ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಮುಷ್ಕರ (Karnataka Govt Employees Strike) ವಾಪಸ್ ಪಡೆದಿದ್ದೇವೆ. ಸರ್ಕಾರ ಶೇ.17ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿದೆ. ಅಧಿಕೃತ ಆದೇಶ ನಮ್ಮ ಕೈ ಸೇರಿದೆ. ತಕ್ಷಣದಿಂದಲೇ ಪ್ರತಿಭಟನೆ ಕೈಬಿಡುತ್ತೇವೆ ಎಂದು ಸಾರಿಗೆ ನೌಕರರ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದ್ದಾರೆ. ಸರ್ಕಾರಿ ನೌಕರರಿಗೆ ಶೇಕಡಾ 17ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಅಧಿಕೃತ ಆದೇಶ ಪ್ರಕಟಿಸಿದೆ. ಏಪ್ರಿಲ್ 1 ರಿಂದಲೇ ಮಧ್ಯಂತರ ಪರಿಹಾರ ವೇತನ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ. ಅಲ್ಲದೇ ನಿವೃತ್ತಿದಾರರಿಗೂ ವೇತನ ಹೆಚ್ಚಳ (Salary Hike) ಮಾಡಲಾಗಿದೆ. ಈ ಹಿನ್ನೆಲೆ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರೋ ಸಿಎಂ ಬೊಮ್ಮಾಯಿ, ಸರ್ಕಾರಿ ನೌಕರರ ವೇತನ ಶೇಕಡಾ 17ರಷ್ಟು ಹೆಚ್ಚಳ ಘೋಷಣೆ ಮಾಡಿದ್ರು. ಎನ್ಪಿಎಸ್ ರದ್ದು ಬಗ್ಗೆ ಸಮಿತಿ ರಚಿಸುತ್ತೇವೆ ಅಂತ ಸಿಎಂ ಹೇಳಿದ್ದಾರೆ.
ವೇತನ ಹೆಚ್ಚಳ ಕುರಿತು ಮಾಹಿತಿ
17 ಸಾವಿರ ಮೂಲ ವೇತನ ಇದ್ದ ನೌಕರನಿಗೆ ಶೇ.17ರಷ್ಟು 2,890 ರೂ. ವೇತನ ಹೆಚ್ಚಳವಾಗಿ 19,890 ರೂಪಾಯಿ ಆಗಲಿದೆ.
ಉದಾಹರಣೆ
ಮೂಲ ವೇತನ + ತುಟ್ಟಿ ಭತ್ಯೆ + 17 % ವೇತನ ಹೆಚ್ಚಳ
17000 + 5270 + 2890 = 25,160
ಸರ್ಕಾರದ ಬೊಕ್ಕಸಕ್ಕೆ ಕೊರತೆ
ಶೇ.17ರಷ್ಟು ವೇತನ ಹೆಚ್ಚಳದ ಆದೇಶದಿಂದ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಲಿದೆ. ಈ ಬಾರಿಯ ಬಜೆಟ್ನಲ್ಲಿ ಸರ್ಕಾರದ ನೌಕರರ ಹೆಚ್ಚುವರಿ ವೇತನಕ್ಕೆ 6 ಸಾವಿರ ಕೋಟಿ ಮೀಸಲಿಟ್ಟಿತ್ತು. ಆದ್ರೆ ಈ ಆದೇಶದಿಂದ ಸರ್ಕಾರ ವಾರ್ಷಿಕ 10,800 ಕೋಟಿ ಮೀಸಲಿಡಬೇಕು. ಸರ್ಕಾರದ ಅಂದಾಜಿಗಿಂತ 4,800 ಕೋಟಿ ಹೆಚ್ಚುವರಿ ಹೊರೆಯಾಗಲಿದೆ. ಪ್ರತಿ ತಿಂಗಳು 900 ಕೋಟಿ ಸರ್ಕಾರ ಹೆಚ್ಚುವರಿಯಾಗಿ ಭರಿಸಬೇಕಾಗಿದೆ.
ಬಾಣಂತಿ, ಗರ್ಭಿಣಿಯರ ಪರದಾಟ
ಸರ್ಕಾರಿ ನೌಕರರ ಪ್ರತಿಭಟನೆ ಹಿನ್ನೆಲೆ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಬಾಣಂತಿ, ಗರ್ಭಿಣಿಯರು ಪರದಾಡಿದರು.
ರಾಮನಗರ ಜಿಲ್ಲೆಯ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಇಲ್ಲದೇ ರೋಗಿಗಳು ಪರದಾಡಿದ್ರು. ಇಲ್ಲಿ ಡಾಕ್ಟರ್ಸ್ ಇಲ್ಲ, ಎಮರ್ಜೆನ್ಸಿ ಆದರೆ ಏನು ಮಾಡಬೇಕು ಅಂತ ರೋಗಿಗಳು ಆಕ್ರೋಶ ಹೊರಹಾಕಿದ್ರು. ಇನ್ನು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಸೇರಿದಂತೆ ರಾಜ್ಯಾದ್ಯಂತ ಓಪಿಡಿ ಬಂದ್ ಆದ ಹಿನ್ನೆಲೆ ರೋಗಿಗಳ ಪರದಾಡಿದರು.
ವೇತನ ಪರಿಷ್ಕರಣೆ ಸ್ವಾಗತಿಸಿದ ಅಮೃತ್ ರಾಜ್
ಸಿಎಂ ಬಸವರಾಜ್ ಮೊಮ್ಮಾಯಿ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್, ಮುಂದಿನ ನಿರ್ಧಾರದ ಬಗ್ಗೆ ತೀರ್ಮಾನ ಮಾಡಲಾಗುವುದು. ಮುಖ್ಯಮಂತ್ರಿಗಳು ಘೋಷಣೆ ಮಾಡಿರುವಂತಹ 17% ವೇತನ ಪರಿಷ್ಕರಣೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Govt Employees Strike: ಶೇಕಡಾ 17ರಷ್ಟು ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್; ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ
OPS ರಚನೆ ಮಾಡಬೇಕು ಅನ್ನೋದೆ ನಮ್ಮ ಪ್ರಮುಖ ಬೇಡಿಕೆ. ನಮ್ಮ ರಾಜ್ಯ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಇನ್ನು ಕೆಲವೇ ಹೊತ್ತಿನಲ್ಲಿ ಇಲ್ಲಿಗೆ ಬರ್ತಾರೆ. OPS ವಿಚಾರಕ್ಕೆ ಸ್ಪಷ್ಟ ಉತ್ತರ ನೀಡಿಲ್ಲ. ಈ ಸಂಬಂಧ ನಾವು ಮುಷ್ಕರ ಮುಂದುವರೆಸುತ್ತೇವೆ ಎಂದು ಅಮೃತ್ ರಾಜ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ