Shiroor Mutt: ಕೃಷ್ಣ ಮಠದ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಕ್ಕೆ ಬಾಲ ಸನ್ಯಾಸಿ ನೇಮಕ ಎತ್ತಿಹಿಡಿದ ಹೈಕೋರ್ಟ್!

ಅಮಿಕಸ್‌ ಕ್ಯೂರಿಯಾಗಿರುವ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರು “18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸನ್ಯಾಸ ದೀಕ್ಷೆ ನೀಡುವುದಕ್ಕೆ ಯಾವುದೇ ಶಾಸನಬದ್ಧ, ಸಂವಿಧಾನಬದ್ಧವಾದ ನಿರ್ಬಂಧವಿಲ್ಲ ಮತ್ತು ಅದು ಅಪಾಯಕರ ಅಭ್ಯಾಸವಲ್ಲ” ಎಂದು ಪೀಠಕ್ಕೆ ವಿವರಿಸಿದ್ದರು.

ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್

 • Share this:
  ಬೆಂಗಳೂರು: ಉಡುಪಿಯ ಕೃಷ್ಣ ಮಠದ (Udupi Krishna Mutt) ಅಷ್ಟಮಠಗಳ ಪೈಕಿ ಒಂದಾಗಿರುವ ಶಿರೂರು ಮಠಕ್ಕೆ (Shiroor Mutt) ಬಾಲ ಸನ್ಯಾಸಿ (Bala Sanyasa)ನೇಮಕ ಮಾಡಿರುವುದನ್ನು ಬುಧವಾರ ಕರ್ನಾಟಕ ಹೈಕೋರ್ಟ್‌ (Karnataka High Court) ಎತ್ತಿಹಿಡಿದಿದೆ. ಅಪ್ರಾಪ್ತರು ಸ್ವಾಮಿಯಾಗಬಾರದು ಎಂಬುದಕ್ಕೆ ಕಾನೂನಿನ ತೊಡಕು ಇಲ್ಲ ಎಂದು ಹೈಕೋರ್ಟ್ ಪೀಠ ಹೇಳಿದೆ. ಶಿರೂರು ಮಠದ ಪೀಠಾಧಿಪತಿಯನ್ನಾಗಿ 16 ವರ್ಷದ ಅನಿರುದ್ಧ ಸರಳತ್ತಾಯ (ಈಗ ವೇದವರ್ಧನ ತೀರ್ಥ) ಅವರನ್ನು ನೇಮಕ ಮಾಡಿದ್ದರ ಸಿಂಧುತ್ವ ಪ್ರಶ್ನಿಸಿ ಶಿರೂರು ಮಠದ ಭಕ್ತ ಸಮಿತಿಯ ಕಾರ್ಯದರ್ಶಿ ಪಿ ಲಾತವ್ಯ ಆಚಾರ್ಯ ಸೇರಿ ನಾಲ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ನೀಡಿದೆ.

  “ಬೌದ್ಧ ಧರ್ಮದಲ್ಲಿ ಅತ್ಯಂತ ಚಿಕ್ಕ ವಯಸ್ಸಿಗೆ ಮಕ್ಕಳು ಭಿಕ್ಕುಗಳಾಗುತ್ತಾರೆ. ಯಾವ ವಯಸ್ಸಿನಲ್ಲಿ ಸನ್ಯಾಸಿಯಾಗಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮವಿಲ್ಲ. 18 ವರ್ಷಕ್ಕಿಂತ ಚಿಕ್ಕವರು ಸನ್ಯಾಸಿಗಳಾಗಬಾರದು ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಶಾಸನಬದ್ಧ ಕಾನೂನು ಇಲ್ಲ. 18 ವರ್ಷವಾಗುವುದಕ್ಕೂ ಮುಂಚಿತವಾಗಿ ಸನ್ಯಾಸಿಯಾಗಲು ಧರ್ಮದಲ್ಲಿ ಅವಕಾಶವಿದೆ ಎಂಬುದನ್ನು ಅಮಿಕಸ್‌ ಕ್ಯೂರಿ ಎಸ್‌ ಎಸ್‌ ನಾಗಾನಂದ್‌ ಅವರು ವಿಸ್ತೃತವಾಗಿ ವಿವರಿಸಿದ್ದಾರೆ. ಹೀಗಾಗಿ, ಅದಕ್ಕೆ ಯಾವುದೇ ನಿರ್ಬಂಧವಿಲ್ಲ. ಪ್ರಮುಖವಾದ ಧಾರ್ಮಿಕ ಚಟುವಟಿಕೆಗಳ ದೃಷ್ಟಿಯಿಂದ ಶಿರೂರುಮಠಕ್ಕೆ ಪೀಠಾಧಿಪತಿ ನೇಮಕ ಮಾಡುವ ಅಧಿಕಾರ ಸೋದೆ ವಾದಿರಾಜ ಮಠದ ಪೀಠಾಧಿಪತಿಗೆ ಇದೆ. ಈ ವಿಚಾರದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಲಾಗದು. ಅದಾಗ್ಯೂ, ಧಾರ್ಮಿಕ ವಿಧಿವಿಧಾನ ಮತ್ತು ಧರ್ಮದಲ್ಲಿ ಅಸ್ತಿತ್ವದಲ್ಲಿರುವ ನಂಬಿಕೆಗಳು ಎಲ್ಲಿಯವರೆಗೆ ವ್ಯಕ್ತಿಯ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲವೋ ಅಲ್ಲಿಯವರೆಗೆ ಅವುಗಳನ್ನು ಪಾಲಿಸುವ ಹೊಣೆಗಾರಿಕೆ ಇದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

  “ಹಾಲಿ ಪ್ರಕರಣದಲ್ಲಿ ಬಹುಮಖ್ಯ ಧಾರ್ಮಿಕ ನಂಬಿಕೆಗಳ ಪ್ರಕಾರ ಶಿರೂರು ಮಠವು ಧಾರ್ಮಿಕ ವರ್ಗವಾಗಿದ್ದು, ಏಳನೇ ಪ್ರತಿವಾದಿಯಾದ ಅನಿರುದ್ಧ ಸರಳತ್ತಾಯ ಅವರು ಸನ್ಯಾಸಿಯಾಗಿದ್ದಾರೆ. ಅವರನ್ನು ಶಿರೂರು ಮಠದ ಪೀಠಾಧಿಪತಿಯಾಗಿ ನೇಮಿಸಲಾಗಿದೆ. ಹೀಗಿರುವಾಗ ಮಠದ ಬಹುಮುಖ್ಯ ಧಾರ್ಮಿಕ ನಂಬಿಕೆಗಳು ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿವೆ ಎಂದು ಊಹಿಸಿಕೊಳ್ಳಲಾಗದು. ಯಾವುದೇ ರೀತಿಯಲ್ಲಿಯೂ ಅನಿರುದ್ಧ ಸರಳತ್ತಾಯ ಅವರನ್ನು ಪೀಠಾಧಿಪತಿಯನ್ನಾಗಿ ನೇಮಿಸಿರುವುದನ್ನು ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಹೇಳಲಾಗದು. ಶಾಸನಬದ್ಧ ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ ಎಂಬುದರತ್ತ ಬೊಟ್ಟು ಮಾಡುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ. ಈ ಪರಂಪರೆಯು 800 ವರ್ಷಗಳಿಂದ ನಡೆದುಕೊಂಡು ಬಂದಿದೆ. ಸ್ವಾಮೀಜಿ ನೇಮಕಾತಿ ಪರಂಪರೆ 800 ವರ್ಷಗಳಿಂದ ಅಸ್ತಿತ್ವದಲ್ಲಿದ್ದು, ಇದು ಶ್ರೀ ಮಧ್ವಾಚಾರ್ಯರ ತತ್ವ ಮತ್ತು ಬೋಧನೆಯ ಸೂಚಕಗಳಾಗಿವೆ” ಎಂದಿರುವ ಪೀಠವು ಪಿಐಎಲ್‌ ವಜಾ ಮಾಡಿದೆ.

  “ಆರ್ಷ್‌ ಮಾರ್ಗ್‌ ಸೇವಾ ಟ್ರಸ್ಟ್‌ ಮತ್ತು ಇತರರು ವರ್ಸಸ್‌ ಮಧ್ಯಪ್ರದೇಶ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ವಿಭಾಗೀಯ ಪೀಠವು ಬಹುಮುಖ್ಯ ಧಾರ್ಮಿಕ ನಂಬಿಕೆಗಳ ಬಗ್ಗೆ ಚರ್ಚಿಸಿದ್ದು, ಈ ಪ್ರಕರಣದ 72ನೇ ಪ್ಯಾರಾದಲ್ಲಿ ಹೇಳಿರುವಂತೆ ಈ ನ್ಯಾಯಾಲಯವು ವೇದಶಾಸ್ತ್ರದ ಮಾಂತ್ರಿಕತೆ ಹೊಂದಿಲ್ಲ. ಕಳೆದ 800 ವರ್ಷಗಳಿಂದ ನಡೆದುಕೊಂಡು ಬಂದಿರುವ ಶ್ರೀ ಶಿರೂರು ಮಠದ ಬಹುಮುಖ್ಯ ಧಾರ್ಮಿಕ ಆಚರಣೆಯಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಸಾಂವಿಧಾನಿಕ ಸಂಸ್ಥೆಯಾಗಿ ತನ್ನ ಪಾತ್ರವನ್ನು ಮೀರುವ ಪರಿಸ್ಥಿತಿ ಉದ್ಭವವಾಗುವುದಿಲ್ಲ. ಹೀಗಾಗಿ ಮನಿವಿಯನ್ನು ವಜಾ ಮಾಡಲಾಗಿದೆ” ಎಂದು ಹೇಳಿದೆ.

  ಕಳೆದ ಗುರುವಾರ ಸುದೀರ್ಘವಾಗಿ ನಾಲ್ಕು ತಾಸುಗಳ ವಾದ-ಪ್ರತಿವಾದ ಆಲಿಸಿದ್ದ ಪೀಠವು ತೀರ್ಪು ಕಾಯ್ದಿರಿಸಿತ್ತು. ಅರ್ಜಿದಾರರ ಪರವಾಗಿ ವಾದಿಸಿದ್ದ ವಕೀಲ ಡಿ ಆರ್‌ ರವಿಶಂಕರ್‌ ಅವರು “ಅಪ್ರಾಪ್ತರಿಗೆ ಸನ್ಯಾಸವನ್ನು ಹೇರುವುದರಿಂದ ಅವರು ಐಹಿಕ ಭೋಗಗಳನ್ನು ಪರಿತ್ಯಾಗ ಮಾಡಬೇಕಾಗುತ್ತದೆ. ಇದು ಸಂವಿಧಾನದ 21 ಮತ್ತು 39 (ಇ) ಮತ್ತು (ಎಫ್‌) ವಿಧಿಯ ಉಲ್ಲಂಘನೆಯಾಗುತ್ತದೆ” ಎಂದಿದ್ದರು.

  ಇದನ್ನು ಓದಿ: World Heart Day 2021: ಸಣ್ಣ ವಯಸ್ಸಿನ ಹೃದಯಾಘಾತ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅರಿವಿನ ಪಾಠ!

  ಅಮಿಕಸ್‌ ಕ್ಯೂರಿಯಾಗಿರುವ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರು “18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸನ್ಯಾಸ ದೀಕ್ಷೆ ನೀಡುವುದಕ್ಕೆ ಯಾವುದೇ ಶಾಸನಬದ್ಧ, ಸಂವಿಧಾನಬದ್ಧವಾದ ನಿರ್ಬಂಧವಿಲ್ಲ ಮತ್ತು ಅದು ಅಪಾಯಕರ ಅಭ್ಯಾಸವಲ್ಲ” ಎಂದು ಪೀಠಕ್ಕೆ ವಿವರಿಸಿದ್ದರು.
  Published by:HR Ramesh
  First published: