• Home
 • »
 • News
 • »
 • state
 • »
 • Ganesh Festival: ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ ಸಿಗಲಿದೆ ವಿನಾಯಿತಿ; ನಾಳೆ ಸಭೆ ಬಳಿಕ ಹೊರಬೀಳಲಿದೆ ಮಾರ್ಗಸೂಚಿ

Ganesh Festival: ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ ಸಿಗಲಿದೆ ವಿನಾಯಿತಿ; ನಾಳೆ ಸಭೆ ಬಳಿಕ ಹೊರಬೀಳಲಿದೆ ಮಾರ್ಗಸೂಚಿ

ಗಣೇಶ

ಗಣೇಶ

ಸಾರ್ವಜನಿಕ ಗಣೇಶ ಉತ್ಸವಕ್ಕೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ವಿನಾಯಿತಿ ಸಿಗುವ ವಿಶ್ವಾಸ ಇದೆ ಎಂದು ಕಂದಾಯ ಸಚಿವ ಆರ್​ ಅಶೋಕ್ ಸುಳಿವು ನೀಡಿದ್ದಾರೆ

 • Share this:

  ಬೆಂಗಳೂರು (ಸೆ. 4):  ಗಣೇಶ ಹಬ್ಬಕ್ಕೆ (Ganesha festival) ಈಗಾಗಲೇ ದಿನಗಣನೆ ಶುರುವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಈ ಬಾರಿ ಸರ್ಕಾರದ ಮಾರ್ಗಸೂಚಿಗಳು (Ganesh Festival Guideline) ಏನು ಇರಲಿದೆ ಎಂಬ ಪ್ರಶ್ನೆ ರಾಜ್ಯದ ಜನರಲ್ಲಿ ಕಾಡಿದೆ. ಕಾರಣ ಕಳೆದ ವರ್ಷ ಹಬ್ಬದ ಮೇಲೆ ಕೋವಿಡ್​ ಕರಿನೆರಳಿನಿಂದಾಗಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದ ಗಣೇಶ ಮೂರ್ತಿ ತಯಾರಕರು ಸೇರಿದಂತೆ ಹಲವಾರು ಮಂದಿ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದು ಸುಳ್ಳಲ್ಲ. ಈ ಬಾರಿ ಕೂಡ ಕೋವಿಡ್​ ಕರಿನೆರಳಿನಿಂದ ನಾವು ಪಾರಾಗಿಲ್ಲ. ಆದರೆ, ಅದೃಷ್ಟ ಎಂದರೆ ರಾಜ್ಯದಲ್ಲಿ ಸೋಂಕು ಪ್ರಮಾಣ ಸಂಪೂರ್ಣ ಕಡಿಮೆಯಾಗಿದ್ದು, ಲಸಿಕೆ ವಿತರಣೆ ಕಾರ್ಯ ಭರದಿಂದ ಸಾಗಿದೆ. ಈ ಹಿನ್ನಲೆ ಈ ಬಾರಿ ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ಸಿಗಲಿದೆಯಾ ಎಂಬ ಕುತೂಹಲ ಮೂಡಿದೆ.


  ಈ ಹಿಂದೆಯಲ್ಲಾ ಎರಡು ತಿಂಗಳಿನಿಂದಲೇ ಗಣೇಶ ಕೂರಿಸಲು ಸಜ್ಜಾಗುತ್ತಿದ್ದ ಅನೇಕ ಗಣೇಶೋತ್ಸವದ ಸಮಿತಿ ಜನರು ಸರ್ಕಾರ ಹೊರಡಿಸಲಿರುವ ಪರಿಷ್ಕೃತ ಮಾರ್ಗಸೂಚಿಗೆ ಕಾಯುತ್ತಿದ್ದಾರೆ. ಈ ಕುರಿತು ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಆರೋಗ್ಯ ಸಚಿವರು, ಅಧಿಕಾರಿಗಳು, ತಜ್ಞರು ಸಭೆ ನಡೆಸಿ , ನಿರ್ಧಾರ ಕೈಗೊಳ್ಳಲಿದ್ದಾರೆ. ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡಬೇಕಾ, ಬೇಡಾ ಎಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಧ್ಯಾಹ್ನ 12.30ಕ್ಕೆ ಸಭೆ ನಡೆಯಲಿದೆ. ಸಭೆ ಬಳಿಕ ಈ ಕುರಿತು ಮಾರ್ಗಸೂಚಿ ಪ್ರಕಟವಾಗಲಿದೆ.


  ಜನರೇ ಮುನ್ನೆಚ್ಚರಿಕೆ ಪಾಲಿಸಬೇಕು


  ಇನ್ನು ಈ ಕುರಿತು ಇಂದು ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಜನರು ಸ್ವಯಂಪ್ರೇರಿತರಾಗಿ ಕೋವಿಡ್​ ಮುನ್ನೆಚ್ಚರಿಕೆ ವಹಿಸಬೇಕು. ಗುಂಪು ಗೂಡದಂತೆ ನಿರ್ಬಂಧ ಹಾಕಿಕೊಳ್ಳಬೇಕು. ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬಿತರಾಗಬಾರದು. ನಿಮ್ಮ ಜೀವ ನಿಮ್ಮ ರಕ್ಷಣೆ ಎಂಬುದನ್ನು ಮರೆಯಬಾರದು ಎಂದರು


  ಇದನ್ನು ಓದಿ: ರಾಜ್ಯದಲ್ಲಿ ಆನ್​ಲೈನ್​ ಜೂಜಾಟ ನಿಷೇಧಕ್ಕೆ ನಿರ್ಧಾರ: ಸಚಿವ ಮಾಧುಸ್ವಾಮಿ


  ವಿನಾಯಿತಿ ಸುಳಿವು ನೀಡಿದ ಸಚಿವ ಆರ್​ ಅಶೋಕ್​


  ರಾಜ್ಯದ ಗಡಿ ಜಿಲ್ಲೆ ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ ಹೊರತು ಪಡಿಸಿ, ಉಳಿದೆಲ್ಲಾ ಕಡೆ ಸೋಂಕು ಕಡಿಮೆಯಾಗಿದೆ. ಸೋಂಕು ಕಡಿಮೆಯಾಗಿರುವ ಹಿನ್ನಲೆ  ಸಾರ್ವಜನಿಕ ಗಣೇಶ ಉತ್ಸವಕ್ಕೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ವಿನಾಯಿತಿ ಸಿಗುವ ವಿಶ್ವಾಸ ಇದೆ ಎಂದು ಕಂದಾಯ ಸಚಿವ ಆರ್​ ಅಶೋಕ್ ಸುಳಿವು ನೀಡಿದ್ದಾರೆ. ಈ ಕುರಿತು ಇಂದು ಮಾತನಾಡಿರುವ ಅವರು, ಈ ಬಾರಿ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ಕ್ರಮವನ್ನು ಕೊಂಚ ಸರಳಗೊಳಿಸುವಂತೆ ಸಿಎಂ ಬಸವರಾಜ್ ಬೊಮ್ಮಾಯಿಗೆ ಮನವಿ ಮಾಡಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ವಿನಾಯಿತಿ ಕೊಡಿ ಎಂದು ಕೇಳಿದ್ದೇವೆ. ಕೋವಿಡ್​ ತಡೆಯುವುದು ನಮ್ಮ ಪ್ರಮುಖ ಗುರಿ. ಹೀಗಾಗಿ ಕೊವೀಡ್ ತಡೆ ಜೊತೆಗೆ ಆಚರಣೆಗೂ ಸ್ವಲ್ಪ ವಿನಾಯಿತಿ ಸಿಗಲಿದೆ ಎಂದಿದ್ದಾರೆ.


  ಇನ್ನು ಕಳೆದ ಬಾರಿ ಗಣೇಶೋತ್ಸವದ ವೇಳೆ ಸಾರ್ವಜನಿಕವಾಗಿ ಗಣೇಶ ಮೂರ್ತಿ ಸ್ಥಾಪನೆ ಮಾಡುವುದಕ್ಕೆ ಸಂಪೂರ್ಣ ಅವಕಾಶ ನೀಡಿರಲಿಲ್ಲ. ಮನೆ, ದೇವಸ್ಥಾನದಲ್ಲಿ ಮಾತ್ರ ಮೂರ್ತಿ ಇಡುವುದಕ್ಕೆ ಅನುಮತಿ ನೀಡಲಾಗಿತ್ತು. ಗಣೇಶ ತರುವ  ಮತ್ತು ವಿಸರ್ಜಿಸುವ ಪದ್ದತಿಗೆ ನಿರ್ಬಂಧ ಹಾಕಲಾಗಿತ್ತು. ಮನೆಯಲ್ಲಿ ಗಣೇಶ ಹಬ್ಬದಂದು  ಹೆಚ್ಚು ಜನರು ಸೇರುವುದಕ್ಕೆ ಅನುಮತಿ ಇರಲಿಲ್ಲ. ಅಲ್ಲದೇ ಎರಡು ದಿನದೊಳಗೆ ಬಿಡುವಂತೆ ಸೂಚಿಸಲಾಗಿತ್ತು

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:Seema R
  First published: