HOME » NEWS » State » KARNATAKA HIGH COURT ORDERS POLICE DGP TO FIR AGAINST THOSE WHO VIOLET COVID RULES SESR

ಕೋವಿಡ್​ ಮಾರ್ಗಸೂಚಿ ಉಲ್ಲಂಘಿಸಿದರೆ ಎಫ್​ಐಆರ್​ ; ಚಿತ್ರನಟರೂ, ರಾಜಕಾರಣಿಗಳ ಮೇಲೂ ಕ್ರಮಕ್ಕೆ ಹೈ ಕೋರ್ಟ್​ ಸೂಚನೆ

ಕೋವಿಡ್​ ಮಾರ್ಗಸೂಚಿ ಉಲ್ಲಂಘಿಸುತ್ತಿರುವ ರಾಜಕಾರಣಿಗಳು ಮತ್ತು ಧಾರ್ಮಿಕರ ಮೇಲೆ ಯಾಕೆ ಎಫ್​ಐಆರ್​ ಪ್ರಕರಣ ದಾಖಲಿಸುತ್ತಿಲ್ಲ ಎಂದು ಪ್ರಶ್ನಿಸಿದೆ.

news18-kannada
Updated:April 15, 2021, 2:54 PM IST
ಕೋವಿಡ್​ ಮಾರ್ಗಸೂಚಿ ಉಲ್ಲಂಘಿಸಿದರೆ ಎಫ್​ಐಆರ್​ ; ಚಿತ್ರನಟರೂ, ರಾಜಕಾರಣಿಗಳ ಮೇಲೂ ಕ್ರಮಕ್ಕೆ ಹೈ ಕೋರ್ಟ್​ ಸೂಚನೆ
ಕರ್ನಾಟಕ ಹೈಕೋರ್ಟ್
  • Share this:
ಬೆಂಗಳೂರು (ಏ. 15): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಪ್ರಕರಣ ಹೆಚ್ಚಾಗುತ್ತಲೇ ಇದೆ. ಕೋವಿಡ್​ ಎರಡನೇ ಅಲೆ ಗಂಭೀರತೆ ಮರೆತು ಸಾರ್ವಜನಿಕರು ನಿರ್ಲಕ್ಷ್ಯ ತಾಳಿರುವುದು ಕೂಡ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಈ ಬಗ್ಗೆ ರಾತ್ರಿ ಕರ್ಫ್ಯೂ ಸೇರಿದಂತೆ ಜಾಗೃತಿಯಂತಹ ಎಷ್ಟೇ ಕಟ್ಟು ನಿಟ್ಟಿನ ಕ್ರಮ ಕೈಗೊಂಡರು ಸೋಂಕು ಏರುಗತಿಗೆ ತಡೆ ಇಲ್ಲದಂತೆ ಆಗಿದೆ. ಇನ್ನು ನಿನ್ನೆ ಒಂದೇ ದಿನ ದಾಖಲೆ ಮಟ್ಟದ 11 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಈ ಬೆಳವಣಿಗೆಗಳನ್ನು ಗಮನಿಸಿರುವ ಹೈ ಕೋರ್ಟ್​, ಕೊರೋನಾ ನಿಯಮಾವಳಿ ಉಲ್ಲಂಘಿಸಿದರವರ ಮೇಲೆ ಎಫ್​ಐಆರ್​ ದಾಖಲಿಸುವಂತೆ ತಿಳಿಸಿದೆ. ಕೋವಿಡ್​ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರ ಮೇಲೆ ಕ್ರಮಕ್ಕೆ ಮುಂದಾಗುವಂತೆ ಪೊಲೀಸ್​ ಮಹಾ ನಿರ್ದೇಶಕರಿಗೆ ಹೈಕೋರ್ಟ್ ವಿಭಾಗೀಯ ಪೀಠ​  ಸೂಚನೆ ನೀಡಿದೆ.

ಇನ್ನು ಜನರಿಗೆ ಕೊರೋನಾ ಸೋಂಕಿನ ಕುರಿತು ಮಾದರಿಯಾಗಬೇಕಿದ್ದ ರಾಜಕಾರಣಿಗಳು ಹಾಗೂ ಧಾರ್ಮಿಕ ಮುಖಂಡರು ಕೂಡ ನಿಯಮಾವಳಿಗಳ ಉಲ್ಲಂಘನೆ ಮಾಡುತ್ತಿದ್ದಾರೆ. ಉಪಚುನಾವಣೆ ಸೇರಿದಂತೆ ಇನ್ನಿತರ ಸಭೆ ಸಮಾರಂಭಗಳಲ್ಲಿ ರಾಜಕಾರಣಿಗಳು ಕೊರೋನಾ ನಿಯಮಾವಳಿಗಳನ್ನು ಮರೆತಿದ್ದಾರೆ ಎಂದು ಇದೇ ವೇಳೆ ಹೈ ಕೋರ್ಟ್​ ಆಕ್ಷೇಪಣೆ ವ್ಯಕ್ತಪಡಿಸಿದೆ. ಅಲ್ಲದೇ ಕೋವಿಡ್​ ಮಾರ್ಗಸೂಚಿ ಉಲ್ಲಂಘಿಸುತ್ತಿರುವ ರಾಜಕಾರಣಿಗಳು ಮತ್ತು ಧಾರ್ಮಿಕರ ಮೇಲೆ ಯಾಕೆ ಎಫ್​ಐಆರ್​ ಪ್ರಕರಣ ದಾಖಲಿಸುತ್ತಿಲ್ಲ ಎಂದು ಪ್ರಶ್ನಿಸಿದೆ.

ಇನ್ನು ಚಿತ್ರನಟರೂ ಕೂಡ ಇದರ ಹೊರತಾಗಿಲ್ಲ. ತೆರೆ ಮೇಲೆ ಬರುವ ನಟ-ನಟಿಯರ ಜನರ ನಡುವಳಿಕೆಗಳು ಜನರಿಗೆ ಮಾದರಿಯಾಗಬೇಕು. ಅವರಿಂದಲೂ ಮಾರ್ಗಸೂಚಿ ಉಲ್ಲಂಘನೆಯಾಗುತ್ತಿದ್ದರೂ ಪೊಲೀಸರು ಎಫ್​ಐಆರ್​​ ದಾಖಲಿಸುತ್ತಿಲ್ಲ. ಈ ಹಿನ್ನಲೆ ಜನಸಾಮಾನ್ಯರಂತೆ ಚಿತ್ರನಟರೂ, ರಾಜಕಾರಣಿಗಳ ಮೇಲೂಈ ಎಫ್​​ಐಆರ್​ ದಾಖಲಿಸಿ, ದಂಡ ವಿಧಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್​ ಒಕಾ ನೇತೃತ್ವದ ಪೀಠ ಆದೇಶಿಸಿದೆ.

ದೈಹಿಕ ಅಂತರ, ಮಾಸ್ಕ್​ ಧರಿಸದಿದ್ದರೆ ಎಲ್ಲರ ಮೇಲೂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಿ. ಜನರ ಆರೋಗ್ಯ ಕಾಪಾಡುವುದು ಸಂವಿಧಾನ ನೀಡಿದ ಹಕ್ಕಾಗಿದ್ದು ಅದನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕು ಎಂದು ತಿಳಿಸಿದೆ.

ಮುಖ್ಯಮಂತ್ರಿಗಳೊಂದಿಗೆ ನಾಳೆ ಸಭೆ

ರಾಜ್ಯದಲ್ಲಿ ದಿನೇ ದಿನೇ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ ಈ ಕುರಿತು ಮುಂದಿನ ನಡೆ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಲಾಗುವುದು. ಮುಖ್ಯಮಂತ್ರಿಗಳು ಬೆಳಗಾವಿ ಚುನಾವಣಾ ಪ್ರಚಾರದಿಂದ ಮರಳಿದ ಬಳಿಕ ಉನ್ನತ ಮಟ್ಟದ ಮಂತ್ರಿಗಳು, ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಕೆ ಸುಧಾಕರ್​ ತಿಳಿಸಿದ್ದಾರೆ.ಪ್ರಕರಣ ಹೆಚ್ಚಳ ಹಿನ್ನಲೆ ದೆಹಲಿ ಮತ್ತಿತರ ರಾಜ್ಯಗಳಲ್ಲಿ ವೀಕೆಂಡ್ ಕರ್ಫ್ಯೂ ಕ್ರಮ ಸ್ವಾಗತಾರ್ಹ. ಅಲ್ಲಿ ಹೆಚ್ಚಿರೋದರಿಂದ ಈ ಕ್ರಮಗಳು ಅನಿವಾರ್ಯವಾಗಿದೆ. ನಮ್ಮಲ್ಲೂ ಕೂಡ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ‌ ನಾಳೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ರಾಜ್ಯದಿಂದ ಹರಿದ್ವಾರದ ಕುಂಭ ಮೇಳದ ಪವಿತ್ರ ಸ್ನಾನಕ್ಕೆ ಕೆಲ ಭಕ್ತರು ಹೋಗಿದ್ದಾರೆ. ಕುಂಭ ಮೇಳದಲ್ಲಿ ಕೋವಿಡ್ ಕೇಸ್ ಹೆಚ್ಚಿರುವುದು ಕಂಡುಬಂದಿದೆ. ಎರಡು ಸಾವಿರ ಸೋಂಕು ಕಂಡು ಬಂದಿದೆ. ಈ ಹಿನ್ನಲೆ ರಾಜ್ಯದಿಂದ ಹೋಗಿ ಮರಳಿ ಬಂದವರನ್ನು ಪ್ರತ್ಯೇಕವಾಗಿ ಪರೀಕ್ಷಿಸಲಾಗುವುದು. ಅವರಲ್ಲಿ ಸೋಂಕು ಕಂಡು ಬಂದರೆ ಚಿಕಿತ್ಸೆ ಪಡೆಯುವಂತೆ ಮನವಿ ಮಾಡಿದರು.
Published by: Seema R
First published: April 15, 2021, 2:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories