ಮಂಗಳೂರು ಪೊಲೀಸರ ವಿರುದ್ಧ ಯಾಕೆ ಎಫ್​​ಐಆರ್​​ ದಾಖಲಿಸಿಲ್ಲ ಎಂದು ಮಾಹಿತಿ ಕೊಡಿ‘: ಹೈಕೋರ್ಟ್​​

ಮಂಗಳೂರು ಗೋಲಿಬಾರ್​​ನಲ್ಲಿ ಇಬ್ಬರು ಅಮಾಯಕರು ಮೃತಪಟ್ಟಿದ್ಧಾರೆ. ಪ್ರತಿಭಟನಾಕಾರರ ಮೇಲಿನ ಪೊಲೀಸರ ದೌರ್ಜನ್ಯದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ಕೋರಿ ಹೈಕೋರ್ಟ್​ಗೆ ಜೆಡಿಎಸ್ ಮುಖಂಡ ಮುಹಮ್ಮದ್ ಇಕ್ಬಾಲ್ ಮತ್ತು ಉಮರ್ ಎಂಬುವರು ಅರ್ಜಿ ಸಲ್ಲಿಸಿದರು.

news18-kannada
Updated:February 17, 2020, 10:01 PM IST
ಮಂಗಳೂರು ಪೊಲೀಸರ ವಿರುದ್ಧ ಯಾಕೆ ಎಫ್​​ಐಆರ್​​ ದಾಖಲಿಸಿಲ್ಲ ಎಂದು ಮಾಹಿತಿ ಕೊಡಿ‘: ಹೈಕೋರ್ಟ್​​
ಮಂಗಳೂರಲ್ಲಿ ನಡೆದ ಗೋಲಿಬಾರ್ ದೃಶ್ಯ
  • Share this:
ಬೆಂಗಳೂರು(ಫೆ.17): ಮಂಗಳೂರು ಗೋಲಿಬಾರ್​​ ಪ್ರಕರಣ ಸಂಬಂಧ 22 ಆರೋಪಿಗಳಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಅಲ್ಲದೇ ಗೋಲಿಬಾರ್ ಪ್ರಕರಣದಲ್ಲಿ ಮಂಗಳೂರು ಪೊಲೀಸರ ವಿರುದ್ಧ ಇಲ್ಲಿಯವರೆಗೂ ಯಾಕೆ ಎಫ್​​ಐಆರ್​​ ದಾಖಲಿಸಿಲ್ಲ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ಈ ಕುರಿತಂತೆ ನಾಳೆ ಮಾಹಿತಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ಹೋರಾಟದ ವೇಳೆ ಮಂಗಳೂರಿನಲ್ಲಿ ಘರ್ಷಣೆ ಸಂಭವಿಸಿತ್ತು. ಈ ಸಂಬಂಧ 22 ಮಂದಿಯನ್ನು ಬಂಧಿಸಲಾಗಿತ್ತು. ಬಳಿಕ ಆರೋಪಿ ಪರ ವಕೀಲ ಬಿ. ಲತೀಫ್​​​​​​​ ಹೈಕೋರ್ಟ್​​ ಮೆಟ್ಟಿಲೇರಿದ್ದರು. ಸೋಮವಾರ(ಫೆ.17) ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ನಾ ನ್ಯಾಯಪೀಠ, 22 ಮಂದಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿಗಳಾದ ಮಹಮ್ಮದ್ ಅಝರ್, ಅಬ್ದುಲ್ ಹಫೀಝ್, ಹರ್ಜಾನ್, ಮಹಮ್ಮದ್ ನಜೀಮ್, ಅನ್ವರ್ ಹುಸೇನ್, ಮಹಮ್ಮದ್ ಇಕ್ಬಾಲ್, ಕೈಸಲ್, ಜಾವಿದ್ ಅಖ್ತರ್, ಮಹಮ್ಮದ್ ಜಿಹಾದ್, ಮಹಮ್ಮದ್ ಫಯಾಝ್, ಮಹಮ್ಮದ್ ಆಶೀಕ್, ಮಹಮ್ಮದ್ ಸುಹೈಲ್, ನಸ್ರುದ್ದೀನ್, ಮಹಮ್ಮದ್ ಶಕೀರ್, ಕಲಂದ್ ಬಾಷಾ ಸೇರಿ 22 ಜನರಿಗೆ ಜಾಮೀನು ಮಂಜೂರು ಆಗಿದೆ.

ಇತ್ತೀಚೆಗೆ ಮಂಗಳೂರು ಗೋಲಿಬಾರ್​​​ ಪ್ರಕರಣದ ಬಗ್ಗೆ ಮ್ಯಾಜಿಸ್ಟಿರಿಯಲ್ ವಿಚಾರಣೆ ನಡೆಸಲು ಉಡುಪಿ ಜಿಲ್ಲಾ ದಂಡಾಧಿಕಾರಿಯನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಕಳೆದ ವರ್ಷ ಡಿಸೆಂಬರ್​​​ 19ನೇ ತಾರೀಕಿನಂದು ಮಂಗಳೂರಿನಲ್ಲಿ ನಡೆದ ಗೋಲಿಬಾರ್​​ ಬಗ್ಗೆ ಯಾರ ಬಳಿಯಾದರೂ ವಿಡಿಯೋ ತುಣುಕು ಮತ್ತು ಸಮರ್ಪಕ ಸಾಕ್ಷಾಧಾರಗಳಿದ್ದರೆ ಸಲ್ಲಿಸಬಹುದು. ಫೆಬ್ರವರಿ 19ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಮಂಗಳೂರು ಸಹಾಯಕ ಆಯುಕ್ತರ ಕೋರ್ಟ್ ಹಾಲ್​​ನಲ್ಲಿ ನಡೆಯಲಿರುವ ವಿಚಾರಣೆಯ ಸಂದರ್ಭದಲ್ಲಿ ಹಾಜರುಪಡಿಸಬಹುದು ಎಂದು ರಾಜ್ಯ ಸರ್ಕಾರ ಪ್ರಕಟನೆ ಹೊರಡಿಸಿತ್ತು.

ಮಂಗಳೂರು ಗೋಲಿಬಾರ್​​ನಲ್ಲಿ ಇಬ್ಬರು ಅಮಾಯಕರು ಮೃತಪಟ್ಟಿದ್ಧಾರೆ. ಪ್ರತಿಭಟನಾಕಾರರ ಮೇಲಿನ ಪೊಲೀಸರ ದೌರ್ಜನ್ಯದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ಕೋರಿ ಹೈಕೋರ್ಟ್​ಗೆ ಜೆಡಿಎಸ್ ಮುಖಂಡ ಮುಹಮ್ಮದ್ ಇಕ್ಬಾಲ್ ಮತ್ತು ಉಮರ್ ಎಂಬುವರು ಅರ್ಜಿ ಸಲ್ಲಿಸಿದರು. ಈ ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್​​ ರಾಜ್ಯ ಸರ್ಕಾರಕ್ಕೆ ನೋಟಿಸ್​​ ಜಾರಿಗೊಳಿಸಿದೆ. ಪೊಲೀಸರ ಗೋಲಿಬಾರ್​​ ಕುರಿತಂತೆ ಸೂಕ್ತ ದಾಖಲೆಗಳನ್ನು ನೀಡುವಂತೆ ಆದೇಶಿಸಿದೆ.

ಇದನ್ನೂ ಓದಿ: ಹಲವು ಆರೋಪ ಹೊತ್ತ ನನ್ನ ಕಾಂಗ್ರೆಸ್​​ಗೆ ಹೇಗೆ ಸೇರಿಸಿಕೊಂಡ್ರಿ?: ಸಿದ್ದರಾಮಯ್ಯಗೆ ಆನಂದ್​​ ಸಿಂಗ್ ಪ್ರಶ್ನೆ​​​

ಕಳೆದ ಡಿಸೆಂಬರ್​​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದಂತೆಯೇ ರಾಜ್ಯದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ ಕರ್ಫ್ಯೂ ಜಾರಿ ಮಾಡಲಾಗಿತ್ತು. ಈ ವೇಳೆ ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರು ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಈ ಬೆನ್ನಲ್ಲೇ ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಜಲೀಲ್ ಮತ್ತು ನೌಶಾದ್ ವಿರುದ್ಧವೇ ಎಫ್​ಐಆರ್ ದಾಖಲಿಸುವ ಮೂಲಕ ಪೊಲೀಸರು ವಿವಾದಕ್ಕೆ ಕಾರಣರಾಗಿದ್ದರು. ಡಿ. 19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ತಮ್ಮ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಮಂಗಳೂರಿನ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ, ಪೊಲೀಸರನ್ನು ಕೊಲ್ಲು ಸಂಚು ರೂಪಿಸಿದ್ದ ಗುಂಪಿನ ಮೇಲೆ ಗುಂಡು ಹಾರಿಸಿದಾಗ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಎಫ್​ಐಆರ್​ನಲ್ಲಿ ದಾಖಲಿಸಲಾಗಿತ್ತು.ಈ ಘಟನೆಗೆ ಸಂಬಂಧಿಸಿದಂತೆ ಮೃತ ಅಬ್ದುಲ್ ಜಲೀಲ್ ಮತ್ತು ನೌಶಾದ್ ಸೇರಿದಂತೆ 29 ಜನರ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಪೊಲೀಸ್ ಗುಂಡಿನ ದಾಳಿಗೆ ಬಲಿಯಾದ ಜಲೀಲ್​ನನ್ನು 3ನೇ ಆರೋಪಿಯೆಂದು ಹಾಗೂ ನೌಶಾದ್​ನನ್ನು 8ನೇ ಆರೋಪಿಯೆಂದು ನಮೂದಿಸಲಾಗಿದೆ. ಮೃತ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು, ಅವರ ಸಾವಿಗೆ ನ್ಯಾಯ ದೊರಕಿಸಬೇಕೆಂಬ ಆಗ್ರಹ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮೃತರ ವಿರುದ್ಧವೇ ಎಫ್​ಐಆರ್ ದಾಖಲಿಸಿರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಈ ಮಧ್ಯೆಯೇ ಪೊಲೀಸರ ದೌರ್ಜನ್ಯದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಜೆಡಿಎಸ್ ಮುಖಂಡ ಮುಹಮ್ಮದ್ ಇಕ್ಬಾಲ್ ಹೈಕೋರ್ಟ್​​ ಮೆಟ್ಟಿಲೇರಿದರು.
First published: February 17, 2020, 9:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading