news18-kannada Updated:December 28, 2020, 6:30 AM IST
ಮತದಾನ ಮಾಡಿದ ವೃದ್ಧ ದಂಪತಿ
ಬೆಂಗಳೂರು: ಕೆಲವೊಂದು ಕಡೆ ಗದ್ದಲ, ಮತದಾನ ಬಹಿಷ್ಕಾರಗಳ ಮಧ್ಯೆ ರಾಜ್ಯದ ಗ್ರಾಮ ಪಂಚಾಯತಿ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಡಿ. 22ರಂದು ಮೊದಲ ಹಂತದ ಮತದಾನವಾದರೆ ನಿನ್ನೆ ಭಾನುವಾರ 109 ತಾಲೂಕುಗಳಲ್ಲಿ ಎರಡನೇ ಹಂತದ ಮತದಾನ ನಡೆದಿದೆ. ನಿನ್ನೆ ಶೇ. 80.71ರಷ್ಟು ಮತದಾನ ಆಗಿರುವ ಮಾಹಿತಿ ಇದೆ. ಎರಡೂ ಹಂತಗಳಲ್ಲೂ ಶೇ. 80ಕ್ಕಿಂತ ಹೆಚ್ಚು ಮತದಾನವಾದಂತಾಗಿದೆ.
ನಿನ್ನೆ 2ನೇ ಹಂತದಲ್ಲಿ 39,378 ಸದಸ್ಯರ ಆಯ್ಕೆಗೆ 2,709 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಿತು. ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶೇ. 90ರ ಆಸುಪಾಸಿನಲ್ಲಿ ಮತದಾನವಾಗಿದೆ.
ಡಿ. 22ರಂದು ನಡೆದ ಮೊದಲ ಹಂತದಲ್ಲಿ 117 ತಾಲೂಕುಗಳಲ್ಲಿನ 3,019 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಿತು. ರಾಜ್ಯದಲ್ಲಿ ಒಟ್ಟು 6,004 ಗ್ರಾಮ ಪಂಚಾಯತಿಗಳಿದ್ದು, 92,121 ಸದಸ್ಯರ ಆಯ್ಕೆಗೆ ಅವಕಾಶ ಇದೆ. ಈ ಪೈಕಿ 5,728 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದೆ. ಹಲವು ಗ್ರಾಮ ಪಂಚಾಯತಿಗಳಲ್ಲಿ ಸದಸ್ಯರ ಅವಿರೋಧ ಆಯ್ಕೆ ಕೂಡ ಆಗಿದೆ. ಐದು ಸಾವಿರಕ್ಕೂ ಹೆಚ್ಚು ಸದಸ್ಯರು ಈ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ರಿಲ್ಯಾಕ್ಸ್ ಮೂಡಲ್ಲಿ ಸಿದ್ಧು - ಸ್ನೇಹಿತನ ಮನೆಯಲ್ಲಿ ನಾಟಿ ಕೋಳಿ ಊಟ - ಹನುಮ ಜಯಂತಿ ನೆಪ ಹೇಳಿದವನಿಗೆ ತರಾಟೆ
ಗ್ರಾಮ ಪಂಚಾಯತ್ ಚುನಾವಣೆ ಪಕ್ಷಾತೀತವಾಗಿ, ಯಾವುದೇ ಮಾನ್ಯ ಪಕ್ಷಗಳ ಚಿಹ್ನೆಗಳಿಲ್ಲದೇ ನಡೆಯುತ್ತಿದೆಯಾದರೂ ವಿವಿಧ ಪಕ್ಷಗಳು ತಮಗೆ ಬೇಕಾದ ಅಭ್ಯರ್ಥಿಗಳಿಗೆ ಬೆಂಬಲ ನೀಡಿವೆ. ಹೀಗಾಗಿ, ಪರೋಕ್ಷವಾಗಿ ಇದು ರಾಜಕೀಯ ಸಮರವೇ ಆಗಿದೆ. ಬಹಳ ಪ್ರತಿಷ್ಠೆಯಾಗಿ ನಡೆಯುತ್ತಿರುವ ಚುನಾವಣಾ ಜಿದ್ದಾಜಿದ್ದಿ ಮುಂದಿನ ರಾಜಕೀಯ ದಿಕ್ಸೂಚಿ ಎಂದೂ ಬಣ್ಣಿಸಲಾಗುತ್ತಿದೆ. ಡಿ. 30ರಂದು ಪ್ರಕಟವಾಗುವ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.
Published by:
Vijayasarthy SN
First published:
December 28, 2020, 6:30 AM IST