• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಹೆಂಡತಿ ಬೇಡ, ಮಗು ಮಾತ್ರ ನನಗೇ ಬೇಕು ಎಂದ ವ್ಯಕ್ತಿಗೆ ಕೋರ್ಟ್ ಛೀಮಾರಿ: ಮಗುವಿನ ಮೇಲೆ ತಾಯಿಗೆ ಹಕ್ಕು, ತಂದೆಗೆ 50 ಸಾವಿರ ರೂ ದಂಡ

ಹೆಂಡತಿ ಬೇಡ, ಮಗು ಮಾತ್ರ ನನಗೇ ಬೇಕು ಎಂದ ವ್ಯಕ್ತಿಗೆ ಕೋರ್ಟ್ ಛೀಮಾರಿ: ಮಗುವಿನ ಮೇಲೆ ತಾಯಿಗೆ ಹಕ್ಕು, ತಂದೆಗೆ 50 ಸಾವಿರ ರೂ ದಂಡ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ತಂದೆ ಮುಷ್ತಾಕ್ ಪ್ರತೀ ತಿಂಗಳ ಮೊದಲನೆ ಮತ್ತು ಮೂರನೇ ಶನಿವಾರಗಳಂದು 4 ಗಂಟೆಗಳ ಕಾಲ ತನ್ನ ಮಗನನ್ನು ಭೇಟಿ ಮಾಡಬಹುದು ಎಂದು ಅವಕಾಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮೆಟ್ಟಿಲೇರಿದ್ದರು.

  • Share this:

ಮುಸ್ಲಿಂ ಕುಟುಂಬವೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್ (High Court) ಪ್ರಮುಖ ತೀರ್ಪೊಂದನ್ನು (Judgement) ನೀಡಿದೆ. ಗಂಡ ಮತ್ತೊಂದು ಮದುವೆಯಾದಾಗ ಹೆಂಡತಿ ಮರಳಿ ತನ್ನ ತಾಯಿಯ ಮನೆಯಲ್ಲೇ ವಾಸ ಮಾಡುತ್ತಿರುವಾಗ ಸಹಜವಾಗಿಯೇ ಆಕೆಯ ಮಕ್ಕಳ ಸಂಪೂರ್ಣ ಅಧಿಕಾರ ಆಕೆಯ ಬಳಿಯೇ ಇರುತ್ತದೆ ಎಂದು ಹೈಕೋರ್ಟ್ ತಿಳಿಸಿದೆ. ಅದರಲ್ಲೂ ಮಗು ಇನ್ನೂ ಅಪ್ರಾಪ್ತ ವಯಸ್ಸಿನದ್ದಾಗಿದ್ದರೆ (Minor) ಖಂಡಿತವಾಗಿಯೂ ತಾಯಿಗೇ ಅದರ ಮೇಲೆ ಸಂಪೂರ್ಣ ಹಕ್ಕು ಇರುತ್ತದೆ ಎಂದು ನ್ಯಾಯಾಲಯ ಪುನರುಚ್ಛರಿಸಿದೆ. ಹೆಂಡತಿ ಬೇಡ, ಆದರೆ ಆಕೆಯ ಬಳಿ ಇರುವ ತನ್ನ ಮಗ ಮಾತ್ರ ತನಗೆ ಬೇಕು, ತಾನು ಮಗನನ್ನು ಸಾಕಲು ಆರ್ಥಿಕವಾಗಿಯೂ ಶಕ್ತನಾಗಿದ್ದೇನೆ ಎಂದು ವ್ಯಕ್ತಿ ಮಂಡಿಸಿದ ವಾದವನ್ನು ಕೋರ್ಟ್ ನಿರಾಕರಿಸಿದೆ.


ಏನಿದು ಪ್ರಕರಣ?


ಬೆಂಗಳೂರಿನ ನಿವಾಸಿ ಜಿ ಕೆ ಮಹಮ್ಮದ್ ತನ್ನ ಮಗನನ್ನು ನನ್ನ ಸುಪರ್ದಿಗೆ ಒಪ್ಪಿಸಲು ಪತ್ನಿಗೆ ಆದೇಶಿಸಲು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಈ ಅರ್ಜಿ ವಜಾಗೊಳಿಸಿ ಆದೇಶ ನೀಡಿದ್ದಾರೆ. ಜೊತೆಗೆ ಸಂತ್ರಸ್ತ ಮಹಿಳೆ ಅಂದರೆ ಮೊದಲನೇ ಪತ್ನಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿರುವ ನ್ಯಾಯಾಲಯ ಆ ಹಣವನ್ನು ಒಂದು ತಿಂಗಳೊಳಗೆ ನೀಡಬೇಕು ಎಂದು ಆದೇಶಿಸಿದೆ. ಒಂದು ವೇಳೆ ತಪ್ಪಿದಲ್ಲಿ ಮಗನ ಭೇಟಿಗೆ ಕಲ್ಪಿಸಲಾಗಿರುವ ಅವಕಾಶವನ್ನು ಅಮಾನತು ಮಾಡಲಾಗುವುದು ಎಂದು ಹೈಕೋರ್ಟ್‌ ಎಚ್ಚರಿಸಿದೆ. ಪತಿ ಪತ್ನಿ ಪರಸ್ಪರವಾಗಿ 8 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಎಲ್ಲಾ ಪ್ರಕರಣಗಳು ಮುಂದಿನ 9 ತಿಂಗಳೊಳಗೆ ಇತ್ಯರ್ಥವಾಗಬೇಕು. ಆ ಕುರಿತ ವರದಿಯನ್ನು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ತಲುಪಿಸಬೇಕು ಎಂದು ಅಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.


ಮಗು ತಾಯಿಯ ಬಳೀ ಇರುವುದೇ ಸರಿ


ಮಕ್ಕಳು ಯಾರ ಬಳಿ ಬೆಳೆಯಬೇಕು ಎನ್ನುವುದು ಬಹಳ ಮಹತ್ವದ ವಿಚಾರ. ಇದು ಧರ್ಮಕ್ಕೂ ಮೀರಿದ್ದು. ಪತಿ ವಿಚ್ಛೇದನ ನೀಡದ ನಂತರದಿಂದ ಪತ್ನಿ ಸ್ವತಂತ್ರವಾಗಿ ಬದುಕು ನಡೆಸುತ್ತಿದ್ದಾರೆ. ಪತಿ ಬೇರೆ ಮದುವೆಯಾಗಿದ್ದಾರೆ, ಆತನಿಗೆ ಎರಡನೇ ಪತ್ನಿಯಿಂದ ಒಂದು ಹೆಣ್ಣು ಮಗುವಿದೆ. ಅಲ್ಲದೇ ಮೊದಲ ಪತ್ನಿಯ ಮಗುವಿಗೆ 8 ವರ್ಷ ವಯಸ್ಸು. ಈ ವಯಸ್ಸಿನ ಮಕ್ಕಳು ತಾಯಿಯ ಬಳಿ ಬೆಳೆಯುವುದೇ ಸೂಕ್ತ, ಆ ಹಕ್ಕನ್ನು ಆಕೆಯಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.


2009ರಲ್ಲಿ ನಡೆದಿತ್ತು ಮದುವೆ


ಮುಷ್ತಾಕ್ ಬೆಂಗಳೂರಿನ ಸಾಫ್ಟ್​​ವೇರ್ ಸಂಸ್ಥೆಯೊಂದರ ಉದ್ಯೋಗಿ. ದಾವಣಗೆರೆ ಮೂಲದ ಆಯೆಷಾ ಬಾನುರನ್ನು ಅವರು ಏಪ್ರಿಲ್ 30, 2009ರಂದು ವಿವಾಹವಾಗಿದ್ದರು. ಆಗಸ್ಟ್ 1, 2013ರಂದು ಈ ದಂಪತಿಗೆ ಗಂಡುಮಗು ಜನಿಸಿತ್ತು. ನಂತರ ನಾನಾ ಕಾರಣಗಳಿಂದಾಗಿ ಮನಸ್ತಾಪ ಉಂಟಾಗಿ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.


ಇದನ್ನೂ ಓದಿ: ಹೆಂಡತಿಗೆ ಒಸಿಡಿ ಸಮಸ್ಯೆ ಇದೆ, ವಿಚ್ಛೇದನ ನೀಡಿ ಎಂದ ಗಂಡ; ಕೋರ್ಟ್​ ಹೇಳಿದ್ದು ಹೀಗೆ


ಇದಲ್ಲದೇ ಜೀವನಾಂಶ, ಮಾನನಷ್ಟ ಮೊಕದ್ದಮೆ, ವರದಕ್ಷಿಣೆ ಕಿರುಕುಳ, ಮಾನಸಿಕ ಹಿಂಸೆ ಸೇರಿದಂತೆ ಇಬ್ಬರೂ ಒಬ್ಬರ ಮೇಲೊಬ್ಬರು 8 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದೆಲ್ಲದರ ನಡುವೆ ಮುಷ್ತಾಕ್ ಮತ್ತೊಂದು ಮದುವೆಯಾಗಿದ್ದಾರೆ. ಮತ್ತು ಆ ಮದುವೆಯಿಂದ ಒಂದು ಹೆಣ್ಣು ಮಗು ಕೂಡಾ ಇದೆ.


ನನ್ನ ಬಳಿ ಹಣವಿದೆ, ಮಗನನ್ನು ನಾನೇ ಸಾಕ್ತೀನಿ


ಈಗ ತನ್ನ ಮಗ ಮೊದಲ ಪತ್ನಿ ಆಯೆಷಾ ಬಳಿಯೇ ಇದ್ದಾನೆ. ಆದರೆ ತಾನು ಸ್ಥಿತಿವಂತ, ಮಗನಿಗೆ ಅತ್ಯುತ್ತಮ ಜೀವನ ನೀಡಲು ಸಾಧ್ಯವಿದೆ. ಹಾಗಾಗಿ ಆತನನ್ನು ನನ್ನ ಸುಪರ್ದಿಗೆ ನೀಡಬೇಕು ಎಂದು ಮುಷ್ಕಾಕ್ ಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ಆ ಮಗುವನ್ನು ಉತ್ತಮವಾಗಿ ನೋಡಿಕೊಳ್ಳುವ ಬಗ್ಗೆ ಎರಡನೇ ಪತ್ನಿಯಿಂದಲೂ ಒಪ್ಪಿಗೆ ಪತ್ರವನ್ನು ನ್ಯಾಯಾಲಯಕ್ಕೆ ನೀಡಿದ್ದರು.


ಇದನ್ನೂ ಓದಿ: ಮದ್ವೆಯಾದ ಒಂದೂವರೆ ತಿಂಗಳಿಗೆ Triple Talaq ನೀಡಲು ಮುಂದಾದ ಪತಿಗೆ ಥಳಿತ


ಆದರೆ ಈ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ತಂದೆ ಮುಷ್ತಾಕ್ ಪ್ರತೀ ತಿಂಗಳ ಮೊದಲನೆ ಮತ್ತು ಮೂರನೇ ಶನಿವಾರಗಳಂದು 4 ಗಂಟೆಗಳ ಕಾಲ ತನ್ನ ಮಗನನ್ನು ಭೇಟಿ ಮಾಡಬಹುದು ಎಂದು ಅವಕಾಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮೆಟ್ಟಿಲೇರಿದ್ದರು. ಎರಡನೇ ಪತ್ನಿಯಿಂದ ಮಗು ಇದ್ದರೂ, ಮೊದಲ ಪತ್ನಿಯ ಮಗನ ಭೇಟಿಗೆ ಕೌಟುಂಬಿಕ ನ್ಯಾಯಾಲಯ ಅವಕಾಶ ಕಲ್ಪಿಸಿದ್ದರೂ ಅನಗತ್ಯವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಕಾರಣಕ್ಕೆ ಮುಷ್ತಾಕ್‌ಗೆ ದಂಡ ವಿಧಿಸಿ ಕೋರ್ಟ್ ಅರ್ಜಿಯನ್ನು ವಜಾಗೊಳಿಸಲಾಗಿದೆ.

First published: