ಪ್ರತಿ ಮಳೆಗಾಲದಲ್ಲಿ ಹೆಬ್ಬಾಳೆ ಸೇತುವೆ ಮುಳುಗಡೆ; 2 ದಶಕದಿಂದ ನಿಂತಿಲ್ಲ ಕಳಸದ ಜನರ ಗೋಳು

ಇದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಹೆಬ್ಬಾಳೆ ಸೇತುವೆ. ಮಳೆಗಾಲದಲ್ಲಿ ಸೇತುವೆ ಮೇಲೆ ನಾಲ್ಕೈದು ಅಡಿ ಎತ್ತರದಲ್ಲಿ ನೀರು ಹರಿಯೋ ಈ ಸೇತುವೆ ದಿನದಲ್ಲಿ ನಾಲ್ಕೈದು ಬಾರಿ ಮುಳುಗುತ್ತದೆ.

ಹೆಬ್ಬಾಳೆ ಸೇತುವೆ

ಹೆಬ್ಬಾಳೆ ಸೇತುವೆ

  • Share this:
ಚಿಕ್ಕಮಗಳೂರು (ಅನ. 8): ಈ ಮಳೆಗಾಲ ಮುಗಿದ ತಕ್ಷಣ ಶಾಶ್ವತ ಪರಿಹಾರ ಮಾಡುತ್ತೇವೆ ಎಂದು ಜನಪ್ರತಿನಿಧಿಗಳು, ಸರ್ಕಾರ ಹೇಳುತ್ತಾ ಬರೋಬ್ಬರಿ 20 ವರ್ಷಗಳೇ ಕಳೆದಿವೆ. ಆದರೂ ಆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಮಳೆಗಾಲದಲ್ಲಿ ದಿನಕ್ಕೆ ನಾಲ್ಕೈದು ಬಾರಿ ಮುಳುಗಡೆಯಾಗೋ ಆ ಸೇತುವೆಯಿಂದ ಅಲ್ಲಿಯ ಜನ ಅಲ್ಲೇ, ಇಲ್ಲಿಯ ಜನ ಇಲ್ಲೇ. ರಾಜಕಾರಣಿಗಳು, ಸರ್ಕಾರದ ಆಶ್ವಾಸನೆಯಿಂದ ಬೆಂದು ಬೆಂಡಾಗಿರುವ ಜನಸಾಮಾನ್ಯರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. 

ಇದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಹೆಬ್ಬಾಳೆ ಸೇತುವೆ. ಮಳೆಗಾಲದಲ್ಲಿ ಸೇತುವೆ ಮೇಲೆ ನಾಲ್ಕೈದು ಅಡಿ ಎತ್ತರದಲ್ಲಿ ನೀರು ಹರಿಯೋ ಈ ಸೇತುವೆ ದಿನದಲ್ಲಿ ನಾಲ್ಕೈದು ಬಾರಿ ಮುಳುಗುತ್ತದೆ. ಈ ವರ್ಷದ ಆಗಸ್ಟ್ ತಿಂಗಳ ಮೊದಲ ವಾರದ ಮಳೆಗೆ ಒಂದೇ ವಾರಕ್ಕೆ ಹಲವು ಬಾರಿ ಮುಳುಗಡೆಯಾಗಿತ್ತು. ಕಳೆದ 20 ವರ್ಷಗಳಿಂದಲೂ  ಇದು ನಿರಂತರ ಕ್ರಿಯೆ. ಬೇಸಿಗೆ ಬಂದಾಗ ಮಾಡುತ್ತೇವೆ ಎಂಬ ಜನನಾಯಕರು 20 ವರ್ಷಗಳಿಂದ ಚುನಾವಣೆಗಳನ್ನು ದೂಡುತ್ತಿದ್ದಾರೆ. ಈ ಸೇತುವೆ ಮುಳುಗಡೆಯಾದರೆ, ಯಾವ ವಾಹನವೂ ಸಂಚರಿಸುವಂತಿಲ್ಲ. ಹೊರನಾಡಿನ ಅನ್ನಪೂರ್ಣೇಶ್ವರಿ ದೇಗುಲಕ್ಕೆ ಬರುವ ಹೊರ ರಾಜ್ಯ, ಜಿಲ್ಲೆಯ ವಾಹನಗಳು ರಾತ್ರಿ ವೇಳೆ, ಈ ಸೇತುವೆ ಮೇಲೆ ನೀರಲ್ಲಿ ತೊಯ್ದು ನಿಂತ ಉದಾಹರಣೆಗಳಿವೆ.

Karnataka Government not Sanctioned News Bridge in Chikmagalur Kalasa Hebbale
ಹೆಬ್ಬಾಳೆ ಸೇತುವೆ


ಆದರೆ, ಈವರೆಗೂ ಕೂಡ ಸಂಬಂಧಪಟ್ಟವರಿಗೆ ಬೇಸಿಗೆಯೇ ಬಂದಿಲ್ಲ. ಆದರೀಗ, ನೀರಿನಲ್ಲಿ ತೊಯ್ದ ಈ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಅವನತಿಯ ಅಂಚಿನಲ್ಲಿದೆ. ಒಂದು ವೇಳೆ ಕುಸಿದು ಬಿದ್ದರೆ ಆಗುವ ಅನಾಹುತ ದೊಡ್ಡ ಪ್ರಮಾಣದ್ದಾಗಿರುತ್ತದೆ. ಸೇತುವೆಯನ್ನು ಎತ್ತರಿಸಿಕೊಡುವಂತೆ ಸ್ಥಳೀಯರು ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ. ಆದರೆ, ಸ್ಥಳೀಯರ ಮನವಿಗೆ ಸರ್ಕಾರದಿಂದ ಸಿಕ್ಕ ಕೊಡುಗೆ ಶೂನ್ಯ.

ಇದನ್ನೂ ಓದಿ: ಬೆಂಗಳೂರು ಗಲಭೆ ಕೇಸ್; ಮಾಜಿ ಮೇಯರ್ ಸಂಪತ್ ರಾಜ್ ಕುರಿತು ಮೈಸೂರು, ಮಹಾರಾಷ್ಟ್ರದಲ್ಲೂ ಸಿಕ್ಕಿಲ್ಲ ಸುಳಿವು

ಇನ್ನು ಈ ಸೇತುವೆಗೆ ಯಾವುದೇ ತಡೆಗೋಡೆಗಳಿಲ್ಲ. ರಾತ್ರಿ ವೇಳೆ, ವಾಹನ ಸ್ವಲ್ಪ ಜಾರಿದರೂ ಕೂಡ ನದಿ ಪಾಲಾಗುವುದರಲ್ಲಿ ಎರಡು ಮಾತಿಲ್ಲ. ಈ ಮಾರ್ಗವಾಗಿ ಹೊರನಾಡಿನ ಅನ್ನಪೂರ್ಣೇಶ್ವರಿಯ ದರ್ಶನ ಪಡೆಯಲು ಹೋಗುವ ಪ್ರವಾಸಿಗರೇ ಹೆಚ್ಚು. ರಸ್ತೆ ಹಾಗೂ ತಿರುವು ಪರಿಚಯವಿರುವ ಚಾಲಕರಾದರೆ ಓಕೆ. ಹೊಸಬರಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಮಾರ್ಗ ನೀರಿನಲ್ಲಿ ಮುಳುಗಿದರೆ ಸುಮಾರು 10ರಿಂದ 15 ಕಿ.ಮೀ. ಸುತ್ತಿಕೊಂಡು ದೇಗುಲಕ್ಕೆ ಹೋಗಬೇಕಾಗುತ್ತದೆ. ಮಳೆಗಾಲದಲ್ಲಿ ಬೇರೆ ಮಾರ್ಗವಿಲ್ಲದೆ ರೋಗಿಗಳು ಕೂಡ ಸಂಕಷ್ಟಕ್ಕೀಡಾಗಿದ್ದಾರೆ.

ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಈ ಸೇತುವೆ ವರ್ಷದಿಂದ ವರ್ಷಕ್ಕೆ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ. 20 ವರ್ಷದಿಂದ ಜನರ ಸಮಸ್ಯೆಯೊಂದು ಅರ್ಥವಾಗದ ಇಲ್ಲಿನ ಜಡ್ಡು ಹಿಡಿದ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಹೊರನಾಡು ಅನ್ನಪೂರ್ಣೇಶ್ವರಿಯೇ ಬುದ್ಧಿ ಕೊಡಬೇಕೆಂದು ಸ್ಥಳೀಯರು ಅನ್ನಪೂರ್ಣೇಶ್ವರಿ ಬಳಿ ಬೇಡಿಕೊಳ್ಳುತ್ತಿದ್ದಾರೆ.

ಒಟ್ಟಾರೆ, ಮಲೆನಾಡಿನಲ್ಲಿ ಯಥೇಚ್ಛವಾಗಿ ಸುರಿಯೋ ಮಳೆಯಿಂದ ಏಳೆಂಟು ತಿಂಗಳಕಾಲ ಸೇತುವೆ ಅಡಿಯಲ್ಲಿ ಶಾಂತಳಾಗಿ ಹರಿಯೋ ಭದ್ರೆ ಮಳೆಗಾಲದಲ್ಲಿ ಅಷ್ಟೇ ವೇಗವಾಗಿ ಹರಿಯುತ್ತಾಳೆ. ಮುಂದೊಂದು ದಿನ ಮತ್ತೊಂದು ದೊಡ್ಡ ಅನಾಹುತವಾದಾಗ ಸರ್ಕಾರ ಕೈ ಹಿಸುಕಿಕೊಳ್ಳುವ ಬದಲು ಕೂಡಲೇ ಇತ್ತ ಗಮನ ಹರಿಸಿ ಈ ಸೇತುವೆಗೆ ತಡೆಗೋಡೆ ನಿರ್ಮಿಸಿ, ಸೇತುವೆಯನ್ನು ಎತ್ತರಿಸೋ ಕಾರ್ಯಕ್ಕೆ ಮುಂದಾಗಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Published by:Sushma Chakre
First published: