ರಾಜ್ಯ ಸರ್ಕಾರ ಇನ್ನೂ 3 ತಿಂಗಳು ಶಾಲೆ ತೆರೆಯದಿರುವುದು ಒಳಿತು; ಹೆಚ್​.ಡಿ. ಕುಮಾರಸ್ವಾಮಿ ಸಲಹೆ

ನಾನು ಬೆಳಿಗ್ಗೆ ಸಿಎಂ ಯಡಿಯೂರಪ್ಪನವರ ಜೊತೆ ಫೋನ್ ಮಾಡಿ ಮಾತಾಡಿದ್ದೆ. ಹಾಗಾಗಿಯೇ ವಿದ್ಯಾಗಮ ಯೋಜನೆ ಹಂಪಡೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ

ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ

  • Share this:
ಬೆಂಗಳೂರು (ಅ. 10): ಮಕ್ಕಳಿಗೆ ಕೊರೋನಾ ಸೋಂಕನ್ನು ಹರಡುತ್ತಿರುವ ವಿದ್ಯಾಗಮ ಯೋಜನೆಯನ್ನು ನಿಲ್ಲಿಸದಿದ್ದರೆ ಮಂಗಳವಾರ ಅಹೋರಾತ್ರಿ ಧರಣಿ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ರಾಜ್ಯ ಸರ್ಕಾರ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಸರ್ಕಾರದ ಈ ನಿರ್ಧಾರಕ್ಕೆ ಹೆಚ್​.ಡಿ. ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ. ನಾನು ಬೆಳಿಗ್ಗೆ ಸಿಎಂ ಯಡಿಯೂರಪ್ಪನವರ ಜೊತೆ ಫೋನ್ ಮಾಡಿ ಮಾತಾಡಿದ್ದೆ. ಹಾಗಾಗಿಯೇ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ. ಸರ್ಕಾರ ಇನ್ನೂ 2ರಿಂದ 3 ತಿಂಗಳು ಶಾಲೆಗಳನ್ನು ಆರಂಭಿಸದೇ ಇರುವುದು ಉತ್ತಮ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಮಾಧ್ಯಮಗಳು ಪ್ರಸಾರ ಮಾಡುತ್ತಲೇ ಇವೆ. ಶಾಲಾ- ಕಾಲೇಜುಗಳನ್ನು ಆರಂಭ ಮಾಡಬೇಕೆಂದು ಸರ್ಕಾರ ನಿರ್ಧಾರ ಮಾಡಿದಾಗ ಮಾಧ್ಯಮಗಳು ಜನಾಭಿಪ್ರಾಯ ಸಂಗ್ರಹ ಮಾಡಿದ್ದವು. ಈಗ ಶಾಲೆಗಳನ್ನು ಪ್ರಾರಂಭ ಮಾಡುವುದನ್ನು ಮುಂದೂಡಿ, ಪರಿಣಿತರ ಸಲಹೆ ಪಡೆಯಲು ಮುಂದಾಗಿದೆ. ವಿದ್ಯಾಗಮ ಯೋಜನೆಯ ಮೂಲಕ ಮಕ್ಕಳನ್ನು ವಠಾರ, ದೇವಸ್ಥಾನಗಳಲ್ಲಿ ಪಾಠ ಹೇಳುವುದನ್ನೂ ಸರ್ಕಾರ ಪ್ರಾರಂಭಿಸಿದೆ. ನಿನ್ನೆಯಿಂದ ಈ ಯೋಜನೆಯಲ್ಲಿ ಆಗುತ್ತಿರುವ ಅನಾಹುತಗಳನ್ನು ಮಾಧ್ಯಮಗಳು ತೋರಿಸುತ್ತಿವೆ. ಶಿಕ್ಷಣ ಸಚಿವರು ಮಾಧ್ಯಮಗಳು ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದೂ ವರದಿ ಮಾಡಲಾಗಿತ್ತು. ಶಿಕ್ಷಕರು ನಿಧನರಾಗಿರುವ ಸುದ್ದಿಗಳನ್ನೂ ಮಾಧ್ಯಮಗಳು ತೋರಿಸುತ್ತಿವೆ. ಇದು ಕೂಡ ಸರ್ಕಾರ ವಿದ್ಯಾಗಮ ಯೋಜನೆ ಹಿಂಪಡೆಯಲು ಕಾರಣವಾಗಿದೆ ಎಂದು ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ವಿದ್ಯಾಗಮ ಯೋಜನೆ ತಾತ್ಕಾಲಿಕ ಸ್ಥಗಿತ; ವಿಪಕ್ಷ, ಪೋಷಕರ ವಿರೋಧದ ಬಳಿಕ ಎಚ್ಚೆತ್ತ ಸರ್ಕಾರ

ಈಗಾಗಲೇ ಕೊರೋನಾ ಸಂಧರ್ಭದಲ್ಲಿ ಅರ್ಧ ಶೈಕ್ಷಣಿಕ ವರ್ಷ ಮುಗಿದಿದೆ. ಶಿಕ್ಷಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗಲೇಬೇಕು. ವಿದ್ಯಾರ್ಥಿಗಳಿಗೆ ರಿಯಾಯಿತಿ ಕೊಟ್ಟು ಪಾಸ್ ಮಾಡುವುದರಿಂದ ಏನೂ ಆಗುವುದಿಲ್ಲ. ಪೋಷಕರ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇನ್ನೂ 2-3 ತಿಂಗಳು ಶಾಲೆ ಆರಂಭ ಮಾಡಬಾರದು ಎಂದು ಕೂಡ ಹೆಚ್​.ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಮಂಡ್ಯದಲ್ಲಿ ರೈತರ ಸಮಾವೇಶ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಹೆಚ್​.ಡಿ. ಕುಮಾರಸ್ವಾಮಿ, ಕಾಂಗ್ರೆಸ್​ನವರಿಗೆ ಈಗ ರೈತರ ಬಗ್ಗೆ ಕಾಳಜಿ ಬಂದಿದೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಒಬ್ಬ ರೈತರ ಮನೆಗೂ ಕಾಂಗ್ರೆಸ್ ನಾಯಕರು ಹೋಗಲಿಲ್ಲ. ಹೋಗಿದ್ದು ನಾವು ಜೆಡಿಎಸ್ ನವರು ಮಾತ್ರ. ಈಗ ಕಾಂಗ್ರೆಸ್​ನವರಿಗೆ ರೈತರ ಬಗ್ಗೆ ಕಾಳಜಿ ಬಂದಿದೆ. ಜನ ಏನೂ ದಡ್ಡರಲ್ಲ, ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
Published by:Sushma Chakre
First published: