ರಾಜ್ಯ ಸರ್ಕಾರ ವರ್ಸಸ್ ಐಎಎಸ್, ಐಪಿಎಸ್: ರೋಹಿಣಿ ಸಿಂಧೂರಿ ಬಳಿಕ ಡಾ. ಅನೂಪ್ ಶೆಟ್ಟಿ ವರ್ಗಾವಣೆಗೂ ಬ್ರೇಕ್


Updated:March 13, 2018, 7:45 PM IST
ರಾಜ್ಯ ಸರ್ಕಾರ ವರ್ಸಸ್ ಐಎಎಸ್, ಐಪಿಎಸ್: ರೋಹಿಣಿ ಸಿಂಧೂರಿ ಬಳಿಕ ಡಾ. ಅನೂಪ್ ಶೆಟ್ಟಿ ವರ್ಗಾವಣೆಗೂ ಬ್ರೇಕ್

Updated: March 13, 2018, 7:45 PM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಮಾ.13): ರಾಜ್ಯದಲ್ಲಿ ರಾಜ್ಯ ಸರ್ಕಾರ ಹಾಗೂ ಐಪಿಎಸ್, ಐಎಎಸ್ ಅಧಿಕಾರಿಗಳ ನಡುವೆ ಹಗ್ಗಜಗ್ಗಾಟ ಶುರುವಾಗಿದೆ. ಅಧಿಕಾರಿಗಳ ಮೇಲೆ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಅಂತ ಸರ್ಕಾರಿ ಅಧಿಕಾರಿಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರ ನಡುವೆ, ರೋಹಿಣಿ ಸಿಂಧೂರಿ ಹಾಗೂ ಕೊಪ್ಪಳ ಎಸ್‌ಪಿ ಅನೂಪ್ ಶೆಟ್ಟಿ ವರ್ಗಾವಣೆ ವಿಚಾರದಲ್ಲಿ ಸರ್ಕಾರ ಮತ್ತೊಮ್ಮೆ ತೀವ್ರ ಮುಜುಗರಕ್ಕೀಡಾಗಿದೆ.

ರೋಹಿಣಿ ಸಿಂಧೂರಿ, ಅನೂಪ್ ಶೆಟ್ಟಿ ವರ್ಗಾವಣೆಗೆ ಸಿಎಟಿ ತಡೆ: ಹೌದು, ಬಾಹುಬಲಿ ಮಹಾಮಸ್ತಕಾಭಿಷೇಕಸ ಸಂದರ್ಭ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂಬ ನೆಪವೊಡ್ಡಿ ಹಾಸನ ಡಿಸಿ ರೋಹಿಣಿ ಸಿಂಧೂರಿಯವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಸರ್ಕಾರದ ಕ್ರಮ ಪ್ರಶ್ನಿಸಿ ರೋಹಿಣಿ ಸಿಂಧೂರಿ ಮಾರ್ಚ್ 8 ರಂದು ಸಿಎಟಿ ಮೊರೆ ಹೋಗಿದ್ದರು. ರಾಜ್ಯ ಸರ್ಕಾರದ ಆದೇಶಕ್ಕೆ ಸಿಎಟಿ ಮಾರ್ಚ್ 13ರ ವರೆಗೆ ತಡೆ ನೀಡಿತ್ತು. ಮತ್ತೆ ವಿಚಾರಣೆ ನಡೆಸಿದ ಕೇಂದ್ರೀಯ ಆಡಳಿತ ನ್ಯಾಯ ಮಂಡಳಿ ಮಾರ್ಚ್ 21ರವರೆಗೂ ತಡೆಯಾಜ್ಞೆ ಮುಂದುವರಿಯಲಿದೆ ಎಮದು ತಿಳಿಸಿದೆ.

ಮತ್ತೊಂದೆಡೆ, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ ವರ್ಗಾವಣೆಗೂ ಸಿಎಟಿ ತಡೆ ನೀಡಿದೆ. ಒಂದು ವರ್ಷಕ್ಕೂ ಮುನ್ನ ವರ್ಗಾವಣೆ ಮಾಡಲಾಗಿದೆ. ಇದು ನಿಯಮಬಾಹಿರ ಎಂದು ಅನೂಪ್ ಶೆಟ್ಟಿ ಸಿಎಟಿ ಮೊರೆ ಹೋಗಿದ್ದರು. ಅನೂಪ್ ವರ್ಗಾವಣೆಗೆ ಸಿಎಟಿ ಮಾರ್ಚ್‌ 22ರವರೆಗೆ ತಡೆ ನೀಡಿದೆ. ಈ ಎರಡು ಪ್ರಕರಣಗಳಿಂದ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ

ಇತ್ತ, ಸರ್ಕಾರದ ವಿರುದ್ಧ ಬಂಡೆದ್ದಿರುವ ಐಪಿಎಸ್​ ಅಧಿಕಾರಿ ಆರ್​ಪಿ ಶರ್ಮಾಗೆ ನಾಳೆಯೊಳಗೆ ಉತ್ತರ ನೀಡುವಂತೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ. ಉತ್ತರ ನೀಡದಿದ್ದರೆ ಕೇಂದ್ರ ಲೋಕಸೇವಾ ಆಯೋಗಕ್ಕೆ ಪತ್ರ ಬರೆಯುವ ಎಚ್ಚರಿಕೆ ನೀಡಿದೆ. ಸಿಎಂ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಪತ್ರ ಬರೆಯಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತ, ಇದೇ ವಿಚಾರಕ್ಕೆ ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಸರ್ಕಾರ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಒಟ್ಟಿನಲ್ಲಿ, ರಾಜ್ಯದಲ್ಲೀಗ ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ತಿಕ್ಕಾಟ ಶುರುವಾಗಿದೆ. ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಈ ಕಲಹ ಯಾವ ಹಂತ ತಲುಪುತ್ತದೆಯೋ ಕಾದುನೋಡಬೇಕಿದೆ.
Loading...

 
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ