HOME » NEWS » State » KARNATAKA GOVERNMENT PLANNING TO USE PRIVATE BUSES AND CABS TOMORROW DUE TO KSRTC BMTC EMPLOYEES STRIKE SCT

ನಾಳೆ ಸಾರಿಗೆ ನೌಕರರ ಮುಷ್ಕರ; ಹೆಚ್ಚುವರಿ ಖಾಸಗಿ ಬಸ್, ಕ್ಯಾಬ್​​ಗಳನ್ನು ರಸ್ತೆಗಿಳಿಸಲು ಚಿಂತನೆ

ಸಾರಿಗೆ ಇಲಾಖೆ ನಾಳೆ ನೌಕರರು ಕೆಲಸಕ್ಕೆ ಹಾಜರಾಗದಿದ್ದರೆ ಖಾಸಗಿ ಬಸ್ ಗಳನ್ನು ರಸ್ತೆಗಿಳಿಸಲು ಚಿಂತನೆ ನಡೆಸಿದೆ. ಇದರ ಜೊತೆಗೆ ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ನಾಳೆ ಕ್ಯಾಬ್ ವ್ಯವಸ್ಥೆ ಇರಲಿದೆ.

news18-kannada
Updated:April 6, 2021, 10:13 AM IST
ನಾಳೆ ಸಾರಿಗೆ ನೌಕರರ ಮುಷ್ಕರ; ಹೆಚ್ಚುವರಿ ಖಾಸಗಿ ಬಸ್, ಕ್ಯಾಬ್​​ಗಳನ್ನು ರಸ್ತೆಗಿಳಿಸಲು ಚಿಂತನೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಏ. 6): ಸಾರಿಗೆ ನೌಕರರ 9 ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ್ದ ಸರ್ಕಾರ ಆ ಬೇಡಿಕೆಗಳನ್ನು ಇನ್ನೂ ಈಡೇರಿಸದ ಹಿನ್ನೆಲೆಯಲ್ಲಿ ನಾಳೆಯಿಂದ ಸಾರಿಗೆ ನೌಕರರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ ಮೂರ್ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ, ಪರ್ಯಾಯ ಮಾರ್ಗ ಹುಡುಕಿರುವ ಸಾರಿಗೆ ಇಲಾಖೆ ನಾಳೆ ನೌಕರರು ಕೆಲಸಕ್ಕೆ ಹಾಜರಾಗದಿದ್ದರೆ ಖಾಸಗಿ ಬಸ್ ಗಳನ್ನು ರಸ್ತೆಗಿಳಿಸಲು ಚಿಂತನೆ ನಡೆಸಿದೆ. ಈಗಾಗಲೇ ಆರ್‌ಟಿಓ ಜಂಟಿ ಆಯುಕ್ತರ ನೇತೃತ್ವದಲ್ಲಿ ಖಾಸಗಿ ಬಸ್ ಸಂಘಟನೆಗಳ ಜೊತೆಗೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಪರಸ್ಪರ ಸಹಮತದೊಂದಿಗೆ ನಾಳೆ ಖಾಸಗಿ ಬಸ್​ಗಳನ್ನು ರಸ್ತೆಗೆ ಇಳಿಸಲು ಖಾಸಗಿ ಬಸ್ ಮಾಲೀಕರು ಒಪ್ಪಿದ್ದಾರೆ.

ಇದರ ಜೊತೆಗೆ ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ನಾಳೆ ಕ್ಯಾಬ್ ವ್ಯವಸ್ಥೆ ಇರಲಿದೆ. ಕ್ಯಾಬ್ ಸಂಘಟನೆಗಳ ಜೊತೆಗೂ ಸಾರಿಗೆ ಇಲಾಖೆ ಮಾತನಾಡಿದೆ. ನಾಳೆಯಿಂದ ಕೆಲವು ದಿನಗಳವರೆಗೆ ನಿಮ್ಮ ಯಾವ ಸಿಬ್ಬಂದಿಗಳಿಗೂ ರಜೆ ತೆಗೆದುಕೊಳ್ಳದೆ ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡಲಾಗಿದೆ. ಜಯನಗರ ಆರ್ ಟಿಓ ಜಂಟಿ ಆಯುಕ್ತ ಹಾಲಸ್ವಾಮಿ ನೇತೃತ್ವದಲ್ಲಿ ಖಾಸಗಿ ಬಸ್ ಮಾಲೀಕರ ಜೊತೆಗಿನ ಸಭೆ ನಡೆದಿದೆ.

ಈ ಹಿಂದೆ ಡಿಸೆಂಬರ್ ತಿಂಗಳಲ್ಲಿ ಮುಷ್ಕರ ಮಾಡಿದ್ದ ಸಾರಿಗೆ ನೌಕರರು ಬಳಿಕ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ವಾಪಾಸ್ ಪಡೆದಿದ್ದರು. ಮುಖ್ಯವಾಗಿ ಆರನೇ ವೇತನ ಜಾರಿಗೆ ಸರ್ಕಾರ ಹಿಂದೇಟು ಹಾಕಿತ್ತು. ಆರನೇ ವೇತನ ಆಯೋಗ ಜಾರಿಯಾಗಲೇಬೇಕು ಎಂದು ನೌಕರರು ಬಿಗಿಪಟ್ಟು ಹಿಡಿದಿದ್ದರು. ಹೀಗಾಗಿ ನಾಳೆಯಿಂದ ಸಾರಿಗೆ ಮುಷ್ಕರಕ್ಕೆ ನೌಕರರು ನಿರ್ಧರಿಸಿದ್ದಾರೆ.

ಈ ನಡುವೆ ಸಾರಿಗೆ ನೌಕರರಿಗೆ ವೇತನ ಹೆಚ್ಚಳದ ಆಮಿಷ ತೋರಿಸಿ ಮುಷ್ಕರವನ್ನು ಹತ್ತಿಕ್ಕಲು ಸರ್ಕಾರ ಪ್ಲಾನ್ ಮಾಡಿತ್ತು. ಅದು ಯಾವುದೂ ಕೈಗೂಡದ ಹಿನ್ನೆಲೆಯಲ್ಲಿ ನಾಳೆ ಬಹುತೇಕ ಮುಷ್ಕರ ಫಿಕ್ಸ್ ಎನ್ನಲಾಗಿದೆ. ಇದರಿಂದ ಬೆಂಗಳೂರಿಗೆ ನಾಳೆ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಲಿದೆ. ಬೆಂಗಳೂರಿನಲ್ಲಿ ಪ್ರತಿನಿತ್ಯ ಸಂಚರಿಸುತ್ತಿದ್ದ ಆರು ಸಾವಿರ ಬಸ್ಸುಗಳ ಸಂಚಾರ ನಾಳೆ ಸ್ತಬ್ಧವಾಗಲಿದೆ. ಇದರಿಂದ ಪ್ರತಿನಿತ್ಯ ಬೆಂಗಳೂರಲ್ಲಿ ಸಂಚರಿಸುತ್ತಿದ್ದ ಮೂವತ್ತು ಲಕ್ಷ ಪ್ರಯಾಣಿಕರಿಗೆ ತೊಂದರೆಯಾಗಲಿದೆ.

ಇದನ್ನೂ ಓದಿ: KSRTC Strike: ಸರ್ಕಾರದ ವಿರುದ್ಧ ನಾಳೆಯಿಂದ ಸಾರಿಗೆ ನೌಕರರ ಮುಷ್ಕರ; 20 ಸಾವಿರಕ್ಕೂ ಹೆಚ್ಚು ಬಸ್​ಗಳ ಸಂಚಾರ ಬಂದ್

ಬೆಂಗಳೂರಿನ ಸಂಚಾರಿ ಜೀವನಾಡಿಯಲ್ಲಿ ಅಲ್ಲೋಲ್ಲ ಕಲ್ಲೋಲ ಉಂಟಾಗಲಿದ್ದು, ಕೆಎಸ್ಆರ್​ಟಿಸಿ, ಈಶಾನ್ಯ, ವಾಯುವ್ಯ ಸಾರಿಗೆಯ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಲಿದೆ. ನಾಳೆಯ ಪ್ರತಿಭಟನೆಯಿಂದ ಒಟ್ಟು ರಾಜ್ಯಾದ್ಯಂತ ಒಂದು ಕೋಟಿ ಮಂದಿಗೆ ತೀವ್ರ ತೊಂದರೆಯಾಗಲಿದೆ. ಸುಮಾರು ಇಪ್ಪತ್ತು ಸಾವಿರ ಬಸ್ಸುಗಳ ಸಂಚಾರ ಬಂದ್ ಆಗಲಿದ್ದು, ಮೂರ್ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಬಸ್ ಸಂಚಾರ ಬಂದ್ ಆಗಲಿದೆ. ಇದರಿಂದ ಪ್ರಯಾಣಿಕರಿಗೆ ದೊಡ್ಡ ಮಟ್ಟದಲ್ಲಿ ತೊಂದರೆಯಾಗಲಿದೆ.

ಸಾರಿಗೆ ನೌಕರರಿಗೆ ಸರ್ಕಾರ ಕೊಟ್ಟ 9 ಭರವಸೆಗಳು:1) ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆ.

2) ಕೋವಿಡ್ 19 ನಿಂದ ಸಾವಿಗೀಡಾದ್ರೆ 30 ಲಕ್ಷ ಪರಿಹಾರ‌.

3) ಅಂತರ್ ನಿಗಮ ವರ್ಗಾವಣೆಗೆ ಸೂಕ್ತ ನೀತಿ ರಚನೆ.

4) ತರಬೇತಿ ನೌಕರರ ಅವಧಿಯನ್ನ 2 ವರ್ಷದಿಂದ 1 ವರ್ಷಕ್ಕೆ ಇಳಿಕೆ.

5) ನಿಗಮಗಳಲ್ಲಿ ಮಾನವ ಸಂಪನ್ಮೂಲ ವ್ಯವಸ್ಥೆ ಜಾರಿಗೆ ತರುವುದು.

6) ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ ನೀಡಲು ತೀರ್ಮಾನ.

7) ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ ಜಾರಿ.

8) ಎನ್ಐ ಎನ್ ಐಎನ್ಸಿ ಪದ್ದತಿ ಬದಲಾಗಿ ಪರ್ಯಾಯ ವ್ಯವಸ್ಥೆ ಜಾರಿ.

9) ವೇತನ ಪರಿಷ್ಕರಣೆ ಸಂಬಂಧಿಸಿದಂತೆ 6ನೇ ವೇತನ ಆಯೋಗ ಶಿಫಾರಸು ಪರಿಗಣನೆ ( ಸರ್ಕಾರದ ಆರ್ಥಿಕ ಅಂಶ ಪರಿಗಣಿಸಿ ತೀರ್ಮಾನ)
Youtube Video

ಸಾರಿಗೆ ನೌಕರರು ರಾಜ್ಯ ಸರ್ಕಾರದ ಮುಂದಿಟ್ಟಿದ್ದ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಆ ಭರವಸೆಯನ್ನು ಈಡೇರಿಸದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಮತ್ತೆ ರಸ್ತೆಗಿಳಿದಿದ್ದಾರೆ.
Published by: Sushma Chakre
First published: April 6, 2021, 10:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories