ಸಿದ್ದರಾಮಯ್ಯ ಶೋಪೀಸ್​ನಂತೆ ಮಾತಾಡಬಾರದು; ಭೂ ಸುಧಾರಣಾ ಕಾಯ್ದೆ ವಿವಾದಕ್ಕೆ ಸಚಿವ ಆರ್. ಅಶೋಕ್ ತಿರುಗೇಟು

Karnataka Land Reforms Act: ಭೂ ಸುಧಾರಣಾ ಕಾಯ್ದೆ ಬಗ್ಗೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಆಗಬಾರದು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರೇ ಸೆಕ್ಷನ್ 79 ತೆಗೆಯಬೇಕು ಎಂದು ಹೇಳಿದ್ದರು. ಸಿದ್ದರಾಮಯ್ಯ ಸುಮ್ಮನೆ ಶೋಪೀಸ್ ರೀತಿ ಹೇಳಿಕೆ ನೀಡಬಾರದು ಎಂದು ಸಚಿವ ಆರ್. ಅಶೋಕ್ ಚಾಟಿ ಬೀಸಿದ್ದಾರೆ.

news18-kannada
Updated:July 17, 2020, 2:50 PM IST
ಸಿದ್ದರಾಮಯ್ಯ ಶೋಪೀಸ್​ನಂತೆ ಮಾತಾಡಬಾರದು; ಭೂ ಸುಧಾರಣಾ ಕಾಯ್ದೆ ವಿವಾದಕ್ಕೆ ಸಚಿವ ಆರ್. ಅಶೋಕ್ ತಿರುಗೇಟು
ಸಚಿವ ಆರ್. ಅಶೋಕ್
  • Share this:
ಬೆಂಗಳೂರು (ಜು. 17): ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರ ಕರಾಳ ಶಾಸನ ಬರೆದಿದೆ. 50ರಿಂದ 60 ಸಾವಿರ ಕೋಟಿ ರೂ. ಮೌಲ್ಯದ ರೈತರ ಜಮೀನನ್ನು ರಿಯಲ್ ಎಸ್ಟೇಟ್, ಕಾರ್ಪೋರೇಟ್ ಕಂಪನಿಗಳ ಕೈಗೆ ನೀಡಿದೆ. ಇದು ಬಿಜೆಪಿ ಸರ್ಕಾರದ ಈ ಹಿಂದಿನ ಗಣಿ ಹಗರಣಕ್ಕಿಂತಲೂ ದೊಡ್ಡ ಹಗರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಆರ್ ಅಶೋಕ್, ಸಿದ್ದರಾಮಯ್ಯ ಸುಮ್ಮನೆ ಶೋಪೀಸ್ ರೀತಿ ಮಾತನಾಡಬಾರದು ಎಂದು ತಿರುಗೇಟು ನೀಡಿದ್ದಾರೆ.

ರೈತರಲ್ಲದವರಿಗೂ ಜಮೀನು ಖರೀದಿಸಲು ಅವಕಾಶ ಕಲ್ಪಿಸುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ದೊಡ್ಡ ಹಗರಣ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. 10 ಸಾವಿರ ಕೋಟಿ ಮೌಲ್ಯದ ಹಗರಣ ಇದು ಎಂದಿದ್ದಾರೆ. ಬಲಾಢ್ಯರೆಲ್ಲರ ಕಾಲದಲ್ಲೇ ಕೇಸ್ ಕ್ಲಿಯರ್ ಮಾಡಿಕೊಂಡರು. ಬಡವರು ಮಾತ್ರ ಕೇಸ್ ಉಳಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರೇ ಸೆಕ್ಷನ್ 79 ತೆಗೆಯಬೇಕು ಎಂದು ಹೇಳಿದ್ದರು. ಮೊದಲು ಈ ಬಗ್ಗೆ ಅವರ ಪಕ್ಷದಲ್ಲಿ ಚರ್ಚೆ ಮಾಡಲಿ ಎಂದು ಸಚಿವ ಆರ್. ಅಶೋಕ್ ಚಾಟಿ ಬೀಸಿದ್ದಾರೆ.

ಸಿದ್ದರಾಮಯ್ಯ ಸುಮ್ಮನೆ ಶೋಪೀಸ್ ರೀತಿ ಹೇಳಿಕೆ ನೀಡಬಾರದು. ಸುಮ್ಮನೆ ಬಳ್ಳಾರಿ, ರಾಯಚೂರು ಅಂತ ಹೇಳೋದಲ್ಲ. ಇದು ದುಡ್ಡು ಮಾಡಿಕೊಳ್ಳುವ ದೊಡ್ಡ ದಂಧೆಯಾಗಿತ್ತು. ಈ ಕಾಯಿದೆ ಇದ್ದಾಗ ಇವರು ಏನು ಮಾಡಿದ್ದರು? ಕೇಸ್ ಹಾಕಿ, ವಸೂಲಿ ಮಾಡುತ್ತಿದ್ದರು ಅಷ್ಟೇ ಎಂದು ಸಿದ್ದರಾಮಯ್ಯಗೆ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಬಿಜೆಪಿಯ ಗಣಿ ಹಗರಣಕ್ಕಿಂತ ದೊಡ್ಡದು; ಸಿದ್ದರಾಮಯ್ಯ ಆರೋಪ

ಭೂ ಸುಧಾರಣಾ ಕಾಯ್ದೆ ಬಗ್ಗೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಆಗಬಾರದು. ಸಿದ್ದರಾಮಯ್ಯ ನಿದ್ದೆ ಬಂದಂತೆ ನಟಿಸುತ್ತಾರೆ. ನಿಜವಾಗಲೂ ನಿದ್ರೆ ಬಂದವರನ್ನು ಎಚ್ಚರಿಸಬಹುದು, ಆದರೆ ನಿದ್ರೆ ಬಂದಂತೆ ನಟಿಸೋರನ್ನು ಎಬ್ಬಿಸಲು ಸಾಧ್ಯವಿಲ್ಲ. ಹೀಗಾಗಿ, ಸಿದ್ದರಾಮಯ್ಯನವರ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯ ಸುಗ್ರೀವಾಜ್ಞೆ ಮೂಲಕ ಕಾಂಗ್ರೆಸ್ ಸರ್ಕಾರದ ಕ್ರಾಂತಿಕಾರಿ ಕಾಯ್ದೆಯ ಕತ್ತು ಹಿಸುಕಿ ಸಾಯಿಸಿದೆ. ಈ ಮೂಲಕ ಉಳುವವರಿಂದ ಭೂಮಿ ಕಿತ್ತುಕೊಂಡು, ಉಳ್ಳವರನ್ನು ಭೂಮಿಯ ಒಡೆಯರನ್ನಾಗಿ ಮಾಡಲು ಹೊರಟಿದೆ. ಕೃಷಿ ಭೂಮಿ ಹೊಂದಲು ಆದಾಯ ಮೀತಿ ಹೇರಿದ್ದ ಸೆಕ್ಷನ್ 79ಎ, ಕೃಷಿಕರಲ್ಲದವರಿಗೆ ಭೂಮಿ ಖರೀದಿ ನಿಷೇಧಿಸಿದ್ದ 79 ಬಿ, ಸುಳ್ಳು ಪ್ರಮಾಣಪತ್ರ ಸಲ್ಲಿಸಿದವರಿಗೆ ದಂಡ ವಿಧಿಸಿದ್ದ ಸೆಕ್ಷನ್ 79ಸಿ, ಕೃಷಿಕರಲ್ಲದವರಿಗೆ ಭೂಮಿ ವರ್ಗಾವಣೆ ನಿಷೇಧಿಸಿದ್ದ ಸೆಕ್ಷನ್ 80 ಅನ್ನು ರದ್ದುಪಡಿಸಿರುವುದು ಭೂಮಿತಾಯಿಗೆ ಬಗೆದ ದ್ರೋಹ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದರು.
ಬೆಂಗಳೂರಿನ ಗೃಹನಿರ್ಮಾಣ ಸಹಕಾರ ಸಂಘಗಳ ಹೆಸರಲ್ಲಿ ಅಕ್ರಮವಾಗಿ ಮಧ್ಯವರ್ತಿಗಳಿಂದ ಖರೀದಿಸಿದ್ದ ಕಾರಣಕ್ಕೆ ಸೆಕ್ಷನ್ 79ಎ ಮತ್ತು 79ಬಿ ಗೆ ಸಂಬಂಧಿಸಿದ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ. ಭೂ ಸುಧಾರಣಾ ಕಾಯಿದೆ ತಿದ್ದುಪಡಿಯಿಂದ ಬೆಂಗಳೂರಿನ ಗೃಹ ನಿರ್ಮಾಣ ಸಹಕಾರ ಸಂಘಗಳ ಮೇಲಿರುವ ಎಲ್ಲ ಬಾಕಿ ಪ್ರಕರಣಗಳು ರದ್ದಾಗಲಿವೆ. ಈ ಪ್ರಕರಣಗಳು ಒಳಗೊಂಡಿರುವ ಜಮೀನಿನ ಬೆಲೆ ಅಂದಾಜು ರೂ. 15 ರಿಂದ 20 ಸಾವಿರ ಕೋಟಿಗಳಷ್ಟಾಗಬಹುದು ಎಂದು ರಾಜ್ಯದ ಸಹಕಾರ ಇಲಾಖೆ ಆಡಿಟ್ ವರದಿ ಹೇಳಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದರು.
Published by: Sushma Chakre
First published: July 17, 2020, 2:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading