• Home
  • »
  • News
  • »
  • state
  • »
  • ಹುಬ್ಬಳ್ಳಿಯಲ್ಲಿ ಇನ್ವೆಸ್ಟ್‌ ಕರ್ನಾಟಕ ಸಮಾವೇಶ- ಉತ್ತರ ಕರ್ನಾಟಕದ ಪ್ರಥಮ ಬೃಹತ್ ಸಮಾವೇಶಕ್ಕೆ ಭರ್ಜರಿ ಸಿದ್ಧತೆ

ಹುಬ್ಬಳ್ಳಿಯಲ್ಲಿ ಇನ್ವೆಸ್ಟ್‌ ಕರ್ನಾಟಕ ಸಮಾವೇಶ- ಉತ್ತರ ಕರ್ನಾಟಕದ ಪ್ರಥಮ ಬೃಹತ್ ಸಮಾವೇಶಕ್ಕೆ ಭರ್ಜರಿ ಸಿದ್ಧತೆ

ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಸಚಿವ ಜಗದೀಶ್ ಶೆಟ್ಟರ್​

ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಸಚಿವ ಜಗದೀಶ್ ಶೆಟ್ಟರ್​

ಎರಡನೆಯ ಹಂತದ ನಗರಗಳಲ್ಲಿ ಔದ್ಯಮಿಕ ಬೆಳವಣಿಗೆಯ ಭರವಸೆ ಮೂಡಿಸಿರುವ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಹುಬ್ಬಳ್ಳಿಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ನಗರದ ಡೆನಿಸನ್ಸ್ ಹೋಟೆಲ್‍ನ ಯಶೋಧಾ ಲಾನ್‌ನಲ್ಲಿ ಸಮಾವೇಶಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.

  • Share this:

ಹುಬ್ಬಳ್ಳಿ(ಫೆ.13) : ಉತ್ತರ ಕರ್ನಾಟಕ ಭಾಗಕ್ಕೆ ಕೈಗಾರಿಕೆಗಳು ಬರದಿರುವ ಕಾರಣ ಜನರು ಉದ್ಯೋಗ ಅರಸಿ ವಲಸೆ ಹೋಗುವುದು ಸಾಮಾನ್ಯವಾಗಿದೆ. ಪ್ರಾದೇಶಿಕ ಅಸಮಾನತೆ ಹೆಚ್ಚಾಗುತ್ತಿದೆ ಎನ್ನುವ ಕೂಗನ್ನು ನಿವಾರಿಸಲು ರಾಜ್ಯ ಸರ್ಕಾರ ಇನ್ವೆಸ್ಟ್‌ ಕರ್ನಾಟಕ ಸಮಾವೇಶವನ್ನು ಆಯೋಜಿಸಿದೆ. ಹುಬ್ಬಳ್ಳಿಯಲ್ಲಿ ಪ್ರಥಮ ಬಾರಿಗೆ ನಡೆಯಲಿರುವ ಹೂಡಿಕೆದಾರರ ಸಮಾವೇಶ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.  

ದೇಶವಿದೇಶದ ಉದ್ಯಮಿಗಳಿಗೆ ಆಹ್ವಾನ

ಹುಬ್ಬಳ್ಳಿ- ಧಾರವಾಡ ಅವಳಿ ನಗರ ಹೆಸರಿಗಷ್ಟೇ ರಾಜ್ಯದ ಎರಡನೆಯ ದೊಡ್ಡ ನಗರವೆಂದು ಗುರುತಿಸಿಕೊಂಡಿದೆ. ಆದರೆ ಹುಬ್ಬಳ್ಳಿ- ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಯಾವ ಜಿಲ್ಲೆಗಳಿಗೂ ಹೇಳಿಕೊಳ್ಳುವಂತಹ ದೊಡ್ಡ ಕೈಗಾರಿಕೆಗಳು ಬರುತ್ತಿಲ್ಲ. ಈ ಭಾಗದ ನಿರುದ್ಯೋಗ ಸಮಸ್ಯೆ ನಿವಾರಿಸಲು ಮತ್ತು ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಫೆಬ್ರುವರಿ 14ರಂದು ಕೈಗಾರಿಕಾ ಇಲಾಖೆ ನೇತ್ರತ್ವದಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ.

ಎರಡನೆಯ ಹಂತದ ನಗರಗಳಲ್ಲಿ ಔದ್ಯಮಿಕ ಬೆಳವಣಿಗೆಯ ಭರವಸೆ ಮೂಡಿಸಿರುವ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಹುಬ್ಬಳ್ಳಿಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ನಗರದ ಡೆನಿಸನ್ಸ್ ಹೋಟೆಲ್‍ನ ಯಶೋಧಾ ಲಾನ್‌ನಲ್ಲಿ ಸಮಾವೇಶಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸಮಾವೇಶಕ್ಕೆ ದೇಶ ವಿದೇಶಗಳಿಂದ ನೂರಾರು ಕಂಪನಿಗಳ ಪ್ರತಿನಿಧಿಗಳು ಆಗಮಿಸುತ್ತಿದ್ದಾರೆ. ಸ್ಥಳೀಯ ಉದ್ಯಮಿಗಳು ಮತ್ತು ಔದ್ಯಮಿಕ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಎರಡನೆಯ ಹಂತದ ನಗರಗಳ ಬೆಳವಣಿಗೆಗೆ ಪೂರಕ ವಾತಾವರಣ

ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಹಾವೇರಿ, ಗದಗ ಸೇರಿದಂತೆ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಉದ್ಯಮ ಸ್ಥಾಪನೆಗೆ ಹೂಡಿಕೆದಾರರಲ್ಲಿ ಮನವಿ ಮಾಡಲಾಗಿದೆ. ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪಣೆಗೆ ಇರುವ ಎಲ್ಲಾ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಎಫ್‍ಐಸಿಸಿಐ, ಸಿಸಿಐ ಸಹಯೋಗದೊಂದಿಗೆ ರಾಜ್ಯ ಸರ್ಕಾರ ಈಗಾಗಲೇ ಮುಂಬೈ ಮತ್ತು ಹೈದರಾಬಾದ್‌ನಲ್ಲಿ ರೋಡ್ ಶೋ ನಡೆಸಿ ಹೂಡಿಕೆದಾರರ ಗಮನ ಸೆಳೆದಿದೆ. ಲಖನೌ ಮತ್ತು ಗುವಾಹಟಿಯ ಬಂಡವಾಳದಾರರ ಜೊತೆ ಸಭೆ ನಡೆಸಲಾಗಿದೆ. ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ದೇಶದ ದೊಡ್ಡ ಉದ್ಯಮಪತಿಗಳಿಗೆ ಮನವಿ ಮಾಡಿ ಬಂದಿದ್ದಾರೆ.

ಗರಿಗೆದರಿದ ನಿರೀಕ್ಷೆ

ಆನ್‍ಲೈನ್‍ನಲ್ಲಿ ನೋಂದಣಿಗೂ ಅವಕಾಶ ನೀಡಿದ್ದರಿಂದ ಈಗಾಗಲೇ ನೂರಾರು ಕಂಪನಿಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳು, ದೇಶದ ಉದ್ಯಮಪತಿಗಳು, ಸ್ಥಳೀಯ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಲಿದ್ದಾರೆ. ಹೂಡಿಕೆದಾರರ ಸಮಾವೇಶವಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪನವರು ಚಾಲನೆ ನೀಡಲಿದ್ದಾರೆ. ಫೆಬ್ರುವರಿ 14ರಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಿಶೇಷ ಪೇಪರ್ ಪ್ರಜೆಂಟೇಶನ್ ನಡೆಯಲಿದೆ. ಕನಿಷ್ಠ 20 ಕಂಪನಿಗಳು ಅಂದೇ ಒಡಂಬಡಿಕೆಗೆ ಸಹಿ ಮಾಡುವ ನಿರೀಕ್ಷೆ ಇದೆ. ಎಷ್ಟೇ ಕಂಪನಿಗಳು ಬಂದರೂ ಅವಕಾಶ ಮಾಡಿಕೊಡಲು ಸರ್ಕಾರ ಸನ್ನದ್ಧವಾಗಿದೆ. ಕೈಗಾರಿಕಾ ನೀತಿಯ ಚೌಕಟ್ಟಿನಲ್ಲಿ ಸಕಲ ಸೌಲಭ್ಯ ಒದಗಿಸಲು ಈಗಾಗಲೆ ತಯಾರಿ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ : ಸರ್ಕಾರ ಬಂದು 7 ತಿಂಗಳಾದರೂ ನಮ್ಮ ಜಿಲ್ಲೆಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ; ಹೆಚ್ ಡಿ ರೇವಣ್ಣ ಕಿಡಿ

ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ 1700 ಎಕರೆ ಭೂಮಿ ತಕ್ಷಣಕ್ಕೆ ಉದ್ಯಮ ಆರಂಭಿಸಲು ಲಭ್ಯವಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಮೀನು ಬೇಕಿದ್ದರೆ ಕೊಡುವುದಕ್ಕೆ ಸುಮಾರು 4500 ಎಕರೆ ಗುರುತು ಮಾಡಿ ಇಡಲಾಗಿದೆ. ಬೆಳಗಾವಿಯ ಕಣಗಲಾ ಮತ್ತು ಕಿತ್ತೂರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಜಮೀನು ಮೀಸಲಿಡಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಬೃಹತ್ ಪ್ರಮಾಣದ ಇನ್ವೆಸ್ಟ್‌ ಕರ್ನಾಟಕ ಸಮಾವೇಶ ಸಾಕಷ್ಟು ನಿರೀಕ್ಷೆಗಳು ಗರಿಗೆದರುವಂತೆ ಮಾಡಿದೆ.

ಸಮಾವೇಶದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬಂಡವಾಳ ಹೂಡಿಕೆದಾರರು ಭಾಗವಹಿಸುವ ನಿರೀಕ್ಷೆಯಿದೆ. ಸಮಾವೇಶ ಯೋಜಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ. ಈ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿ ಕೆಲವೊಂದಿಷ್ಟು ಕೈಗಾರಿಕೆಗಳು ಬರಲಿ. ನಿರುದ್ಯೋಗ ಸಮಸ್ಯೆ ಬಗೆಹರಿಯಲಿ. ಪ್ರಾದೇಶಿಕ ಅಸಮಾನತೆ ಕಡಿಮೆಯಾಗಲಿ ಎನ್ನುವುದು ಎಲ್ಲರ ಆಶಯ.

First published: