ಬೆಂಗಳೂರು (ಅ.7): ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆ ರಾಜ್ಯದಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯ. ಇಲ್ಲದಿದ್ದಲ್ಲಿ ನಗರದಲ್ಲಿ 1000 ರೂ, ಗ್ರಾಮೀಣ ಪ್ರದೇಶದಲ್ಲಿ 500 ರೂ ದಂಡ ವಿಧಿಸುವುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಆದರೆ, ಈ ದುಬಾರಿ ದಂಡಕ್ಕೆ ರಾಜ್ಯದೆಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಜನಸಾಮಾನ್ಯರಿಂದ ಜನಪ್ರತಿನಿಧಿಗಳವರೆಗೆ ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನಲೆ ರಾಜ್ಯ ಸರ್ಕಾರ ಈ ದಂಡ ಪ್ರಮಾಣ ಇಳಕೆ ಮಾಡಿ ಆದೇಶ ಮಾಡಿದೆ. ನಗರ ಪ್ರದೇಶದಲ್ಲಿ 1000ರೂ ಇದ್ದ ದಂಡ ಪ್ರಮಾಣವನ್ನು 250 ರೂಗೆೆ ಗ್ರಾಮೀಣ ಪ್ರದೇಶದಲ್ಲಿ 500 ರೂ ನಿಂದ 100ರೂಗೆ ಇಳಿಸಿ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ಜನರಿಗೆ ಮಾಸ್ಕ್ ಕಡ್ಡಾಯವಾಗಿ ಧರಿಸುವ ಕುರಿತು ಅರಿವು ಮೂಡಿಸಲು ಸರ್ಕಾರ ಈ ದಂಡಕ್ಕೆ ಮುಂದಾಗಿತ್ತು. ದುಬಾರಿ ದಂಡವಿಧಿಸುವುದರಿಂದ ಎಚ್ಚೆತ್ತು ಜನರು ಮಾಸ್ಕ್ ಹಾಕಿಕೊಳ್ಳುತ್ತಾರೆ ಎಂಬುದು ಸರ್ಕಾರದ ನಿಲುವಾಗಿತ್ತು. ಅ,1ರಿಂದ ಜಾರಿಗೆ ಬಂದ ಈ ಹೊಸ ನಿಯಮದಿಂದ ಜನರಿಗೆ ಗಾಯದ ಮೇಲೆ ಬಿಸಿ ಎಳೆದಂತೆ ಆಗಿತ್ತು. ಈಗಾಗಲೇ ಕೊರೋನಾದಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಇಷ್ಟು ದುಬಾರಿ ದಂಡ ಕಟ್ಟಿಸಿಕೊಳ್ಳುವ ಮೂಲಕ ಸರ್ಕಾರ ಜನರ ಮೇಲೆ ಭಾರ ಹಾಕುತ್ತಿದೆ ಎಂಬ ಮಾತು ಕೇಳಿಬಂದಿತು. ಅಲ್ಲದೇ ವಿಪಕ್ಷಗಳು ಸರ್ಕಾರ ಈ ಮೂಲಕ ಆದಾಯ ಸಂಗ್ರಹಕ್ಕೆ ಮುಂದಾಗಿದೆ ಎಂಬ ಟೀಕೆ ವ್ಯಕ್ತಪಡಿಸಿದ್ದವು. ಈ ಹಿನ್ನಲೆ ಈ ಮಾಸ್ಕ್ ದಂಡ ದರವನ್ನು ಕಡಿಮೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.
ಈ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆದೇಶ ನೀಡಿದ್ದು, 'ಜೀವ ಮತ್ತು ಜೀವನ' ಎರಡನ್ನೂ ಸರಿದೂಗಿಸಿಕೊಂಡ ಹೋಗಲು ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ. ಜನರು ಸ್ವಯಂ ಪ್ರೇರಿತರಾಗಿ ಮಾಸ್ಕ್ , ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾರ್ವಜನಿಕರ ವಿರೋಧ ಹಾಗೂ ತಜ್ಞರ ಸಲಹೆಯಂತೆ ಈ ದಂಡದ ದರ ಇಳಿಸಲಾಗಿದೆ ಈ ಮೂಲಕ ಸರ್ಕಾರದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ