ಕಲಾಪದಲ್ಲಿ ಗಲಾಟೆ ಪ್ರಕರಣ; ವಿಧಾನ ಪರಿಷತ್​ ಕಾರ್ಯದರ್ಶಿಗೆ ಸಭಾಪತಿಯಿಂದ ಶೋಕಾಸ್ ನೋಟೀಸ್ ಜಾರಿ

ಡಿ.15ರಂದು ವಿಧಾನ ಪರಿಷತ್‌ನಲ್ಲಿ ಗಲಾಟೆಯಾಗಿದ್ದು ಏಕೆ? ಸಭಾಪತಿಗಳ ಪೀಠದಲ್ಲಿ ಉಪ ಸಭಾಪತಿಯನ್ನು ಕೂರಲು ಹೇಗೆ ಬಿಟ್ಟಿರಿ? ಎಂಬಿತ್ಯಾದಿ ಪ್ರಶ್ನೆಗಳಿಗೆ 48 ಗಂಟೆಯೊಳಗೆ ಉತ್ತರ ನೀಡುವಂತೆ ಸಭಾಪತಿಗಳು ವಿಧಾನ ಪರಿಷತ್ ಕಾರ್ಯದರ್ಶಿಗೆ ಶೋಕಾಸ್ ನೋಟೀಸ್ ನೀಡಿದ್ದಾರೆ.

ವಿಧಾನ ಪರಿಷತ್​ನಲ್ಲಿ ನಡೆದ ಗಲಾಟೆಯ ದೃಶ್ಯ

ವಿಧಾನ ಪರಿಷತ್​ನಲ್ಲಿ ನಡೆದ ಗಲಾಟೆಯ ದೃಶ್ಯ

  • Share this:
ಬೆಂಗಳೂರು (ಡಿ. 18): ಮೂರು ದಿನಗಳ ಹಿಂದೆ ವಿಧಾನ ಪರಿಷತ್ ಅಧಿವೇಶನದ ವೇಳೆ ಕಾಂಗ್ರೆಸ್- ಬಿಜೆಪಿ ಸದಸ್ಯರ ನಡುವೆ ಕಲಾಪದಲ್ಲೇ ಗಲಾಟೆ ನಡೆದಿತ್ತು. ಅಂದು ನಡೆದ ಆ ಘಟನೆಯಿಂದ ಇಡೀ ದೇಶವೇ ಕರ್ನಾಟಕದ ರಾಜಕಾರಣದ ಹೈಡ್ರಾಮಾ ನೋಡುವಂತಾಗಿತ್ತು. ವಿಧಾನ ಪರಿಷತ್ ಕಲಾಪದಲ್ಲಿ ನಡೆದ ಆ ಗಲಾಟೆ ಪ್ರಕರಣದ ಕುರಿತು ವಿಧಾನ ಪರಿಷತ್ ಕಾರ್ಯದರ್ಶಿಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಶೋಕಾಸ್ ನೋಟಿಸ್ ನೀಡಿದ್ದಾರೆ. ಡಿ.15ರಂದು ವಿಧಾನ ಪರಿಷತ್‌ನಲ್ಲಿ ಗಲಾಟೆಯಾಗಿದ್ದು ಏಕೆ? ಸಭಾಪತಿಗಳ ಪೀಠದಲ್ಲಿ ಉಪ ಸಭಾಪತಿಯನ್ನು ಕೂರಲು ಹೇಗೆ ಬಿಟ್ಟಿರಿ? ಎಂಬಿತ್ಯಾದಿ ಪ್ರಶ್ನೆಗಳಿಗೆ 48 ಗಂಟೆಯೊಳಗೆ ಉತ್ತರ ನೀಡುವಂತೆ ಸಭಾಪತಿಗಳು ವಿಧಾನ ಪರಿಷತ್ ಕಾರ್ಯದರ್ಶಿಗೆ ಶೋಕಾಸ್ ನೋಟೀಸ್ ನೀಡಿದ್ದಾರೆ.

ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯರು ಡಿ. 15ರ ಕಲಾಪವನ್ನು ನಡೆಸಲು ಉಪ ಸಭಾಪತಿ ಧರ್ಮೇಗೌಡರನ್ನು ಸಭಾಪತಿ ಪೀಠದಲ್ಲಿ ಕೂರಿಸಿದ್ದರು. ಸಭಾಪತಿಯ ಅನುಮತಿ ಇಲ್ಲದೆ ಉಪ ಸಭಾಪತಿ ಆ ಪೀಠದಲ್ಲಿ ಕೂರುವಂತಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಧರ್ಮೇಗೌಡರನ್ನು ಪೀಠದಿಂದ ಎಳೆದು, ಗ್ಲಾಸ್​ ಅನ್ನು ಪುಡಿಪುಡಿ ಮಾಡಿದ್ದರು. ಸಭಾಪತಿಯನ್ನು ಸದನದೊಳಗೆ ಬಾರದಂತೆ ಬಿಜೆಪಿ ಸದಸ್ಯರು ಬಾಗಿಲು ಹಾಕಿದ್ದರು. ಕಲಾಪದಲ್ಲೇ ಎರಡೂ ಪಕ್ಷದ ಸದಸ್ಯರು ಮೈಕೈ ಮುಟ್ಟಿಕೊಂಡು ಹೊಡೆದಾಡಿದ್ದರು. ಬಳಿಕ, ಈ ಪ್ರಕರಣದ ಕುರಿತು ಮಧ್ಯ ಪ್ರವೇಶಿಸುವಂತೆ ಸಿಎಂ ಯಡಿಯೂರಪ್ಪನವರ ತಂಡ ರಾಜ್ಯಪಾಲರಿಗೆ ಮನವಿ ಮಾಡಿತ್ತು.

ಇದನ್ನೂ ಓದಿ: ವಿಧಾನ ಪರಿಷತ್​ನಲ್ಲಿ ಹೈಡ್ರಾಮಾ; ಸಭಾಪತಿ ಪೀಠ ಧ್ವಂಸಕ್ಕೆ ಯತ್ನ; ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಿಕೆ

ಸಭಾಪತಿಗಳು ಬಂದು ಪೀಠ ಅಲಂಕರಿಸುವ ಮುನ್ನ ಸದನದ ಸಂಪೂರ್ಣ ಜವಾಬ್ದಾರಿ ನಿಮ್ಮದಾಗಿರುತ್ತದೆ. ಸದನದಲ್ಲಿ ಕೋರಂ ಆಗುವವರೆಗೂ ಸಭಾಪತಿಗಳು ಬರುವುದಿಲ್ಲ. ಇದು ನಿಮಗೆ ಗೊತ್ತಿಲ್ಲವೇ? ನಿಮಗೆ ಸಭಾಪತಿಗಳ ಪೀಠದಲ್ಲಿ ಬೆಲ್ ಆಗುವಾಗ ಯಾರು ಕುಳಿತು ಕೊಂಡಿರಬಾರದು ಎಂಬುದು ಗಮನಕ್ಕೆ ಬರಲಿಲ್ಲವೇ? ಎಂದು ಶೋಕಾಸ್ ನೋಟೀಸ್​ನಲ್ಲಿ ಮಾಹಿತಿ ಕೇಳಲಾಗಿದೆ.

ವಿಧಾನಪರಿಷತ್ ಕಲಾಪದ ಲೈವ್ ದೃಶ್ಯಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ನೀವು ಕೂಡ ಉಪ-ಸಭಾಪತಿಗಳು ಬಂದು ಪೀಠದಲ್ಲಿ ಕುಳಿತಾಗ ಅನುವು ಮಾಡಿಕೊಟ್ಟಿರಬಾರದೇಕೆ? ನಿಮಗೆ ಎಲ್ಲಾ ಗಮನಕ್ಕೆ ಬಂದಿದ್ದರೂ ಸುಮ್ಮನಿದ್ದಿದ್ದು ಏಕೆ? ಈ ಪತ್ರದ ಮೂಲಕ ನೀವು ಮುಂದಿನ 48 ಘಂಟೆಯೊಳಗೆ ಉತ್ತರ ಕೊಡಬೇಕೆಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ.
Published by:Sushma Chakre
First published: