ಬೆಂಗಳೂರು: ಬೆಂಗಳೂರು (Bengaluru) ನಗರದ ಚಾಮರಾಜಪೇಟೆಯಲ್ಲಿನ (Chamarajpet) ವಿವಾದಿತ ಈದ್ಗಾ ಮೈದಾನದಲ್ಲಿ (Idgah Maidan) ಈ ಬಾರಿಯ ಗಣರಾಜ್ಯೋತ್ಸವವನ್ನು (Republic day) ಆಚರಣೆ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ. ಈ ಸ್ಥಳದಲ್ಲಿ ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಸಹ ಧ್ವಜಾರೋಹಣ ಮಾಡಲಾಗಿತ್ತು. ಇದೀಗ ಗಣರಾಜ್ಯೋತ್ಸವವನ್ನು ಆಚರಿಸಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಸಂಸದ ಪಿ. ಸಿ. ಮೋಹನ್ (P.C. Mohan )ತಿಳಿಸಿದ್ದಾರೆ. ಸರ್ಕಾರದ ವತಿಯಿಂದಲೇ ಅದ್ದೂರಿಯಾಗಿ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ 2023 ನಡೆಯಲಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಮತಾನಾಡಿದ ಅವರು, " ಜನವರಿ 26 ರಂದು ಸರ್ಕಾರದ ವತಿಯಿಂದಲೇ ಅದ್ದೂರಿಯಾಗಿ ಗಣರಾಜ್ಯೋತ್ಸವ ಆಚರಣೆ ಮಾಡುತ್ತೇವೆ. ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ ಜೊತೆ ಮಾತನಾಡಿದ್ದೇನೆ. ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆಎ ದಯಾನಂದ್ ಅವರಿಗೂ ಸೂಚನೆ ನೀಡಿದ್ದಾರೆ " ಎಂದು ತಿಳಿಸಿದ್ದಾರೆ.
ಶಾಲಾ ಮಕ್ಕಳಿಗೂ ಆಹ್ವಾನ
ಈದ್ಗಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳು, ಸಾರ್ವಜನಿಕರು ಭಾಗವಹಿಸುವುದಕ್ಕೆ ಆಹ್ವಾನಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಗಿಂತಲೂ ಅದ್ದೂರಿಯಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುವುದು. ಸಿದ್ಧತಾ ಕಾರ್ಯ ನಡೆಯುತ್ತಿದೆ. ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುವುದು ಎಂದರು.
ಇದನ್ನೂ ಓದಿ: Eidgah Maidan: ಮತ್ತೆ ಮುನ್ನಲೆಗೆ ಬಂದ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ
ಎಸಿ ಶಿವಣ್ಣರಿಂದ ಧ್ವಜಾರೋಹಣ
ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲು ಸರ್ಕಾರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಕಳೆದ ಬಾರಿ ಧ್ವಜಾರೋಹಣ ಮಾಡಿದ್ದ ಬೆಂಗಳೂರು ಉತ್ತರ ಎ.ಸಿ. ಶಿವಣ್ಣ ಅವರೇ ಈ ಬಾರಿಯೂ ಧ್ವಜಾರೋಹಣ ಮಾಡಲಿದ್ದಾರೆ ಎಂದು ಪಿಸಿ ಮೋಹನ್ ಮಾಹಿತಿ ನೀಡಿದರು.
ಜನಪ್ರತಿನಿಧಿಗಳಿಗೆ ಆಹ್ವಾನ
ಸ್ವಾತಂತ್ರ್ಯೋತ್ಸವದ ವೇಳೆ ಹಲವು ನಿರ್ಬಂಧಗಳಿದ್ದವು. ಆದರೆ ಈ ಬಾರಿ ಯಾವುದೇ ನಿರ್ಬಂಧವಿಲ್ಲದೇ ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ. ಜನಪ್ರತಿನಿಧಿಗಳಿಗೂ ಸಹ ಸರ್ಕಾರದಿಂದಲೇ ಆಹ್ವಾನ ನೀಡಲಾಗುತ್ತದೆ. ಈ ಬಾರಿ ಕಂದಾಯ ಇಲಾಖೆ ನೇತೃತ್ವದಲ್ಲಿ ಅದ್ಧೂರಿಯಾಗಿ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ. ಈ ಭಾಗದ ಶಾಸಕರಿಗೂ ಸರ್ಕಾರದಿಂದ ಆಹ್ವಾನ ಹೋಗಲಿದೆ. ನನಗೂ ಸರ್ಕಾರದಿಂದಲೇ ಆಹ್ವಾನ ಬರಲಿದೆ. ನನಗೆ ಈ ಬಗ್ಗೆ ಕಂದಾಯ ಸಚಿವರು ಕರೆ ಮಾಡಿ ಹೇಳಿದ್ದಾರೆ ಎಂದರು.
ಸರ್ಕಾರದ ನಿರ್ಧಾರ ಸ್ವಾಗತ
ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಯನ್ನ ಕಂದಾಯ ಇಲಾಖೆ ನೇತೃತ್ವದಲ್ಲೇ ಆಚರಿಸುವುದಕ್ಕೆ ಸರ್ಕಾರ ಅನುಮತಿ ನೀಡಿರುವುದನ್ನ ಚಾಮರಾಜಪೇಟೆ ನಾಗರಿಕ ಒಕ್ಕೂಟ ಸ್ವಾಗತಿಸಿದೆ. ಸರ್ಕಾರದ ವತಿಯಿಂದ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಿಸುತ್ತೇವೆ ಎಂದು ಸಂಸದರು ಹೇಳಿದ್ದಾರೆ. ಈ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಗಣರಾಜ್ಯೋತ್ಸವ ದಿನ ಕಾಟಾಚಾರದಂತೆ ಆಗಬಾರದು, ಶಾಲಾ ಮಕ್ಕಳಿಂದ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕು, ಗಣ್ಯರಿಗೆ ಸಮ್ಮಾನಿಸಬೇಕು. ನಾಳೆ ಜಿಲ್ಲಾಧಿಕಾರಿಗಳ ಭೇಟಿ ಮಾಡಿ ಚರ್ಚೆ ಮಾಡುತ್ರೇವೆ ಎಂದು ಒಕ್ಕೂಟ ತಿಳಿಸಿದೆ.
ಗಣರಾಜ್ಯೋತ್ಸವ ಆಚರಣೆಗೆ ಸಿದ್ಧವಾಗಿದ್ದ ಹಿಂದೂ ಸಂಘಟನೆ
ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಬೇಕೆಂದು ಹಿಂದೂಪರ ಸಂಘಟನೆಗಳು ಮತ್ತು ಚಾಮರಾಜಪೇಟೆ ನಾಗರೀಕ ಒಕ್ಕೂಟ ಸರ್ಕಾರಕ್ಕೆ ಪತ್ರ ಬರೆದು ಜನವರಿ 21ರ ಒಳಗೆ ಉತ್ತರ ನೀಡುವಂತೆ ಡೆಡ್ಲೈನ್ ನೀಡಿತ್ತು. ಒಂದು ವೇಳೆ ಇಂದು ಸರ್ಕಾರ ಗಣರಾಜ್ಯೋತ್ಸವ ಆಚರಣೆ ಮಾಡಲು ಒಪ್ಪಿಗೆ ಸೂಚಿಸದಿದ್ದರೆ ಹಿಂದೂ ಸಂಘಟನೆಗಳು ಹಾಗೂ ನಾಗರೀಕ ಒಕ್ಕೂಟದಿಂದ ಧ್ವಜಾರೋಹಣ ಮಾಡಲು ಮುಂದಾಗಿದ್ದವು. ಆದರೆ ಸರ್ಕಾರವೇ ಆಚರಣೆ ಮಾಡುವುದಾಗಿ ಘೋಷಿಸುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ