• Home
  • »
  • News
  • »
  • state
  • »
  • ಮಲೆ ಮಹದೇಶ್ವರ ಸ್ವಾಮಿ ಭಕ್ತರ ಮೇಲೆ KSRTC ಬಸ್ ಪ್ರವೇಶ ಶುಲ್ಕದ ಹೊರೆ

ಮಲೆ ಮಹದೇಶ್ವರ ಸ್ವಾಮಿ ಭಕ್ತರ ಮೇಲೆ KSRTC ಬಸ್ ಪ್ರವೇಶ ಶುಲ್ಕದ ಹೊರೆ

ಮಲೆ ಮಹದೇಶ್ವರ ದೇವಸ್ಥಾನ

ಮಲೆ ಮಹದೇಶ್ವರ ದೇವಸ್ಥಾನ

Male Mahadeshwara Temple: ಎಲ್ಲಾ ರೀತಿಯ ಸೇವಾದರಗಳನ್ನು ಹೆಚ್ಚಳ ಮಾಡಿದ್ದ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಕೆಎಸ್​ಆರ್​ಟಿಸಿ ಬಸ್​ಗಳಿಗೆ ಮೊದಲ ಬಾರಿಗೆ ಪ್ರವೇಶ ಶುಲ್ಕ ನಿಗದಿಪಡಿಸಿತ್ತು. ಆ ಶುಲ್ಕವನ್ನು ಬಸ್ ಪ್ರಯಾಣಿಕರಿಂದಲೇ ವಸೂಲಿ ಮಾಡಲು ನಿರ್ಧರಿಸಲಾಗಿದೆ.

ಮುಂದೆ ಓದಿ ...
  • Share this:

ಚಾಮರಾಜನಗರ (ಫೆ.9): ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಒಂದೂವರೆ ತಿಂಗಳ ಹಿಂದಷ್ಟೆ ವಿವಿಧ ರೀತಿಯ ಸೇವಾ ದರಗಳನ್ನು ಹೆಚ್ಚಳ ಮಾಡಲಾಗಿತ್ತು. ಅಲ್ಲದೆ  ವಾಹನಗಳ ಪ್ರವೇಶ ದರವನ್ನು ಏರಿಕೆ ಮಾಡಿ, ಕೆ.ಎಸ್.ಆರ್.ಟಿ.ಸಿ ಬಸ್​ಗಳಿಗೂ  ಪ್ರವೇಶ ಶುಲ್ಕ ನಿಗದಿ ಮಾಡಲಾಗಿತ್ತು. ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈ ಪ್ರವೇಶ ಶುಲ್ಕದ ಹೊರೆಯನ್ನು ಪ್ರಯಾಣಿಕರ ಮೇಲೆ ಹೊರಿಸಿದೆ.


ಈ ಹಿಂದೆ ಕೆಎಸ್​ಆರ್​ಟಿಸಿ ಬಸ್​ಗಳಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಯಾವುದೇ ರೀತಿಯ ಪ್ರವೇಶ ಶುಲ್ಕ ಇರಲಿಲ್ಲ. ಆದರೆ, ಎಲ್ಲಾ ರೀತಿಯ ಸೇವಾದರಗಳನ್ನು ಹೆಚ್ಚಳ ಮಾಡಿದ್ದ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಕೆ.ಎಸ್.ಆರ್.ಟಿ.ಸಿ ಬಸ್​ಗಳಿಗೆ ಮೊದಲ ಬಾರಿಗೆ ಪ್ರವೇಶ ಶುಲ್ಕ ನಿಗದಿಪಡಿಸಿತ್ತು. ಕೊಳ್ಳೇಗಾಲ ಗೇಟ್ ಹಾಗೂ ಪಾಲಾರ್ ಗೇಟ್​ಗಳ ಮೂಲಕ ಮಹದೇಶ್ವರ ಬೆಟ್ಟಕ್ಕೆ ಬರುವ ಕೆ.ಎಸ್.ಆರ್.ಟಿ.ಸಿ. ಬಸ್​ಗಳ ಪ್ರತಿ ಟ್ರಿಪ್​ಗೂ 50 ರೂ.ಗಳಂತೆ ಪ್ರವೇಶ ದರ ವಸೂಲಿ ಮಾಡಲು  ಪ್ರಾಧಿಕಾರದ ಸಭೆಯಲ್ಲಿ ನಿರ್ಧರಿಸಿ ಈಗಾಗಲೇ ಜಾರಿಗೆ ತರಲಾಗಿದೆ.


ಇದುವರೆಗೂ ಪ್ರತಿ ಟ್ರಿಪ್ಪಿಗು 50 ರೂ.ಗಳ ಪ್ರವೇಶ ಶುಲ್ಕವನ್ನು ಸಾರಿಗೆ ನಿಗಮದ ವತಿಯಿಂದಲೇ ಪಾವತಿಸಿಕೊಂಡು ಬರಲಾಗುತ್ತಿತ್ತು. ಇದರಿಂದ ನಿಗಮಕ್ಕೆ ಆರ್ಥಿಕ ಹೊರೆ ಉಂಟಾಗುತ್ತಿತ್ತು. ಈ ಆರ್ಥಿಕ ಹೊರೆಯನ್ನು ಸರಿದೂಗಿಸುವ ಸಲುವಾಗಿ ಪ್ರವೇಶ ಶುಲ್ಕವನ್ನು ಪ್ರಯಾಣಿಕರಿಂದಲೇ ವಸೂಲಿ ಮಾಡಲು ಸಾರಿಗೆ ನಿಗಮ ಸುತ್ತೋಲೆ ಹೊರಡಿಸಿದೆ.  ಪ್ರತಿ ಪ್ರಯಾಣಿಕರಿಂದ  ತಲಾ ಒಂದು ರೂಪಾಯಿಯಂತೆ ಪ್ರವೇಶ ಶುಲ್ಕ ವಸೂಲಿ ಮಾಡುವಂತೆ ಸೂಚಿಸಲಾಗಿದೆ. ಹಾಗಾಗಿ ಪ್ರವೇಶ ಶುಲ್ಕದ  ಹೊರೆಯು ಭಕ್ತರ ಮೇಲೆ ಬಿದ್ದಂತಾಗಿದೆ.


ಇದನ್ನೂ ಓದಿ: Basavaraj Horatti | ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆ


ಇದುವರೆಗೂ ನಿಗಮದಿಂದಲೇ ಪ್ರವೇಶ ಶುಲ್ಕ ಪಾವತಿ ಮಾಡಲಾಗುತ್ತಿತ್ತು. ಎರಡು ದಿನಗಳ ಹಿಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಿಂದ ಸುತ್ತೋಲೆ ಬಂದಿದೆ.  ಈ ಸುತ್ತೋಲೆ ಪ್ರಕಾರ ಇನ್ನು ಮುಂದೆ ಮಹದೇಶ್ವರಬೆಟ್ಟಕ್ಕೆ  ಪ್ರಯಾಣದ ದರವನ್ನು ಒಂದು ರೂಪಾಯಿ ಹೆಚ್ಚಳ ಮಾಡಿ ಆ ಹಣದಿಂದ ಪ್ರವೇಶ ಶುಲ್ಕ ಪಾವತಿಸಲಾಗುವುದು. ಪ್ರಯಾಣದರ ಹೆಚ್ಚಳವನ್ನು ಇಂದು ಅಥವಾ ನಾಳೆ ಜಾರಿಗೊಳಿಸಲಾಗುವುದು,  ಎಂದು ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್  ನ್ಯೂಸ್ 18 ತಿಳಿಸಿದರು.


ಕಚ್ಚಾ ಪದಾರ್ಥಗಳ ಬೆಲೆ ಹೆಚ್ಚಳ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಕಾರಣ ನೀಡಿ ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ 2020ನೇ ಡಿಸೆಂಬರ್ 25 ರಿಂದ ಎಲ್ಲಾ ರೀತಿಯ ಸೇವಾ ದರಗಳನ್ನು  ಮಾಡಿದೆ. ಮಹಾರುದ್ರಾಭಿಷೇಕಕ್ಕೆ 10 ಸಾವಿರ ರೂಪಾಯಿ ಇದ್ದ ಸೇವಾ ದರವನ್ನು 15 ಸಾವಿರ ರೂಪಾಯಿಗೆ, ಸಾಮ್ರಾಜ್ಯೋತ್ಸಕ್ಕೆ 15 ಸಾವಿರ ರೂಪಾಯಿ ಇದ್ದ ಸೇವಾ ದರವನ್ನು 20 ಸಾವಿರ ರೂಪಾಯಿಗೆ  ಏರಿಕೆ ಮಾಡಿದೆ.  2501 ರೂಪಾಯಿ ಇದ್ದ ಚಿನ್ನದ ತೇರಿನ ಸೇವಾ ದರವನ್ನು 3001 ರೂ.ಗಳಿಗೆ ಏರಿಕೆ ಮಾಡಿದೆ.  ಪಂಚಕಳಸ ಸಮೇತ ನವರತ್ನ ಕಿರೀಟಧಾರಣೆ, ಏಕದಶಾವರ ರುದ್ರಾಭಿಷೇಕ, ಲಾಡುಸೇವೆ, ಅನ್ನ ಬ್ರಹ್ಮೋತ್ಸವ,  ಪಂಚಾಮೃತ ಅಭಿಷೇಕ  ಹುಲಿವಾಹನೋತ್ಸವ ಬಸವ ವಾಹನೋತ್ಸವ , ರುದ್ರಕ್ಷಿ ಮಂಟಪೋತ್ಸವ  ಹೀಗೆ ಎಲ್ಲಾ ರೀತಿಯ ಸೇವಾ ದರಗಳನ್ನು  ಶೇಕಡಾ 30 ರಿಂದ 35ರಷ್ಟು ಹೆಚ್ಚಳ ಮಾಡಲಾಗಿದೆ.


ಕೋವಿಡ್​ನಿಂದ ಉಂಟಾಗಿರುವ ಸಂಕಷ್ಟದ ನಡುವೆಯೂ ಮಹದೇಶ್ವರನ ಸನ್ನಿಧಿಗೆ  ಕೋಟ್ಯಂತರ ರೂಪಾಯಿ ಕಾಣಿಕೆ ಹರಿದುಬರುತ್ತಿದೆ. ಹಾಗಿದ್ದಾಗ್ಯೂ ವಿವಿಧ ಸೇವಾ ಶುಲ್ಕಗಳನ್ನು ಏರಿಕೆ ಮಾಡಿದ್ದು ಭಕ್ತರಲ್ಲಿ ಈಗಾಗಲೇ ಬೇಸರ ಮೂಡಿಸಿದೆ. ಇದೀಗ ಕೆ.ಎಸ್.ಆರ್.ಟಿ.ಸಿ. ಬಸ್ ಗಳ ಪ್ರವೇಶ ಶುಲ್ಕವನ್ನು ಭಕ್ತರ ಮೇಲೆ ಹೊರಿಸಿರುವುದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.


(ವರದಿ: ಎಸ್.ಎಂ.ನಂದೀಶ್ )

Published by:Sushma Chakre
First published: