Male Mahadeshwara ಹುಲಿಸಂರಕ್ಷಿತ ಪ್ರದೇಶ ಘೋಷಣೆಗೆ ಸರ್ಕಾರದ ಮೀನಾಮೇಷ; ಕಾರಣ ಇದು

2018 ರ ಹುಲಿ ಅಂದಾಜಿನಲ್ಲಿ  ಮಲೈಮಹದೇಶ್ವರ ವನ್ಯಧಾಮದಲ್ಲಿ 15 ಹುಲಿಗಳಿರುವುದು  ಕಂಡುಬಂದಿತ್ತು.  ಇತ್ತೀಚಿನ ವರ್ಷಗಳಲ್ಲಿ ಹುಲಿಗಳ ಸಂಖ್ಯೆ  ವೃದ್ಧಿಸಿದೆ.

ಹುಲಿ (ಸಾಂಕೇತಿಕ ಚಿತ್ರ)

ಹುಲಿ (ಸಾಂಕೇತಿಕ ಚಿತ್ರ)

  • Share this:
ಚಾಮರಾಜನಗರ (ಮೇ.05)  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಚಾಮರಾಜಗರ ಜಿಲ್ಲೆ (Chamarajanagar) ದೇಶದಲ್ಲೆ ಮೂರು ಹುಲಿ ಸಂರಕ್ಷಿತ  ಪ್ರದೇಶಗಳನ್ನು ಒಳಗೊಂಡ  ಏಕೈಕ ಜಿಲ್ಲೆ ಎನಿಸಿಕೊಳ್ಳಬೇಕಿತ್ತು. ಆದರೆ ಈ ಬಗ್ಗೆ ಮುತುವರ್ಜಿ ವಹಿಸಬೇಕಾದ ಜನಪ್ರತಿನಿಧಿಗಳೇ  ರಾಜಕೀಯ ಕಾರಣಗಳಿಗೆ ಇದಕ್ಕೆ ಅಡ್ಡಗಾಲಾಗಿದ್ದಾರೆ.  ಸರ್ಕಾರ 25 ರಿಂದ 30 ಹುಲಿಗಳಿದ್ದರೂ  ಮಲೈಮಹದೇಶ್ವರ ವನ್ಯಧಾಮವನ್ನು ಹುಲಿಸಂರಕ್ಷತ ಪ್ರದೇಶ (Male Mahadeshwara Tiger Reserve) ಎಂದು ಘೋಷಿಸಲು ಮೀನಾಮೇಷ   ಎಣಿಸುತ್ತಿದೆ.

ವಿರೋಧದ ಹಿನ್ನಲೆ ನೆನೆಗುದಿಗೆ

ಮಲೈಮಹದೇಶ್ವರ ವನ್ಯಧಾಮದಲ್ಲಿ ಹುಲಿಗಳ ಸಂತತಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ  2018ರ ಹುಲಿ ಗಣತಿಯ ಸಂದರ್ಭದಲ್ಲಿ ರಾಜ್ಯ ಅರಣ್ಯ  ಇಲಾಖೆ ಸಲ್ಲಿಸಿದ್ದ  ಪ್ರಸ್ತಾವನೆಗೆ  ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಈ ಹಿಂದೆಯೇ ಹಸಿರು ನಿಶಾನೆ ತೋರಿತ್ತು.  ರಾಜ್ಯ ಸರ್ಕಾರ ಅನುಮೋದನೆ ನೀಡಿ ಈ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವುದಷ್ಟೇ ಬಾಕಿ ಇತ್ತು.  ಆದರೆ  ಮಾರ್ಚ್ 11 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದು ಅನುಮೋದನೆ ನೀಡಬೇಕು ಎನ್ನುವಷ್ಟರಲ್ಲಿ ಕೆಲ ಸಚಿವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ನೆನಗುದಿಗೆ ಬಿತ್ತು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಯಥಾಸ್ಥಿತಿ ಮುಂದುವರೆಸಲು ಒತ್ತಾಯ

ಮಲೈಮಹದೇಶ್ವರ ವನ್ಯಧಾಮವನ್ನು ಹುಲಿಸಂರಕ್ಷಿತ ಪ್ರದೇಶವನ್ನಾಗಿ ಮಾಡುವುದರಿಂದ ಕಠಿಣ ಸಂರಕ್ಷಣಾ ಕ್ರಮಗಳಿಂದ  ಸ್ಥಳೀಯ ಜನರಿಗೆ ತೊಂದರೆಯಾಗಲಿದೆ, ಅಷ್ಟೇ ಅಲ್ಲದೆ ಮಲೈಮಹದೇಶ್ವರ ಬೆಟ್ಟದ ಅಭಿವೃದ್ದಿಗು ತೊಡಕಾಗಲಿದೆ,   ಇಲ್ಲಿಗೆ  ಬರುವ ಭಕ್ತರಿಗೆ ಅನಾನುಕೂಲವಾಗಲಿದೆ  ಹಾಗಾಗಿ ಹುಲಿ ಸಂರಕ್ಷಿತ ಪ್ರದೇಶ  ಎಂದು ಘೋಷಿಸದೆ ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಕೆಲ ಸಚಿವರುಗಳು ಒತ್ತಾಯಿಸಿದರು ಎನ್ನಲಾಗಿದೆ.

ಸಿಎಂ ವಿವೇಚನೆಗೆ ಬಿಟ್ಟ ವಿಚಾರ

ಆದರೆ, ಹುಲಿಸಂರಕ್ಷಿತ ಪ್ರದೇಶ ಎಂದು ಘೋಷಿಸುವುದರಿಂದ ಮಲೈ ಮಹದೇಶ್ವರ ಬೆಟ್ಟ ಇಡೀ ದೇಶದ ಗಮನ ಸೆಳೆಯಲಿದೆ, ಪ್ರವಾಸೋಧ್ಯಮ ಅಭಿವೃದ್ದಿಯಾಗಲಿದೆ, ಸ್ಥಳೀಯರಿಗೆ ಯಾವುದೇ ತೊಂದರೆಯು ಆಗುವುದಿಲ್ಲ, ಹುಲಿ ಸಂರಕ್ಷಿತ ಪ್ರದೇಶಕ್ಕೆ ಕೇಂದ್ರ ಸರ್ಕಾರವೇ ಅನುದಾನ ನೀಡುವುದರಿಂದ ರಾಜ್ಯ ಸರ್ಕಾರಕ್ಕೆ  ಹೊರೆ ಕಡಿಮೆಯಾಗಲಿದೆ  ಎಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಸಚಿವ ಸಂಪುಟ ಸಭೆಗೆ ಮನವರಿಕೆ  ಮಾಡಿಕೊಟ್ಟರೆಂದು ಹೇಳಲಾಗಿದೆ. ಕೊನೆಗೆ ಸಚಿವ ಸಂಪುಟ ಸಭೆ ಈ ಬಗ್ಗೆ  ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿವೇಚನೆಗೆ ಬಿಟ್ಟದ್ದು  ಅವರು  ಈ ಕಡತವನ್ನು  ಬಾಕಿ ಇರಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಧಿಕ ಸಂಖ್ಯೆ ಹುಲಿ

ದೇಶದಲ್ಲಿ ಪ್ರಸ್ತುತ 53  ಹುಲಿ ಸಂರಕ್ಷಿತ ಪ್ರದೇಶಗಳಿದ್ದು  ಈ   ಪೈಕಿ ಕೆಲವು ಅರಣ್ಯಗಳಲ್ಲಿ  2018 ರ ಹುಲಿಗಣತಿ (ಅಂದಾಜು) ಪ್ರಕಾರ ಹುಲಿ ಗಳೇ ಇಲ್ಲ,  ಕೆಲವು ಅರಣ್ಯಗಳಲ್ಲಿ  ಹುಲಿಗಳ ಸಂಖ್ಯೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ  ಇದ್ದರೂ  ಅವು ಹುಲಿ ಸಂರಕ್ಷಿತ  ಪ್ರದೇಶಗಳಾಗಿವೆ. ಉದಾಹರಣೆಗೆ ಅರುಣಾಚಲ ಪ್ರದೇಶದ 'ಪಕ್ಕೆ' ಅರಣ್ಯದಲ್ಲಿ ಕೇವಲ 9 ಹುಲಿಗಳಿವೆ, ಮಿಜೋರಾಂನ  'ಡಂಪಾ' ಅರಣ್ಯದಲ್ಲಿ ಒಂದು ಹುಲಿಯು ಇಲ್ಲ,  ಜಾರ್ಖಂಡ್‌ನ 'ಪಲ್ಮಾವ' ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಒಂದಂಕಿಯಲ್ಲಿದೆ, ತಮಿಳುನಾಡಿನ 'ಕಾಲಕ್ಕಾಡ್' (ಮುಂಡಂತೊರೈ) ಅರಣ್ಯದಲ್ಲಿ ಕೇವಲ 18 ಹುಲಿಗಳಿವೆ  ಪಶ್ಚಿಮ ಬಂಗಾಳದ 'ಬುಕ್ಸಾ' ಅರಣ್ಯದಲ್ಲಿ ಇತ್ತೀಚಿನವರೆಗೂ ಹುಲಿಗಳೇ ಇರಲಿಲ್ಲ, 23 ವರ್ಷಗಳ ನಂತರ ಮೊದಲ ಬಾರಿಗೆ  ಕಳೆದ ಡಿಸೆಂಬರ್ ನಲ್ಲಿ ಒಂದೇ ಒಂದು  ಹುಲಿ ಕಾಣಸಿಕೊಂಡಿದೆ. ಹೀಗೆ ಹುಲಿಗಳು ಕಡಿಮೆ ಸಂಖ್ಯೆಯಲ್ಲಿದ್ದರೂ ಅಥವಾ ಹುಲಿಗಳೇ ಇಲ್ಲದಿದ್ದರೂ ಈ ಅರಣ್ಯಪ್ರದೇಶಗಳನ್ನು ಸಂರಕ್ಷಣೆ ಹಾಗು ಅಭಿವೃದ್ಧಿ ದೃಷ್ಟಿಯಿಂದ   ಆಯಾ ರಾಜ್ಯ ಸರ್ಕಾರಗಳು  ಹುಲಿ ಸಂರಕ್ಷಿತ ಪ್ರದೇಶಗಳೆಂದು ಘೋಷಿಸಿವೆ.  ಆದರೆ ಮಲೈ ಮಹದೇಶ‍್ವರ ವನ್ಯಧಾಮದಲ್ಲಿ 25 ರಿಂದ 30 ಹುಲಿಗಳಿದ್ದರೂ ರಾಜ್ಯ ಸರ್ಕಾರ  ಹಿಂದೆ ಮುಂದೆ ನೋಡುತ್ತಿದೆ

ಇದನ್ನು ಓದಿ: ಸಚಿವ ಅಶ್ವತ್ಥ್ ನಾರಾಯಣ ಪರ ಸಿಎಂ ಬ್ಯಾಟಿಂಗ್, ಕಾಂಗ್ರೆಸ್ ವಿರುದ್ಧ ಬಸವರಾಜ ಬೊಮ್ಮಾಯಿ ಕಿಡಿ

ಶೀಘ್ರದಲ್ಲೇ ಘೋಷಣೆ ಸಾಧ್ಯತೆ

" 2018 ರ ಹುಲಿ ಅಂದಾಜಿನಲ್ಲಿ  ಮಲೈಮಹದೇಶ್ವರ ವನ್ಯಧಾಮದಲ್ಲಿ 15 ಹುಲಿಗಳಿರುವುದು  ಕಂಡುಬಂದಿತ್ತು.  ಇತ್ತೀಚಿನ ವರ್ಷಗಳಲ್ಲಿ ಹುಲಿಗಳ ಸಂಖ್ಯೆ  ವೃದ್ಧಿಸಿದೆ. ಪ್ರಸ್ತುತ 25 ರಿಂದ 30 ಹುಲಿಗಳಿರಬಹುದು, ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಿರುವ ಪಟ್ಟಿಯಲ್ಲಿ ಇಲ್ಲಿ ಎಷ್ಟು ಹುಲಿಗಳಿವೆ ಎಂಬುದು ಅಧಿಕೃತವಾಗಿ ಗೊತ್ತಾಗಲಿದೆ, ಹುಲಿರಕ್ಷಿತಾರಣ್ಯ ಘೋಷಣೆಗೆ ಸಂಬಂಧಿಸಿದಂತೆ ಸರ್ಕಾರ  ಕೇಳಿದ್ದ  ಎಲ್ಲಾ ಸ್ಪಷ್ಠೀಕರಣಗಳಿಗು  ವರದಿ ನೀಡಿದ್ದೇವೆ, ಮುಖ್ಯಮಂತ್ರಿಗಳ ಬಳಿ ಕಡತವಿದ್ದು ಶೀಘ್ರದಲ್ಲೇ ಮಲೈಮಹದೇಶ್ವರ ವನ್ಯಧಾಮ ಹುಲಿ ಸಂರಕ್ಷಿತ ಪ್ರದೇಶವಾಗಲಿದೆ" ಎಂದು ಮಲೈಮಹದೇಶ್ವರ ವನ್ಯಧಾಮದ  ಉಪ ಸಂರಣ್ಯಸಂರಕ್ಷಣಾಧಿಕಾರಿ ಏಡುಕೊಂಡಲು ವಿಶ್ವಾಸ ವ್ಯಕ್ತಪಡಿಸುತ್ತಾರೆ

ಇದನ್ನು ಓದಿ: Siddaramaiah ಅವರೇ ಡಿಕೆಶಿ ಇಂದ ದೂರ ಇರಿ; ಮಾಜಿ ಸಿಎಂಗೆ MP Renukacharya ಬುದ್ದಿಮಾತು

"ಈಗಿರುವ  ವನ್ಯಜೀವಿ ಕಾನೂನುಗಳೇ ಹುಲಿಸಂರಕ್ಷಿತ ಪ್ರದೇಶವಾದ ಮೇಲು ಮುಂದುವರಿಯುತ್ತವೆ, ಜನರಿಗೆ ಹೆಚ್ಚೇನು ತೊಂದರೆಯಾಗುವುದಿಲ್ಲ, ಇತ್ತೀಚಿನ ವರ್ಷಗಳಲ್ಲಿ ಹುಲಿ ಸಂತತಿ ವೃದ್ಧಿಯಾಗುತ್ತಿದೆ, ಮಲೈಮಹದೇಶ್ವರ ಕೋಟ್ಯಂತರ ಭಕ್ತರ  ಆರಾಧ್ಯ ದೈವ, ಮಹದೇಶ್ವರರ ವಾಹನವೇ ಹುಲಿಯಾಗಿದೆ, ಹುಲಿಯ ಬಗ್ಗೆ ನಮ್ಮ ಜನರಲ್ಲಿ ಪೂಜ್ಯ ಭಾವನೆ ಇದೆ,  ಹಾಗಾಗಿ ಮಲೈಮಹದೇಶ್ವರ ವನ್ಯಧಾಮವನ್ನು ಹುಲಿಸಂರಕ್ಷಿತ ಪ್ರದೇಶ  ಎಂದು ಘೋಷಿಸಿದರೆ ಅನ್ವರ್ಥವಾಗಿರುತ್ತದೆ" ಎನ್ನುತ್ತಾರೆ  ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ

“ಮಹದೇಶ್ವರ ವನ್ಯಧಾಮ ಹುಲಿಸಂರಕ್ಷಿತ ಪ್ರದೇಶವಾಗುರುವುದರಿಂದ ವನ್ಯಜೀವಿಗಳ ಸಂರಕ್ಷಣೆಗೆ ಮತ್ತಷ್ಟು ಬಲ ಬರಲಿದೆ. ಪಕ್ಕದಲ್ಲೇ ಇರುವ ಬಿ.ಆರ್.ಟಿ. ಹುಲಿಸಂರಕ್ಷಿತ ಪ್ರದೇಶದಿಂದ ವಲಸೆ ಬರುವ ಪ್ರಾಣಿಗಳಿಗೆ ಇಲ್ಲಿ ರಕ್ಷಣೆ ಸಿಗುವುದರಿಂದ  ಇಲ್ಲಿಯೆ ನೆಲೆ ಕಂಡುಕೊಳ್ಳಲಿವೆ, ಹಾಗಾಗಿ ಬಿ.ಆರ್.ಟಿ. ಹುಲಿಸಂರಕ್ಷಿತ ಪ್ರದೇಶದಲ್ಲಿ ಮಾನವ ವನ್ಯಜೀವಿ ಸಂಘರ್ಷವೂ ಕಡಿಮೆಯಾಗಲಿದೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಬರುವುದರಿಂದ ಅರಣ್ಯವಾಸಿಗಳ ಪುನರ್ವಸತಿಗೆ ಹೆಚ್ಚು  ಅನುದಾನ ಸಿಗಲಿದ್ದು, ಸರ್ಕಾರ ನಿರ್ಲಕ್ಷ್ಯ ಧೋರಣೆ ಕೈಬಿಟ್ಟು ಹುಲಿ ಸಂರಕ್ಷಿತ ಪ್ರದೇಶ ಘೋಷಣೆ   ಮಾಡುವುದು ಎಲ್ಲಾ ರೀತಿಯಲ್ಲು ಒಳ್ಳೆಯದು ಎಂಬುದು ವನ್ಯಜೀವಿ ತಜ್ಞರ ಅಭಿಮತವಾಗಿದೆ
Published by:Seema R
First published: