ಕೆಲವು ಸಲ ಯಾವುದೇ ತಪ್ಪು ಮಾಡಿಲ್ಲವೆಂದರೂ ಶಿಕ್ಷೆಗೆ (Punishment) ಗುರಿಯಾಗುವ ಪರಿಸ್ಥಿತಿ ಕೆಲವರಿಗೆ ಬಂದು ಬಿಡುತ್ತದೆ. ಹಾಗೆಯೇ ಇಲ್ಲೊಂದು ನಡೆದ ಘಟನೆಯಲ್ಲಿ ತಪ್ಪಾಗಿ ತಿಳಿದು ಒಬ್ಬ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸ್ (Police) ಇಲಾಖೆಯನ್ನು ಹೈಕೋರ್ಟ್ (High Court) ತರಾಟೆಗೆ ತೆಗೆದುಕೊಂಡು ಚೆನ್ನಾಗಿ ಚಾರ್ಜ್ ಮಾಡಿರುವ ಘಟನೆ ನಡೆದಿದೆ. ಪೊಲೀಸರು, ಯಾವ ವ್ಯಕ್ತಿಯ ಮೇಲೆ ವಾರೆಂಟ್ (Warrant) ಹೊರಡಿಸಿದ್ದೇವೆ ಎಂದು ತಿಳಿಯದೇ ಬೇರೆ ವ್ಯಕ್ತಿಯನ್ನು ಅರೆಸ್ಟ್ (Arrest) ಮಾಡಿಕೊಂಡು ಬಂದು ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ. ಆ ಘಟನೆ ಕುರಿತು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಈ ಬಗ್ಗೆ ಕರ್ನಾಟಕ ಹೈಕೋರ್ಟ್ ನ ಅಭಿಪ್ರಾಯವೇನು?
ಒಬ್ಬ ವ್ಯಕ್ತಿಯ ಮೇಲೆ ಯಾವುದೇ ರೀತಿಯ ಆಪಾದನೆಯ ವಾರಂಟ್ ಹೊರಡಿಸಿದಾಗ, ಅದು ಜಾಮೀನು ಅಥವಾ ಜಾಮೀನು ರಹಿತವಾಗಿದ್ದರೂ ಕೂಡ ಬಂಧಿತ ವ್ಯಕ್ತಿಯು ಅವರೇ ಹೌದೊ ಅಲ್ಲವೋ ಎಂಬುದು ಖಚಿತ ಪಡಿಸಿಕೊಳ್ಳಬೇಕು. ನಂತರ ಆ ವ್ಯಕ್ತಿಯನ್ನು ಬಂಧಿಸಬೇಕು. ಆ ವ್ಯಕ್ತಿಯ ಗುರುತನ್ನು ಖಚಿತ ಪಡಿಸಿಕೊಳ್ಳಲು ಮತ್ತು ಬಂಧಿಸಲು ಉದ್ದೇಶಿಸಿರುವ ವ್ಯಕ್ತಿ ಅದೇ ವ್ಯಕ್ತಿ ಎಂದು ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಸ್ತುತ ಪ್ರಕರಣದಲ್ಲಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ನಿಂಗರಾಜು.ಎನ್ ಅವರ ಗುರುತಿನಲ್ಲಿ ಗೊಂದಲ ಆಗಿರುವ ಆಧಾರದ ಮೇಲೆ ಅಕ್ರಮ ಬಂಧನಕ್ಕಾಗಿ ರೂ.5 ಲಕ್ಷಗಳ ಪರಿಹಾರವನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಏನಿದು ಪ್ರಕರಣ?
ಈ ಗೊಂದಲಕ್ಕೆ ಕಾರಣ ಏನೆಂದರೆ “ಅರ್ಜಿದಾರನನ್ನು ತಪ್ಪಾಗಿ ಬಂಧಿಸಲು ಒಂದೇ ಕಾರಣವೆಂದರೆ ಅವನ ತಂದೆಯ ಹೆಸರು ವಾರಂಟ್ನಲ್ಲಿ ಹೆಸರಿಸಲಾದ ವ್ಯಕ್ತಿಯ ಹೆಸರನ್ನು ಹೋಲುತ್ತದೆ. ಒಂದೇ ತಂದೆಯ ಮಕ್ಕಳಾದ ಸಹೋದರ ಅಥವಾ ಮತ್ತೊಬ್ಬ ಅಥವಾ ಸಹೋದರಿಗಾಗಿ ಬಂಧನ ವಾರಂಟ್ ಹೊರಡಿಸಿದ್ದರೆ ಅದೇ ವ್ಯಕ್ತಿಯನ್ನು ಬಂಧಿಸಬೇಕೆ ಹೊರತು ಮತ್ತೊಬ್ಬ ವ್ಯಕ್ತಿಯನ್ನು ಅಲ್ಲ ಎಂಬ ವಿಚಾರವನ್ನು ವಿವರಿಸುತ್ತಾ, ತಂದೆಯ ಹೆಸರು ಒಂದೇ ರೀತಿಯ ಅಥವಾ ಒಂದೇ ಆಗಿರುವುದರಿಂದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ತಂದೆ ಹೆಸರು ಒಂದೇ ಆಗಿರುವುದರಿಂದ ಬೇರೆ ವ್ಯಕ್ತಿಯನ್ನು ಬಂಧಿಸುವುದು ನಿಜಕ್ಕೂ ಪೊಲೀಸ್ ಇಲಾಖೆಯ ಮೌಢ್ಯತೆಯನ್ನು ತೋರಿಸುತ್ತಿದೆ.
ಇದನ್ನೂ ಓದಿ: Mother: ಹೆತ್ತಮ್ಮನಿಗೆ ತುತ್ತು ಅನ್ನ ಹಾಕದ ಪಾಪಿ, ದೇವಸ್ಥಾನದಲ್ಲಿ ಬಿಟ್ಟು ಹೋದ! ಮಗನ ದಾರಿ ಕಾಯುತ್ತ ಕುಳಿತ ವೃದ್ಧ ತಾಯಿ
ಇಲ್ಲಿ ಮುಖ್ಯವಾದ ವಿಚಾರ ಎಂದರೆ “ಬಂಧಿಸಬೇಕಾದ ವ್ಯಕ್ತಿಯ ಗುರುತು ಮತ್ತು ತಂದೆಯ ಹೆಸರು ಎಲ್ಲವನ್ನು ಸೂಕ್ತವಾಗಿ ಪರಿಶೀಲಿಸಬೇಕು, ನಂತರ ದೃಡೀಕರಣವಾದ ಗುರುತಿನ ಚೀಟಿ ಪಡೆದು ವ್ಯಕ್ತಿಯನ್ನು ಬಂಧಿಸಬೇಕಾಗಿರುತ್ತದೆ” ಎಂದು ನ್ಯಾಯ ಪೀಠ ಅಭಿಪ್ರಾಯ ಪಟ್ಟಿದೆ.
ಅಮಾಯಕನನ್ನು ಬಂಧಿಸಿದ ಪೊಲೀಸರು
"ಭಾರತದ ಸಂವಿಧಾನದ ವಿಧಿ 21 ರ ಅಡಿಯಲ್ಲಿ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕು ಅತ್ಯಂತ ಮುಖ್ಯವಾದ ವಿಧಿ ಆಗಿದೆ. ಅಧಿಕೃತವಲ್ಲದ ವ್ಯಕ್ತಿಯನ್ನು ಬಂಧಿಸುವ ಮೂಲಕ ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ." ಎಂದು ನ್ಯಾಯ ಪೀಠ ಹೇಳಿದೆ. ದಾಖಲೆಗಳನ್ನು ಪರಿಶೀಲಿಸಿದಾಗ ಬಂಧಿತನು ವಾರೆಂಟ್ನಲ್ಲಿ ಹೆಸರಿಸಲಾದ ವ್ಯಕ್ತಿ ನಾನು ಅಲ್ಲ ಎಂದು ವಾರೆಂಟ್ ಕುರಿತು ವಾದ ಮಂಡಿಸಿದ್ದರೂ, ಅವನ ಗುರುತನ್ನು ಮರು ಪರಿಶೀಲಿಸಲಾಗಿಲ್ಲ ಮತ್ತು ಅದರ ಪರಿಣಾಮ ಒಬ್ಬ ಅಮಾಯಕನನ್ನು ಬಂಧಿಸಿಲಾಗಿದೆ.
ಇದನ್ನೂ ಓದಿ: Vehicle Parking: ಎಲ್ಲೆಂದರಲ್ಲಿ ವಾಹನ ನಿಲ್ಲಿಸೋ ಮುನ್ನ ಹುಷಾರ್! ಟ್ರಾಫಿಕ್ ಪೊಲೀಸರು ಕೊಡ್ತಿದ್ದಾರೆ ಹೊಸ ಶಾಕ್!
“ಬಂಧಿತನು ವಾರಂಟ್ನಲ್ಲಿ ಹೆಸರಿಸಲಾದ ವ್ಯಕ್ತಿ ನಾನು ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ, ಬಂಧಿಸಲು ಹೋದ ಅಧಿಕಾರಿ ಅದನ್ನು ಮರು ಪರಿಶೀಲಿಸಲಿಲ್ಲ. ಅದರ ಬದಲಿಗೆ ಆ ವ್ಯಕ್ತಿಯನ್ನೇ ಬಂಧಿಸಿ ಕರೆದುಕೊಂಡು ಬಂದಿದ್ದಾರೆ. ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಇದರಿಂದ ಕೇವಲ ಅವರ ಸ್ವಾತಂತ್ರ್ಯಕ್ಕೆ ಮಾತ್ರ ಹಾನಿಯಾಗಿಲ್ಲ ಬದಲಾಗಿ ವರ ಮಾನಕ್ಕೂ ಹಾನಿ ಆಗಿದೆ. ಹಾಗಾಗಿ, ಇದು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಬರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ ಹಾಗೆ ಆಗಿದೆ. ಇದರಿಂದ ಬಂಧನಕ್ಕೊಳಗಾದವರ ಹೆಸರು ಸಹ ಹಾಳಾಗಿದೆ” ಎಂದು ನ್ಯಾಯ ಪೀಠ ಹೇಳಿದೆ.
ಪರಿಹಾರ ಏನು?
ಇದರ ಪರಿಣಾಮವಾಗಿ "ಅಮಾಯಕ ಬಂಧಿತ ವ್ಯಕ್ತಿಯ ಸ್ವಾತಂತ್ರ್ಯ ಹಾನಿ ಮತ್ತು ಅಪಖ್ಯಾತಿಗೆ ಒಳಗಾದ ನಷ್ಟಕ್ಕೆ ಅಮಾಯಕ ಬಂಧಿತನಿಗೆ ರಾಜ್ಯವು ಪರಿಹಾರ ನೀಡುವ ಹೊಣೆಗಾರಿಕೆಯನ್ನು ಹೊಂದಿದೆ. ಅದರ ಪರಿಹಾರವಾಗಿ ರೂ. 5 ಲಕ್ಷಗಳನ್ನು ಇಂದಿನಿಂದ ಎಂಟು ವಾರಗಳ ಸಮಯದೊಳಗೆ ಅರ್ಜಿದಾರನನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳಿಂದ ಅದನ್ನು ವಸೂಲಿ ಮಾಡಲು ರಾಜ್ಯ ಸರ್ಕಾರಕ್ಕೆ ಎಲ್ಲ ಸ್ವಾತಂತ್ರ್ಯವನ್ನು ನೀಡಲಾಗಿದೆ” ಎಂದು ನ್ಯಾಯ ಪೀಠ ಆದೇಶಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ