ಡಿಸೆಂಬರ್ 31ರೊಳಗೆ ಬಿಬಿಎಂಪಿ ಚುನಾವಣೆ (BBMP Election) ನಡೆಸಲು ರಾಜ್ಯ ಸರ್ಕಾರಕ್ಕೆ (Karnataka Government) ಹೈಕೋರ್ಟ್ (high court) ಸೂಚನೆ ನೀಡಿತ್ತು. ಇದೀಗ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸಲು ಮೂರು ತಿಂಗಳ ಸಮಯವಕಾಶ ಕೇಳಿದೆ. ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿಯಿಂದ ಹಿಂದುಳಿದ ವರ್ಗಗಳ ಮೀಸಲಾತಿ ಹಾಗೂ ರಾಜಕೀಯ ಹಿಂದುಳಿದಿರುವಿಕೆ ಬಗ್ಗೆ ಮಾಹಿತಿ ಕೇಳಲಾಗಿದೆ. ಈ ಸಂಬಂಧ ಭಕ್ತವತ್ಸಲ ಸಮಿತಿ ವರದಿ (Bhaktavatsala Committee Report) ನೀಡಲು ಮೂರು ತಿಂಗಳ ಸಮಯ ಕೇಳಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ನ್ಯಾಯಾಲಯದ ಮುಂದೆ ಹೋಗಿರುವ ರಾಜ್ಯ ಸರ್ಕಾರ ಮೂರು ತಿಂಗಳ ಸಮಯಾವಕಾಶ ಕೇಳಿದೆ.
ಈ ಎಲ್ಲಾ ಬೆಳವಣಿಗೆ ಗಮನಿಸಿದ್ರೆ ವಿಧಾನಸಭಾ ಎಲೆಕ್ಷನ್ ನಂತರವೇ ಬಿಬಿಎಂಪಿ ಚುನಾವಣೆ ನಡೆಯುತ್ತಾ ಅನ್ನೋ ಪ್ರಶ್ನೆ ಮೂಡಿದೆ. ರಾಜ್ಯ ಸರ್ಕಾರದ ಪರವಾಗಿ ಸಹಾಯಕ ಅಡ್ವೋಕೇಟ್ ಜನರಲ್ (ಎಎಜಿ) ಧ್ಯಾನ್ ಚಿನ್ನಪ್ಪ ಮನವಿ ಮಾಡಿದ್ದಾರೆ.
ಡಿಸೆಂಬರ್ 6ಕ್ಕೆ ವಿಚಾರಣೆ ಮುಂದೂಡಿಕೆ
ಸುಪ್ರೀಂಕೋರ್ಟ್ ಸಹ ಚುನಾವಣೆಗೆ ನಿರ್ದೇಶನ ನೀಡಲು ಕೋರಲಾಗಿದೆ. ಇಂದು ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆಗಳಿವೆ ಎಂದು ಚುನಾವಣಾ ಆಯೋಗದ ಪರ ವಕೀಲರಾದ ಕೆ.ಎನ್.ಫಣೀಂದ್ರ ಕರ್ನಾಟಕ ಹೈಕೋರ್ಟ್ ಗಮನಕ್ಕೆ ತಂದರು. ಇಂದು ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಿದೆ.
ಆಗಸ್ಟ್ 3ರಂದು ಬಿಬಿಎಂಪಿ ಚುನಾವಣೆಯ ಮೀಸಲಾತಿಯನ್ನು ಪ್ರಕಟಿಸಲಾಗಿತ್ತು. ಹೈಕೋರ್ಟ್ ಸೆಪ್ಟೆಂಬರ್ನಲ್ಲಿ ಮೀಸಲಾತಿಯನ್ನು ರದ್ದುಗೊಳಿಸಿತ್ತು. ನವೆಂಬರ್ 30ರೊಳಗೆ ಮೀಸಲಾತಿ ಪ್ರಕಟಿಸಿ, ಡಿಸೆಂಬರ್ ನೊಳಗೆ ಚುನಾವಣೆ ನಡೆಸುವಂತೆ ಆದೇಶ ನೀಡಿತ್ತು.
ಇದೀಗ ಮೀಸಲಾತಿ ಪ್ರಕಟಿಸಲು ವಿಫಲವಾಗಿರುವ ರಾಜ್ಯ ಸರ್ಕಾರ ಭಕ್ತವತ್ಸಲ ಸಮಿತಿ ವರದಿಯ ಕಾರಣ ನೀಡಿ ಚುನಾವಣೆಗೆ ಸಮಯ ಕೇಳಿದೆ.
ವಾರ್ಡ್ ಪುನರ್ವಿಂಗಡನೆಗೆ ಆಕ್ಷೇಪ
ಬಿಬಿಎಂಪಿ ವಾರ್ಡ್ ಪುನರ್ವಿಂಗಡನೆ ಬಗ್ಗೆ ಸಾರ್ವಜನಿಕರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಒಂದೇ ವಾರ್ಡ್ ಮತದಾರರ ಹೆಸರು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಂದಿರೋದಕ್ಕೆ ಮತದಾರರು ಗೊಂದಲಕ್ಕೀಡು ಆಗಿದ್ದಾರೆ.
ಈ ಸಮಸ್ಯೆಯನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರ್ಲೆ ಅವರಿದ್ದ ವಿಭಾಗೀಯ ಪೀಠ ಈ ಸಂಬಂಧ ಸರ್ಕಾರಕ್ಕೆ ನೀಡಿತ್ತು.
ಇದನ್ನೂ ಓದಿ: Islam College: ಮುಸ್ಲಿಂ ಯುವತಿಯರಿಗಾಗಿ ತೆರೆಯುತ್ತಿರುವ ಕಾಲೇಜುಗಳಲ್ಲಿ ಷರಿಯತ್ ಕಾನೂನು ಪಾಲನೆ!
ಚುನಾವಣೆ ಮುಂದೂಡಿಕೆಯಾಗಲಿ ಅನ್ನೋ ಚಿಂತನೆಯಲ್ಲಿ ಬಿಜೆಪಿ
2023ರ ವಿಧಾನಸಭಾ ಚುನಾವಣೆ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ನಡೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಬಿಬಿಎಂಪಿ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ವ್ಯಕ್ತವಾದ್ರೆ, ವಿಧಾನಸಭಾ ಎಲೆಕ್ಷನ್ ಮೇಲೆ ನೇರ ಪರಿಣಾಮ ಬೀರಬಹುದು.
ಬಿಬಿಎಂಪಿ ಚುನಾವಣೆಯ ಫಲಿತಾಂಶವನ್ನು 2023ರ ಚುನಾವಣೆಯ ದಿಕ್ಸೂಚಿ ಎಂದು ಹೇಳಲಾಗುತ್ತಿದೆ. ಆದ್ದರಿಂದ ಬಿಬಿಎಂಪಿ ಚುನಾವಣೆಯನ್ನ ಮುಂದೂಡಿಕೆ ಮಾಡಿದ್ರೆ ಒಳ್ಳೆಯದು ಎಂಬ ಮಾತುಗಳು ಬಿಜೆಪಿ ಅಂಗಳದಲ್ಲಿ ಕೇಳಿ ಬರುತ್ತಿವೆ.
ಕಾಂಗ್ರೆಸ್ ಕಿಡಿ
ಇನ್ನು ಉದ್ದೇಶಪೂರ್ವಕವಾಗಿಯೇ ಬಿಬಿಎಂಪಿ ಚುನಾವಣೆಯನ್ನು ಮುಂದೂಡಿಕೆ ಮಾಡುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಈ ಹಿನ್ನೆಲೆ ಚುನಾವಣೆ ಮುಂದೂಡಿಕೆ ಮಾಡಲಾಗ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇದನ್ನೂ ಓದಿ: Jharkhand HC: 15 ವರ್ಷದ ಮುಸ್ಲಿಂ ಬಾಲಕಿ ತನ್ನಿಷ್ಟದ ಹುಡುಗನೊಂದಿಗೆ ಮದುವೆಯಾಗಬಹುದು
ಬಿಬಿಎಂಪಿ ಸದಸ್ಯರ ಸಂಖ್ಯೆ 198ರಿಂದ 243ಕ್ಕೆ ಹೆಚ್ಚಳ
ಬಿಬಿಎಂಪಿ ಪ್ರಸ್ತುತ 198 ಸದಸ್ಯ ಸ್ಥಾನವನ್ನು ಹೊಂದಿದೆ. ಇದೀಗ ರಾಜ್ಯ ಸರ್ಕಾರ ಆ ಸ್ಥಾನಗಳನ್ನು 243ಕ್ಕೆ ಹೆಚ್ಚಳ ಮಾಡಿದೆ. ಬಿಬಿಎಂಪಿ ಕಾರ್ಪೊರೇಟರ್ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಳ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದರಿಂದಾಗಿ ಕಾರ್ಪೊರೇಟರ್ಗಳ ಸಂಖ್ಯೆ 198 ರಿಂದ 243 ಕ್ಕೆ ಏರಿಕೆಯಾದಂತಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ