HOME » NEWS » State » KARNATAKA GOVERNMENT SANCTION GRANTS TO KAMBALA KKM SESR

Kambala: ಕಂಬಳಕ್ಕೆ ಸರ್ಕಾರದಿಂದ ಬಂಪರ್ ಉಡುಗೊರೆ; 1 ಕೋಟಿ ರೂ ಅನುದಾನ ನೀಡಿದ ಪ್ರವಾಸೋದ್ಯಮ ಇಲಾಖೆ

ಪ್ರವಾಸೋದ್ಯಮ ಇಲಾಖೆ ಕಂಬಳಕ್ಕೆಂದೆ ಒಂದು ಕೋಟಿ ರೂಗಳ ಅನುದಾನವನ್ನು ಬಿಡುಗಡೆಗೊಳಿಸಿದೆ.

news18-kannada
Updated:March 25, 2021, 5:13 PM IST
Kambala: ಕಂಬಳಕ್ಕೆ ಸರ್ಕಾರದಿಂದ ಬಂಪರ್ ಉಡುಗೊರೆ; 1 ಕೋಟಿ ರೂ ಅನುದಾನ ನೀಡಿದ ಪ್ರವಾಸೋದ್ಯಮ ಇಲಾಖೆ
ಸಾಂದರ್ಭಿಕ ಚಿತ್ರ
  • Share this:
ಮಂಗಳೂರು (ಮಾ. 25): ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಭರ್ಜರಿ ಉಡುಗೊರೆ ಸಿಕ್ಕಿದೆ. ಕಂಬಳವನ್ನು ಉತ್ತೇಜಿಸಿ ಪ್ರೋತ್ಸಾಹಿಸಲು ಕೋಟಿ ರೂಗಳ ಅನುದಾನವನ್ನು ಸರ್ಕಾರ ನೀಡಿದೆ. ಇದರಿಂದಾಗಿ ಕಂಬಳಕ್ಕೆ ಆನೆ ಬಲ ಸಿಕ್ಕಿದಂತಾಗಿದೆ. ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಧಾರ್ಮಿಕ ನಂಬಿಕೆ ಮತ್ತು ಕೃಷಿ ಸಂಸ್ಕೃತಿಯನ್ನೊಳಗೊಂಡ ಈ ಜಾನಪದ ಕ್ರೀಡೆ ಕಂಬಳವನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಇದೀಗ ಸರ್ಕಾರವೂ ಕಂಬಳವನ್ನು ಉತ್ತೇಜಿಸಿ ಪ್ರೋತ್ಸಾಹ ನೀಡುವುದಕ್ಕೆ ಮುಂದಾಗಿದೆ. ಪ್ರವಾಸೋದ್ಯಮ ಇಲಾಖೆ ಕಂಬಳಕ್ಕೆಂದೆ ಒಂದು ಕೋಟಿ ರೂಗಳ ಅನುದಾನವನ್ನು ಬಿಡುಗಡೆಗೊಳಿಸಿದೆ. ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ವಾರಗಳ ಹಿಂದೆ ಮಂಗಳೂರಿಗೆ ಭೇಟಿ ನೀಡಿ ಕಂಬಳವನ್ನು ವೀಕ್ಷಿಸಿದ್ದರು. ಕಂಬಳ ಆಯೋಜಕರ ಮನವಿಯಂತೆ ಪ್ರೋತ್ಸಾಹಧನ ನೀಡುವ ಭರವಸೆಯನ್ನು ಆ ಸಂದರ್ಭ ನೀಡಿದ್ದರು. ಅದರಂತೆ ಇದೀಗ ದಕ್ಷಿಣಕನ್ನಡ, ಉಡುಪಿ ಜಿಲ್ಲೆಯ ತಲಾ 10 ಕಂಬಳಕ್ಕೆ ಒಟ್ಟು ಒಂದು ಕೋಟಿ ಅನುದಾನ ಬಿಡುಗಡೆಗೊಳಿಸಿದ್ದಾರೆ.

ಒಂದೊಂದು ಕಂಬಳಕ್ಕೂ 5 ಲಕ್ಷ ರೂಗಳಂತೆ ಅನುದಾನ ನೀಡುವುದಕ್ಕೆ ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದ್ದಾರೆ. ಅನುದಾನ ಪಡೆಯುವ ಕಂಬಳ ಆಯೋಜಕರು ಹಣ ಬಳಕೆ ಪ್ರಮಾಣ ಪತ್ರ, ಲೆಕ್ಕಪರಿಶೋಧಕರ ಲೆಕ್ಕಪಟ್ಟಿ ಸಲ್ಲಿಕೆ ಮಾಡಬೇಕು. ಆಯೋಜನೆ ಮಾಡುವ ಕಂಬಳಗಳು ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಬೇಕು ಎಂಬ ನಿಬಂಧನೆಗಳನ್ನು ಸಹ ಹಾಕಲಾಗಿದೆ. ಅನುದಾನ ನೀಡಿದ ಸರ್ಕಾರದ ನಿರ್ಧಾರಕ್ಕೆ ಕಂಬಳ ಆಯೋಜಕರು, ಕಂಬಳ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ

ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಕಂಬಳದ ಋತು ಆರಂಭವಾದರೆ ಮಾರ್ಚ್ ಅಂತ್ಯದವರೆಗೆ ನಡೆಯುತ್ತದೆ. ದಕ್ಷಿಣ ಕನ್ನಡ-ಉಡುಪಿ-ಕಾಸರಗೋಡು ಜಿಲ್ಲೆಗಳಲ್ಲಿ ನಡೆಯುವ ಕಂಬಳ ಕರಾವಳಿ ಜನರ ಜಾನಪದೀಯ ಕ್ರೀಡೆಯ ನಾಡಿಮಿಡಿತವಾಗಿದೆ‌‌. ಪ್ರತಿಯೊಂದು ಕಂಬಳದಲ್ಲಿ 260 ಕ್ಕೂ ಅಧಿಕ ಜೊತೆ ಕೋಣಗಳು ಭಾಗಿಯಾಗುತ್ತದೆ. ಕಂಬಳ ದಲ್ಲಿ ವಿವಿಧ ವಿಧಗಲ್ಲಿ ಕ್ರೀಡೆ ನಡೆಯುತ್ತದೆ. ಪ್ರಮುಖವಾಗಿ ಕನೆ ಹಲಗೆ, ಅಡ್ಡ ಹಲಗೆ, ಹಗ್ಗ ಕಿರಿಯ,  ಹಗ್ಗ ಹಿರಿಯ, ನೇಗಿಲು ಕಿರಿಯ ಮತ್ತು ನೇಗಿಲು ಹಿರಿಯ ವಿಭಾಗದಲ್ಲಿ ಕಂಬಳದ ಕ್ರೀಡಾ ಕೂಟ ನಡೆಯುತ್ತದೆ.

ಇದನ್ನು ಓದಿ: ಪುತ್ತೂರು ನಗರ ಯೋಜನಾ ಪ್ರಾಧಿಕಾರದಿಂದ ಮೊದಲ ಬಾರಿಗೆ ಎರಡು ಕೆರೆಗಳ ಪುನಶ್ಚೇತನಕ್ಕೆ ಕ್ರಮ

ಕೊರೊನಾ ಆತಂಕದ ನಡುವೆಯೂ ಈ ಬಾರಿಯೂ ಕಂಬಳದಲ್ಲಿ ವಿಶ್ವ ದಾಖಲೆ ಯಾಗಿದೆ. ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಕಂಬಳದ ಓಟಗಾರ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ, ವೇಣೂರಿನ ಸೂರ್ಯ ಚಂದ್ರ ಜೋಡುಕರೆ ಕಂಬಳದಲ್ಲಿ ಇರುವೈಲು ಪಾಣಿಲ ಬಾಡಪೂಜಾರಿಯವರ ಕೋಣಗಳನ್ನು ಅತೀ ಕಡಿಮೆ ಸಮಯದಲ್ಲಿ ಓಡಿಸಿ ದಾಖಲೆ ಮೆರೆದಿದ್ದಾರೆ. 100 ಮೀಟರ್ ದೂರವನ್ನು ಕೇವಲ 8.16 ಸೆಕೆಂಡ್ ಗಳಲ್ಲಿ ಕ್ರಮಿಸಿ ದಾಖಲೆ ಮಾಡಿದ್ದಾರೆ.

ಸಾಮಾನ್ಯವಾಗಿ ಕಂಬಳ ಆಯೋಜನೆ ಮಾಡುವುದಕ್ಕೆ ಸುಮಾರು 15ರಿಂದ 20 ಲಕ್ಷ ಹಣ ಖರ್ಚಾಗುತ್ತದೆ. ಹೀಗಾಗಿ ಸದ್ಯ ಸರ್ಕಾರ ಐದು ಲಕ್ಷಗಳ ಅನುದಾನ ನೀಡಿರುವುದರಿಂದ ಕಂಬಳ ಆಯೋಜಕರಿಗೆ ಸಹಾಯವಾಗಲಿದೆ. ಇದರ ಜೊತೆ ಕಂಬಳಕ್ಕೆ ಸರ್ಕಾರವೇ ಅನುದಾನ ನೀಡುತ್ತೆ ಎಂಬುದು ಕಂಬಳ ಅಭಿಮಾನಿಗಳಿಗೆ ಹೆಮ್ಮೆಯ ವಿಚಾರವಾಗಿದೆ.
Published by: Seema R
First published: March 25, 2021, 5:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories