ಪ್ರಧಾನಿ ಮೋದಿ ಮುಂದೆ ಆಮ್ಲಜನಕ, ರೆಮ್​ಡೆಸಿವಿರ್​ಗೆ ಬೇಡಿಕೆ ಇಟ್ಟ ರಾಜ್ಯ ಸರ್ಕಾರ

ಬಿಎಸ್ ಯಡಿಯೂರಪ್ಪ ಸೇರಿದಂತೆ ಕೋವಿಡ್ ಬಾಧಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಪ್ರಧಾನಿ ಮೋದಿ ಸಂವಾದ ನಡೆಸಿದರು. ಈ ವೇಳೆ, ಆಮ್ಲಜನಕ ಇತ್ಯಾದಿ ಅಗತ್ಯ ವಸ್ತುಗಳ ಸರಬರಾಜಿಗೆ ಕರ್ನಾಟಕ ಬೇಡಿಕೆ ಮುಂದಿಟ್ಟಿತು ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ಧಾರೆ.

ಬಿಎಸ್ ಯಡಿಯೂರಪ್ಪ

ಬಿಎಸ್ ಯಡಿಯೂರಪ್ಪ

  • Share this:
ಬೆಂಗಳೂರು: ರಾಜ್ಯದಿಂದ ಪ್ರಧಾನಿ ಮೋದಿ ಅವರಿಗೆ ಆಮ್ಲಜನಕ ಪೂರೈಕೆ ಮತ್ತು ರೆಮ್ಡೆಸಿವಿರ್ ಔಷಧ ಸರಬರಾಜು ಬೇಡಿಕೆ ಇರಿಸಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಅದೇ ರೀತಿ ನಮ್ಮ ಹೋಂ ಐಸೋಲೇಷನ್ ವ್ಯವಸ್ಥೆ ಗಟ್ಟಿಗೊಳಿಸಿಕೊಳ್ಳುವಂತೆ ರಾಜ್ಯಕ್ಕೆ ಪ್ರಧಾನಿಗಳು ಸಲಹೆ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಪಿಎಂ ಮೋದಿ ಜೊತೆಗಿನ ವೀಡಿಯೋ ಸಂವಾದ ಮುಕ್ತಾಯಗೊಂಡ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 10 ರಾಜ್ಯಗಳ ಸಿಎಂ ಜೊತೆ ಕೋವಿಡ್ ಸ್ಥಿತಿಗತಿ, ನಿಯಂತ್ರಣ ಕುರಿತು ಪ್ರಧಾನಿ ಚರ್ಚೆ ನಡೆಸಿ ಸಮಾಲೋಚನೆ ಮಾಡಿದ್ದಾರೆ. ಮೊದಲ ಅಲೆಯಲ್ಲಿದ್ದ ವೈರಾಣು ಸ್ವಭಾವಕ್ಕೂ ಈಗಿರುವ ರೂಪಾಂತರಿ ವೈರಾಣು ಬದಲಾಗಿದೆ. ಹಾಗಾಗಿ ಮೂರುಪಟ್ಟು ವೇಗದ ಹರಡುವಿಕೆ ಕಂಡುಬಂದಿದೆ. ವಯೋಮಿತಿ ಕೂಡ ಬದಲಾಗಿದೆ ಎಂಬ ಮಾಹಿತಿ ತಲುಪಿಸಲಾಯಿತು ಡಾ. ಕೆ ಸುಧಾಕರ್ ತಿಳಿಸಿದರು.

ಕಳೆದ ಬಾರಿ ಹಿರಿಯ ನಾಗರಿಕರಿಗೆ ಬರುತ್ತಿತ್ತು. ಆದರೆ ಈಗ ಮಧ್ಯ ವಯಸ್ಕರಿಗೂ ತಗುಲುತ್ತಿದೆ. ಇದರಿಂದಾಗ ಬಹಳ ಆತಂಕ ಜನ ಸಾಮಾನ್ಯರಲ್ಲಿ ಮೂಡಿದೆ. ಆ ಕಾರಣಕ್ಕೆ ಈ ವೈರಾಣು ವಿರುದ್ದ ಗೆಲ್ಲಲು ಹೋಂ ಐಸೊಲೇಷನ್ ಗಟ್ಟಿಯಾಗಬೇಕು. ಶೆ. 90 ರಷ್ಟು ಜನಕ್ಕೆ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಅಗತ್ಯವಿಲ್ಲ, ಎಲ್ಲರೂ ಆಸ್ಪತ್ರೆಗೆ ದೌಡಾಯಿಸುತ್ತಿರುವ ಕಾರಣ ವೈದ್ಯಕೀಯ ಸಿಬ್ಬಂದಿಗೆ ಕಷ್ಟವಾಗಿದೆ. ಆಸ್ಪತ್ರೆಗಳ ಮೇಲೆ ಹೊರೆಯಾಗುತ್ತಿದೆ. ಹಾಗಾಗಿ ನಿಮ್ಮ ಹೋಂ ಐಸೊಲೇಷನ್ ವ್ಯವಸ್ಥೆ ಗಟ್ಟಿಮಾಡಿಕೊಳ್ಳಿ. ಟೆಲಿಕಾಲಿಂಗ್ ಮೂಲಕ ಉಪಚಾರ ನೀಡಿ, ‌ಚಿಕಿತ್ಸೆ ನೀಡಿ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ ಎಂದರು.

ಇದನ್ನೂ ಓದಿ: ಬೆಂಗಳೂರಿನ 25 ವರ್ಷದ ವಿಭಾ ಹೆಸರು ಫೋರ್ಬ್ಸ್ ಪಟ್ಟಿಯಲ್ಲಿ; ಒಂದೇ ವರ್ಷದಲ್ಲಿ ಲಾಭದಾಯಕ ಉದ್ಯಮ ರೂಪಿಸಿದ ಹುಡುಗಿ

ರಾಜ್ಯದ ಪರವಾಗಿ ಮುಖ್ಯಮಂತ್ರಿಗಳು ಎರಡು ಪ್ರಮುಖ ಬೇಡಿಕೆ ಇರಿಸಿದ್ದಾರೆ. ಈ ತಿಂಗಳ ಕೊನೆವರೆಗೂ ಸಾವಿರ ಟನ್ ಆಮ್ಲಜನಕ ಪೂರೈಕೆ ಮಾಡಬೇಕು. ಮೇ 1 ರಿಂದ 1500 ಮೆಟ್ರಿಕ್ ಟನ್ ಸರಬರಾಜು ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಎರಡನೆಯದಾಗಿ Remdesivir ನಮ್ಮ‌ರಾಜ್ಯದಲ್ಲೇ ಉತ್ಪಾದನೆ ಆದರೂ ನಮಗೆ ಇರುವ ಅಲಾಟ್​ಮೆಂಟ್ ಸಾಲುತ್ತಿಲ್ಲ‌. ಹಾಗಾಗಿ ತಕ್ಷಣ 2 ಲಕ್ಷ Remdesivir ವಯಲ್ ಕಳಿಸಿಕೊಡಲು ಬೇಡಿಕೆ ಇರಿಸಿದ್ದಾರೆ ಎಂದು ಸುಧಾಕರ್ ಮಾಹಿತಿ ನೀಡಿದರು.

ನಮ್ಮ ಬೇಡಿಕೆ ಮತ್ತು ನಾವು ಕೈಗೊಂಡಿರುವ ಕ್ರಮಗಳ ಬಗ್ಗೆ ಸಿಎಂ ಯಡಿಯೂರಪ್ಪ ಸಮಗ್ರವಾಗಿ ಪ್ರಧಾನಿ ಮೋದಿಗೆ ಹೇಳಿದ್ದಾರೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ, ಕಠಿಣ ಮಾರ್ಗಸೂಚಿ ಎಲ್ಲ ವಿವರ ನೀಡಿದ್ದು ನಾಲ್ಕೈದು ದಿನದಲ್ಲಿ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.

ಎರಡನೇ ಅಲೆ ಯಾರನ್ನೂ ಬಿಟ್ಟಿಲ್ಲ ಶೇ. 10-30 ರಷ್ಟು ಹಬ್ಬುತ್ತಿದೆ. ಆದರೂ ಜನರು ಆತಂಕ ಬಿಡಬೇಕು. ಸೋಂಕು ಕಾಣಿಸಿದಲ್ಲಿ ಮನೆಯಲ್ಲಿ ನೀವು ಪ್ರತ್ಯೇಕಗೊಳ್ಳಿ, ಆಕ್ಸಿಮೀಟರ್ ಇರಿಸಿಕೊಂಡು ಆಮ್ಲಜನಕ ಪರಿಶೀಲನೆ ಮಾಡಿಕೊಳ್ಳಬೇಕು. ಆಮ್ಲಜನಕದ ಪ್ರಮಾಣ‌ ಶೇ.90 ಕ್ಕಿಂತ ಕೆಳಗೆ ಇಳಿದಾಗ ಮಾತ್ರ ಆತಂಕಕ್ಕೊಳ್ಳಬೇಕು. ಇಲ್ಲದೇ ಇದ್ದಲ್ಲಿ ಆತಂಕ ಬೇಡ. ಮನೆಯಲ್ಲಿ ಒಳ್ಳೆಯ ಆಹಾರ, ತರಕಾರಿ, ಹಣ್ಣು‌ ಸೇವಿಸಿ ಪ್ರಾಣಾಯಾಮ ಮಾಡಿಕೊಳ್ಳಿ, ಆತ್ಮವಿಶ್ವಾಸದಲ್ಲಿ ಇರಿ. ಒಂದು ವೇಳೆ ಆಮ್ಲಜನಕದ ಪ್ರಮಾಣ ಶೇ‌ 90 ಕ್ಕಿಂತ ಕಡಿಮೆ ಆದವರು ನಮ್ಮ ಸಹಾಯವಾಣಿಗೆ ಕರೆ ಮಾಡಿದರೆ ಅವರು ನಿಮ್ಮನ್ನು ಎಲ್ಲಿ ದಾಖಲಿಸಬೇಕು ಎಂದು ನಿರ್ಧರಿಸುತ್ತಾರೆ ಎಂದರು.

ಇದನ್ನೂ ಓದಿ: Covid Vaccine: ಕೇಂದ್ರದಿಂದ 1 ಕೋಟಿ ಲಸಿಕೆ ಖರೀದಿಗೆ ಸಿಎಂ ಬಿಎಸ್​ವೈ ಅನುಮೋದನೆ

ನಾವೆಲ್ಲ ನಮ್ಮ ನಮ್ಮ ರಕ್ಷಣೆ ನಾವು ಮಾಡಿಕೊಳ್ಳಬೇಕು. ಮಾರ್ಗಸೂಚಿ ಪಾಲಿಸಿದಲ್ಲಿ ಆದಷ್ಟು ಬೇಗ ನಾವು ಎರಡನೇ ಅಲೆಯ ತೀವ್ರತೆ ಕಡಿಮೆ ಮಾಡಬಹುದು. ಈಗಾಗಲೇ 1 ಕೋಟಿ ಕೊರೊನಾ ಡೋಸೇಜ್ ಖರೀದಿಗೆ ಸಿಎಂ ಅನುಮತಿ ಕೊಟ್ಡಿದ್ದಾರೆ. ನಾವು ಮೂರನೇ ಅಲೆ ನಿಗ್ರಹಿಸಲು ಸಫಲರಾಗಲಿದ್ದೇವೆ ಎಂದು ಆರೋಗ್ಯ ಸಚಿವರು ಹೇಳಿಕೊಂಡರು.

ಮಾರ್ಚ್ 13 ರಂದು ಸಿಎಂ ಯಡಿಯೂರಪ್ಪ ಅವರು ಮೊದಲ ಡೋಸ್ ಪಡೆದಿದ್ದರು. ನಂತರ ಅವರಿಗೆ ಎರಡನೇ ಬಾರಿ ಕೊರೊನಾ ಬಂದರೂ ಲಘುವಾದ ಲಕ್ಷಣ ಕಾಣಿಸಿಕೊಂಡಿತು. ಪ್ರತಿಕೂಲ ಪರಿಣಾಮ ಅಷ್ಟಾಗಿ ಬೀರಲಿಲ್ಲ. ಅವರೇ ನಮಗೆ ಉದಾಹರಣೆ. ಹಾಗಾಗಿ ಎಲ್ಲರೂ ಲಸಿಕೆ ಪಡೆಯಿರಿ. ಇದರಲ್ಲಿ ಆಲಸ್ಯ, ನಿರ್ಲಕ್ಷ್ಯ ಬೇಡ ಎಂದು ಸುಧಾಕರ್ ಸಾರ್ವಜನಿಕರಿಗೆ ಮನವಿ ಮಾಡಿದರು.

ವರದಿ: ಕೃಷ್ಣ ಜಿ.ವಿ.
Published by:Vijayasarthy SN
First published: