news18-kannada Updated:February 22, 2021, 11:00 AM IST
ಕಾವೇರಿ ನದಿ ನಕ್ಷೆ
ಬೆಂಗಳೂರು(ಫೆ. 22): ಕರ್ನಾಟಕದಿಂದ ಹೊರಹೋಗುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ತಮಿಳುನಾಡು ಸರ್ಕಾರ ರೂಪಿಸುತ್ತಿರುವ ನದಿ ಜೋಡಣೆ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಆತಂಕಪಟ್ಟಿದೆ. ಹೆಚ್ಚುವರಿ ನೀರನ್ನು ಏಪಕ್ಷೀಯವಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿರುವ ತಮಿಳುನಾಡಿನ ಕ್ರಮವನ್ನು ಆಕ್ಷೇಪಿಸಿ ಪರಿಣಾಮಕಾರಿ ಕಾನೂನು ಸಮರ ನಡೆಸಲು ನಿರ್ಧರಿಸಲಾಗಿದೆ. ಈ ಸಂಬಂಧ ಶೀಘ್ರದಲ್ಲೇ ಸಿಎಂ ಯಡಿಯೂರಪ್ಪ ಅವರು ಸರ್ವಪಕ್ಷ ಸಭೆ ನಡೆಸಿ ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ನ್ಯಾಯಾಲಯದ ತೀರ್ಮಾನದಂತೆ ಈಗಾಗಲೇ ತಮಿಳುನಾಡಿಗೆ 177.25 ಟಿಎಂಸಿ ಅಡಿ ನೀರನ್ನ ರಾಜ್ಯದಿಂದ ಬಿಡಲಾಗಿದೆ. ಈಗ ಹೆಚ್ಚುವರಿ 45 ಟಿಎಂಸಿ ನೀರನ್ನೂ ತಮಿಳುನಾಡು ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಕರ್ನಾಟಕದಲ್ಲೂ ನೀರಿನ ಅಭಾವ ಇದೆ. ಹೀಗಿರುವ ತಮಿಳುನಾಡು ಏಕಪಕ್ಷೀಯವಾಗಿ ಹೆಚ್ಚುವರಿ ನೀರು ಬಳಕೆ ಮಾಡಿಕೊಂಡರೆ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ಈ ಹೆಚ್ಚುವರಿ ನೀರಿನಲ್ಲಿ ಕರ್ನಾಟಕಕ್ಕೂ ಹಕ್ಕಿದೆ. ಹೀಗಾಗಿ, ಕಾನೂನು ಮೊರೆ ಹೋಗುವ ಸಾಧ್ಯತೆ ಇದೆ.
ಕಾವೇರಿ ನದಿಯ ಹೆಚ್ಚುವರಿ ನೀರನ್ನ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ತಮಿಳುನಾಡು ಸರ್ಕಾರ ವೈಗೈ, ವೆಲ್ಲಾರು ಮತ್ತು ಗುಂಡಾರು ಉಪನದಿಗಳಿಗೆ ಕಾವೇರಿ ನದಿಯನ್ನ ಜೋಡಿಸುವ ಯೋಜನೆಯನ್ನ ತಮಿಳುನಾಡು ಕೈಗೆತ್ತಿಕೊಂಡಿದೆ. 14,400 ಕೋಟಿ ರೂ ವೆಚ್ಚದ, 262 ಕಿಮೀ ಉದ್ದದ ಕಾಲುವೆ ಇರುವ ಈ ಯೋಜನೆಯ ಮೊದಲ ಹಂತದ ಕಾಮಗಾರಿಗೆ ನಿನ್ನೆ ತಮಿಳುನಾಡು ಸರ್ಕಾರದಿಂದ ಭೂಮಿಪೂಜೆಯೂ ಆಗಿದೆ.
ಇದನ್ನೂ ಓದಿ: ಗುಂಡ್ಲುಪೇಟೆಯಲ್ಲಿ ಕಾಮಗಾರಿ ಮಾಡದೆ ಶಾಸಕರ ಅನುದಾನ ದುರ್ಬಳಕೆ: ರೈತಸಂಘ ಗಂಭೀರ ಆರೋಪ
ಇನ್ನು, ರಾಮನಗರ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ರೂಪಿಸಿರುವ ಮೇಕೆದಾಟು ಯೋಜನೆ ಕೂಡ ಕಾವೇರಿಯ ಹೆಚ್ಚುವರಿ ನೀರನ್ನ ಬಳಕೆ ಮಾಡಿಕೊಳ್ಳುವ ಉದ್ದೇಶ ಹೊಂದಿದೆ. ಇದಕ್ಕೆ ತಮಿಳುನಾಡು ಸರ್ಕಾರ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಅಲ್ಲಿ ನದಿ ಜೋಡಣೆ ಯೋಜನೆ ಕಾಮಗಾರಿಗೆ ಚಾಲನೆ ಸಿಕ್ಕಿದೆ.
ಇದನ್ನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ದೆಹಲಿಯಲ್ಲಿ ನಿನ್ನೆ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ತಂಡದೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದರು. ತಮಿಳುನಾಡಿನ ನದಿ ಜೋಡಣೆಗೆ ಒಪ್ಪಿಗೆ ನೀಡುವುದೇ ಆದರೆ ರಾಜ್ಯದ ಯೋಜನೆಗಳಿಗೂ ಅನುಮತಿ ಕೊಡುವಂತೆ ಒತ್ತಾಯಿಸಿ ಹೋರಾಟ ನಡೆಸಲು ನಿನ್ನೆಯ ಸಭೆಯಲ್ಲಿ ತೀರ್ಮಾನಿಸಲಾಯಿತು. ಈಗ ಸರ್ವಪಕ್ಷ ನಾಯಕರ ಸಭೆಯಲ್ಲಿ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲು ಸರ್ಕಾರ ಯೋಜಿಸಿದೆ.
ಇದನ್ನೂ ಓದಿ: ಗುರು ರಾಘವೇಂದ್ರ ಬ್ಯಾಂಕ್ ಮೋಸ ಮಾಡಿದ್ದು ಹಣ ಮಾತ್ರ ಅಲ್ಲ; ಅತ್ಯಮೂಲ್ಯವಾದ ಆರೋಗ್ಯವನ್ನು ಕಳೆದುಕೊಂಡವರ ಗೋಳಿನ ಕತೆ ಇದು !
ಇದೇ ವೇಳೆ, ತಮಿಳುನಾಡು ಸರ್ಕಾರದ ನದಿ ಜೋಡಣೆ ಯೋಜನೆಯನ್ನ ತಡೆಯಲು ಕ್ರಮ ಕೈಗೊಳ್ಳದಿದ್ದರೆ ರಾಜ್ಯದ ಹಿತಾಸಕ್ತಿಗೆ ಭಾರೀ ಹಿನ್ನಡೆಯಾಗುತ್ತದೆ. ಸರಕಾರ ಮೌನ ವಹಿಸಿ ಕೂತರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸಂಸದ ಹೆಚ್.ಡಿ. ದೇವೇಗೌಡ ಎಚ್ಚರಿಕೆ ನೀಡಿದ್ದಾರೆ.
ವರದಿ: ಕೃಷ್ಣ ಜಿ.ವಿ.
Published by:
Vijayasarthy SN
First published:
February 22, 2021, 11:00 AM IST