ವಿಧಾನ ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು (Karnataka Vidhana Parishad Election) ಪ್ರಕಟವಾಗಿದೆ. ಎಸ್.ಆರ್. ಪಾಟೀಲ್ ಅವರಿಗೆ ಟಿಕೆಟ್ ತಪ್ಪಿಸುವಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಯಶಸ್ವಿಯಾಗಿದ್ದಾರೆ. ಎಸ್.ಆರ್. ಪಾಟೀಲ್ (SR Patil) ಪರ ವಿಧಾನ ಪರಿಷತ್ ಟಿಕೆಟ್ ಕೊಡಿಸಲು ತೀವ್ರ ಆಸಕ್ತಿ ವಹಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಅವರಿಗೆ ಹಿನ್ನೆಡೆ ಉಂಟಾಗಿದೆ. ನಾಗರಾಜ್ ಯಾದವ್, ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ ವಿಧಾನ ಪರಿಷತ್ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಿದೆ. ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದರು. ಹಿಂದುಳಿದ ಯಾದವ ಸಮುದಾಯ ಮತ್ತು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ವಿಧಾನ ಪರಿಷತ್ ಅಭ್ಯರ್ಥಿ ಸ್ಥಾನಕ್ಕೆ ಕಾಂಗ್ರೆಸ್ ಮಣೆ ಹಾಕಿದೆ.
ಕಾಂಗ್ರೆಸ್ ಹೈಕಮಾಂಡ್ ಅಚ್ಚರಿ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೂಚಿಸಿದವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದೆ ಕಾಂಗ್ರಸ್ ಹೈಕಮಾಂಡ್. ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರಿಗೆ ಅವಕಾಶ ಕೇಳಿದ್ದ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಪೈಕಿ ಬಲಿಜ ಸಮುದಾಯದ ಎಂ.ಆರ್. ಸೀತಾರಾಂ ಅವರಿಗೆ ಟಿಕೆಟ್ ಕೇಳಿದ್ದರು. ಅಲ್ಪಸಂಖ್ಯಾತರ ಪರ ಕ್ರಿಶ್ಚಿಯನ್ ಸಮುದಾಯದ ಐವಾನ್ ಡಿಸೋಜಾ ಹೆಸರು ಸೂಚಿಸಿದ್ದರು.
ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತಿಗೆ ಮಣೆ ಇದೇ ವೇಳೆ ಲಿಂಗಾಯತ ಸಮುದಾಯದ ಎಸ್.ಆರ್. ಪಾಟೀಲ್ ಮತ್ತು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮನ್ಸೂರ್ ಅಲಿಖಾನ್ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿದ್ದರು. ಆದರೆ ಇಬ್ಬರು ಹೇಳಿದ್ದ ಹೆಸರುಗಳನ್ನು ಬಿಟ್ಟು ಬೇರೆ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ. ಅಬ್ದುಲ್ ಜಬ್ಬಾರ್ ಪರ ಬ್ಯಾಟ್ ಬೀಸಿದ್ದ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಾತಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ ಎನ್ನಲಾಗಿದೆ.
ಸದ್ಯ ಕರ್ನಾಟಕ ವಿಧಾನಸಭೆಯಲ್ಲಿ ಇರುವ ಏಳು ಸ್ಥಾನಗಳಲ್ಲಿ ಬಿಜೆಪಿ 4, ಕಾಂಗ್ರೆಸ್ 2 ಮತ್ತು ಜೆಡಿಎಸ್ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಲಿರುವುದು ಖಚಿತವಾಗಿದೆ. ಹೀಗಾಗಿ ಅಭ್ಯರ್ಥಿಗಳಾಗಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಮೂರು ಪಕ್ಷಗಳ ಆಕಾಂಕ್ಷಿಗಳಲ್ಲೂ ಅಭ್ಯರ್ಥಿಗಳು ಟಿಕೆಟ್ಗಾಗಿ ತುರುಸಿನ ಸ್ಪರ್ಧೆ ನಡೆದಿತ್ತು. ಅಷ್ಟೇ ಅಲ್ಲದೇ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಎರಡು ದಿನಗಳು ಮಾತ್ರ ಉಳಿದಿವೆ.
ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳ ಹೆಸರು ಘೋಷಣೆ ವಾಯುವ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಘೋಷಣೆಯಾಗಿದ್ದು, ಚಂದ್ರಶೇಖರ ಇ ಲೋಣಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಪಶ್ಮಿಮ ಶಿಕ್ಷಕರ ಕ್ಷೇತ್ರದಿಂದ ಶ್ರೀಶೈಲ ನಿಂಗಪ್ಪ ಗಡದಿನ್ನಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಲಿದ್ದಾರೆ.
Mekedatu: ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸೇರಿ 29 ನಾಯಕರು ನಾಳೆಯೇ ಹಾಜರಾಗಿ; ಕೋರ್ಟ್ ಸಮನ್ಸ್ ಮೇಕೆದಾಟು ಪಾದಯಾತ್ರೆಯಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಆರೋಪದಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಒಟ್ಟು 29 ಕಾಂಗ್ರೆಸ್ ನಾಯಕರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಕಾಂಗ್ರೆಸ್ ಪ್ರಮುಖ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದ ಡಿ.ಕೆ.ಸುರೇಶ್ ಸೇರಿ ಒಟ್ಟು 29 ನಾಯಕರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಸಮನ್ಸ್ ಜಾರಿಗೊಳಿಸಲಾಗಿದ್ದು ನಾಳೆ (ಮೇ 24) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಯಾಗಿದೆ. ಇದೇ ವರ್ಷದ ಜನವರಿಯಲ್ಲಿ ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ಏರುಗತಿಯಲ್ಲಿದ್ದಾಗ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಕೈಗೊಂಡಿತ್ತು. ಕೋರ್ಟ್ ತಾಕೀತಿನ ಬಳಿಕ ಪಾದಯಾತ್ರೆಯನ್ನು ಮೊಟಕುಗೊಳಿಸಿತ್ತು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ