BS Yediyurappa: ಸಿ.ಪಿ. ಯೋಗೇಶ್ವರ್ ವಿರುದ್ಧ ಸಮರ ಸಾರಿದ ಸಿಎಂ ಯಡಿಯೂರಪ್ಪ; ನಡ್ಡಾ ಭೇಟಿಗೆ ತೆರಳಿದ ಬಿ.ವೈ. ವಿಜಯೇಂದ್ರ

Karnataka Leadership Change: ತಮ್ಮದೇ ಸರ್ಕಾರದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಮುಜುಗರ ಸೃಷ್ಟಿಸಿದ್ದ ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ಹೈಕಮಾಂಡ್​ಗೆ ದೂರು ನೀಡಲು ಸಿಎಂ ಯಡಿಯೂರಪ್ಪ ತಮ್ಮ ಮಗ ಬಿ.ವೈ. ವಿಜಯೇಂದ್ರ ಅವರನ್ನು ದೆಹಲಿಗೆ ಕಳುಹಿಸಿದ್ದಾರೆ.

ಸಿಎಂ ಬಿಎಸ್ ಯಡಿಯೂರಪ್ಪ.

ಸಿಎಂ ಬಿಎಸ್ ಯಡಿಯೂರಪ್ಪ.

  • Share this:
    ಬೆಂಗಳೂರು (ಜೂನ್ 2): ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡಬೇಕೆಂದು ಬಹಿರಂಗವಾಗಿಯೇ ರಾಜ್ಯ ಸರ್ಕಾರದ ಸಮರ ಸಾರಿರುವ ಸಚಿವ ಸಿ.ಪಿ. ಯೋಗೇಶ್ವರ್ ಬಣಕ್ಕೆ ಬಿಸಿ ಮುಟ್ಟಿಸಲು ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ತಂದೆಯ ಪರವಾಗಿ ದೆಹಲಿಗೆ ತೆರಳಿರುವ ಬಿ.ವೈ. ವಿಜಯೇಂದ್ರ ನಿನ್ನೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ದೂರು ನೀಡಿದ್ದಾರೆ. ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರಿಗೂ ದೂರು ನೀಡಲಿರುವ ಬಿ.ವೈ. ವಿಜಯೇಂದ್ರ ಸಿ.ಪಿ. ಯೋಗೇಶ್ವರ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಅನುಮತಿ ನೀಡಲು ಕೋರುವ ಸಾಧ್ಯತೆಯಿದೆ. ಈ ಮೂಲಕ ಸಚಿವ ಯೋಗೇಶ್ವರ್ ಹಾಗೂ ಸಿಎಂ ಯಡಿಯೂರಪ್ಪ ನಡುವಿನ ಭಿನ್ನಾಭಿಪ್ರಾಯ ಹೈಕಮಾಂಡ್ ಅಂಗಳಕ್ಕೆ ತಲುಪಿದೆ.

    ಇಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಲಿರುವ ಬಿ. ವೈ. ವಿಜಯೇಂದ್ರ ಸಿ.ಪಿ. ಯೋಗೇಶ್ವರ್ ವಿರುದ್ಧ ದೂರು ನೀಡಲಿದ್ದಾರೆ ಎನ್ನಲಾಗಿದೆ. ಜೆ.ಪಿ. ನಡ್ಡಾ ಭೇಟಿಗಾಗಿ ಪ್ರಯತ್ನಿಸುತ್ತಿರುವ ಬಿ.ವೈ. ವಿಜಯೇಂದ್ರ ಅದಕ್ಕಾಗಿ ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಇಂದು ವಿಜಯೇಂದ್ರಗೆ ನಡ್ಡಾ ಭೇಟಿಗೆ ಸಮಯಾವಕಾಶ ಸಿಗುವ ಸಾಧ್ಯತೆಯಿದೆ. ಭೇಟಿ ವೇಳೆ ಯೋಗೇಶ್ವರ್ ವಿರುದ್ಧ ದೂರು ನೀಡಲಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರವಲ್ಲ. ಜೆಡಿಎಸ್, ಕಾಂಗ್ರೆಸ್ ಜೊತೆ ಬಿಜೆಪಿ ಒಪ್ಪಂದ ಮಾಡಿಕೊಂಡಿದೆ. ರಾಜ್ಯದಲ್ಲಿರುವುದು 3 ಪಕ್ಷಗಳ ಸರ್ಕಾರ ಎಂದಿದ್ದ ಯೋಗೇಶ್ವರ್ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ದೂರು ನೀಡುವ ಸಾಧ್ಯತೆಯಿದೆ.

    ಸಚಿವ ಯೋಗೇಶ್ವರ್ ಕೊರೋನಾ ಕಾಲದಲ್ಲಿ ರಾಜಕೀಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರಿಂದ ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗಲಿದೆ. ಹೀಗಾಗಿ, ಸಂಪುಟದಿಂದ ಯೋಗೇಶ್ವರ್ ಅವರನ್ನು ಕೈಬಿಡಲು ಅವಕಾಶ ಕೊಡಿ ಎಂದು ಸಿಎಂ ಯಡಿಯೂರಪ್ಪ ಪರವಾಗಿ ವಿಜಯೇಂದ್ರ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

    ಇದನ್ನು ಓದಿ: Karnataka Weather Today: ಮಲೆನಾಡು, ಕರಾವಳಿಯಲ್ಲಿ ಇಂದು ಗುಡುಗು- ಸಿಡಿಲು ಸಹಿತ ಮಳೆ; ಈ ಜಿಲ್ಲೆಗಳಲ್ಲಿ ಹೈ ಅಲರ್ಟ್​

    ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಕೂಗು ಇನ್ನೂ ಕಡಿಮೆಯಾಗಿಲ್ಲ. ಸಿಎಂ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬೇರೊಬ್ಬರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಬೇಕೆಂದು ಬಿಜೆಪಿಯ ಕೆಲವು ಶಾಸಕರು ಸಹಿ ಕೂಡ ಸಂಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಗೂ ಪ್ರಯಾಣ ಬೆಳೆಸಿದ್ದ ಸಚಿವ ಸಿ.ಪಿ. ಯೋಗೇಶ್ವರ್ ನೇತೃತ್ವದ ತಂಡ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಸಾಧ್ಯವಾಗದೆ ವಾಪಸ್ ಬಂದಿತ್ತು. ಇದೀಗ ತಮ್ಮ ವಿರೋಧ ಬಣಕ್ಕೆ ಬಿಸಿ ಮುಟ್ಟಿಸಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ದಿಢೀರನೆ ತಮ್ಮ ಮಗ ಬಿ.ವೈ. ವಿಜಯೇಂದ್ರ ಅವರನ್ನು ದೆಹಲಿಗೆ ಕಳುಹಿಸಿದ್ದಾರೆ.

    ತಮ್ಮ ನಾಯಕತ್ವದ ವಿರುದ್ಧವೇ ಬಂಡೆದ್ದಿರುವ ಸಚಿವ ಸಿ.ಪಿ. ಯೋಗೇಶ್ವರ್ ವಿಷಯವನ್ನು  ಸಿಎಂ ಯಡಿಯೂರಪ್ಪ ತುಂಬಾ ಗಂಭೀರವಾಗಿ ಪರಿಗಣಿಸಿದ್ದಾರೆ. ಸಚಿವ ಸಂಪುಟದಿಂದ ಯೋಗೇಶ್ವರ್ ಕೈಬಿಡಲು ಅನುಮತಿ ಕೊಡುವಂತೆ ಪುತ್ರನ ಮೂಲಕ ಹೈಕಮಾಂಡ್ ನಾಯಕರ ಬಳಿ ದೂರು ದಾಖಲಿಸಿದ್ದಾರೆ. ಸರ್ಕಾರದ ಭಾಗವಾಗಿದ್ದುಕೊಂಡು ಸರ್ಕಾರದ ವಿರುದ್ಧವೇ ಹೇಳಿಕೆ ಕೊಡುತ್ತಿದ್ದಾರೆ. ಸೋತವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿ, ಮಂತ್ರಿ ಮಾಡಿದ್ದರೂ ತೃಪ್ತಿ ಇಲ್ಲ. ಇಂಥವರಿಂದ ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗಲಿದೆ. ಕೂಡಲೇ ಯೋಗೇಶ್ವರ್ ಕೈ ಬಿಡಲು ಅವಕಾಶ ಮಾಡಿಕೊಡಿ. ಅವರ ಜಾಗಕ್ಕೆ ಪಕ್ಷನಿಷ್ಠರಿಗೆ ಅವಕಾಶ ಮಾಡಿಕೊಡಬಹುದು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ನಿನ್ನೆ ದೂರು ನೀಡಲಾಗಿದೆ.

    ಇದನ್ನು ಓದಿ: Karnataka Lockdown | ಕರ್ನಾಟಕದಲ್ಲಿ ಮತ್ತೆ ಲಾಕ್​ಡೌನ್ ವಿಸ್ತರಣೆ?; ತಜ್ಞರು, ಸಚಿವರ ಜೊತೆ ಇಂದು ಸಿಎಂ ಯಡಿಯೂರಪ್ಪ ಮಹತ್ವದ ಸಭೆ

    ನನ್ನ ಇಲಾಖೆಯಲ್ಲಿ ಬೇರೊಬ್ಬರ ಹಸ್ತಕ್ಷೇಪವನ್ನು ನಾನು ಸಹಿಸುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಬಿಜೆಪಿಯಾಗಿ ಉಳಿದಿಲ್ಲ. ಜೆಡಿಎಸ್ ಜೊತೆ ಬಿಜೆಪಿಗೆ ಹೊಂದಾಣಿಕೆಯಿದೆ ಎಂದು ಸ್ವಪಕ್ಷದವರ ವಿರುದ್ಧವೇ ಸಿ.ಪಿ. ಯೋಗೇಶ್ವರ್ ಹರಿಹಾಯ್ದಿದ್ದರು. ನನ್ನ ಅಧಿಕಾರದಲ್ಲಿ ನನ್ನ ಮಗ ಮೂಗು ತೂರಿಸುವುದು ಸರಿಯಲ್ಲ. ಆದರೆ, ಕರ್ನಾಟಕದಲ್ಲಿ ಇದೇ‌ ನಡೆಯುತ್ತಿದೆ ಎನ್ನುವ ಮೂಲಕ ಸರ್ಕಾರದ ಆಡಳಿತದಲ್ಲಿ ಸಿಎಂ ಯಡಿಯೂರಪ್ಪನವರ ಮಗ ಬಿ.ವೈ. ವಿಜಯೇಂದ್ರ ಹಸ್ತಕ್ಷೇಪ ಮಾಡುವ ಬಗ್ಗೆ ಪರೋಕ್ಷವಾಗಿ ಸಿ.ಪಿ. ಯೋಗೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದರು.

    ನಮ್ಮ ಪಕ್ಷದ ಕೆಲವು ಸ್ನೇಹಿತರು ನನ್ನ ಬಗ್ಗೆ ಮಾತನಾಡುತ್ತಿರುವುದು ಗೊತ್ತು. ಅದನ್ನು ಮಾತನಾಡಿಸುತ್ತಿರುವುದು ಯಾರೆಂಬ ಬಗ್ಗೆಯೂ ಗೊತ್ತು. ಇದು ಶುದ್ಧ ಬಿಜೆಪಿ ಸರ್ಕಾರ ಆಗಿ ಉಳಿದಿಲ್ಲ. ಮೂರು ಗುಂಪಿನ ಸರ್ಕಾರ ಆಗಿದೆ. ಮೂರು ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ. ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಜತೆ ಬಿಜೆಪಿ ಸರ್ಕಾರ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಸಿ.ಪಿ. ಯೋಗೇಶ್ವರ್ ಬಾಂಬ್ ಸಿಡಿಸಿದ್ದರು.
    Published by:Sushma Chakre
    First published: