ಬೆಂಗಳೂರು: ಕೇಂದ್ರ ಸರ್ಕಾರದ 'ಒಂದು ದೇಶ ಒಂದು ಸಮವಸ್ತ್ರ' (One Nation, One Uniform) ಪ್ರಸ್ತಾವನೆಗೆ ರಾಜ್ಯ ಗೃಹ ಇಲಾಖೆ ತಾತ್ವಿಕ ಒಪ್ಪಿಗೆ ಸೂಚಿಸಿದೆ. ದೇಶದ ಎಲ್ಲಾ ರಾಜ್ಯಗಳ ಪೊಲೀಸರಿಗೆ (Police) ಅನ್ವಯವಾಗುವಂತಹ ಏಕರೂಪದ ಸಮವಸ್ತ್ರ ಪದ್ಧತಿ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರ (central government) ಪ್ರಸ್ತಾವನೆ ಸಲ್ಲಿಸಿ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿತ್ತು. ಇದೀಗ ಕೇಂದ್ರ ಗೃಹ ಇಲಾಖೆಯ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರದ (Karnataka Government) ಪರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಸಮ್ಮತಿಸಿದ್ದಾರೆ. ಹರಿಯಾಣ ಸೂರಜ್ಕುಂಡ್ನಲ್ಲಿ ನಡೆದಿದ್ದ ಗೃಹ ಸಚಿವರ ಚಿಂತನ್ ಶಿವರ್ನ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಒಂದು ರಾಷ್ಟ್ರ, ಒಂದು ಸಮವಸ್ತ್ರ ನೀತಿಯನ್ನು ಸೂಚಿಸಿದ್ದರು.
ರಾಜ್ಯ ಸರ್ಕಾರಗಳ ಗೃಹ ಸಚಿವರಿಗಾಗಿ ಆಯೋಜಿಸಿರುವ ಚಿಂತನ ಶಿಬಿರವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದ ಪ್ರಧಾನಿ ಮೋದಿ, ದೇಶದ ಎಲ್ಲಾ ರಾಜ್ಯಗಳ ಪೊಲೀಸರಿಗೆ ಏಕರೂಪದ ಗುರುತು ದೊರೆಯುತ್ತದೆ. ಜೊತೆಗೆ ದೇಶಾದ್ಯಂತ ಎಲ್ಲಾ ಪೊಲೀಸರಿಗೆ ಒಂದೇ ಗುಣಮಟ್ಟದ ಸಮವಸ್ತ್ರ ದೊರೆಯುತ್ತದೆ. ಇದನ್ನು ನಾನು ಹೇರಿಕೆ ಮಾಡುತ್ತಿಲ್ಲ, ಬದಲಾಗಿ ಸಲಹೆ ನೀಡುತ್ತಿದ್ದೇನೆ ಎಂದಿದ್ದರು.
ಇದನ್ನೂ ಓದಿ:One Nation One Fertilizer: ರೈತರಿಗೆ ಗುಡ್ ನ್ಯೂಸ್, ಮತ್ತೊಂದು ಹೊಸ ಯೋಜನೆ ತಂದ ಮೋದಿ ಸರ್ಕಾರ!
ನೂರು ವರ್ಷಗಳಾದರೂ ಆ ದಿಕ್ಕಿನಲ್ಲಿ ಯೋಚಿಸಿ
ಈ ಯೋಜನೆ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬರಲು ಐದು, ಐವತ್ತು ಅಥವಾ ನೂರು ವರ್ಷಗಳಾಗಬಹುದು. ಆದರೆ ಆ ದಿಕ್ಕಿನಲ್ಲಿ ನಾವು ಯೋಚಿಸಬೇಕು. ಸಂವಿಧಾನದ ಪ್ರಕಾರ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾದರೂ, ಅವು ದೇಶದ ಏಕತೆ ಮತ್ತು ಸಮಗ್ರತೆಗೆ ಸಮಾನವಾಗಿ ಸಂಬಂಧಿಸಿವೆ. ಪ್ರತಿ ರಾಜ್ಯಗಳೂ ಒಂದರಿಂದ ಒಂದು ಪ್ರೇರಣೆ ಪಡೆಯಬೇಕು ಮತ್ತು ಆಂತರಿಕ ಭದ್ರತೆಗಾಗಿ ಜತೆಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದರು. ಅದರಂತೆ ದೇಶದ ಎಲ್ಲಾ ರಾಜ್ಯಗಳ ಪೊಲೀಸರಿಗೆ ಅನ್ವಯಗುವಂತಹ ಏಕರೂಪದ ಸಮವಸ್ತ್ರ ಪದ್ಧತಿ ಜಾರಿಗೆ ತರಲು ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿತ್ತು.
ಇಂತಹದ್ದೇ ಹಲವು ಯೋಜನೆಗಳು
ಕೇಂದ್ರ ಸರ್ಕಾರ ಒಂದು ದೇಶ ಒಂದು ಸಮವಸ್ತ್ರ ಪದ್ದತಿಯಂತೆ ಈಗಾಗಾಲೇ, ಒಂದು ದೇಶ ಒಂದು ತೆರಿಗೆ ಹೆಸರಲ್ಲಿ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಗೊಳಿಸಿತ್ತು. ನಂತರ ದೇಶದ ನಾಗರಿಕರಿಗೆ ಒಂದೇ ಕಾರ್ಡ್ನಲ್ಲಿ ಆರೋಗ್ಯ ಸೌಲಭ್ಯ ಕಲ್ಪಿಸುವುದಕ್ಕಾಗಿ ಒಂದು ದೇಶ, ಒಂದು ಆರೋಗ್ಯ ಕಾರ್ಡ್ ಯೋಜನೆಯನ್ನ 2018ರಲ್ಲಿ ಜಾರಿಗೆ ತಂದಿದೆ. 2020ರಲ್ಲಿ ಒಂದು ದೇಶ ಒಂದು ಪಡಿತರ ಚೀಟಿ ಯೋಜನೆಯನ್ನು ಜಾರಿಗೆ ತರಿಸಲಾಗಿದೆ.
ಒಂದು ದೇಶ, ಒಂದು ಚುನಾವಣೆಗೆ ವಿರೋಧ
ದೇಶಾದ್ಯಂತ ಲೋಕಸಭೆ ಚುನಾವಣೆ ನಡೆಯುವ ವೇಳೆ ಎಲ್ಲಾ ರಾಜ್ಯಗಳ ವಿಧಾನಸಭೆಗೂ ಚುನಾವಣೆ ನಡೆಸುವ ಒಂದು ದೇಶ ಒಂದು ಚುನಾವಣೆ ಎಂಬ ಯೋಜನೆಯನ್ನು 2017ರಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು. ಈ ಹೇಳಿಕೆ ಬಹಳ ಚರ್ಚೆಯಾಗಿತ್ತು. ಈ ಯೋಜನೆ ಜಾರಿಗೆ ತಂದರೆ ಚುನಾವಣಾ ವೆಚ್ಚವನ್ನು ತಗ್ಗಿಸಬಹುದು ಎಂದು ಚುನಾವಣಾ ಆಯೋಗ ಕೂಡ ಒಪ್ಪಿಗೆ ಸೂಚಿಸಿತ್ತು. ಆದರೆ ವಿರೋಧ ಪಕ್ಷಗಳು ಈ ಯೋಜನೆಯನ್ನು ವಿರೋಧಿಸಿದ್ದವು. ಇದು ಹೀಗೆ ಮುಂದುವರಿದರೆ ಒಂದು ದೇಶ, ಒಂದೇ ಧರ್ಮ, ಒಂದೇ ನಾಯಕ ಎಂದು ಮುಂದುವರಿಸಿಕೊಂಡು ಹೋಗಬಹುದು ಎಂದು ಟೀಕೆ ಮಾಡಿದ್ದವು.
ಒಂದು ದೇಶ ಒಂದು ಭಾಷೆಗೂ ತೀವ್ರ ಟೀಕೆ
ಹಿಂದಿ ದಿವಸ ಆಚರಿಸುವ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಒಂದು ದೇಶ ಒಂದು ಭಾಷೆ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಈ ಹೇಳಿಕೆಗೆ ಕರ್ನಾಟಕ, ತಮಿಳುನಾಡು ಸೇರಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಜನರು ತಿರುಗಿಬಿದ್ದಿದ್ದರು. ಈ ಯೋಜನೆಗಳಿಂದ ಪ್ರಾದೇಶಿಕ ಭಾಷೆಗಳಿಗೆ ಕುತ್ತು ಬರಲಿದೆ ಎಂದು ವಾದಿಸಿದ್ದರು. ತಮಿಳುನಾಡಿದ ಡಿಎಂಕೆ, ಕೇರಳಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕರ್ನಾಟಕದಲ್ಲಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸೇರಿದಂತೆ ಪ್ರಮುಖ ದಕ್ಷಿಣ ಭಾರತದ ಪ್ರಮುಖ ನಾಯಕರು ವಿರೋಧ ವ್ಯಕ್ತಪಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ