KSET Exam: ಇಂದು ರಾಜ್ಯದಲ್ಲಿ ಕೆ-ಸೆಟ್​ ಪರೀಕ್ಷೆ; ನೊಂದಣಿ ಮಾಡಿಕೊಂಡಿರುವ 84 ಸಾವಿರ ಅಭ್ಯರ್ಥಿಗಳು

ರಾಜ್ಯದಲ್ಲಿ ಭಾರಿ ಮಳೆ ಹಿನ್ನೆಲೆ,  KSET ಪರೀಕ್ಷೆಯನ್ನು ಮುಂದೂಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನಿನ್ನೆ ಆಗ್ರಹ ಮಾಡಿದ್ದರು.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಬೆಂಗಳೂರು(ಜು.25): ಇಂದು ಕೆ-ಸೆಟ್​(KSET) ಪರೀಕ್ಷೆ ನಡೆಯುತ್ತಿದ್ದು,  ಬೆಳಗ್ಗೆ 9.30ಕ್ಕೆ ಶುರುವಾಗಿದೆ. ಮಧ್ಯಾಹ್ನ 1 ಗಂಟೆವರೆಗೆ ಪರೀಕ್ಷೆ  ನಡೆಯಲಿದೆ. ಪರೀಕ್ಷೆಗೆ ಒಟ್ಟು 84 ಸಾವಿರ ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಒಟ್ಟು 11 ನೋಡಲ್ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರಿನಲ್ಲಿರುವ ನೋಡಲ್‌ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 41 ವಿಷಯಗಳಲ್ಲಿ ಕೆ- ಸೆಟ್​ ಪರೀಕ್ಷೆ ನಡೆಯುತ್ತಿದೆ.

  ಕೋವಿಡ್‌ ಮಾರ್ಗಸೂಚಿ ಅನುಸರಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸ್‌ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ 24 ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಪರೀಕ್ಷಾ ಕಾರ್ಯಕ್ಕೆ ಲಸಿಕೆ ಪಡೆದ ಸಿಬ್ಬಂದಿಯನ್ನೇ ನಿಯೋಜನೆ ಮಾಡಲಾಗಿದೆ. ಕೋವಿಡ್‌ ಅಥವಾ ರೋಗ ಲಕ್ಷಣಗಳು ಇರುವವರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುತ್ತಿದೆ.

  ಈ ಹಿಂದೆ ಏ.11ರಂದು ಕೆ–ಸೆಟ್​​‌ ಪರೀಕ್ಷೆ ನಿಗದಿಯಾಗಿತ್ತು. ಈಗಾಗಲೇ ಎರಡು ಬಾರಿ ಮುಂದೂಡಲಾಗಿತ್ತು.  ಸಾರಿಗೆ ನೌಕರರ ಮುಷ್ಕರ ಕಾರಣ ಏ. 11ರಿಂದ ಏ.25ಕ್ಕೆ ಮುಂದೂಡಲಾಗಿತ್ತು. ಬಳಿಕ ಕರ್ಫ್ಯೂ ವಿಧಿಸಿದ್ದ ಕಾರಣ ಎರಡನೇ ಬಾರಿ ಮುಂದಕ್ಕೆ ಹಾಕಲಾಗಿತ್ತು.  ಈಗ ಪರೀಕ್ಷೆ ನಡೆಸಲು ಎಲ್ಲಾ ರೀತಿಯಲ್ಲೂ ಸಿದ್ದತೆ ಮಾಡಿಕೊಳ್ಳಲಾಗಿದೆ.

  ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET)ಯನ್ನು ಮೈಸೂರು ವಿಶ್ವವಿದ್ಯಾಲಯ ನಡೆಸುತ್ತದೆ. ಜುಲೈ 25ರಂದು ಪರೀಕ್ಷೆಗೆ ದಿನಾಂಕ ನಿಗದಿ ಮಾಡಿತ್ತು. ಅದರಂತೆ ಇಂದು ಪರೀಕ್ಷೆ ನಡೆಯುತ್ತಿದೆ.

  ಇದನ್ನೂ ಓದಿ:Karnataka Rains Today: ರಾಜ್ಯದಲ್ಲಿ ಇನ್ನೂ 5 ದಿನ ಮಳೆ; ಇಂದು ಬೆಳಗಾವಿಗೆ ಸಿಎಂ ಬಿಎಸ್​ ಯಡಿಯೂರಪ್ಪ ಭೇಟಿ

  ಪರೀಕ್ಷೆ ಮುಂದೂಡಲು ಸಿದ್ದರಾಮಯ್ಯ ಆಗ್ರಹ

  ರಾಜ್ಯದಲ್ಲಿ ಭಾರಿ ಮಳೆ ಹಿನ್ನೆಲೆ,  K-SET ಪರೀಕ್ಷೆಯನ್ನು ಮುಂದೂಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನಿನ್ನೆ ಆಗ್ರಹ ಮಾಡಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಅವರು,  ಉತ್ತರ ಕರ್ನಾಟಕದ ಹಲವು ಭಾಗದಲ್ಲಿ ಸಂಪರ್ಕ ಕಡಿತವಾಗಿದೆ. ಹೀಗಾಗಿ ಪರೀಕ್ಷೆ ಮುಂದೂಡಿಕೆ ಮಾಡಿ ಎಂದು ಆಗ್ರಹಿಸಿದ್ದರು.  ಕರ್ನಾಟಕದಲ್ಲಿ ಮುಂಗಾರು ಮಳೆಯ ಅಬ್ಬರ ತೀವ್ರವಾಗಿದ್ದು, ಕಳೆದ ಹತ್ತು ದಿನಗಳಿಂದ ರಾಜ್ಯದ ಹಲವೆಡೆ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ. ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆಗೆ ರಾಜ್ಯದಲ್ಲಿ ನದಿಗಳು ಪ್ರವಾಹ ಮಟ್ಟದಲ್ಲಿ ಹರಿಯುತ್ತಿದ್ದು, ಜನರಿಗೆ ಆತಂಕ ಮೂಡಿಸಿದೆ.

  ಬಹುತೇಕ ಡ್ಯಾಂಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಇದರಿಂದ ನದಿಪಾತ್ರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಹಲವೆಡೆ ಮನೆಗಳು ಕುಸಿದಿವೆ. ಇನ್ನೂ ಕೆಲವೆಡೆ ಸೇತುವೆಗಳು ಮುಳುಗಡೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಬೆಳೆಗಳು ನಾಶವಾಗಿವೆ. ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿಗಳು ಜಲಾವೃತಗೊಂಡಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

  ಇದನ್ನೂ ಓದಿ:Karnataka Politics: ದಲಿತರ ಬಗ್ಗೆ ಕಾಳಜಿ ಇದ್ದರೆ ಮುಂದಿನ ಸಿಎಂ ಖರ್ಗೆ ಎಂದು ಘೋಷಿಸಲಿ; ಕಾಂಗ್ರೆಸ್​​ಗೆ ಕಟೀಲ್ ಸವಾಲು

  ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆಯ ಆರ್ಭಟ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಮತ್ತು ನಾಳೆ (ಜು.25 ಮತ್ತು 26)ರಂದು ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದ್ದು, ಯೆಲ್ಲೋ ಅಲರ್ಟ್​​ ಘೋಷಿಸಲಾಗಿದೆ. ಮುಂದಿನ 4-5 ದಿನಗಳಲ್ಲಿ ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರತೆ ಕಡಿಮೆಯಾಗಲಿದ್ದು, ಮಳೆರಾಯ ಕೊಂಚ ವಿರಾಮ ಕೊಡಲಿದ್ದಾನೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್​.ಪಾಟೀಲ್​ ತಿಳಿಸಿದ್ದಾರೆ.
  Published by:Latha CG
  First published: