾಡದೆ ಕನ್ನಡ ಕಲಿಯುವ ಆಸಕ್ತಿ ತೋರಿದ್ದು ಶ್ಲಾಘನೆಗೂ ಪಾತ್ರವಾಗಿದೆ.

Published by:Sushma Chakre
First published: