ಬೆಂಗಳೂರು: ಉದ್ಯಾನ ನಗರಿ (Garden city) ಅಂತ ಎಲ್ಲಾದರೂ ಕೇಳಿದರೆ ಸಾಕು ನಮಗೆ ಮೊದಲು ಥಟ್ಟನೆ ನೆನಪಾಗುವುದೇ ನಮ್ಮ ಬೆಂಗಳೂರು ನಗರ (Bengaluru City) ಅಂತ ಹೇಳಬಹುದು. ಬಹುಶಃ ದೇಶದ ಈ ಎಲ್ಲಾ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ವಾತಾವರಣ (Bengaluru Weather) ವರ್ಷದ ಎಲ್ಲಾ ದಿನಗಳಲ್ಲಿಯೂ ಸ್ವಲ್ಪ ಕೂಲ್ (Cool) ಆಗಿಯೇ ಇರುತ್ತೆ ಅಂತ ಹೇಳಬಹುದು. ಅದರಲ್ಲೂ ಬೆಂಗಳೂರಲ್ಲಿ ಇರೋ ಪಾರ್ಕ್ ಗಳು (Bengaluru Park), ದೊಡ್ಡ ದೊಡ್ಡ ಮರಗಳು (Trees) ಬಹುಶಃ ಬೇರೆ ನಗರಗಳಲ್ಲಿ ಈಗ ನಗರೀಕರಣದಿಂದಾಗಿ ಇಷ್ಟೊಂದು ಇಲ್ಲ ಅಂತ ಅನ್ನಿಸುತ್ತದೆ.
ಬೆಂಗಳೂರಿನಲ್ಲಿರುವ ಪಾರ್ಕ್ ಗಳ ವಿಷಯಕ್ಕೆ ಬಂದಾಗ ಜನರಿಗೆ ಮೊದಲಿಗೆ ತಲೆಗೆ ಬರುವುದು ಒಂದು ಲಾಲ್‌ಬಾಗ್ ಉದ್ಯಾನವನ ಮತ್ತು ಇನ್ನೊಂದು ಕಬ್ಬನ್ ಪಾರ್ಕ್ ಅಂತ ಹೇಳಬಹುದು.
ಹೌದು, ಲಾಲ್‌ಬಾಗ್ ಉದ್ಯಾನವನ ಮತ್ತು ಕಬ್ಬನ್ ಪಾರ್ಕ್ ಉದ್ಯಾನವನ ಎಷ್ಟು ದೊಡ್ಡದಾಗಿವೆ ಅಂತ ಹೇಳಿದರೆ ಅವುಗಳಲ್ಲಿ ಒಮ್ಮೆ ಹಾಗೆ ಸುತ್ತಾಡಿಕೊಂಡು ಬರೋಣ ಅಂತ ಹೋದರೆ ಪ್ರತಿಯೊಂದು ಮೂಲೆಯೂ ಸಹ ನಿಮ್ಮನ್ನು ಬೇರೆ ಬೇರೆ ರಸ್ತೆಗಳಿಗೆ ಕರೆದೊಯ್ಯುತ್ತದೆ ಅಂತ ಹೇಳಬಹುದು.
ಪಾರ್ಕ್ಗಳಲ್ಲಿ ಶಾಂತವಾದ ವಾತಾವರಣ
ಸಾಲು ಸಾಲಾಗಿರುವ ಮರಗಳ ನಡುವೆ ಹಾಗೆ ಸುತ್ತಾಡಿಕೊಂಡು ಬರಲು ಹೋದರೆ ಅಲ್ಲಿನ ತಂಪಾದ ಗಾಳಿ, ಪಕ್ಷಿಗಳ ಕೂಗು, ಪ್ರಶಾಂತವಾದ ವಾತಾವರಣವನ್ನು ಬಿಟ್ಟು ಟ್ರಾಫಿಕ್ ಜಾಮ್ ಆಗಿರುವ ರಸ್ತೆಗಳಿಗೆ ಬರಲು ಮನಸ್ಸೇ ಬರುವುದಿಲ್ಲ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಬೆಂಗಳೂರಿನಲ್ಲಿ ಎರಡನೇ ಕಬ್ಬನ್ ಪಾರ್ಕ್ ಬರುತ್ತಂತೆ!
ಬೆಂಗಳೂರಿನ ಜನರ ಮನಸ್ಸಿನಲ್ಲಿಯೂ ಸಹ ಈ ರೀತಿಯ ದೊಡ್ಡ ದೊಡ್ಡ ಪಾರ್ಕ್ ಗಳು ಇನ್ನಷ್ಟು ತಮ್ಮ ನಗರದಲ್ಲಿ ಸ್ಥಾಪಿಸಬೇಕು ಅಂತ ಆಸೆ ಇದ್ದೇ ಇರುತ್ತದೆ.
ಈ ಬೆಂಗಳೂರಿಗರ ಹೃದಯದ ಮಾತು ಬಹುಶಃ ರಾಜ್ಯ ಸರ್ಕಾರಕ್ಕೆ ಕೇಳಿಸಿದೆ ಅಂತ ಅನ್ನಿಸುತ್ತದೆ ನೋಡಿ. ಏಕೆಂದರೆ ಎಲ್ಲವೂ ಯೋಜನೆಯ ಪ್ರಕಾರವಾಗಿ ನಡೆದರೆ ಬೆಂಗಳೂರು ನಗರ ಎರಡನೇ ಕಬ್ಬನ್ ಪಾರ್ಕ್ ಪಡೆಯುವುದರಲ್ಲಿ ಯಾವುದೇ ಸಂಶಯ ಇಲ್ಲ ಅಂತ ಹೇಳಬಹುದು.
ಯಲಹಂಕ ಬಳಿ 184 ಎಕರೆ ಪ್ರದೇಶದಲ್ಲಿ ಎರಡನೇ ಕಬ್ಬನ್ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಘೋಷಿಸಿದ್ದಾರೆ.
ಈ ಎರಡನೇ ಕಬ್ಬನ್ ಪಾರ್ಕ್ ನಲ್ಲಿ ಏನೆಲ್ಲಾ ಇರುತ್ತೆ ಗೊತ್ತಾ?
ವರದಿಗಳ ಪ್ರಕಾರ, ಯಲಹಂಕ ಬಳಿಯ ಸೊಂಡಪ್ಪನಹಳ್ಳಿ, ಬೆಟ್ಟಹಲಸೂರು ಮತ್ತು ಕಡಿಗನಹಳ್ಳಿ ಗ್ರಾಮಗಳಲ್ಲಿ ಹರಡಿರುವ ಭೂಮಿಯಲ್ಲಿ ಕಬ್ಬನ್ ಪಾರ್ಕ್ ರೀತಿಯ ಹಸಿರು ವಾತಾವರಣ ಇರುವ ದೊಡ್ಡ ಉದ್ಯಾನವನವೊಂದು ನಿರ್ಮಾಣವಾಗಲಿದೆಯಂತೆ. ಈ ದೊಡ್ಡ ಉದ್ಯಾನವು ಆಂಫಿಥಿಯೇಟರ್, ಸರೋವರ ಮತ್ತು ಇತರ ಸೌಲಭ್ಯಗಳನ್ನು ಸಹ ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ.
ಈ ಭೂಮಿಯನ್ನು ತೋಟಗಾರಿಕೆ ಇಲಾಖೆಗೆ ಈಗಾಗಲೇ ಹಸ್ತಾಂತರಿಸಲಾಗಿದ್ದು, ಉದ್ಯಾನವನಕ್ಕೆ ಬೆಂಗಳೂರು ಸಂಸ್ಥಾಪಕರಾದ ಕೆಂಪೇಗೌಡರ ಹೆಸರಿಡಲಾಗುವುದು ಎಂದು ಅಧಿಕಾರಿಯೊಬ್ಬರು ಈಗಾಗಲೇ ತಿಳಿಸಿದ್ದಾರೆ.
ಈ ಭೂಮಿ ಬಿಐಎಎಲ್ ನಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿದೆ ಮತ್ತು ಕೆಂಪೇಗೌಡರ ಜನ್ಮಸ್ಥಳವಾದ ಆವತಿ ಮತ್ತು ಯಲಹಂಕಕ್ಕೆ ಹತ್ತಿರದಲ್ಲಿದೆ ಎಂದು ಹೇಳಲಾಗುತ್ತಿದೆ.
ಈ ವಿಷಯದ ಬಗ್ಗೆ ತೋಟಗಾರಿಕೆ ಸಚಿವರು ಹೇಳುವುದೇನು?
ಈ ವಿಷಯದ ಬಗ್ಗೆ ಮಾತಾಡಿದ ತೋಟಗಾರಿಕೆ ಸಚಿವ ಮುನಿರತ್ನ ಅವರು ದೊಡ್ಡಬಳ್ಳಾಪುರ-ಹಿಂದೂಪುರ ಹೆದ್ದಾರಿಯಲ್ಲಿ ಹೊಸ ಉದ್ಯಾನವಿರಲಿದ್ದು, ಇದನ್ನು ಇಲಾಖೆಯಿಂದ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಯಲಹಂಕದ ಜರಕಬಂಡೆಯಲ್ಲಿ 320 ಎಕರೆ ಪ್ರದೇಶದಲ್ಲಿ ವಿವಿಧೋದ್ದೇಶದ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನವನ್ನು ಸರ್ಕಾರ ಈಗಾಗಲೇ ಅಭಿವೃದ್ಧಿಪಡಿಸುತ್ತಿದ್ದು, ಇದಕ್ಕಾಗಿ 100 ಕೋಟಿ ರೂಪಾಯಿ ಖರ್ಚಾಗುವ ಸಾಧ್ಯತೆಗಳಿವೆ ಎಂದಿದ್ದಾರೆ.
ಇದನ್ನೂ ಓದಿ: Stray Dogs: ಬೀದಿ ನಾಯಿಗಳಿಗೆಲ್ಲ ಬೇಕಾಬಿಟ್ಟಿ ಅನ್ನ ಹಾಕೋಹಾಗಿಲ್ಲ! ಇದಕ್ಕೂ ಸರ್ಕಾರ ಮಾಡಿದೆ ಹೊಸ ರೂಲ್ಸ್
ಬೆಟ್ಟಹಲಸೂರಿನಲ್ಲಿ ನೈಸರ್ಗಿಕ ಬಂಡೆಗಳನ್ನು ಬಳಸಿ 100 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಪ್ರಸ್ತಾಪಿಸಿದೆ. ಶ್ರವಣಬೆಳಗೊಳದ ಗೋಮಟೇಶ್ವರನಿಗಿಂತ ದೊಡ್ಡದಾದ ಕೆಂಪೇಗೌಡರ ಕಲ್ಲಿನ ಏಕಶಿಲೆಯನ್ನು ನಿರ್ಮಿಸಲು ರಾಜ್ಯ ಸರ್ಕಾರ ಯೋಜಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ