ಗೋಹತ್ಯೆ ನಿಷೇಧ ಕಾಯ್ದೆ: ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದ ಹೈಕೋರ್ಟ್​

ಈ ಹಿಂದೆ ವಿರೋಧ ಪಕ್ಷದ ವಿರೋಧದ ನಡುವೆಯು ಗೋಹತ್ಯೆ ನಿಷೇಧ ಕಾಯ್ದೆಯು ವಿಧಾನಸಭೆಯಲ್ಲಿ ಅಂಗೀಕಾರವಾಗಿತ್ತು. ಆದರೆ ವಿಧಾನಪರಿಷತ್‌ನಲ್ಲಿ ಮಂಡನೆ ಆಗಿರಲಿಲ್ಲ. ಇದೇ ವೇಳೆ ಸಭಾಪತಿ ಬದಲಾವಣೆ ಗೊಂದಲಗಳು ಉಂಟಾಗಿದ್ದವು.

Karnataka HC

Karnataka HC

 • Share this:
  ಬೆಂಗಳೂರು: ಜಾನುವಾರು ವಧೆ ತಡೆಗಟ್ಟುವಿಕೆ ಮತ್ತು ಗೋಹತ್ಯೆ ನಿಷೇಧ ಕಾನೂನಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಹೊರಡಿಸಿದ್ದ ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಪಿಳ್ಳಣ್ಣ ಗಾರ್ಡನ್ ನಿವಾಸಿ ಮೊಹಮ್ಮದ್ ಆರಿಫ್ ಜಮೀಲ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಈ ಬಗ್ಗೆ ಸ್ಪಷ್ಟನೆ ಕೇಳಿ ಕರ್ನಾಟಕ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಸಚಿನ್ ಶಂಕರ್ ಮಗುದಂ ಅವರನ್ನು ಒಳಗೊಂಡ ಪೀಠ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.

  ಗೋಹತ್ಯೆ ನಿಷೇಧದಿಂದ ಭಾರತದ ಸಂವಿಧಾನದ 19 (ಜಿ) ವಿಧಿ ಖಾತರಿಪಡಿಸಿದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಹಾಗೆಯೇ ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿ ಜೀವನೋಪಾಯದ ಹಕ್ಕನ್ನು ಉಲ್ಲಂಘಿಸಿವೆ. ಹಾಗೆಯೇ ಈ ಸುಗ್ರೀವಾಜ್ಞೆಯು ವ್ಯಾಪಾರ ಮತ್ತು ವ್ಯವಹಾರದ ಹಕ್ಕನ್ನು ಉಲ್ಲಂಘಿಸಿವೆ ಎಂದು ಅರ್ಜಿದಾರ ಮೊಹಮ್ಮದ್ ಆರಿಫ್ ತಮ್ಮ ಹೈಕೋರ್ಟ್​ಗೆ ತಿಳಿಸಿದ್ದಾರೆ.

  ದೇಶದಲ್ಲಿ ಪ್ರಾಣಿಗಳನ್ನು ವಧಿಸುವುದನ್ನು ನಿಷೇಧಿಸುವುದರಿಂದ ಮಾಂಸ ಮಾರಾಟಗಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹಾಗೆಯೇ ಈ ಕಾನೂನಿನಿಂದ ಅವರ ವ್ಯಾಪಾರದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದರೊಂದಿಗೆ ನಾಗರಿಕರು ತಮ್ಮ ಆಹಾರದ ಆಯ್ಕೆಯನ್ನು ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಈ ಕಾನೂನನನ್ನು ಪುನರ್ಪರಿಶೀಲಿಸಬೇಕೆಂದು ಅರ್ಜಿದಾರರು ವಾದಿಸಿದರು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿರುವ ಹೈಕೋರ್ಟ್  ಫೆಬ್ರವರಿ 17 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ.

  ಈ ಹಿಂದೆ ವಿರೋಧ ಪಕ್ಷದ ವಿರೋಧದ ನಡುವೆಯು ಗೋಹತ್ಯೆ ನಿಷೇಧ ಕಾಯ್ದೆಯು ವಿಧಾನಸಭೆಯಲ್ಲಿ ಅಂಗೀಕಾರವಾಗಿತ್ತು. ಆದರೆ ವಿಧಾನಪರಿಷತ್‌ನಲ್ಲಿ ಮಂಡನೆ ಆಗಿರಲಿಲ್ಲ. ಇದೇ ವೇಳೆ ಸಭಾಪತಿ ಬದಲಾವಣೆ ಗೊಂದಲಗಳು ಉಂಟಾಗಿದ್ದವು. ಇದೇ ಕಾರಣದಿಂದ ಸುಗ್ರೀವಾಜ್ಞೆಯ ಮೂಲಕ ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿತು.
  Published by:zahir
  First published: